ಪುತ್ತೂರು : ನೃತ್ಯದಲ್ಲಿ ವಿವಿಧ ಪ್ರಯೋಗಗಳಿಗೆ ಸಾಕ್ಷಿಯಾಗಿದೆ ನೃತ್ಯಾಂತರಂಗ ನೃತ್ಯೋತ್ಸವಗಳು. ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಸುಮಾರು 10 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಈ ಸರಣಿ ಕಾರ್ಯಕ್ರಮದ 141ನೇ ಆವೃತ್ತಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ರವರು ‘ಆನಂದ ರಾಮ’ ಎಂಬ ತ್ಯಾಗರಾಜರ ಪಂಚರತ್ನ ಕೃತಿ ಆಧಾರಿತ ನೃತ್ಯ ಕಾರ್ಯಕ್ರಮ ದಿನಾಂಕ 02 ಮೇ 2026ರಂದು ಶಶಿಶಂಕರ ಸಭಾಂಗಣದಲ್ಲಿ ನೀಡಿದರು.
ಹಿಮ್ಮೇಳದಲ್ಲಿ ಹಾಡುಗಾರಿಕೆ ಮತ್ತು ನಟುವಾಂಗದಲ್ಲಿ ವಿದುಷಿ ಪ್ರೀತಿಕಲಾ, ಪಿಟೀಲಿನಲ್ಲಿ ವಿದ್ವಾನ್ ಮುಲ್ಲೈವಾಸಲ್ ಚಂದ್ರಮೌಳಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಪನ್ನಗ ಶರ್ಮನ್ ಶೃಂಗೇರಿ ಹಾಗೂ ವ್ಯಾಖ್ಯಾನದಲ್ಲಿ ಶ್ರೀ ಶ್ಯಾಮ್ ಪ್ರಸಾದ್ ಪಾರೆ ಸಹಕರಿಸಿದ್ದರು. ನಾಟರಾಗದ ಜಗದಾನಂದಕಾರಕ ಎಂಬ ಮೊದಲ ಪಂಚರತ್ನ ಕೃತಿಗೆ ನೃತ್ಯದ ರೂಪವನ್ನು ಕೊಡುತ್ತಾ ಅದರ ಸಾಹಿತ್ಯಕ್ಕೆ ಒಂದಿಷ್ಟು ಸಂಚಾರಿ ಭಾವಗಳ ಮೂಲಕ ವಿಸ್ತೃತ ಆಯಾಮವನ್ನು ನೀಡಿದರು.





ಸಂಗೀತ ಕಛೇರಿ ಶೈಲಿಯಲ್ಲಿ ಹೆಚ್ಚಿನ ಕಥಾ ಭಾಗಗಳು ರಂಗ ವೇದಿಕೆಯಲ್ಲಿ ಮನೋಧರ್ಮದಲ್ಲಿ ಬೆಳವಣಿಗೆ ಕಂಡುಕೊಂಡಿತು. ಪುತ್ತೂರಿನ ಜನತೆಗೆ ರಾಗದ ಸ್ವರೂಪ ಮಾತ್ರ ತಿಳಿದಿದ್ದು ನೃತ್ಯದ ಮೂಲಕ ಸಾಹಿತ್ಯದ ಘನತೆ, ಅದರ ಆಳದ ಪರಿಕಲ್ಪನೆ, ತ್ಯಾಗರಾಜರ ಭಕ್ತಿಯ ಬಗ್ಗೆ ವಿಸ್ತಾರವಾದ ಪರಿಚಯ ನೃತ್ಯದ ಮೂಲಕ ಆಯಿತು. ಶ್ಯಾಮ್ ಪ್ರಸಾದ್ ರವರ ಸವಿವರಣಾತ್ಮಕ ವ್ಯಾಖ್ಯಾನ ಇನ್ನಷ್ಟು ಸಲೀಸಾಗಿ ಅರ್ಥೈಸಲು ಸಹಾಯಕವಾಯಿತು. ಕುಮಾರಿ ಮಾತಂಗಿ ಮತ್ತು ಸನ್ನಿಧಿ ಪ್ರಾರಂಭದ ರಂಗಕಲಾಪಗಳನ್ನು ನಿರ್ವಹಿಸಿದರು. ಕುಮಾರಿ ಸುಪ್ರಜಾ ಪ್ರಾರ್ಥನೆಗೈದರು. ಶೌರೀ ಕೃಷ್ಣ ಶಂಖನಾದಗೈದರು.

