ಮಂಗಳೂರು : ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ ಮಂಗಳೂರು ಇದರ 5ನೇ ವಾರ್ಷಿಕೋತ್ಸವವು ದಿನಾಂಕ 14 ಫೆಬ್ರವರಿ 2026ರಂದು ಅತ್ತಾವರದ ಶ್ರೀ ಉಮಮಹೇಶ್ವರ ಕ್ಷೇತ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ಕಲಾವಿದರು ಹಾಗೂ ರಂಗ ಕಲಾವಿದರಾದ ಶ್ರೀ ಸುಧಾಕರ್ ಸಾಲಿಯನ್ “ಯಕ್ಷಗಾನದ ಭಾಷಾ ಶೈಲಿಯನ್ನು ಬಹಳ ಸುಲಭವಾಗಿ ಗ್ರಹಿಸಲು ಯಕ್ಷಗಾನ ನೋಡುವುದರಿ೦ದ ಹಾಗೂ ವಿದ್ಯಾರ್ಥಿಗಳು ಶ್ರದ್ದೆ, ನಿಯತ್ತು, ಭಕ್ತಿ, ತಪಸ್ಸು ಪ್ರಯತ್ನಗಳಿಂದ ಯಕ್ಷಗಾನ ರಂಗದಲ್ಲಿ ಒಬ್ಬ ಶ್ರೇಷ್ಟ ಕಲಾವಿದನಾಗಬಲ್ಲ” ಎಂದು ಹೇಳಿದರು.
“ಶತಮಾನಗಳ ಇತಿಹಾಸ ಇರುವಂತಹ ಯಕ್ಷಗಾನವು ಹಲವು ಮಜಲುಗಳನ್ನು ದಾಟಿ ರಂಗಪ್ರಯೋಗಗಳನ್ನು ಕಂಡು ಮುಂದಿನ ಪೀಳಿಗೆಗೆ ಸಹಕಾರಿಯಾಗಬಲ್ಲ ಇಂತಹ ಯಕ್ಷಗಾನ ಅಧ್ಯಯನ ಕೇಂದ್ರಗಳು ಅತ್ಯಗತ್ಯ ಎಂದು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರೊ. ರಾಘವೇಂದ್ರ ನೆಲ್ಲಿಕಟ್ಟೆ ಮಾತನಾಡಿರು.
ಅತ್ತಾವರ ಉಮಾಮಹೇಶ್ವರ ಕ್ಷೇತ್ರದ ಮೊಕ್ತೇಸರಾದ ಶ್ರೀ ಕೇಶವ ಮಳಲಿಯವರು “ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ಕಲಾವಿದರನ್ನಾಗಿ ಮಾಡಿದ ಯಕ್ಷಗುರು ರಾಕೇಶ್ ರೈಯವರ ಸಾಧನೆ ಅಮೋಘವಾದುದು” ಎಂದರು.
ಶ್ರೀ ಉಮಾಮಹೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀಶ ಉಪಾಧ್ಯಾಯ ಇವರು ದೀಪ ಪ್ರಜ್ವಲನೆ ಮಾಡಿ ಆರ್ಶೀವಚನ ನೀಡಿದರು. ಯಕ್ಷಗಾನದ ರಂಗದಲ್ಲಿ ಸೇವೆ ಸಲ್ಲಿಸಿದ ಶ್ರೀ ಜನಾರ್ದನ ಎಸ್. ಹಾಗೂ ಶ್ರೀ ಜಯಂತ ಪುರುಷ ಸಜಂಕಿಲ ಇವರನ್ನು ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಯಕ್ಷಗುರು ರಾಕೇಶ್ ರೈ ಉಪಸ್ಥಿತರಿದ್ದರು.

ಕುಮಾರಿ ಕರಿಷ್ಮ ಪ್ರಾರ್ಥನೆ ಹಾಗೂ ಧನ್ಯವಾದಗೈದರು. ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಜಯದೇವ ಸ್ವಾಗತ ಮಾಡಿದರು. ಗೌರವಧ್ಯಕ್ಷರಾದ ಶ್ರಿ ಚಂದ್ರಶೇಖರ್ ರೈ ಮಾಯಿಪಾಡಿ ಗುತ್ತು ಮತ್ತು ಕಾರ್ಯದರ್ಶಿ ಶ್ರೀಮತಿ ಶೋಭ ಅತ್ತಾವರ ಇವರು ಸನ್ಮಾನ ಪತ್ರವನ್ನು ವಾಚಿಸಿದರು. ಶ್ರೀಮತಿ ಭವ್ಯ ಗೀರಿಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಇವರ ನಿರ್ದೇಶನದಲ್ಲಿ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.

