ಮಂಗಳೂರು : ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಇವರ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ ಕಾರ್ಯಕ್ರಮ “ಆನು ಒಲಿದಂತೆ ಹಾಡುವೆ ಸರಣಿಯ 5ನೇ ಕಾರ್ಯಕ್ರಮವು ದಿನಾಂಕ 27 ಮೇ 2026ರಂದು ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ಪ್ರೊ. ಬಿ.ಎ. ವಿವೇಕ ರೈ ವೇದಿಕೆಯಲ್ಲಿ ನಡೆಯಲಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ಬೆಂಗಳೂರಿನ ಅಭಿನವ ಹಾಗೂ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘ ‘ಗಿಳಿವಿಂಡು’ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪಗೌಡ, ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟಗಿರಿ ದಳವಾಯಿ, ಬೆಂಗಳೂರಿನ ಅಭಿನವದ ನ. ರವಿಕುಮಾರ ಹಾಗೂ ಗಿಳಿವಿಂಡು ವೇದಿಕೆ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ “ಪ್ರೊ. ಬಿ.ಎ. ವಿವೇಕ ರೈ ಸಮಗ್ರ ಸಾಹಿತ್ಯ ಅವಲೋಕನ” ಗಿಳಿಸೂವೆ 1 ಗೋಷ್ಠಿಯಲ್ಲಿ ಪ್ರೊ. ವಿಜಯ ಪೂಣಚ್ಚ ತಂಬಂಡ, ಡಾ. ರೇಖಾ ಬನ್ನಾಡಿ ಹಾಗೂ ಡಾ. ಆರ್. ಸತೀಶ್ ವಿಚಾರ ಮಂಡಿಸಲಿದ್ದಾರೆ.
ಅಪರಾಹ್ನ ನಡೆಯುವ ಗಿಳಿಸೂವೆ 2 ‘ಬಿ.ಎ. ವಿವೇಕ ರೈ ಅವರ ಜತೆ ಮಾತುಕತೆ’ ಕಾರ್ಯಕ್ರಮದಲ್ಲಿ ಪ್ರೊ. ಕೆ. ಚಿನ್ನಪ್ಪಗೌಡ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ. ಡಾ. ತಾಳ್ತಜೆ ವಸಂತ ಕುಮಾರ್, ಡಾ. ಅಭಯ ಕುಮಾರ್ ಮುಡಿಪು, ಡಾ. ಆರ್. ನರಸಿಂಹಮೂರ್ತಿ, ಡಾ. ಇಂದಿರಾ ಹೆಗ್ಡೆ, ರಾಜಶೇಖರ ಹಳೆಮನೆ, ಡಾ. ಚೇತನ್ ಸೋಮೇಶ್ವರ, ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಸಂಪತ್ ಕುಮಾರ್, ನಾಗರಾಜ್ ಹೆಗಡೆ ಅಪಗಾಲ, ಶಶಿರಾಜ್ ಕಾವೂರು ಹಾಗೂ ಚಂದ್ರಕಲಾ ನಂದಾವರ ಭಾಗವಹಿಸಲಿದ್ದಾರೆ. ಸಾಹಿತ್ಯಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪಗೌಡ ತಿಳಿಸಿದ್ದಾರೆ.

