ಚನ್ನಪಟ್ಟಣ : ಚನ್ನಪಟ್ಟಣದ ಸಿಂಗರಾಜಪುರದಲ್ಲಿರುವ ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ (ನೋಂ) ಇವರು ಮಹಾಕವಿ ಕುವೆಂಪು ಜನ್ಮದಿನದಂದು ಆಯೋಜಿಸಿರುವ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ ಗಂಟೆ 6-00ಕ್ಕೆ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ಸಚಿನ್ ಹೆಚ್. ಶೆಟ್ಟಿ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಶಂಭೂಗೌಡ ನಾಗವಾರ 9880012881 ಮತ್ತು ಆದರ್ಶ ಕುಮಾರ್ ಎಸ್.ಎನ್. 9945968639 ಸಂಪರ್ಕಿಸಿರಿ. ಪ್ರವೇಶ ದರ ರೂ.100/- ಆಗಿರುತ್ತದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ.