ಕಾಂತಾವರ : ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಇವರು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಶ್ರೀ ಮುಳಿಯ ಶಂಕರ ಭಟ್ಟ ಇವರು, ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಇವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಶ್ರೀ ಪದ್ಯಾಣ ಗಣಪತಿ ಭಟ್ ಇವರು, ಕಾರ್ಕಳದ ಶಿಲ್ಪಿ ದಿ. ಕೆ. ಶಾಮರಾಯ ಆಚಾರ್ಯ ಇವರ ದತ್ತಿನಿಧಿಯ ‘ಶಿಲ್ಪಕಲಾ ಪ್ರಶಸ್ತಿ’ಗೆ ಶ್ರೀ ಪಿ. ದಾಮೋದರ ಆಚಾರ್ಯ ಕಾರ್ಕಳ ಇವರು ಆಯ್ಕೆಯಾಗಿದ್ದಾರೆ. ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕೊಡಮಾಡುತ್ತಿರುವ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ ಇವರನ್ನು ಆಯ್ಕೆ ಮಾಡಲಾಗಿದೆ.


ಕಾಂತಾವರದ ‘ಕನ್ನಡ ಭವನ’ದಲ್ಲಿ ದಿನಾಂಕ 15 ಮಾರ್ಚ್ 2026ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ಜೊತೆಗೆ ಪ್ರೊ. ಡಿ.ಎ. ಶಂಕರ್ ಮೈಸೂರು ಇವರಿಗೆ 2025ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ ನೀಡಲಾಗುವುದು. ಈ ಮೇಲಿನ ನಾಲ್ಕು ದತ್ತಿನಿಧಿಯ ಪ್ರಶಸ್ತಿಗಳು ರೂಪಾಯಿ ಹತ್ತು ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ವಾರ್ಷಿಕ ಗೌರವ ಪ್ರಶಸ್ತಿಯು ರೂಪಾಯಿ ಐದು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವ ಈ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಕವಿ ಬೆಂಗಳೂರಿನ ಪ್ರೊ. ಟಿ. ಯಲ್ಲಪ್ಪ ಇವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಒಂಬತ್ತು ಹೊಸ ಹೊತ್ತಗೆಗಳನ್ನು ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ. ಎ. ಸುಬ್ಬಣ್ಣ ರೈ ಇವರು ಬಿಡುಗಡೆ ಮಾಡಲಿದ್ದಾರೆ ಎಂದು ಸಂಘ ತಿಳಿಸಿದೆ.
