ಮಂಜೇಶ್ವರ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆ ಮತ್ತು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಮತ್ತು ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಕಥಾ ಪ್ರಶಸ್ತಿ ಪ್ರದಾನ ಸಮಾರಂಭವು ಗೋವಿಂದ ಪೈ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 28 ಏಪ್ರಿಲ್ 2026ರಂದು ಜರುಗಿತು.
‘ಕೃಷ್ಣಯ್ಯನ ಕೊಳಲು’ ಕಾದಂಬರಿ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಆಯ್ಕೆಯಾದ ಜಾನಪದ ತಜ್ಞ ಡಾ. ಟಿ. ಗೋವಿಂದರಾಜು ಮತ್ತು ‘ಕೆಂಪು ನದಿ’ ಕಥಾಸಂಕಲನಕ್ಕಾಗಿ ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಕಥಾ ಪ್ರಶಸ್ತಿ’ಗೆ ಆಯ್ಕೆಯಾದ ಲಿಂಗರಾಜ ಸೊಟ್ಟಪ್ಪನವರ ಇವರಿಗೆ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಸಾಹಿತಿ ಡಾ. ನಾ. ಮೊಗಸಾಲೆಯವರು ಮಾತನಾಡಿ “ಸಾಹಿತ್ಯ ಗಂಗಾ ಸಂಸ್ಥೆಯು ಪ್ರಶಸ್ತಿಯ ಯೋಗ್ಯತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಜಾತಿ, ಮತ, ಪಕ್ಷ, ಪಂಥಗಳಿಗೆ ಕಟ್ಟುಬೀಳದೆ ಕೃತಿಯ ಸತ್ವ ಮತ್ತು ಗುಣಮಟ್ಟವನ್ನು ಮಾತ್ರ ಮಾನದಂಡವಾಗಿಸಿಕೊಂಡು ಯೋಗ್ಯರನ್ನಷ್ಟೇ ಆಯ್ದು ಪ್ರಶಸ್ತಿಯನ್ನು ನೀಡುತ್ತದೆ. ಇದರಿಂದಾಗಿ ಎಲೆಮರೆಯ ಕಾಯಿಗಳು ಬೆಳಕಿಗೆ ಬರುತ್ತವೆ. ಕನ್ನಡದ ಪ್ರಮುಖ ಲೇಖಕರಿಗೆ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರವಾಗಿದೆ” ಎಂದು ಅಭಿಪ್ರಾಯಪಟ್ಟರು.


ಪ್ರಾಂಶುಪಾಲ ಡಾ. ಮೊಹಮ್ಮದ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವ ವಿಮರ್ಶಕ ವಿಕಾಸ ಹೊಸಮನಿಯವರು ಅಭಿನಂದನ ಭಾಷಣವನ್ನು ಮಾಡಿದರು. ಪ್ರಾಧ್ಯಾಪಕಿ ಜಯಂತಿ ಸ್ವಾಗತಿಸಿದರು. ಪ್ರೊ. ಶಿವಶಂಕರ ಪಿ., ಡಾ. ಸುಭಾಷ್ ಪಟ್ಟಾಜೆ, ಡಾ. ರತ್ನಾಕರ ಕುನಗೋಡು, ಡಾ. ಪ್ರವೀಣ ಪದ್ಯಾಣ, ಶ್ರೀಮತಿ ರೇಷ್ಮಾ ಭಟ್, ಶ್ರೀಮತಿ ಸೌಮ್ಯ ಪ್ರವೀಣ್, ಶ್ರೀ ಕಲ್ಲಚ್ಚು ಮಹೇಶ ನಾಯಕ್ ವಿಚಾರಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಿದರು. ಡಾ. ಯು. ಮಹೇಶ್ವರಿ, ಪ್ರೊ. ಪಿ. ಎನ್. ಮೂಡಿತ್ತಾಯ ಉಪಸ್ಥಿತರಿದ್ದರು.

