ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರಗಳಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು, 2025ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಮೂವರನ್ನು ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಮೂವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಪೇನಿ ಅಲ್ವಾರಿಸ್ ತಿಳಿಸಿದ್ದಾರೆ.
2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲೆ ವಿಭಾಗದಲ್ಲಿ ಸಂಗೀತ ಕಲಾವಿದ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಕೊಂಕಣಿ ಜಾನಪದ ವಿಭಾಗದಲ್ಲಿ ಖೇಳ ಕಲಾವಿದ ಸೈರು (ಮುರಳೀಧರ) ಪುತ್ತು ನಾಯ್ಕ್ ಇವರನ್ನು ಆಯ್ಕೆ ಮಾಡಲಾಗಿದೆ.
2025ನೇ ಸಾಲಿನ ‘ಪುಸ್ತಕ ಪುರಸ್ಕಾರ’ಕ್ಕೆ ಕೊಂಕಣಿ ಕವನ ವಿಭಾಗದಲ್ಲಿ ಕವಿ ಆಂಡ್ರ್ಯೂ ಎಲ್. ಡಿ’ಕುನ್ಹಾರವರ ‘ಉಜ್ವಾಡಾಚ್ಯೆ ವೆಂಗೆಂತ್’ ಪುಸ್ತಕ, ಕೊಂಕಣಿ ಲೇಖನ ವಿಭಾಗದಲ್ಲಿ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾರವರ ‘ಕೊಂಕ್ಲಿ ಸರ್ಕಸ್’ ಪುಸ್ತಕ, ಕೊಂಕಣಿ ಸಣ್ಣಕಥೆಗಳ ವಿಭಾಗದಲ್ಲಿ ಲೇಖಕ ರಿಚರ್ಡ್ ಆಲ್ವಾರಿಸ್ ಅವರ ‘ಫಿತುರಿ’ ಪುಸ್ತಕವನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮವು ದಿನಾಂಕ 26 ಏಪ್ರಿಲ್ 2026ರಂದು ಸಂಜೆ 5-00 ಗಂಟೆಗೆ ಉಡುಪಿ ಜಿಲ್ಲೆಯ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದ್ದು, ಸಚಿವ ಶಿವರಾಜ್ ಎಸ್. ತಂಗಡಗಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು. ಆಕಾಡೆಮಿ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಆಲ್ವಾರಿಸ್ರವರ ಅಧ್ಯಕ್ಷತೆಯಲ್ಲಿ, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಗುರು ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
