ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 19-08-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಸುಪ್ರಭಾ ಕಲ್ಕೂರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶ್ರೀಮತಿ ಸುರೇಖಾ ಕಲ್ಕೂರ ಮತ್ತು ಶ್ರೀ ಪ್ರಸನ್ನ ಕಲ್ಕೂರ ದಂಪತಿಗಳ ಸುಪುತ್ರಿಯಾದ ವಿದುಷಿ ಸುಪ್ರಭಾ ಕಲ್ಕೂರ ಇವರು ನೃತ್ಯನಿಕೇತನ ಕೊಡವೂರು ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿ ಕಳೆದ 18 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಶ್ರೀಮತಿ ವಸಂತಿ ಆಚಾರ್ಯ ಹಾಗೂ ವಿದುಷಿ ವಿನುತ ಆಚಾರ್ಯ ಇವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದು, ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ವಿದ್ವಾನ್ ರವಿಕುಮಾರ್ ಮೈಸೂರು ಅವರಲ್ಲಿ ಪಿಟೀಲುವಾದನ ಕಲಿತಿದ್ದು ಜೂನಿಯರ್ ಶಾಸ್ತ್ರೀಯ ಸಂಗೀತ ವಾದ್ಯ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ. ನೃತ್ಯನಿಕೇತನ ಕೊಡವೂರಿನ ನಾರಸಿಂಹ, ಚಿತ್ರಾ, ಶ್ರೀನಿವಾಸ ಕಲ್ಯಾಣ ಮುಂತಾದ ನೃತ್ಯರೂಪಕ, ನೃತ್ಯನಾಟಕಗಳಲ್ಲಿ ಅಭಿನಯಿಸಿ ಸಂಸ್ಥೆಯ ಭಾಗವಾಗಿ ದೇಶಾದ್ಯಂತ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾಳೆ.