ಬೆಂಗಳೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇದರ ವತಿಯಿಂದ 14ನೆಯ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 7 ಮತ್ತು 8 ಜುಲೈ 2026ರಂದು ಬೆಂಗಳೂರಿನ ವಿಜಯನಗರ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿಯಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಲಾಗಿದೆ. ನಾಡೋಜ ಗೊ.ರು. ಚನ್ನಬಸಪ್ಪ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿರುವರು.
ದಿನಾಂಕ 7 ಜುಲೈ 2026ರಂದು ಬೆಳಗ್ಗೆ 8-00 ಗಂಟೆಗೆ ಧ್ವಜಾರೋಹಣ, 8-30 ಗಂಟೆಗೆ ಮಹಾದ್ವಾರ ಹಾಗೂ ವೇದಿಕೆ ಉದ್ಘಾಟನೆ ಮತ್ತು 9-00 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 10-30 ಗಂಟೆಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರು ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟನೆ ಮಾಡಲಿದ್ದು, ‘ಕಲ್ಯಾಣ ಸಂಗಮ’ ಸ್ಮರಣ ಸಂಚಿಕೆ ಹಾಗೂ ‘ಮಹಾಮನೆ’ ವಿಶೇಷ ಸಂಚಿಕೆ ಬಿಡುಗಡೆ ನಡೆಯಲಿದೆ. ಗೋಷ್ಠಿ 1ರಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬ ವಿಷಯದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧ ರಾಮಯ್ಯ, ಗೋಷ್ಠಿ 2ರಲ್ಲಿ ‘ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಆಶಾದೇವಿ ಇವರು ಉಪನ್ಯಾಸ ನೀಡಲಿದ್ದಾರೆ. 5-00 ಗಂಟೆಗೆ ಡಾ. ಸಂಗೀತಾ ಕಟ್ಟಿ ಇವರಿಂದ ವಚನ ಗಾಯನ, ಹಿರಿಯ ಸಾಹಿತಿಗಳಿಗೆ ಅಭಿನಂದನೆ, ಕೃತಜ್ಞತಾ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ಜಯದೇವಿ ಜಂಗಮಶೆಟ್ಟಿ ಇವರಿಂದ ವಚನ ಗಾಯನ, ಡಾ. ವೈಜಯಂತಿ ಕಾಶಿ ಇವರಿಂದ ವಚನ ನೃತ್ಯ ರೂಪಕ, ಪ್ರಯೋಗರಂಗ ತಂಡದವರಿಂದ ಡಾ. ಪ್ರಭುರಾಜ್ ಇವರ ನಿರ್ದೇಶನದಲ್ಲಿ ‘ಇವ ನಮ್ಮವ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 8 ಜುಲೈ 2026ರಂದು ಬೆಳಗ್ಗೆ 9-00 ಗಂಟೆಗೆ ಕದಳಿ ಮಹಿಳಾ ವೇದಿಕೆ, ಡಾ. ಮೃತ್ಯುಂಜಯ ದೊಡ್ಡವಾಡ ಮತ್ತು ಕ.ಮ.ಮೇ. ಹಾಗೂ ವಚನದಾಸೋಹ ತಂಡದವರಿಂದ ವಚನ ಗಾಯನ, 10-00 ಗಂಟೆಗೆ ಗೋಷ್ಠಿ 3ರಲ್ಲಿ ‘ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಸ್ಮರಣೆ’ ಎಂಬ ವಿಷಯದ ಬಗ್ಗೆ ವಿಜಯಪುರ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಮಹಾಂತೇಶ ಬಿರಾದಾರ, ಗೋಷ್ಠಿ 4ರಲ್ಲಿ ‘ಯುವ ಜನರತ್ತ ಶರಣ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಕಾನೂನು ಅಧಿಕಾರಿಗಳಾದ ಬಿ.ಎಸ್. ಪಾಟೀಲ್ ಹಾಗೂ ‘ಶರಣ ಸಾಹಿತ್ಯ ಮತ್ತು ಆಧುನಿಕ ತಂತ್ರಜ್ಞಾನ’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ. ಅವಿನಾಶ್ ಕವಿ, ಗೋಷ್ಠಿ 5ರಲ್ಲಿ ‘ಆಧುನಿಕ ವಚನ ಗೋಷ್ಠಿ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ, ಕಿಕ್ಕೇರಿ ಕೃಷ್ಣಮೂರ್ತಿ, ವಿದುಷಿ ಪಾವನಿ ಭಾರದ್ವಾಜ್, ಶ್ರೀಮತಿ ಓಹಿಲೇಶ್ವರಿ ಇವರಿಂದ ವಚನ ಗಾಯನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಸಂಜೆ 5-00 ಗಂಟೆಗೆ ಸಮಾರೋಪದಲ್ಲಿ ಸಾಧಕರಿಗೆ ಅಭಿನಂದನೆ, ‘ಅನುಭಾವ’ ಕೃತಿಗಳ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ರತಿಕಾ ನೃತ್ಯ ಕಲಾನಿಕೇತನದವರಿಂದ ನೃತ್ಯರೂಪಕ, ಜಗದೀಶ್ ಇವರ ನಿರ್ದೇಶನದಲ್ಲಿ ‘ಶಿವರಾತ್ರಿ’ ನಾಟಕ ಪ್ರದರ್ಶನ ನಡೆಯಲಿದೆ.

