ಕಾಸರಗೋಡು : “ಭಾರತದ ಭದ್ರ ಬುನಾದಿಯು ಸಂಗೀತ. ಒಳ್ಳೆಯ ಸಂಗೀತ ಕೇಳುವುದರಿಂದ ಮನಸ್ಸಿಗೆ ಏಕಾಗ್ರತೆ ಸಿಗುತ್ತದೆ. ಆಧ್ಯಾತ್ಮಿಕ ಅನುಭವ ಬೇಕೆಂದರೆ ಸಂಗೀತದ ಒಳ ಹೊಕ್ಕಿ ನೋಡಬೇಕು. ಅದರಿಂದ ಸಿಗುವ ಆನಂದ ಕಲ್ಪನಾತೀತವಾದದ್ದು” ಎಂದು ಒಡಿಯೂರು ಸಾಧ್ವಿ ಶ್ರೀ ಮಾತಾನಂದ ಸ್ವಾಮೀಜಿ ಹೇಳಿದರು.
ಅವರು ಕಾಸರಗೋಡಿನ ಸಾಹಿತ್ಯಿಕ ಸಾಂಸ್ಕೃತಿಕ ಸಾಮಾಜಿಕ ಸಂಸ್ಥೆ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯು ಏರ್ಪಡಿಸಿದ ‘ಅಂತರಧ್ವನಿ – 15’ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ದಿನಾಂಕ 25 ಏಪ್ರಿಲ್ 2026ರ ಶನಿವಾರದಂದು ಕರಂದೆಕ್ಕಾಡಿನಲ್ಲಿರುವ ಪದ್ಮಗಿರಿ ಕಲಾ ಕುಟೀರದಲ್ಲಿ ಏರ್ಪಡಿಸಿದ ಕರೋಕೆ ಗಾಯಕರ ಸಮ್ಮಿಲನದಲ್ಲಿ ಚಲನಚಿತ್ರ / ಧಾರಾವಾಹಿ ನಟಿ ಭಾಗ್ಯಶ್ರೀ ರೈಯವರು ಮಾತನಾಡಿ “ಕಾಸರಗೋಡಿನ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡುವ ರಂಗಚಿನ್ನಾರಿ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು. ಕನ್ನಡ ಭಾಷೆಯು ಕ್ಷೀಣಿಸುತ್ತಿರುವ ಈ ಕಾಲ ಘಟ್ಟದಲ್ಲಿ ನಮ್ಮ ಭವ್ಯವಾದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿರುವ ರಂಗಚಿನ್ನಾರಿ ತಂಡಕ್ಕೆ ತನ್ನ ಸಹಕಾರ ಯಾವತ್ತೂ ಇದೆ” ಎಂದರು.


‘ಕವಿ ಸಿಂಚನ’ ಎಂಬ ಕಲ್ಪನೆಯೊಂದಿಗೆ ರಂಗಚಿನ್ನಾರಿಯು ಶ್ರೇಷ್ಟ ಕವಿಗಳನ್ನು ಪರಿಚಯಿಸುವ ಯೋಜನೆಯನ್ನು ಹಮ್ಮಿಕೊಂಡ ಸಲುವಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಪರಿಚಯವನ್ನು ಕವಿಯತ್ರಿ, ಸಾಹಿತಿ ಶ್ರೀಮತಿ ವಿಜಯ ಲಕ್ಷ್ಮೀ ಶ್ಯಾನುಭೋಗ್ ರವರು ಮಾಡಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್, ಸದಸ್ಯೆ ಸಿ. ಮೀರಾ ಕಾಮತ್ ವೇದಿಕೆಯಲ್ಲಿದ್ದರು.

ರಂಗಚಿನ್ನಾರಿಯ ನಿರ್ದೇಶಕರೂ, ‘ಅಂತರಧ್ವನಿ’ಯ ಸಂಚಾಲಕರಾದ ಕಾಸರಗೋಡು ಚಿನ್ನಾರವರು ಪ್ರಾಸ್ತಾವಿಕ ಮಾತನಾಡಿದರು. ರಂಗಚಿನ್ನಾರಿಯ ನಿರ್ದೇಶಕರಲ್ಲೊಬ್ಬರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಸ್ವಾಗತಿಸಿದರು.
ನಾರಿ ಚಿನ್ನಾರಿಯ ಕೋಶಾಧಿಕಾರಿ ಶ್ರೀಮತಿ ವೀಣಾ ಅರುಣ್ ಶೆಟ್ಟಿಯವರು ಸಾಧ್ವಿ ಶ್ರೀ ಮಾತಾನಂದಮಯಿ ಇವರನ್ನು ಶಾಲು ಹೊದಿಸಿ ಗೌರವಿಸಿದರು. ಗಾಯಕಿ ಶ್ರೀದೇವಿ, ದಿವ್ಯಾ ಗಟ್ಟಿ ಪರಕ್ಕಿಲ, ಉಷಾ ಟೀಚರ್, ಸೂರ್ಯಕಾಂತಿ, ಸರ್ವಮಂಗಳಾ ಟೀಚರ್ ಮುಂತಾದವರು ವೇದಿಕೆಯಲ್ಲಿದ್ದರು.


ಖ್ಯಾತ ಸಾಹಿತಿ, ವೈ. ಸತ್ಯನಾರಾಯಣ ಅವರು ರಚಿಸಿದ ‘ಹಾಸ’ ಪುಸ್ತಕವನ್ನು ಅಂತರಧ್ವನಿಯ ಎಲ್ಲಾ ಗಾಯಕ ಗಾಯಕಿಯವರಿಗೆ ಕೊಡ ಲಾಯಿತು. ಸುಮಾರು 60 ಮಂದಿ ಗಾಯಕ ಗಾಯಕಿಯರು ಬಹು ಭಾಷಾ ಹಾಡುಗಳನ್ನು ಹಾಡಿ ರಂಜಿಸಿದರು.

ಅಂತರಧ್ವನಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ವಂದಿಸಿದರು. ಸರ್ವಮಂಗಳಾ, ದಿವ್ಯಾ ಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


