ತೆಕ್ಕಟ್ಟೆ : ಉಡುಪಿ ಅಶೋಕ ನಗರದ ಸಂತೆಕಟ್ಟೆಯಲ್ಲಿ ‘ಬಣ್ಣದ ಹೆಜ್ಜೆ’ ಡಾ. ಶ್ರೀಪಾದ ಭಟ್ ಪರಿಸರದವರನ್ನು ಒಡಗೂಡಿಕೊಂಡು ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಮಕ್ಕಳ ಮೇಳದ ಕಾರ್ಯಕ್ರಮವನ್ನು ದಿನಾಂಕ 26 ಜೂನ್ 2026ರಂದು ತಮ್ಮ ಮನೆಯಲ್ಲಿ ಆಯೋಜಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಮಾತನಾಡಿ “ಕಿರಿಯರ ಉತ್ಸಾಹ ಹಿರಿಯರನ್ನು ಬೆಳೆಸುತ್ತದೆ. ಕಿರಿಯರಲ್ಲಿ ತಾಳಮದ್ದಳೆಯ ಮೂಲಕ ಭಾಷೆಯನ್ನು ಬೆಳೆಸುವ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು. ನಾವು ಏನನ್ನು ಸಾಕಿಕೊಳ್ಳುತ್ತೇವೆಯೋ ಅದು ಕೊನೆಯವರೆಗೆ ಇರುತ್ತದೆ. ನಾವು ದ್ವೇಷವನ್ನು ಸಾಕಿಕೊಂಡರೂ ಅದೂ ಕೂಡ ಕೊನೆಯ ತನಕ ಇರುತ್ತದೆ. ಅದರಲ್ಲಿಯೂ ಯಶಸ್ವೀ ಕಲಾ ವೃಂದ ನಿರಂತರ ಚಟುವಟಿಕೆಯಿಂದ ಮಕ್ಕಳಲ್ಲಿ ಭಾಷೆಯನ್ನು ಸಾಕಿಕೊಟ್ಟರೆ ಅವರ ಜೀವನದ ಉದ್ದಕ್ಕೂ ಕಾಪಾಡುತ್ತದೆ. ಯಕ್ಷಗಾನದ ಭಾಷೆ ವಿವೇಕವನ್ನು ತಿಳಿಸುತ್ತದೆ. ಯಕ್ಷಗಾನದ ಭಾಷೆ ಹಲವು ಸಂಗತಿಗಳನ್ನು ಕಲಿಸಿಕೊಡುತ್ತದೆ. ಮಕ್ಕಳನ್ನು ಈ ನಿಟ್ಟಿನಲ್ಲಿ ಬೆಳೆಸುವ ಸಂಸ್ಥೆಯ ಕೆಲಸ ಅದ್ಭುತವಾದದ್ದು” ಎಂದು ನುಡಿದರು.

“ಯಶಸ್ವೀ ಕಲಾವೃಂದ ಕಳೆದ 26 ವರ್ಷಗಳಿಂದ ಅಭೂತಪೂರ್ವ ಕೆಲಸವನ್ನು ಮಾಡುತ್ತಿರುವುದನ್ನು ಬಹಳ ಹತ್ತಿರದಿಂದ ಗಮನಿಸಿದವಳು ನಾನು. ಈ ಸಂಸ್ಥೆ ಆರಂಭದ ಉತ್ಸಾಹವನ್ನು ಈಗಲೂ ತಂದುಕೊಂಡು ನಡೆಸುತ್ತಿರುವುದು ಬಹಳ ಆಶ್ಚರ್ಯ ತಂದುಕೊಡುತ್ತದೆ. ಈ ಸಂಸ್ಥೆ ಅಳಿಯುವುದಿಲ್ಲ. ಇನ್ನಷ್ಟು ಕಾಲ ಉಳಿಯಬೇಕು” ಎಂದು ಪ್ರಸಿದ್ಧ ಸಾಹಿತಿ ಸುಧಾ ಆಡುಕುಳ ಹಾರೈಸಿದರು. ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ವಾಗ್ವಿಲಾಸ ಭಟ್, ಪೂಜಾ ಆಚಾರ್ಯ, ಪಂಚಮಿ ವೈದ್ಯ, ಪವನ್ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು. ಬಳಿಕ ಮಕ್ಕಳ ತಾಳಮದ್ದಳೆ ‘ಸುಧನ್ವಾರ್ಜುನ’ ರಂಗ ಪ್ರಸ್ತುತಿಗೊಂಡಿತು.

