ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಧಾರವಾಡದ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ.
ಡಾ. ಪ್ರಜ್ಞಾ ಮತ್ತಿಹಳ್ಳಿ ಮೂಲತ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಎಂ.ಕಾಂ, ಎಂ.ಫಿಲ್, ಎಂ. ಬಿ. ಎ., ಪಿ. ಎಚ್. ಡಿ. ಪದವೀಧರರಾದ ಇವರು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಹಲವಾರು ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಕವನ, ಕತೆ, ಕವಿತೆ, ಪ್ರಬಂಧ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಬಹುಮಾನಗಳಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಶಿಲ್ಲಾಂಗನಲ್ಲಿ ಏರ್ಪಡಿಸಿದ ಬರಹಗಾರರ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಕಥಾವಾಚನ, ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಕವಿತೆ ವಾಚನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯಲ್ಲಿ ಆಯ್ಕೆಯಾಗಿ ಕೇರಳ ರಾಜ್ಯ ಪ್ರವಾಸ ಮಾಡಿ ಪುಸ್ತಕ ರಚನೆ, 2015 -16ನೇ ಸಾಲಿನ ಫೆಲೊಶಿಪ್‌ಗೆ ಆಯ್ಕೆಯಾಗಿ ಮಹಿಳಾ ವಿಚಾರಣಾಧೀನ ಖೈದಿಗಳ ಕುರಿತು ಅಧ್ಯಯನ ಮಾಡಿ ಪುಸ್ತಕ ರಚನೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2016ನೇ ಸಾಲಿನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಹಿಳಾ ಶೋಷಣೆಯ ಕುರಿತು ಬರೆದ ನಾಟಕ ‘ಕೇಳೆ ಸಖಿ ಚಂದ್ರಮುಖಿ’ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ಪ್ರದರ್ಶನ ಕಾಣುತ್ತಿದೆ.
ಇವರ ಪ್ರಕಟಿತ ಕೃತಿಗಳು, ‘ಹುಡುಗಿ ನಕ್ಕಾಗ’, ‘ದೊನ್ನೆ ದೀಪ ಸಾಲು’, ‘ಕಾಲನ ಕಾಲಂದುಗೆ’ (ಕವನ ಸಂಕಲನಗಳು), ‘ಗಂಧಗಾಳಿ’ (ಅಂಕಣ ಬರಹ), ‘ಮಿನುಗೆಲೆ ನಕ್ಷತ್ರ’ (ಹಾಸ್ಯ ಪ್ರಬಂಧ), ‘ದೇವರ ಸ್ವಂತ ನಾಡಿನಲ್ಲಿ’ (ಪ್ರವಾಸಕಥನ), ಅಲ್ಲದೆ ಹಲವಾರು ಪ್ರಬಂಧಗಳು, ವ್ಯಕ್ತಿಚಿತ್ರ, ಅಭಿನಂದನಾಗ್ರಂಥಗಳನ್ನು ಸಂಪಾದಿಸಿದ್ದಾರೆ ಅಲ್ಲದೆ ಯಕ್ಷಗಾನ ತಾಳಮದ್ದಲೆ, ನಾಟಕ, ಏಕಪಾತ್ರಾಭಿನಯಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ.
ಇವರ ಸಾಧನೆಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’, ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ಗಳಲ್ಲದೆ ಹಲವಾರು ಗೌರವ ಸಂಮಾನಗಳು ಸಂದಿವೆ. ಪ್ರಸ್ತುತ ಇವರು ಕಿತ್ತೂರು ಸರಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಬೆಳದಿಂಗಳ ಸೋನೆಮಳೆ’ ಇವರ 12ನೇ ಕೃತಿಯಾಗಿದ್ದು, 4ನೇ ಕವನ ಸಂಕಲನವಾಗಿದೆ.ಇವರ 3ನೇ ಕವನ ಸಂಕಲನ ‘ಕಾಲನ ಕಾಲಂದುಗೆ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದಿತ್ತು.
Subscribe to Updates
Get the latest creative news from FooBar about art, design and business.
Previous Articleಪೆರ್ವಾಜೆ ಶಾಲೆಯಲ್ಲಿ ನಾಟಕ ಮತ್ತು ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮ