ಚೆನ್ನೈ : ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ವೀಣಾ ವಾದಕಿ ಜಯಂತ ಕುಮರೇಶ್ ಇವರು ಭಾಜನರಾಗಿದ್ದಾರೆ. ಸರಸ್ವತಿ ವೀಣೆಯಲ್ಲಿನ ಪಾಂಡಿತ್ಯಕ್ಕಾಗಿ ಮತ್ತು ಕರ್ನಾಟಕ ಸಂಗೀತವನ್ನು ಯುವ ಜನರೆಡೆಗೆ ಕೊಂಡೊಯ್ಯುವಲ್ಲಿನ ಹೊಸ ಆಲೋಚನೆಗಳಿಗಾಗಿ ಜಯಂತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷ ಎನ್.ಮುರಳಿ ತಿಳಿಸಿದ್ದಾರೆ. 57 ವರ್ಷದ ಜಯಂತಿ ಅವರು ದಿವಂಗತ ಉಸ್ತಾದ್ ಜಾಕೀರ್ ಹುಸೇನ್ ಸೇರಿದಂತೆ ಹಲವು ಪ್ರಮುಖ ಕಲಾವಿದರ ಜತೆ ಸಂಗೀತ ಕಾರ್ಯಕ್ರಮ ನೀಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸುಗಂಧಾ ಕಲಾಮೇಘಂ ಮತ್ತು ಮೃದಂಗ ವಾದಕ ತ್ರಿಚೂರ್ ಸಿ. ನರೇಂದ್ರನ್ ಇವರನ್ನು ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸುಗಂಧಾ ಅವರು ಸಂಗೀತ ಕಲಾ ಆಚಾರ್ಯ ಆರ್. ವೆಂಕಟರಾಮನ್ ಇವರಿಂದ ವೀಣಾ ವಾದನ ಕಲಿತಿರುವುದರ ಜತೆಗೆ, ನವದೆಹಲಿಯ ಗಾಂಧರ್ವ ಮಹಾ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ನರೇಂದ್ರನ್ ಅವರು ಅಲ್ ಇಂಡಿಯಾ ರೇಡಿಯೊದಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದು. ಹಲವು ಮಂದಿಗೆ ತರಬೇತಿ ನೀಡಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೆಗೊ ಸ್ಪೇಟ್ ಯೂನಿವರ್ಸಿಟಿಯಲ್ಲಿ ಎರಡು ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.
