ಕರ್ನಾಟಕ ಲೇಖಕಿಯರ ಸಂಘದ 2024 – 2025ನೆಯ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 09 ಏಪ್ರಿಲ್ 2026ರ ಗುರುವಾರದಂದು ಮಧ್ಯಾಹ್ನ 2-30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸಬಿಹಾ ಭೂಮಿಗೌಡ ಇವರು ಮಾತನಾಡಿ ಸುಮಾರು 37 – 38 ವರ್ಷಗಳ ಕಲೇಸಂನ ಒಡನಾಟವನ್ನು ಸ್ಮರಿಸಿದರು. “ಲೇಖಕಿಯರ ಸಂಘವು ಆರಂಭದಿಂದಲೂ ಕಮ್ಮಟಗಳ ಮೂಲಕ ಅದರಲ್ಲಿ ಭಾಗವಹಿಸಿದ ಲೇಖಕಿಯರಿಗೆ ಸಾಹಿತ್ಯವನ್ನು ಹೇಗೆ ಓದಬೇಕು, ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಕಲೇಸಂನ ಪ್ರಶಸ್ತಿ ಲೇಖಕಿಯರಿಗೆ ಅಸ್ಮಿತೆಯ ಸಂಕೇತವಾಗಿದೆ. ಹೊಸ ಜವಾಬ್ದಾರಿಯನ್ನು ಹೊತ್ತು ನಡೆಯುತ್ತಿರುವ ಪ್ರಸ್ತುತ ಕಲೇಸಂನ ಇಡೀ ತಂಡಕ್ಕೆ ಕನಸನ್ನು ನನಸಾಗಿಸುವ ಉತ್ಸಾಹ ಮತ್ತು ಶಕ್ತಿ ಇದೆ” ಎಂದರು.
ಕಲೇಸಂ ವೆಬ್‌ಸೈಟ್ ನಲ್ಲಿ ಲಭಿಸುವ ಮಾಹಿತಿಯನ್ನು ಕುರಿತು ಜಯಲಕ್ಷ್ಮಿ ಪಾಟೀಲ್ ಅವರು ವಿವರಿಸಿದರು. ಕಲೇಸಂನ ವೆಬ್ಸೈಟ್ ಅನ್ನು ಡಾ. ಎನ್. ಗಾಯತ್ರಿಯವರು ಉದ್ಘಾಟಿಸಿದರು. ಬದುಕು ಮತ್ತು ಬರಹ ಆಧುನಿಕವಾಗುತ್ತಿರುವ ಈ ಕಾಲದಲ್ಲಿ ವೆಬ್ಸೈಟ್ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. “ಪ್ರಶಸ್ತಿಗಳನ್ನು ನಿರ್ಣಯಿಸುವ ಹಂತದಲ್ಲಿ ಹಲವು ಉತ್ತಮ ಪುಸ್ತಕಗಳನ್ನು ಓದುವಂತಾಯಿತು. ಇಂದು ಮಹಿಳೆಯರು ಪ್ರವೇಶಿಸದೇ ಇರುವ ಕ್ಷೇತ್ರವೇ ಇಲ್ಲ. ಮಹಿಳೆಯರ ಜ್ಞಾನ ಪ್ರಪಂಚದಾದ್ಯಂತ ಹರಡಿದೆ. ಮಹಿಳೆಯರ ಬರವಣಿಗೆಗಳು ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿದೆ. ಅದರಿಂದ ಪುರುಷಶಾಹಿ ಜಗತ್ತಿಗೆ ಸಿಟ್ಟು ಬರಬಹುದು ಆದರೆ ಅದನ್ನು ದಿಟ್ಟತನದಿಂದ ಎದುರಿಸಿ ನಿಲ್ಲಬೇಕು” ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಸ್.ಜಿ. ಸಿದ್ದರಾಮಯ್ಯ ಇವರು “ಇಂದು ಇಡೀ ಜಗತ್ತು ಕ್ರೌರ್ಯ, ಹಿಂಸೆ, ರಕ್ತಪಾತವನ್ನು ಅನುಭವಿಸುತ್ತಿದೆ. ಅವರೆಲ್ಲರೂ ನಮ್ಮ ಸಹಜೀವಿಗಳು. ಜೀವಸಂಕುಲದ ಮನುಜ ಲೋಕದ ಈ ಕ್ರೌರ್ಯ ನಮ್ಮಲ್ಲಿ ಸಂಕಟವನ್ನು ಉಂಟುಮಾಡುತ್ತದೆ. ಬಹುತೇಕ ಯುದ್ಧಗಳು ನಡೆಯುವುದು ಪುರುಷಾಹಂಕಾರದಿಂದ. ಹಿಂಸೆಯನ್ನು ಅಹಿಂಸೆಯಿಂದ ಮಾತ್ರ ಸೋಲಿಸಲು ಸಾಧ್ಯ. ಮಾತೃ ಹೃದಯದ ಶಕ್ತಿ ಎಲ್ಲಾ ಬರಹಗಾರರಿಗೂ ಬರಬೇಕು” ಎಂದರು.

ಮುಖ್ಯ ಅತಿಥಿಗಳಾಗಿದ್ದ ಜಿ.ಎನ್. ಮೋಹನ್ ಅವರು ಸಂಘದ ಜೊತೆಗೆ ತಮಗೆ ಇರುವ ಒಡನಾಟವನ್ನು ಹೇಳುತ್ತಾ, ಆರಂಭ ಘಟ್ಟದಿಂದಲೂ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಅವರು ವಹಿಸಿದ್ದರು. ಲೇಖಕಿಯರ ಸಂಘವು ಇದುವರೆಗೂ ನಡೆಸಿದ ಕಾರ್ಯಕ್ರಮಗಳನ್ನು ಮತ್ತು ಮುಂದೆ ಹಮ್ಮಿಕೊಳ್ಳುತ್ತಿರುವ ಕಾರ್ಯ ಯೋಜನೆಗಳನ್ನು ಸಭೆಯ ಮುಂದಿಟ್ಟರು. ಉಪಾಧ್ಯಕ್ಷರಾದ ಡಾ. ಆರ್.ಕೆ. ಸರೋಜಾ ಮತ್ತು ಸರ್ವಮಂಗಳಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಮಾ ಸತೀಶ್ ಅವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.
