‘ಮುಂಬಾಪುರಿ’ ಕಲಾ ಭಾಗ್ವತ್ ಅವರ ಅಂಕಣ ಬರಹಗಳ ಸಂಕಲನ. ಇದು ಮುಂಬೈ ವಿವಿ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಕೃತಿ ರೂಪದಲ್ಲಿ ಸಹೃದಯರ ಕೈ ಸೇರಿದೆ. ಮುಂಬೈ ಒಂದು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದ ಮಹಾನಗರ. ಇದು ಮಾಯಾನಗರಿ ಎಂದೇ ಲೋಕ ವಿಖ್ಯಾತವಾಗಿದೆ. ಮುಂಬೈ ಒಂದು ಚಿತ್ರ ವಿಚಿತ್ರ ದೈತ್ಯ ನಗರವೂ ಹೌದು. ಈ ನಗರದ ವಿಭಿನ್ನ ಮುಖಗಳನ್ನು ಅತ್ಯಾಕರ್ಷಕವಾಗಿ ಆಪ್ತವಾಗಿ ವಾಚನೀಯವಾಗಿ ಭಾವ ಪ್ರಬಂಧದಂತೆ ಕಟ್ಟಿ ಕೊಟ್ಟಿರುವುದು ಮುಂಬಾಪುರಿ ಕೃತಿಯ ಅತಿಶಯತೆ.
ಪ್ರತಿಯೊಂದು ನಗರಕ್ಕೂ ತನ್ನದೇ ಆದ ಸಾಂಸ್ಕೃತಿಕ ಚಹರೆ, ನೆಲೆಬೆಲೆ, ಇತಿಹಾಸ ಇದ್ದೇ ಇರುತ್ತದೆ. ಭಾರತದ ಮೂಲೆ ಮೂಲೆಗಳಿಂದ ವಲಸೆ ಬಂದ ಜನಸಮುದಾಯ ಮುಂಬೈ ನಗರವನ್ನು ನರರ ಶ್ರೇಷ್ಠ ನಗರವಾಗಿ ರೂಪಿಸಿ ಜಗದಗಲ ಕಂಗೊಳಿಸುವಂತೆ ಬೆಳೆಸಿದ್ದಾರೆ. ಇದೊಂದು ಸಮಷ್ಟಿ ಮನಸ್ಸುಗಳ ಮಹಾ ಸಂಗಮವೂ ಹೌದು. ಅರ್ಣವವೃತ ಧಾತ್ರಿಯಿಂದ ಕೂಡಿರುವ ಕಡಲನ್ನೇ ಉಡುಗೆಯಾಗಿ ಮಾಡಿಕೊಂಡಿರುವ ಈ ಜನಾರಣ್ಯದ ಬಗೆಗೆ ಏನೇನೋ ಅದೆಷ್ಟೋ ವದಂತಿ, ಕಟ್ಟು ಕಥೆ, ಅಪಪ್ರಥೆಗಳು ಚಾಲ್ತಿಯಲ್ಲಿವೆ. “ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ, ಮಿಂಚುಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟಪೂರ, ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೋ ಧೀರಾ, ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರ” ಎಂಬ ಬೇಂದ್ರೆಯವರ ಮಾತು ಈ ನಗರಕ್ಕೂ ಚೆನ್ನಾಗಿ ಅನ್ವಯವಾಗುತ್ತದೆ. ಎಲ್ಲೆಲ್ಲಿಂದಲೋ ಏನೇನೋ ಕನಸು ಕಂಡ ಜನ ಇಲ್ಲಿಗೆ ಬಂದು ತಮ್ಮ ಪರಿಶ್ರಮ ಪ್ರತಿಭೆಯಿಂದ ಏಳಿಗೆ ಹೊಂದಿದ್ದಾರೆ. ಇಲ್ಲಿನ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸ್ಸಿಗೆ ಮುಟ್ಟುವ ತೆರ ಮನೋಜ್ಞವಾಗಿ ಚಿತ್ರಿಸಿರುವುದು ಈ ಕೃತಿಯ ವೈಶಿಷ್ಟ್ಯ.
ಮುಂಬೈನ ನಿನ್ನೆ ಇಂದುಗಳ ವಿವರ ಪ್ರವರವಿಲ್ಲಿ ಆಕರ್ಷಕವಾಗಿ ಪಡಿಮೂಡಿದೆ. ಇದೊಂದು ವಿನೂತನ ಬಗೆಯ ನಗರ ಪುರಾಣವೂ, ವಾಸ್ತವ ದರ್ಶನವೂ ಅಹುದು. ಮುಂಬೈ ಮಹಾನಗರದ ಆತ್ಮ ವೃತ್ತಾಂತವನ್ನು ಇಲ್ಲಿ ಕಾವ್ಯಾತ್ಮಕವಾದ ಗದ್ಯದಲ್ಲಿ ಸೆರೆ ಹಿಡಿಯಲಾಗಿದೆ. ಮಹಾನಗರದ ಜನ ಸಮೂಹವನ್ನೇ ಕೇಂದ್ರವಾಗಿರಿಸಿಕೊಂಡು ಅದರ ಸಾಂಸ್ಕೃತಿಕ ಇತಿಹಾಸವನ್ನು ಇಲ್ಲಿ ಲೇಖಕರು ಸೃಷ್ಟಿಸಿದ್ದಾರೆ. ಈ ಮೂಲಕ ಆಧುನಿಕ ನಗರಾಯಣ, ಅಲ್ಲಿನ ಜೀವನ ದರ್ಶನವನ್ನು ಮೂಡಿಸಿದ್ದಾರೆ. ಈ ಲೇಖನಗಳ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಶ್ರಮ ಸಂಸ್ಕೃತಿಯನ್ನು ಉಸಿರಾಗಿಸಿಕೊಂಡು ಕ್ರಿಯಾಶೀಲವಾಗಿ ಒಡೆದು ಕೊಂಡವರ ಸಾಹಸಕಥನದ ಬಣ್ಣನೆ. ಕಲಾ ಅವರ ಸೂಕ್ಷ್ಮ ದೃಷ್ಟಿ, ಜೀವನ ಶ್ರದ್ಧೆ, ಮಾನವೀಯ ಅನುಕಂಪ ಹಾಗೂ ಸ್ವೋಪಜ್ಞತೆ ಇಲ್ಲಿ ಮಿಂಚಿದೆ.
ಷೇಕ್ಸಪಿಯರ್ “ಕವಿಯ ಲೆಕ್ಕಣಿಕೆ, ಬಯಲು ಶೂನ್ಯಕ್ಕೆ ನೆಲೆ – ನಾಮಗಳನ್ನು ದಾನ ಗೈಯುತ್ತದೆ” ಎಂದಿದ್ದಾನೆ. ಕಲಾ ಭಾಗ್ವತ್ ಅವರು ಪ್ರಸಕ್ತ ಕೃತಿಯಲ್ಲಿ ಇದೇ ಕೆಲಸವನ್ನು ಮಾಡಿದ್ದಾರೆ. ಮುಂಬೈ ನಗರಕ್ಕೆ ದುರ್ಬೀನು ಹಿಡಿದು ನೋಡಿರುವ ಭಿನ್ನ ವಿಭಿನ್ನ ಬಗೆಯ ಈ ಲೇಖನಗಳನ್ನು ಓದುವುದರಲ್ಲಿ ಒಂದು ಬಗೆ ಸುಖವಿದೆ. ಎಂದೂ ನಿದ್ರಿಸದ ಸದಾ ದ್ರುತಗತಿಯಲ್ಲಿ ಓಡುವ ಮುಂಬೈ ನಗರದ ಹೃದಯಸಮುದ್ರ ಇಲ್ಲಿ ಸಾಕ್ಷಾತ್ಕಾರಗೊಂಡಂತೆ ಭಾಸವಾಗುತ್ತಿದೆ. ಮುಂಬೈ ಎಂಬ ಗಜಿಬಿಜಿ ಜಗತ್ತನ್ನು ಒಳಹೊಕ್ಕು ನೋಡಿ ವ್ಯಾಖ್ಯಾನಿಸಿರುವ ಕ್ರಮದಲ್ಲಿ ಕಲಾ ಭಾಗ್ವತ್ ಇವರ ರಚನಾ ಶಕ್ತಿಯ ನೈಪುಣ್ಯ ಎದ್ದು ಕಾಣುತ್ತದೆ. ಲೇಖಕರು ಸಾಧಿಸಿರುವ ಪ್ರತಿಮಾತ್ಮಕ ಅಭಿವ್ಯಕ್ತಿ ಕೃತಿಯ ಉದ್ದಕ್ಕೂ ಮಿಂಚಿ ಮೆರಗು ನೀಡಿದೆ. ಇಲ್ಲಿನ ಲೇಖನಗಳಲ್ಲಿ ಈ ಅಕರಾಳ ವಿಕರಾಳ ನಗರಕ್ಕೆ ಮಾನವ ಅನುಭೂತಿಯ ಮೂಲಕ ನವ ನವೀನ ಅಸ್ತಿತ್ವವನ್ನು ಕಲ್ಪಿಸಿಕೊಟ್ಟಿದ್ದಾರೆ. ಅರಬ್ಬೀ ಕಡಲ ತೀರದ ಮಹಾತಾಣವೊಂದರ ಹೃದಯ ಸಂವಾದ, ಆತ್ಮನಿವೇದನೆಯಂತೆಯೂ ಈ ಕೃತಿ ಮೈಪಡೆದಿದೆ. ಹೀಗಾಗಿ ಈ ಕೃತಿ ಮುಂಬೈ ಜಗತ್ತಿನ ಪ್ರತಿಧ್ವನಿಯೂ ಆಗಿದೆ.
ಮುಂಬೈಯ ವರ್ಣ ರಂಜಿತ ಬದುಕಿನ ಜತೆಗೆ ಕಲಾ ಅವರು ಹೊಂದಿರುವ ಘನಿಷ್ಠವಾದ ಸಂಬಂಧ ಮತ್ತು ಅದರ ಅನುಭವದ ಪ್ರಾತಿನಿಧಿಕತೆ ಇಲ್ಲಿ ಒಡೆದು ಕಾಣುವ ಗುಣ. ಅವರು ಈ ಮಹಾನಗರವನ್ನು ಗ್ರಹಿಸುವ ರೀತಿಯಲ್ಲಿಯೇ ಹೊಸತನವಿದೆ. ಮುಂಬೈ ಒಂದು ಕಾಸ್ಮೋಪಾಲಿಟನ್ ಸಿಟಿ. ಈ ಮಹಾನಗರದಲ್ಲಿನ ಸಮತೆ ಮಮತೆ ಸೌಹಾರ್ದ ಸಂಸ್ಕೃತಿಯನ್ನು ಅತ್ಯಂತ ಸಮರ್ಪಕವಾಗಿ ವ್ಯಾಖ್ಯಾನಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಈ ಸಂಕೀರ್ಣ ನಗರದ ವಿಶೇಷತೆಯನ್ನು ಕಲಾ ಅವರು ಹೀಗೆ ಸೆರೆ ಹಿಡಿದಿದ್ದಾರೆ.
“ಶ್ರಾವಣ ಬಂತೆಂದರೆ ಮುಂಬಾಪುರಿಯ ನರನಾಡಿಗಳಲ್ಲಿ ವಿಶೇಷವಾದ ಶಕ್ತಿಯು ಪ್ರವಹಿಸುತ್ತದೆ. ಬೇಂದ್ರೆ ಕಂಡ ಭೈರವನ ರೂಪ ತಾಳಿದ ಗಾಳಿ, ರಾವಣ ಕುಣಿದ್ದಾಂಗೆ ಕುಣಿವ ಕಡಲು, ಕುತನಿಯ ಅಂಗಿತೊಟ್ಟ ಬೆಟ್ಟ, ಏರಿದ ಮುಗಿಲು ಇವೆಲ್ಲವುಗಳಿಂದ ಮುಂಬಯಿಯ ಜಂಗಮ ಜಗತ್ತಿಗೆ ಹೊಸ ಬಣ್ಣ ಬರುತ್ತದೆ. ದೇಶದ ಮೂಲೆ ಮೂಲೆಯ ಜಾನಪದ ಒಟ್ಟಾಗಿ ಸೇರಿ ಹುಟ್ಟಿದ ನಗರ ಜಾನಪದದ ಹೊಸ ಹಾಡು ಇಲ್ಲಿ ಹೊಮ್ಮುತ್ತದೆ. ಮುಂಬಯಿಯಲ್ಲಿ ಹಬ್ಬದ ಆಚರಣೆಯೆಂದರೆ ವಲಸಿಗರು ತಮ್ಮೊಂದಿಗೆ ತಂದ ಸ್ಥಳೀಯ ಸಂಸ್ಕೃತಿಯ ಹಂಚುವಿಕೆ, ಒಗ್ಗೂಡುವಿಕೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಟ, ಪಾಟ, ಊಟಗಳ ಒಕ್ಕೂಟ. ಬಹುಶಃ ಅದಕ್ಕೇ ಇರಬಹುದು ಅನೇಕ ವಿಕೋಪಗಳಿಗೆ ತುತ್ತಾದರೂ ಈ ಮುಂಬಾಪುರಿಯು ತತ್ತರಿಸದೆ ಕತ್ತೆತ್ತಿ ನಿಂತಿರುವುದು” ಬಹು ಭಾಷೆ ಬಹು ಸಂಸ್ಕೃತಿ ಜನ ಮುಂಬೈಯನ್ನು ಕಟ್ಟಿ ಬೆಳೆಸಿದ ಬಗೆ ಮೇಡಂ ನವ ನವೀನವಾಗಿ ದಾಖಲಾಗಿದೆ.
ಮುಂಬೈ ಬರೇ ಒಂದು ಯಾಂತ್ರಿಕ ನಗರವಲ್ಲ. ಪ್ರೀತಿಯ ಸೆಲೆ, ಕಾಯುವ ಕೈಗೆ ಇಲ್ಲಿ ಯಾವತ್ತೂ ಬರಗಾಲವಿಲ್ಲ ಎಂಬುದನ್ನು ಆಪ್ತ ನೆರೆಯಲಿ ಚಿತ್ರಿಸಿದ್ದಾರೆ. ‘ಮುಂಬಾ ಆಯಿ’ ಎನ್ನುವುದನ್ನು ಪ್ರತಿಧ್ವನಿಸುವ ಮುಂಬೈ ಅಸಂಖ್ಯ ಜನರನ್ನು ಮಮತೆಯಿಂದ ಪೊರೆಯುವ ಮಹಾ ತಾಯಿ. ಕನಸುಗಳ ಮೂಟೆ ಹೊತ್ತು ತನ್ನಲ್ಲಿಗೆ ಬರುವವರ ಜಾತಿ, ಧರ್ಮ, ಶಿಕ್ಷಣ, ಆರ್ಥಿಕ ಹಿನ್ನೆಲೆ ಯಾವುದನ್ನೂ ಲೆಕ್ಕಿಸದೆ ಕೈ ಹಿಡಿದು ದಾರಿ ತೋರಿಸುವ ಅಕ್ಕರೆಯ ಅಪ್ಪನಂತೆ. ಈ ನಗರವು ದೇಶದ ಮೂಲೆ ಮೂಲೆಯ ಹಳ್ಳಿ, ಸಣ್ಣ ಪಟ್ಟಣಗಳಿಂದ ಬರಿಗೈಯಲ್ಲಿ ಬಂದ ಅನೇಕರಿಗೆ ಆಸರೆ ನೀಡಿ, ಆರೈಕೆ ಮಾಡಿ ಬೆಳೆಸಿದೆ. ಎಲ್ಲರಿಗೂ ಬದುಕಲು ಕಲಿಸಿದೆ. ಇಲ್ಲಿಯ ಜನರು ಹಲವು ರಾಜ್ಯ, ಭಾಷೆ, ಸಂಸ್ಕೃತಿಯವರು. ಆದಾವುದೂ ವಿಷಯವಲ್ಲ ಎಂಬಂತೇ ಪರಸ್ಪರ ನೋವು ನಲಿವುಗಳಲ್ಲಿ ಭಾಗಿಯಾಗುವ ಸ್ನೇಹಮಯಿಗಳು. ಮಾಯಾನಗರಿಯ ಮೋಜಿನ ಜೀವನ, ಅನುಕಂಪ, ಪ್ರೀತಿ, ವಾತ್ಸಲ್ಯ, ಒಗ್ಗಟ್ಟು, ಏಳುಬೀಳು ಎಲ್ಲದರ ಅನುಭವವಿರುವ ಮುಂಬೈಕರ್ಸ್ ಮಹಾಜನಗಳೆನ್ನಬಹುದು”.
ಈ ಲೇಖನಗಳೆಲ್ಲ ಬಿಡಿ ಕಥನಗಳಂತಿದ್ದು ತಾಜಾತನ, ಜೀವಂತಿಕೆ, ಕಾವ್ಯದ ಮೆರಗು, ವೈವಿಧ್ಯಗಳಿಂದ ಅವಲೋಕನೀಯವಾಗಿವೆ. ಈ ಬರವಣಿಗೆಯಲ್ಲಿ ಕಲಾ ಅವರ ಸೃಜನಶೀಲತೆ ಹಾಗೂ ವೈಚಾರಿಕತೆ ಅನನ್ಯವಾಗಿ ಮೂಡಿಬಂದಿದೆ. ನಗರದ ಬದುಕಿನ ಜೀವನ ಗತಿಯ ಲಯವನ್ನು ಹಿಡಿದು ಸಾಗಿರುವುದು ಈ ಕೃತಿಯ ಹಿರಿಮೆ. ಕಲಾ ಅವರ ಮುಖ್ಯ ಆಸ್ಥೆ ಮುಂಬೈ ನಗರದ ಹೊರ ಮೈಯ ಮಹಿಮೆಯನ್ನು ವರ್ಣಿಸುವುದಲ್ಲ, ಬದಲಾಗಿ ಈ ನಗರದ ಬದುಕನ್ನು ಸಮೃದ್ಧಗೊಳಿಸಲು ಚಲುವಾಗಿಸಲು ರಕ್ತ ಬಸಿದವರ ಸಂಕಥನವನ್ನು ಸೃಷ್ಟಿಸುವುದೇ ಆಗಿದೆ.” ಕಲಾ ಅವರ ಬರವಣಿಗೆಯಲ್ಲಿ ಕಥನದ ದಾಟಿ ಇದೆ, ಪ್ರಬಂದದ ವಿನ್ಯಾಸವಿದೆ, ಲವಲವಿಕೆಯ ಲಯವಿದೆ. ಈ ಪುಸ್ತಕವನ್ನು ಓದಿ ಮುಗಿಸಿದಾಗ ಮುಂಬೈಯ ಸಂಕೀರ್ಣ ಜಗತ್ತಿನ ದರ್ಶನವಾಗುತ್ತದೆ” ಎಂಬುದಾಗಿ ನಾಡಿನ ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರು ಹೇಳಿರುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ. ಮುಂಬೈನ ಜನ ಬದುಕಿನ ವಾಸ್ತವ ದರ್ಶನವನ್ನು ಇಷ್ಟು ಸಮಗ್ರವಾಗಿ ಸೊಗಸಾಗಿ ದೃಶ್ಯವತ್ತಾಗಿ ಕಾಂತಿಯುಕ್ತವಾಗಿ ಕಟ್ಟಿ ಕೊಟ್ಟ ಕೃತಿ ಇದೊಂದೇ ಎಂಬುದು ಕಲಾ ಭಾಗ್ವತ್ ಅವರ ಬರವಣಿಗೆಯ ಬಲ್ಮೆ. ‘ಮುಂಬಾಪುರಿ’ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅತಿ ಮಹತ್ವದ ಸೇರ್ಪಡೆ.

‘ಮುಂಬಾಪುರಿ’
ಲೇಖಕಿ : ಕಲಾ ಭಾಗ್ವತ್
ಪ್ರಕಾಶನ : ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ
ಬೆಲೆ : ರೂ.200/-

ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ ಮುಂಬೈ
