ಬೆಂಗಳೂರು : ಲೇಖಕ ರವಿ ಅಂಬೋಜಿಯವರ ಬಹುನಿರೀಕ್ಷಿತ ‘ಗುಲಾಬಿ ಸೇನೆ’ ಕಾದಂಬರಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 15 ಮೇ 2026ರಂದು ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ಜರುಗಿತ್ತು. ಸಾಹಿತ್ಯ, ರಂಗಭೂಮಿ ಹಾಗೂ ಜಾನಪದ ಕಲೆಯ ವೈಭವದ ಸಂಗಮಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ಸಾಹಿತಿಗಳು, ರಂಗಕರ್ಮಿಗಳು ಹಾಗೂ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿ ವಿಶಿಷ್ಟ ಮೆರುಗು ತಂದರು.

ರಂಗಚಂದಿರ ಟ್ರಸ್ಟ್ ಸಹಯೋಗದಲ್ಲಿ ಮಾಗಡಿಯ ಶಾರದಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ರಂಗನಾಯಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜು ಇವರು ‘ಗುಲಾಬಿ ಸೇನೆ’ ಕಾದಂಬರಿಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಕಾಲೀನ ಸಾಮಾಜಿಕ ಹೋರಾಟಗಳು, ಮಹಿಳಾ ಬದುಕಿನ ಸಂಘರ್ಷಗಳು ಹಾಗೂ ಜನಪರ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೃತಿಗಳು ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿಯನ್ನು ಹೊಂದಿರುತ್ತವೆ ಎಂದು ಅಭಿಪ್ರಾಯಪಟ್ಟರು. ರವಿ ಅಂಬೋಜಿಯವರ ಸಾಹಿತ್ಯಕ ಬದ್ಧತೆ ಶ್ಲಾಘನೀಯ ಎಂದರು.

ಖ್ಯಾತ ನಾಟಕಕಾರ ಹಾಗೂ ರಂಗ ನಿರ್ದೇಶಕ ಡಾ. ಬೇಲೂರು ರಘುನಂದನ್ ಕೃತಿಯ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿ, “ಗುಲಾಬಿ ಸೇನೆ ಕೇವಲ ಕಾದಂಬರಿಯಲ್ಲ; ಅದು ಸಮಾಜದ ಒಳಹರಿವುಗಳನ್ನು ಅನಾವರಣಗೊಳಿಸುವ ಚಿಂತನಾ ಪ್ರವಾಹವಾಗಿದೆ. ಲೇಖಕರ ಬರವಣಿಗೆಯಲ್ಲಿ ಜೀವನಾನುಭವ ಮತ್ತು ಹೋರಾಟದ ನೈಜತೆ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಸಾಹಿತಿ ಡಾ. ಎಚ್.ಎಲ್. ಪುಷ್ಪ ಮಾತನಾಡಿ, “ಸಾಹಿತ್ಯವು ಸಮಾಜದ ನೋವು, ಹೋರಾಟ ಮತ್ತು ಆಶಯಗಳನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದು, ಇಂತಹ ಕೃತಿಗಳು ಓದುಗರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತವೆ” ಎಂದು ಹೇಳಿದರು.

ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಸವಿತಕ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಜಾನಪದ ಗೀತೆಗಳ ಮೂಲಕ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ, ಲೇಖಕಿ ಡಾ. ಆರ್.ಕೆ. ಸರೋಜಾ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ. ಸೋಮಶೇಖರ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಂಗಚಂದಿರ ಟ್ರಸ್ಟ್ ಗೌರವಾಧ್ಯಕ್ಷ ರಾಧಾಕೃಷ್ಣ ಹೆಗಡೆ, ಟ್ರಸ್ಟ್ ಅಧ್ಯಕ್ಷೆ ಡಾ. ಟಿ. ಪದ್ಮ, ಸಂಚಾಲಕರಾದ ಸಿ.ಆರ್. ಮುರುಡಯ್ಯ, ಡಾ. ಮಾಗಡಿ ಗಿರೀಶ್, ಶ್ರೀಧರ್ ಗೌಡ, ಉಪಾಧ್ಯಕ್ಷ ಹೇಮಂತ್ ಗೌಡ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಬೆಳಿಗ್ಗೆ ಸವಿಗಾನ ಮಂಜು ತಂಡವು ಹೋರಾಟದ ಗೀತೆಗಳನ್ನು ಪ್ರಸ್ತುತ ಪಡಿಸಿ ಸಭಿಕರಲ್ಲಿ ಚೈತನ್ಯ ಮೂಡಿಸಿತು. ಬಳಿಕ ಸ್ವರ ಅಮೃತ ಸಂಗೀತ ಶಾಲೆಯ ಮಕ್ಕಳು ಜಾನಪದ ಗೀತೆಗಳ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಇದೇ ವೇಳೆ ರವಿ ಅಂಬೋಡೆಯವರ ‘ಮಾರ್ಗದಾಳು’ ಕಾದಂಬರಿ ಆಧಾರಿತ ಏಕವ್ಯಕ್ತಿ ಪ್ರಯೋಗ ನಾಟಕ ಪ್ರದರ್ಶನಗೊಂಡು ಗಮನ ಸೆಳೆಯಿತು. ಕಗ್ಗೆರೆ ಮಂಜುನಾಥ್ ಅವರ ಅಭಿನಯ ಹಾಗೂ ಸಿದ್ದರಾಮ್ ಕೊಪ್ಪರ್ ಅವರ ನಿರ್ದೇತನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಾಹಿತ್ಯ, ರಂಗಭೂಮಿ ಮತ್ತು ಜಾನಪದ ಕಲೆಯ ಸಮನ್ವಯದಲ್ಲಿ ನಡೆದ ‘ಗುಲಾಬಿ ಸೇನೆ’ ಲೋಕಾರ್ಪಣೆ ಕಾರ್ಯಕ್ರಮವು ಕಲಾಸಕ್ತರಿಗೆ ವಿಶಿಷ್ಟ ಅನುಭವ ನೀಡಿದ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿತ್ತು.

