ಕುಂಭಾಶಿ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಹಯೋಗದೊಂದಿಗೆ ದಿನಾಂಕ 04 ಜೂನ್ 2026ರಂದು ‘ಅರ್ಥಾಂಕುರ-20’ ಸರಣಿ ತಾಳಮದ್ದಳೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿದ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯ ಇವರು “ತಾಳಮದ್ದಳೆ ಕಲಾ ಪ್ರಕಾರಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ವ್ಯಾಪಕವಾಗಿ ಕೆಲವು ದೇಗುಲಗಳಲ್ಲಿ ‘ಅರ್ಥಾಂಕುರ’ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧವಾಗಿ ಸ್ಥಾಪಿತವಾಗುವ ನಿಟ್ಟಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವುದು ಶ್ಲಾಘನೀಯ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘ್ಯಾಯೋಗ್ಯವಾದದ್ದು” ಎಂದು ಅಭಿನಂದನಾ ನುಡಿಗಳನ್ನಾಡಿದರು.
ಹಿರಿಯ ಅರ್ಥದಾರಿಗಳಾದ ಕುಮಾರ ಶಂಕರನಾರಾಯಣ, ಗೋಪಾಲಕೃಷ್ಣ ಶೆಟಿ ಮಾರ್ಕೋಡು, ಭರತ್ ಚಂದನ್ ಕೋಟೇಶ್ವರ, ವಾಗ್ವಿಲಾಸ ಭಟ್, ಪೂಜಾ ಆಚಾರ್ಯ, ಪವನ್ ಆಚಾರ್ಯ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಾಳಮದ್ದಳೆ ‘ವಾಲಿ ಮೋಕ್ಷ’ ರಂಗ ಪ್ರಸ್ತುತಿಗೊಂಡಿತು.
