ಕಾಸರಗೋಡು : “ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗೀತೆಗಳನ್ನು ರಚಿಸಿದ ಕಯ್ಯಾರರು ‘ಬೆಂಕಿ ಬಿದ್ದಿದೆ ಮನೆಗೆ ಬೇಗ ಬನ್ನಿ’ ಎಂಬ ಕ್ರಾಂತಿಕಾರಿ ಗೀತೆಯನ್ನೂ ರಚಿಸಿ ಅಜರಾಮರರಾಗಿದ್ದರು. ಅಖಿಲ ಕರ್ನಾಟಕದ ಮಹಾಕವಿಯಾಗಿ ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕೆಂಬ ಆಶಯದೊಂದಿಗೆ ಬದುಕಿ ಬಾಳಿದವರು. ಕಾಸರಗೋಡು ಕರ್ನಾಟಕಕ್ಕೆ ಸೇರಿದ ದಿನ ನಾನು ಉಸಿರು ಚೆಲ್ಲುತ್ತೇನೆ ಎಂದು ಹೇಳಿ ಅಧ್ಯಾಪಕರಾಗಿ, ಕೃಷಿಕರಾಗಿ ಬಾಳಿ ಮಾದರಿಯಾದವರು” ಎಂದು ಡಾ. ಪ್ರಸನ್ನ ರೈ ಅವರು ಹೇಳಿದರು.
ಕಾಸರಗೋಡಿನ ಸಾಹಿತ್ಯಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯು ಏರ್ಪಡಿಸಿದ ‘ಅಂತರಧ್ವನಿ – 16’ ಸಂಗೀತ ಕಾರ್ಯಕ್ರಮವನ್ನು ಬೀರಂತಬೈಲಿನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

“ಗ್ರಾಮೀಣ ಪ್ರದೇಶದ ಗಾಯಕರಿಗೆ ಗಟ್ಟಿಯಾದ ವೇದಿಕೆಯನ್ನು ನಿರ್ಮಿಸಿ, ಸಂಗೀತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದು ಸಾಹಸದ ಕೆಲಸ – ಕನ್ನಡವೇ ಕ್ಷೀಣಿಸುತ್ತಿರುವಾಗ ಇಂತಹ ಕಾರ್ಯಕ್ರಮಗಳು ಗಡಿನಾಡ ಕನ್ನಡಿಗರಲ್ಲಿ ಆತ್ಮಸ್ಥೈರ್ಯ ಮೂಡಲು ಸಹಾಯಕವಾಗುತ್ತದೆ ಎಂದರಲ್ಲದೆ ತಮ್ಮ ತಂದೆಯವರಾದ ಕಯ್ಯಾರರ ಗೀತೆಯನ್ನು ಹಾಡಿ ಜನರ ಮನಸ್ಸನ್ನು ಗೆದ್ದರು. ಅವರು ಕನ್ನಡದ ಧ್ವನಿಯಾಗಿ ಬಾಳಿದವರು” ಎಂದರು.

ಕವಿಸಿಂಚನ ಕಾರ್ಯಕ್ರಮದಲ್ಲಿ ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಇವರು ಮಾತನಾಡಿ “ಕಯ್ಯಾರರು ಕವಿಯಾಗಿ ಬಹುಭಾಷಾ ವಿದ್ವಾಂಸರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾಸರಗೋಡು ಚಳುವಳಿಯ ನಾಯಕರಾಗಿ, ಪತ್ರಿಕಾ ಸಂಪಾದಕರಾಗಿ, ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಗೋವಿಂದ ಪೈಯವರ ಒಡನಾಡಿಯಾಗಿ ಬಾಳಿದವರು” ಎಂದು ಹೇಳಿದರು.

ರಂಗಚಿನ್ನಾರಿಯ ನಿರ್ದೇಶಕರೂ, ‘ಅಂತರಧ್ವನಿ’ಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾರವರು ಪ್ರಾಸ್ತಾವಿಕ ಮಾತನಾಡಿದರು. ರಂಗಚಿನ್ನಾರಿಯ ಮತ್ತೊಬ್ಬ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಸ್ವಾಗತಿಸಿ, ಶ್ರೀಮತಿ ಶೋಭಾ ಬೆಳ್ಳಾರೆ ಪ್ರಾರ್ಥಿಸಿದರು.
ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಡಾ. ಸಂತೋಷ್ ಕಾಮತ್, ಕೆ. ಸತ್ಯನಾರಾಯಣ, ಗಾಯಕರೂ ವೈದ್ಯರೂ ಆಗಿರುವ ಡಾ. ಕೆ.ಕೆ. ಶ್ಯಾನು ಭೋಗ್ ಉಪಸ್ಥಿತರಿದ್ದರು. ಖ್ಯಾತ ಸಾಹಿತಿ ವೈ. ಸತ್ಯನಾರಾಯಣ ವಿರಚಿತ ‘ಪಲಾಯನ’ ಕಥಾ ಸಂಕಲನವನ್ನು ಎಲ್ಲಾ ಗಾಯಕರಿಗೆ ವಿತರಿಸಲಾಯಿತು. ಅಂತರಧ್ವನಿಯ ಸಹಸಂಚಾಲಕಿ ಬಬಿತಾ ಆಚಾರ್ಯ ವಂದಿಸಿದರು.
