ಮಂಗಳೂರು : ಕೊಡಿಯಾಲ್‌ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ದಿನಾಂಕ 22 ಮಾರ್ಚ್ 2026ರಂದು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ.), ರಂಗಸ್ಥಳ ಮಂಗಳೂರು (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅರ್ಥವಿಹಾರಿ ಡಾ. ಎಂ. ಪ್ರಭಾಕರ ಜೋಶಿ “ಕಲೆ ಇದ್ದ ಹಾಗೆ ಇದ್ರೆ ಅದು ಭಜನೆ ಆಗುತ್ತದೆ, ಪ್ರತಿಭೆ ಇಟ್ಟುಕೊಂಡು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಈ ಕಲೆ ಸಾಕ್ಷಿ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕಲಾವಿದರು ಯಕ್ಷರಂಗ ಭೂಮಿಯಲ್ಲಿ ದುಡಿಯುತ್ತಿದ್ದಾರೆ. ಜಗತ್ತಿನ ಯಾವುದೇ ಕಲೆಗೂ ಕೂಡ ಯಕ್ಷಗಾನಕ್ಕೆ ಇರುವ ಶಕ್ತಿ ಇನ್ನೂ ಯಾವ ಕಲೆಯಲ್ಲಿಯೂ ಇಲ್ಲ. ನಾನು ವಿದ್ವಾಂಸನಲ್ಲ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಒಬ್ಬ ಕೆಲಸಗಾರ ಅಷ್ಟೇ. ಕಳೆದ 60 ವರ್ಷಗಳಿಂದ ಯಕ್ಷಗಾನ ಕಲೆಗಾಗಿ ನನ್ನ ಬದುಕನ್ನು ಸಮರ್ಪಿಸಿದ್ದೇನೆ. 10ನೇ ವರ್ಷದಲ್ಲಿ ನನ್ನ ಅಜ್ಜನಿಂದ ಕಲಿತ ಅರ್ಥಗಾರಿಕೆ ಬದುಕಿಗೆ ಪೂರಕವಾಗಿದೆ. ಅಮ್ಮನಿಂದ ತುಂಬ ಸಂಸ್ಕಾರವನ್ನು ಪಡೆದಿದ್ದೇನೆ. ನನಗೆ ಮಾತನಾಡಲು ಕಲಿಸಿದವಳು ನನ್ನ ಅಮ್ಮ ಮತ್ತು ಅವಳ ಸೊಸೆ. ಒಬ್ಬರು ಮಾತನಾಡಲು ಕಲಿಸಿದರೆ ಇನ್ನೊಬ್ಬರು ಸುಮ್ಮನೆ ಕುಳಿತುಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಿದ್ದಾರೆ. ಮನೆಯವರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ. ಮತ್ತೆ ಹೀಗೆ ನಾನು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯಲು ಯಾರ ಹೆಗಲ ಮೇಲೆ ಇದ್ದೇನೋ ಎಲ್ಲಾ ಕಲಾವಿದರಿಗೆ, ಪ್ರೇಕ್ಷಕರಿಗೆ, ಪೋಷಕರಿಗೆ, ಅಭಿಮಾನಿಗಳಿಗೆ ಈ ದಿನ ಪಡೆದ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ಅಂತೆಯೇ ಇಂದು ಸಿಕ್ಕಿರುವ ಈ ಪ್ರಶಸ್ತಿಯ ಮೊತ್ತವನ್ನು ನನ್ನ ಮುಂದಿನ ಪುಸ್ತಕದ ಪ್ರಕಟಣೆಗಾಗಿ ಉಪಯೋಗಿಸುತ್ತೇನೆ” ಎಂದು ಹೇಳಿದರು.
ಮಂಗಳೂರು ನಗರದ ದಕ್ಷಿಣ ವಿಧಾನ ಸಭಾಕ್ಷೇತ್ರ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಅವರು ಮಾತನಾಡುತ್ತ “ಇಂದಿನ ಕಾಲಘಟ್ಟದಲ್ಲಿ ಸಂಸ್ಕೃತಿಯನ್ನು, ವಿಚಾರಧಾರೆಗಳನ್ನು ಉಳಿಸಿಕೊಳ್ಳಬೇಕು ಎಂಬ ಮಾರ್ಗದಲ್ಲಿ ಯಕ್ಷಕುಸುಮ ಚಾರಿಟೇಬಲ್ ಟ್ರಸ್ಟ್ನವರು ಪೌರಾಣಿಕ ಯಕ್ಷಗಾನವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದು ಅಭಿನಂದನೆಯನ್ನು ಸಲ್ಲಿಸಿದರು.
ಗಣ್ಯರ ಉಪಸ್ಥಿತಿಯಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಪ್ರಗಲ್ಭಚಿಂತಕ, ಅರ್ಥವಿಹಾರಿ ಡಾ. ಎಂ. ಪ್ರಭಾಕರ ಜೋಶಿಯವರಿಗೆ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಜನಾರ್ದನ ಹಂದೆ ಯಕ್ಷ ಕುಸುಮ ಕವಿತೆಯನ್ನು ವಾಚಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.
ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್.ಎಸ್. ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಶ್ರೀ ಎಸ್.ಎಲ್. ನಾಯಕ್ ಮತ್ತು ಶ್ರೀ ದಿನೇಶ್ ಪೈ, ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್, ಮೇಳದ ಯಜಮಾನರಾದ ಶ್ರೀ ರಂಜಿತ್ ಕುಮಾರ್ ವಕ್ವಾಡಿ, ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಕರುಣಾಕರ ಬಳ್ಕೂರು ಇವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನವಾಗಿ ‘ದ್ರೌಪದಿ ಪ್ರತಾಪ’ ಮತ್ತು ‘ವಿದ್ಯುಜ್ಜಿಹ್ವ’ ಎಂಬ ಪೌರಾಣಿಕ ಕಥಾನಕ ಪ್ರದರ್ಶನಗೊಂಡಿತು. ‘ದ್ರೌಪದಿ ಪ್ರತಾಪ’ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ ಅವರು ದ್ರೌಪದಿ ಪಾತ್ರವನ್ನು ನಿರ್ವಹಿಸಿದರು.ಅಂತೆಯೇ ಮೆಕ್ಕೆಕಟ್ಟು ಮೇಳದ ಸುಪ್ರಸಿದ್ಧ ಕಲಾವಿದರಾದ ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ಹಳ್ಳಾಡಿ ಜಯರಾಮ್ ಶೆಟ್ಟಿ, ಗಾಂವಕ್ಕರ್ ಸೇರಿದಂತೆ ಭಾಗವತರಾದ ಶ್ರೀ ಸುಧೀರ್ ಭಟ್ ಪೆರ್ಡೂರು, ಸುರೇಶ್ ಭದ್ರಾಪುರ ಸೇರಿದಂತೆ ಇತರ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕನ್ನಡ ಉಪನ್ಯಾಸಕರಾದ ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಕಾರ್ಯಕ್ರಮ ನಿರೂಪಿಸಿದರು.

