ಪುತ್ತೂರು : ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಆಯೋಜಿಸಿದ ನೃತ್ಯ ಶಾಸ್ತ್ರ ಕಾರ್ಯಗಾರವು ದಿನಾಂಕ 25 ಏಪ್ರಿಲ್ 2026ರಂದು ಪುತ್ತೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಿತು.
ಈ ಕಾರ್ಯಗಾರವನ್ನು ಉದ್ಘಾಟಿಸಿದ ಪುತ್ತೂರಿನ ಹಿರಿಯ ನೃತ್ಯ ಗುರು ವಿದುಷಿ ಕುದ್ಕಾಡಿ ನಯನ ವಿ. ರೈ ಇವರು ಮಾತನಾಡಿ “ಪ್ರದರ್ಶನ ಕಲೆಯಾಗಿರುವ ಭರತನಾಟ್ಯವನ್ನು ಕಲಿಯುವವರು ಪ್ರದರ್ಶನದೊಂದಿಗೆ ಅದರ ಶಾಸ್ತ್ರ ವಿಭಾಗವನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯ. ಇದು ರಸಭಾವಗಳ ಓದು ಅಭಿನಯದ ಪ್ರಸ್ತುತಿಗೆ ಹೆಚ್ಚು ಅನುಕೂಲವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ನೃತ್ಯಕಲಾವಿದೆ ಡಾ. ಸಹನಾ ಭಟ್ ಇವರು ವಿದ್ವತ್ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ರಸನಿಷ್ಪತ್ತಿ, ರಸಾನುಭಾವಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಅಲ್ಲದೆ ಮಧ್ಯಾಹ್ನದ ಅವಧಿಯಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಪ್ರಮುಖವಾಗಿ ಕೇಳುವ ನಾಯಕ-ನಾಯಿಕಾ ಭೇದ, ವಿವಿಧ ಗ್ರಂಥಗಳಲ್ಲಿ ಇರುವ ವ್ಯಾಖ್ಯಾನಗಳು, ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಯಾವ ರೀತಿಯಲ್ಲಿ ಸನ್ನಿವೇಶ ಸೃಷ್ಟಿಸುವುದು, ಅದನ್ನು ವಿವಿಧ ಮಜಲುಗಳಿಂದ ಇಂದು ಹೇಗೆ ವಿಮರ್ಶಿಸಬಹುದು ಎಂಬುದಾಗಿ ಪ್ರಾಯೋಗಿಕವಾಗಿ ಮಾಡಿಸಿದರು. ಪರಿಷತ್ತಿನ ಅಧ್ಯಕ್ಷರಾದ ರಾಜಶ್ರೀ ಶೆಣೈ ಕಾರ್ಯಾಗಾರಕ್ಕೇ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಯುವಕಲಾವಿದ ಶ್ರವಣ್ ಉಳ್ಳಾಲ ಇವರಿಗೆ ಪರಿಷತ್ತಿನ ಸದಸ್ಯರಾದ ವಿದ್ವಾನ್ ದೀಪಕ್ ಕುಮಾರ್ ರವರು ನುಡಿ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು. ನೃತ್ಯ ಗುರುಗಳಾದ ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ , ವಿದುಷಿ ಶಾಲಿನಿ ಆತ್ಮಭೂಷಣ್ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಪುತ್ತೂರಿನ ವಿವಿಧ ಭಾಗಗಳಿಂದ ಸುಮಾರು 40ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

