ಬೆಂಗಳೂರು : ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ಬಹು ಬದ್ಧತೆಯ ನಾಟ್ಯಗುರು ಮತ್ತು ಉತ್ತಮ ನೃತ್ಯ ಕಲಾವಿದೆ ಎಂದು ಹೆಸರಾಗಿರುವ ಶ್ರೀಮತಿ ಅಭಿನಯಾ ನಟರಾಜನ್ ಇವರ ಬಳಿ ಕಳೆದ ನಾಲ್ಕು ವರ್ಷಗಳಿಂದ ಹಾಗೂ ಒಟ್ಟು ಹನ್ನೊಂದು ವರ್ಷಗಳ ನೃತ್ಯಾಭ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ಕುಮಾರಿ ನೇಯಾ ಭಾಸ್ಕರ್ ಇವರು ಶ್ರೀಮತಿ ಶರ್ಮಿಳಾ ಆರ್ಮುಗಂ ಮತ್ತು ಭಾಸ್ಕರ್ ರುದ್ರಮೂರ್ತಿಯವರ ಮಗಳು. ಈಗಾಗಲೇ ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಉತ್ತಮಾಂಕಗಳಿಂದ ತೇರ್ಗಡೆ ಹೊಂದಿದ್ದು ‘ಗೇರ್ ಇನೋವೇಟಿವ್ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಓದಿನಲ್ಲಿ ಮುಂದಿರುವ ನೇಯಾ, ಕ್ರೀಡೆ ಮತ್ತು ಕಲಾರಂಗದಲ್ಲೂ ತನ್ನ ಪ್ರತಿಭೆಯನ್ನು ತೋರಿದ್ದಾಳೆ. ನಾಡಿನಾದ್ಯಂತ ಅನೇಕ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿರುವ ಇವಳು, ಉತ್ತಮ ಕ್ರೀಡಾಪಟು ಕೂಡ. ರಾಜ್ಯಮಟ್ಟದ ಅಥ್ಲಿಟ್, ಫುಟ್ ಬಾಲ್ ಆಟಗಾರ್ತಿ ಮತ್ತು ಟೆನಿಸ್ ಆಟದಲ್ಲೂ ಪಾಲ್ಗೊಂಡಿರುವ ವೈಶಿಷ್ಟ್ಯ ಅವಳದು. ಇವುಗಳಿಗಾಗಿ ನೇಯಾ ಚಿನ್ನದ ಪದಕಗಳನ್ನು ಗಳಿಸಿರುವ ಪ್ರತಿಭಾನ್ವಿತೆ. ಇದೀಗ ನೇಯಾ ತನ್ನ ನೃತ್ಯ ಪ್ರತಿಭೆಯ ಪ್ರದರ್ಶನಕ್ಕಾಗಿ ದಿನಾಂಕ 07 ಜೂನ್ 2026ರಂದು ಭಾನುವಾರ ಬೆಳಗ್ಗೆ ಗಂಟೆ 10-30ಕ್ಕೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನ ಸಿ.ಎಂ.ಆರ್.ಐ.ಟಿ. ಕಾಲೇಜಿನ ‘ಧ್ವನಿ’ ಸಭಾಂಗಣದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಈ ನೃತ್ಯ ಬೆಡಗಿಯ ಸುಮನೋಹರ ನಾಟ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.


ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಭಾಸ್ಕರ್ ರುದ್ರಮೂರ್ತಿ ಮತ್ತು ಶ್ರೀಮತಿ ಶರ್ಮಿಳಾ ಅರ್ಮುಗಂ ಇವರ ಮುದ್ದಿನ ಮಗಳಾದ ನೇಯಾಗೆ ನೃತ್ಯ ಬಾಲ್ಯದ ಒಲವು. ಅದನ್ನು ಗಮನಿಸಿದ ಅವಳ ಹೆತ್ತವರು ಅವಳನ್ನು ಭರತನಾಟ್ಯ ಕಲಿಯಲು ವಿದುಷಿ ದೀಪ ಮನೋಹರ್ ಅವರ ಬಳಿ ಸೇರಿಸಿದರು. ಏಳು ವರ್ಷಗಳು ಸತತವಾಗಿ ಬಹು ಶ್ರದ್ಧೆಯಿಂದ ನೃತ್ಯವನ್ನು ಕಲಿತಳು. ಒಟ್ಟು ಹನ್ನೊಂದು ವರ್ಷಗಳ ಕಾಲ ನೇಯಾ ಬಹು ಆಸಕ್ತಿಯಿಂದ ನೃತ್ಯ ಕಲಿಯುತ್ತಿದ್ದು, ಉತ್ತಮ ನೃತ್ಯ ಪಟು- ಗುರುವಾದ ಅಭಿನಯಾ ನಟರಾಜನ್ ಅವರ ಬಳಿ ಕಳೆದ 4 ವರ್ಷಗಳಿಂದ ನೃತ್ಯದ ವಿವಿಧ ಆಯಾಮಗಳ ವಿಶೇಷ ತರಬೇತಿ ಪಡೆಯುತ್ತಿದ್ದಾಳೆ.

ಸ್ವತಃ ಕಲಾಪ್ರಪೂರ್ಣ ನೃತ್ಯ ಕಲಾವಿದೆಯಾಗಿ ಗಮನ ಸೆಳೆದಿರುವ ಅಭಿನಯಾ ಪ್ರತಿಬಾರಿಯೂ ತಮ್ಮ ಶಿಷ್ಯೆಯರ ರಂಗಪ್ರವೇಶಗಳಲ್ಲಿ ಪ್ರಾಯೋಗಿಕ ಹೊಸ ಪ್ರಯತ್ನಗಳನ್ನು ನಡೆಸುವುದು ಅವರ ವೈಶಿಷ್ಟ್ಯ. ಉತ್ತಮ ಕ್ರೀಡಾಪಟುವಾದ ನೇಯಾ ಉತ್ತಮ ವ್ಯಾಸಂಗದ ಜೊತೆ, ಕಲಾಭ್ಯಾಸ ಹಾಗೂ ವಿವಿಧ ಕ್ರೀಡಾ ಟೋರ್ನಮೆಂಟುಗಳಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸಿ ಅನೇಕ ಬಹುಮಾನಗಳನ್ನು ಗಳಿಸಿರುವುದು ಅವಳ ಅಗ್ಗಳಿಕೆ. ‘ನೇಯಾ ನವರಸ’ ಅವಳ ಸೃಜನಾತ್ಮಕ ಪ್ರತಿಭೆಯ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಿದ್ದು, ಶಾಸ್ತ್ರೀಯ ನೃತ್ಯದ ಸೌಂದರ್ಯ ಪ್ರಸಾರಕ್ಕಾಗಿ ತನ್ನದೇ ಆದ ಅನೇಕ ಕಾರ್ಯ ಯೋಜನೆಗಳನ್ನು ನೇಯಾ ಹಮ್ಮಿಕೊಂಡಿದ್ದಾಳೆ.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
