ಬೆಂಗಳೂರು : ‘ಕಲಾಕ್ಷೇತ್ರ ಬಾನಿ’ಯಲ್ಲಿ ನೃತ್ಯಸಾಧನೆ ಮಾಡಿರುವ ಬದ್ಧತೆಯ ನೃತ್ಯ ಕಲಾವಿದೆ ಮತ್ತು ಉತ್ತಮ ನೃತ್ಯಗುರುವಾಗಿ ಹೆಸರು ಮಾಡಿರುವ ವಿದುಷಿ ಪರಿಮಳ ಹನ್ಸೋಗೆ ಖ್ಯಾತ ‘ಕಲಾವಾಹಿನಿ ಡ್ಯಾನ್ಸ್ ಅಕಾಡೆಮಿ’ಯ ಕಲಾತ್ಮಕ ನಿರ್ದೇಶಕಿ. ಅವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯಶಿಲ್ಪ ಕುಮಾರಿ ವೈಷ್ಣವಿ ಬಾಲಪ್ರತಿಭೆ. ಪ್ರಸ್ತುತ ಲಂಡನ್ ನಿವಾಸಿಯಾಗಿರುವ ಶ್ರೀ ಜಯಶಂಕರ್ ಮತ್ತು ಮೃದುಲಾ ಇವರ ಹತ್ತು ವರ್ಷದ ಪುತ್ರಿಯಾದ ವೈಷ್ಣವಿ ಕಳೆದ ಆರು ವರ್ಷಗಳಿಂದ ಬಹು ಆಸಕ್ತಿ, ಪರಿಶ್ರಮಗಳಿಂದ ಭರತನಾಟ್ಯ ನೃತ್ಯಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಯುನೈಟೆಡ್ ಕಿಂಗ್ಡಮ್ ನಲ್ಲಿನ ಅನೇಕ ದೇವಾಲಯಗಳಲ್ಲಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಭಾರತದಲ್ಲೂ ಕೂಡ ವಿವಿಧ ವೇದಿಕೆಗಳಲ್ಲಿ ತನ್ನ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾಳೆ.

ಬಹುಮುಖ ಪ್ರತಿಭೆಯಾದ ವೈಷ್ಣವೀ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ಓದಿನಲ್ಲಿ ಉತ್ತಮ ವಿದ್ಯಾರ್ಥಿನಿಯೆನಿಸಿಕೊಂಡಿದ್ದು ಈಜು, ವಾಲಿಬಾಲ್, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಮುಂದಿರುವ ವಿಶೇಷತೆ ಅವಳದು. ಟ್ವೈಕಾಂಡೋ ನಲ್ಲಿ ಬ್ಲಾಕ್ ಬೆಲ್ಟ್ ಪಡೆದ ಜಾಣೆ. ಈಗಾಗಲೇ ಯು.ಕೆ.ಯ ಐ.ಎಸ್.ಟಿ.ಡಿ. ಸಂಸ್ಥೆಯ 7ನೆಯ ಹಂತದ ನೃತ್ಯಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ವಿಜೇತಳಾಗಿರುವ ವೈಷ್ಣವಿ, ಇದೀಗ ತಾನು ಕಲಿತ ಶಾಸ್ತ್ರೀಯ ನೃತ್ಯದ ವಿವಿಧ ಆಯಾಮಗಳ ಪ್ರದರ್ಶನಕ್ಕಾಗಿ ದಿನಾಂಕ 30 ಮೇ 2026ರಂದು ಶನಿವಾರ ಸಂಜೆ ಗಂಟೆ 4-30ಕ್ಕೆ ಬೆಂಗಳೂರಿನ ಜೆ.ಸಿ. ರೋಡಿನಲ್ಲಿರುವ ಎ.ಡಿ.ಎ. ರಂಗ ಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶವನ್ನು ಮಾಡುತ್ತಿದ್ದಾಳೆ. ಈ ಬಾಲಕಲಾವಿದೆಯ ಮನಮೋಹಕ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.


ಲಂಡನ್ನಿನಲ್ಲಿ ವಿರ್ರಲ್ ಗ್ರಾಮರ್ ಗರ್ಲ್ಸ್ ಸ್ಕೂಲಿನಲ್ಲಿ 7ನೆಯ ತರಗತಿಯಲ್ಲಿ ಓದುತ್ತಿರುವ ವೈಷ್ಣವಿಗೆ ನೃತ್ಯ ಬಾಲ್ಯದ ಒಲವು. ಅವಳ ನೃತ್ಯಪ್ರೀತಿಯನ್ನು ಮೊದಲು ಗುರುತಿಸಿದ ಅವಳ ತಾಯಿ ಮೃದುಲ್ಲಾ ಐದು ವರ್ಷದ ಮಗಳನ್ನು ಭರತನಾಟ್ಯ ಕಲಿಯಲು ಅಲ್ಲಿನ ಖ್ಯಾತ ‘ಕಲಾವಾಹಿನಿ’ ಡ್ಯಾನ್ಸ್ ಅಕಾಡೆಮಿಯಲ್ಲಿ ಬಹು ಶ್ರದ್ಧೆಯಿಂದ ಭರತನಾಟ್ಯ ಕಲಿಸುತ್ತಿದ್ದ ಸ್ವತಃ ಉತ್ತಮ ಕಲಾವಿದೆಯಾದ ಪರಿಮಳ ಹನ್ಸೋಗೆ ಇವರಲ್ಲಿ ನೃತ್ಯಕ್ಕೆ ಸೇರ್ಪಡೆಗೊಳಿಸಿದರು. ಭಾರತೀಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಗೌರವವುಳ್ಳ ಬಾಲೆ ಸತತ ಆರು ವರ್ಷಗಳ ಕಾಲ ಅತೀವ ಆಸಕ್ತಿಯಿಂದ ನೃತ್ಯ ಕಲಿತಳು. ಹಾಗೆಯೇ ಅಲ್ಲಿನ ಸ್ಥಳೀಯ ಅನೇಕ ಸಂಸ್ಥೆಗಳು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ – ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದು ಅವಳ ವೈಶಿಷ್ಟ್ಯ.


ಅವಳು ನೃತ್ಯ ಪ್ರದರ್ಶನ ನೀಡಿದವುಗಳಲ್ಲಿ ಮುಖ್ಯವಾದವು- ಯು.ಕೆ.ಯ ಕನ್ನಡ ಬಳಗ ಬರ್ಮಿಂಗ್ಹ್ಯಾಮ್ ದೇವಾಲಯದಲ್ಲಿ ನಡೆಸಿದ ತ್ಯಾಗರಾಜ ಆರಾಧನೆ, ಲಿವರ್ ಪೂಲ್ ಶಕ್ತಿ ಸಂಗಮ, ಮ್ಯಾನ್ಚಿಸ್ಟರ್ ಹಾಗೂ ಭಾರತೀಯ ವಿದ್ಯಾಭವನದಲ್ಲಿ ನಡೆದ ರಾಮನವಮಿ ಹಾಗೂ ನವರಾತ್ರಿ ಉತ್ಸವಗಳಲ್ಲಿ, ವಿವಿಧ ಹಬ್ಬಗಳ ಸಂದರ್ಭದ ಆಚರಣೆಗಳ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿ, ಕಲಾರಸಿಕರಿಂದ ಭರವಸೆಯ ಕಲಾವಿದೆಯಾಗಿ ಗುರುತಿಸಲ್ಪಟ್ಟಿದ್ದಾಳೆ. ಜೊತೆಗೆ ಅವಳ ಅವಳೀ ಸೋದರ ವಿಷ್ಣು ಜೈಶಂಕರ್ ಸಾಂಗತ್ಯದಲ್ಲಿ ಅನೇಕ ದೇವಾಲಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಅವಳ ವೈಯಕ್ತಿಕ ಬೆಳವಣಿಗೆಯಲ್ಲಿ ನೃತ್ಯ, ತುಂಬಾ ಪ್ರಭಾವ ಬೀರಿದ್ದು, ಅದು ಅವಳಿಗೆ ಜೀವನದಲ್ಲಿ ಶಿಸ್ತು ಕಲಿಸಿದ್ದು, ದೈವಿಕ ಪಥದಲ್ಲಿ ಸಾಗಲು ಮಾರ್ಗದರ್ಶಿಯಾಗಿದೆ ಎಂಬುದು ಅವಳ ದೃಢವಾದ ನಂಬಿಕೆ.





*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
