ಸುರತ್ಕಲ್ : ಗೋವಿಂದ ದಾಸ ಕಾಲೇಜು ಸುರತ್ಕಲ್, ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಸುರತ್ಕಲ್ ಇದರ ಸಹಯೋಗದಲ್ಲಿ ‘ಯಕ್ಷಯಾನ 2026’ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಮತ್ತು ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 21 ಮಾರ್ಚ್ 2026ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ ಗಂಟೆ 8-30ಕ್ಕೆ ‘ಯಕ್ಷಯಾನ’ ಯಕ್ಷಗಾನ ಸ್ಪರ್ಧೆಯನ್ನು ಉದ್ಯಮಿ ರಘುನಾಥ ಶೆಟ್ಟಿ ಕೃಷ್ಣಾಪುರ ಇವರು ಉದ್ಘಾಟಿಸಲಿದ್ದು, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಆಚಾರ್ಯ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ ಗಂಟೆ 9-00ಕ್ಕೆ ಮಂಗಳೂರಿನ ಸ್ವಸ್ತಿಕ ನ್ಯಾಶನಲ್ ಬಿಜಿನೆಸ್ ಸ್ಕೂಲ್ ಇವರಿಂದ ‘ನರಕಾಸುರ ಮೋಕ್ಷ’, 10-15ರಿಂದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಿಂದ ‘ಭೀಷ್ಮ ಪ್ರತಿಜ್ಞೆ’, 11-30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು ಇವರಿಂದ ‘ರತ್ನಾವತಿ ಕಲ್ಯಾಣ’, ಅಪರಾಹ್ನ 1-00ರಿಂದ ಮಂಗಳೂರು ವಿ.ವಿ. ಕಾಲೇಜು ಇವರಿಂದ ‘ಬಬ್ರುವಾಹನ ಕಾಳಗ’, 2-15ರಿಂದ ಉಜಿರೆ ಎಸ್.ಡಿ.ಎಂ. ಕಾಲೇಜು ತಂಡದಿಂದ ‘ತರಣಿಸೇನ ಕಾಳಗ’, ಗಂಟೆ 3-30ರಿಂದ ಗೋವಿಂದ ದಾಸ ಕಾಲೇಜು ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ತಂಡದಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ ಗಂಟೆ 4-30ರಿಂದ ನಡೆಯಲಿರುವ ಸಮಾರೋಪ ಸಮಾರಂಭವನ್ನು ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟಿಸಲಿದ್ದು, ಉದ್ಯಮಿ ಶ್ರೀಪತಿ ಭಟ್ ಇವರು ಅಧ್ಯಕ್ಷತೆ ವಹಿಸುವರು. ಹಿಂದೂ ವಿದ್ಯಾದಾಯನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಶಾಸಕ ಡಾ. ಭರತ್ ಶೆಟ್ಟಿ ಯುಗಪುರುಷ ಕಿನ್ನಿಗೋಳಿ ಇದರ ಭುವನಾಭಿರಾಮ ಉಡುಪ, ಶ್ರೀನಿವಾಸ ಕಾಲೇಜಿನ ಪ್ರೊ. ಶ್ರೀನಾಥ್ ರಾವ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ., ಪ್ರಾಂಶುಪಾಲ ಪ್ರೊ. ಹರೀಶ್ ಆಚಾರ್ಯ, ಯಕ್ಷಯಾನ ಸಂಚಾಲಕಿ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿರುವರು. ಕೃಷ್ಣ ಪ್ರಕಾಶ ಉಳಿತ್ತಾಯ ಅಗರಿ ಸಂಸ್ಮರಣೆ, ಡಾ. ವಾದಿರಾಜ ಕಲ್ಲೂರಾಯ ಅಭಿನಂದನ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಶ್ರೀ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಇವರಿಗೆ ‘ಅಗರಿ ಪ್ರಶಸ್ತಿ’ ಮತ್ತು 35 ಸಾವಿರ ನಗದು ಪುರಸ್ಕಾರ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಗೆ ‘ಅಗರಿ ರಘುರಾಮ ಭಾಗವತ ಪ್ರಶಸ್ತಿ’ ಹಾಗೂ 52 ಇಂಚಿನ ಎಲ್‌ಇಡಿ ಟಿವಿ ಹಸ್ತಾಂತರ ಮಾಡಲಾಗುವುದು.

