ಬೆಂಗಳೂರು : ನಾಡಿನ ಭರತನಾಟ್ಯ ಪುರುಷ ನರ್ತಕರಲ್ಲಿ ಸದ್ದಿಲ್ಲದೆ ಸಾಧನೆಯನ್ನು ಮಾಡುತ್ತಿರುವ ಬದ್ಧತೆಯ ಉತ್ತಮ ನೃತ್ಯಗುರು ವಿದ್ವಾನ್. ಜಿ. ವಿನ್ಸೆಂಟ್ ಪಾಲ್ ತುಂಬಿದ ಕೊಡ ಎಂದರೂ ತಪ್ಪಿಲ್ಲ. ಅನೇಕ ನೃತ್ಯ ಪದವಿಗಳನ್ನು ಗಳಿಸಿ ಬಹು ವಿನಯವಂತ ನೃತ್ಯ ಕಲಾವಿದ ಮತ್ತು ಉತ್ತಮ ಗುರುವಾಗಿ, ತಮ್ಮದೇ ಆದ ‘ಸ್ಫುರಣ ನೃತ್ಯ ಕಲಾಕೇಂದ್ರ’ದ ಅಧ್ಯಕ್ಷ ಹಾಗೂ ಕಲಾತ್ಮಕ ನಿರ್ದೇಶಕರಾಗಿ ನೂರಾರು ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಪಳಗಿದ ಗರಡಿಯಲ್ಲಿ ರೂಹುಗೊಂಡ ಕಲಾವಿದೆ ಕುಮಾರಿ ಗೌರೀ ಕೃಷ್ಣ ಭರವಸೆಯ ವಿದ್ಯಾರ್ಥಿನಿ.


ಶ್ರೀ ಜಯಕೃಷ್ಣನ್ ಮತ್ತು ಅಂಬಿಲಿ ಇವರ ಸುಪುತ್ರಿಯಾದ ಗೌರಿ, ಬಾಲ್ಯದಿಂದಲೇ ನೃತ್ಯ ಕಲಿಯಲಾರಂಭಿಸಿ, ಕಳೆದ ಹಲವಾರು ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯ ಮಂಡಲದಿಂದ ‘ಮಧ್ಯಮ ಪ್ರಥಮ’ ಪರೀಕ್ಷೆಯಲ್ಲಿ ಶ್ರೇಷ್ಟಾಂಕ ಗಳಿಸಿದ್ದು, ಪ್ರಸ್ತುತ 12ನೇ ತರಗತಿಯಲ್ಲಿ ಓದುತ್ತಿದಾಳೆ. ಓದು- ಸಂಗೀತದೊಂದಿಗೆ ಕರಕುಶಲ ಕಲೆ, ಪೇಯಿಂಟಿಂಗ್ ಇನ್ನಿತರ ಹವ್ಯಾಸಗಳನ್ನು ಹೊಂದಿರುವ ಇವಳು ದಿನಾಂಕ 09 ಮೇ 2026ರ ಶನಿವಾರದಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದಾಳೆ. ಅವಳ ಸುಮನೋಹರ ನೃತ್ಯ ವಲ್ಲರಿಯನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.


ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
