ಕಾಸರಗೋಡು : “ಕ್ಷೇತ್ರ ಯಾವುದೇ ಇರಲಿ, ಅದರಲ್ಲಿ ಆರೋಗ್ಯವಂತ ಸ್ಪರ್ಧೆಗಳು ಇರಬೇಕು ಹೊರತು ಅಸೂಯೆಯು ಸ್ಪರ್ಧೆಯ ಭಾಗವಾಗಬಾರದು” ಎಂದು ಕಲಾ ಮತ್ತು ಸಂಸ್ಕೃತಿಯಲ್ಲಿ ಗೌರವ ಡಾಕ್ಟರೇಟ್ ಗಳಿಸಿದ, ಮಿಸೆಸ್ ಇಂಡಿಯಾ ಫಿನ್ಸ್ಸ್ ಕ್ರೌನ್ ವಿಜೇತೆ, ಗಾಯಕಿ ಪ್ರತಿಭಾ ಸಾಲ್ಯಾನ್ ಅವರು ಹೇಳಿದರು.


ಕಾಸರಗೋಡಿನ ಖ್ಯಾತ ಸಾಂಸ್ಕೃತಿಕ-ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ಇದರ ಸಂಗೀತ ಘಟಕ ಸ್ವರಚಿನ್ನಾರಿ ನೇತೃತ್ವದಲ್ಲಿ ಏರ್ಪಡಿಸಿದ ‘ಅಂತರಧ್ವನಿ -13’ ಕರೋಕೆ ಗಾಯಕರ ಸಮ್ಮಿಲನವನ್ನು ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 28 ಫೆಬ್ರವರಿ 2026ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

“ಕಲಾವಿದನಿಗೆ ಜ್ಞಾನವೇ ತಿರುಳು. ಫಲವಿಲ್ಲದೆ ಮಾತನಾಡುವವನಲ್ಲಿ ಜ್ಞಾನ ಇರುವುದಿಲ್ಲ. ಅವನು ಒಳಗೆ ತಿರುಳಿಲ್ಲದ ಜಳ್ಳು ಕಾಳಿನಂತೆ, ಆಕಾರಕ್ಕೆ ಮಾತ್ರ ಮನುಷ್ಯ, ಒಳ ಹೊಕ್ಕು ನೋಡಿದರೆ ಕೇವಲ ನಿಸ್ಸಾರ” ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಸಾಮಾಜಿಕ ಕಾರ್ಯಕರ್ತ, ಗಾಯಕ ಮಾಧವ ಸುವರ್ಣ “ಸಂಗೀತವು ಒಂಟಿತನವನ್ನು ಇಲ್ಲದಂತೆ ಮಾಡುತ್ತದೆ” ಎಂದರು. ಖ್ಯಾತ ಪ್ರಸಾದನ ಕಲಾವಿದೆ ಸುಮಾ ಸ್ವಸ್ಥಿ ಹಾಡನ್ನು ಹಾಡಿ ರಂಜಿಸಿದರು.

ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗಚಿನ್ನಾರಿಯ ಸಂಚಾಲಕರಾದ ಕಾಸರಗೋಡು ಚಿನ್ನಾ ಸ್ವಾಗತಿಸಿ, ಉದಯ ಕುಮಾರ ಕಾರ್ಲೆ ಅವರು ಪ್ರಾರ್ಥನೆ ಹಾಡಿದರು. ವಿಜಯಲಕ್ಷ್ಮೀ ಶ್ಯಾನ್ ಭೋಗ್, ಉಷಾ ಟೀಚರ್, ಉದಯ ಕುಮಾರ್ ಮನ್ನಿಪ್ಪಾಡಿ, ಅಕ್ಷತಾ ವರ್ಕಾಡಿ, ಜನಾರ್ದನ ಅಣಂಗೂರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯಕರಾದ ವೈ. ಸತ್ಯನಾರಾಯಣರವರು ಶಿಸ್ತು ಬದ್ಧಿನಿಂದ ಕಳೆದ ಒಂದು ವರುಷದಿಂದ ನಿರಂತರವಾಗಿ ಸಂಗೀತ, ಸಾಹಿತ್ಯ ಸೇವೆ ಮಾಡುತ್ತಿರುವ ರಂಗಚಿನ್ನಾರಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೆ, ತಾವು ಬರೆದ ‘ಗ್ರಹಣ’ ಪುಸ್ತಕವನ್ನು ಗಾಯಕರಿಗೆ ಉದಾರವಾಗಿ ನೀಡಿದರು. ಖ್ಯಾತ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ಮಾತನಾಡಿದರು.

‘ಅಂತರಧ್ವನಿ’ಯ ಸಹ ಸಂಚಾಲಕಿ ಬಬಿತಾ ಆಚಾರ್ಯ ವಂದಿಸಿದರು. ‘ಅಂತರಧ್ವನಿ’ ಕಾರ್ಯಕ್ರಮದಲ್ಲಿ ಸುಮಾರು 70 ಜನ ಗಾಯಕಿ-ಗಾಯಕರು ವಿವಿಧ ಭಾಷೆಯ ಹಾಡುಗಳನ್ನು ಹಾಡಿ ರಂಜಿಸಿದರು.

