ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಹಮ್ಮಿಕೊಂಡ 2022-23ನೇ , 2023-24ನೇ ಹಾಗೂ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸದ್ಯ ಪ್ರತಿ ತಿಂಗಳು ರೂ.2 ಸಾವಿರ ಮಾಸಾಶನ ನೀಡಲಾಗುತ್ತಿದೆ. 12 ಸಾವಿರಕ್ಕೂ ಅಧಿಕ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಮುಂದಿನ ವರ್ಷದಿಂದ ಮಾಸಾಶನ ಹೆಚ್ಚಿಸಲಾಗುತ್ತದೆ. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಆಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದವು. ಬಳಿಕ ಬಂದ ಸರ್ಕಾರಗಳು ಅನುದಾನ ಕಡಿತ ಮಾಡಿದವು. ನಾವು ಈಗ ಹೆಚ್ಚಿನ ಅನುದಾನ ನೀಡಿದ್ದೇವೆ. ಮುಂದಿನ ವರ್ಷ ಅಕಾಡೆಮಿಗಳಿಗೆ ನೀಡುವ ಅನುದಾನವನ್ನು ಇನ್ನಷ್ಟು ಹೆಚ್ಚಳ ಮಾಡುತ್ತೇವೆ’ ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಮಾತನಾಡಿ “ಕನ್ನಡ ರಂಗಭೂಮಿಯು ಮೂರು ಮುಂದಿನ ವರ್ಷಗಳಿಂದ ಸ್ತಬ್ದವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರಕ್ಕೆ ಆದಾಯ ತರದಿದ್ದರೂ ಗೌರವ ತರಲಿದೆ. ಇದನ್ನು ಅರಿತು ಈಗಿನ ಸರ್ಕಾರ ಕಲೆ ಮತ್ತು ಸಾಹಿತ್ಯಕ್ಕೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿದರು. ಕೇರಳದ ರಂಗಭೂಮಿ ಕಲಾವಿದ ಚಂದ್ರದಾಸನ್, ಮುಂಬೈ ರಂಗಭೂಮಿ ಕಲಾವಿದ ಗಣೇಶ್ ಯಾದವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಧರಣೀದೇವಿ, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನಟಿ ಉಮಾಶ್ರೀ, ನಾಟಕಕಾರರಾದ ಪ್ರೊ. ಎಚ್.ಎಸ್. ಶಿವಪ್ರಕಾಶ್ ಹಾಗೂ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಕೋಲಾರ ಇವರಿಗೆ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ ಸೇರಿ 92 ಮಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಗೀತ ಗಾಯನ ಮತ್ತು ಜಾನಪದ ಕಲಾ ತಂಡದವರಿಂದ ಪ್ರದರ್ಶನಗಳು ನಡೆದವು.