ಸಾಲಿಗ್ರಾಮ : ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಸಹಯೋಗದೊಂದಿಗೆ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ಯಕ್ಷ ನುಡಿಸಿರಿ ಬಳಗ (ರಿ.) ಸಿದ್ಧಾಪುರ ಉಭಯ ಸಂಸ್ಥೆಗಳ ಆಶ್ರಯದಲ್ಲಿ ‘ಅರ್ಥಾಂಕುರ’ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 30 ಮೇ 2026ರಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಲಿಗ್ರಾಮ ಗುರುನರಸಿಂಹ ದೇಗುಲದ ಅಧ್ಯಕ್ಷ ಪ್ರಕಾಶ್ ಕಾರಂತ್ ಇವರು ಮಾತನಾಡಿ “ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ ಕಾರ್ಯಕ್ರಮವು ಕಲಿಕಾ ಹಂತದಲ್ಲಿರುವ ಕಲಾವಿದರಿಗೆ ಪ್ರೋತ್ಸಾಹದಾಯಕವಾಗಿದೆ. ಸಾಂಸ್ಕೃತಿಕ ಚಿಂತನೆಯೊಂದಿಗೆ ಅಧ್ಯಾತ್ಮಿಕ ಸ್ಪರ್ಶವೂ ಈ ಕಲೆಯಿಂದ ಸಾಧ್ಯವಾಗುತ್ತದೆ. ಪ್ರಸಿದ್ಧ ಕಲಾವಿದರೊಂದಿಗೆ ಹೊಸ ಕಲಾವಿದರೂ ಹೆಮ್ಮರವಾಗಿ ಬೆಳೆದು ಯಕ್ಷಗಾನವನ್ನು ವಿಶ್ವವ್ಯಾಪಿ ಬೆಳಗಬೇಕು. ಇಂತಹ ಸಾಧನೆಯನ್ನು ಸಾಧಿಸುವುದಕ್ಕೆ ಪ್ರಸಿದ್ಧ ದೇಗುಲಗಳೂ ಕೈಜೋಡಿಸಬೇಕು” ಎಂದು ಹೇಳಿದರು.
ಪ್ರಸಿದ್ಧ ಕಲಾವಿದರಾದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ, ಪಿ. ಕಿಶನ್ ಹೆಗ್ಡೆ, ಕೆ. ತಾರಾನಾಥ ಹೊಳ್ಳ, ಸಿ. ಚಂದ್ರಶೇಖರ ಉಪಾಧ್ಯಾಯ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಡಾ. ವೈಕುಂಠ ಹೇರ್ಳೆ ಉಪಸ್ಥಿತರಿದ್ದರು. ಡಾ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಇಂದ್ರಜಿತು ಕಾಳಗ’ ರಂಗ ಪ್ರಸ್ತುತಿಗೊಂಡಿತು.

