ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-08ರ ಕಾರ್ಯಕ್ರಮವು ದಿನಾಂಕ 09 ಏಪ್ರಿಲ್ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಇವರ ಶಿಷ್ಯೆ ಶ್ರೀಮತಿ ಮಧುರಾ ಪ್ರಖ್ಯಾತ್ ಇವರ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ವಕೀಲರು ಆಗಿರುವ ಶ್ರೀಮತಿ ಪರಿಮಳ ಮಹೇಶ್ ರಾವ್ ಇವರು ಇಂತಹ ವೇದಿಕೆಗಳು ಕಲಾವಿದರನ್ನು ಬೆಳೆಸುವಲ್ಲಿ ಬಹಳ ಪಾತ್ರ ವಹಿಸುತ್ತದೆ. ಇಂತಹ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಾಸೂರ್ಯ ನೃತ್ಯಾಲಯದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಲಾವಿದೆಯ ತಂದೆ ಪುರೋಹಿತರಾದ ಶ್ರೀಯುತ ಬಾಲಕೃಷ್ಣ ಕೆದಿಲಾಯ ಶುಭ ಹಾರೈಸಿದರು. ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.



ಕುಮಾರಿ ಪ್ರಾರ್ಥನಾ, ಕುಮಾರಿ ಪ್ರವರ್ತಿಕ, ಕುಮಾರಿ ಪೂರ್ವಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕುಮಾರಿ ಅವಿಕ ಇವರ ಓಂಕಾರನಾದ, ಶ್ರೀಲಕ್ಷ್ಮಿ ಇವರ ಶಂಖನಾದ, ಕುಮಾರಿ ಸುಹಾನಿ ಇವರ ಪಂಚಾಂಗ ಪಠಣ ಶುಭಕರ ವಾತಾವರಣ ಸೃಷ್ಟಿಸಿ ಕಾರ್ಯಕ್ರಮಕ್ಕೆ ಉತ್ತಮ ನಾಂದಿ ಹಾಡಿತು. ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಸೌಜನ್ಯ ವಿ. ಪಡುವೆಟ್ನಾಯ ಸ್ವಾಗತಿಸಿ, ಕುಮಾರಿ ಶ್ರೇಯ ಭಾಪಟ್ ಕಾರ್ಯಕ್ರಮ ನಿರೂಪಿಸಿದರು.


