ಮುಂಬೈ : ಮುಂಬೈ ವಿಶ್ವವಿದ್ಯಾನಿಲಯದ ಮಹತ್ವಾಕಾಂಕ್ಷೆಯ ಪ್ರಕಟಣೆಯಾದ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್‌ನ ಕನ್ನಡ ಅನುವಾದ ‘ಭಾರತೀಯ ಜ್ಞಾನ ಪರಂಪರೆ’ಯನ್ನು, ಮಾಟುಂಗ ಮುಂಬೈನ ಮೈಸೂರು ಅಸೋಸಿಯೇಷನ್‌ನ ಶತಮಾನೋತ್ಸವ ಸಮಾರಂಭದಲ್ಲಿ ದಿನಾಂಕ 19 ಎಪ್ರಿಲ್ 2026ರಂದು ಬಿಡುಗಡೆ ಮಾಡಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ಕೆ. ಕಮಲಾ ವಹಿಸಿದ್ದರು. ಈ ಪುಸ್ತಕವನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮುಂಬೈ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರವೀಂದ್ರ ಕುಲಕರ್ಣಿಯವರು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎನ್. ಉಪಾಧ್ಯ ಇವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು. ಈ ಮಹತ್ವದ ಯೋಜನೆಯನ್ನು ಮೈಸೂರು ಅಸೋಸಿಯೇಷನ್ ಮುಂಬೈ ಪ್ರಾಯೋಜಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಕುಲಕರ್ಣಿ “ಮೂಲತಃ ಪ್ರಾಚೀನ ಜ್ಞಾನ ಪರಂಪರೆಯ ವಿಷಯವು ಸಂಸ್ಕೃತ, ಪಾಲಿ ಮತ್ತು ಪ್ರಾಕೃತ ಭಾಷೆಗಳಲ್ಲಿ ಲಭ್ಯವಿದ್ದು, ಅನಂತರ ಇಂಗ್ಲೀಷ್‌ಗೆ ಅನುವಾದಿಸಲಾಯಿತು. ಇದನ್ನು ಭಾರತೀಯ ಭಾಷೆಗಳ ಮೂಲಕ ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ ಈಗ ಕನ್ನಡಕ್ಕೆ ತರಲಾಗಿದೆ. ಈ ಉಪಕ್ರಮದ ಮೂಲಕ ಎಲ್ಲ 22 ಸಾಂವಿಧಾನಿಕವಾಗಿ ಮಾನ್ಯತೆ ಪಡೆದ ಭಾಷೆಗಳಲ್ಲಿ ಪಾರಂಪರಿಕ ಜ್ಞಾನವನ್ನು ತರುವ ಗುರಿಯನ್ನು ಮುಂಬೈ ವಿ.ವಿ. ಹೊಂದಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಅಪೂರ್ವ ಸಾಧನೆಯನ್ನು, ಮುಂಬೈ ಕನ್ನಡ ಸಂಘ ಸಂಸ್ಥೆಗಳ ಕೊಡುಗೆಯನ್ನು ಅವರು ಕೊಂಡಾಡಿದರು. ಆಧುನಿಕತೆಯ ಜೊತೆಗೆ ಯುವ ಪೀಳಿಗೆಗಳು ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕದಲ್ಲಿರಬೇಕಾದ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ವಿಶೇಷ ಆಹ್ವಾನಿತರಾದ ಐಐಟಿ ಬಾಂಬೆಯ ಉಪನಿರ್ದೇಶಕ ಪ್ರೊ. ರವೀಂದ್ರ ಗುಡಿ, ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ವಿಶಾಲ ಪ್ರೇಕ್ಷಕರಿಗೆ ಕೊಂಡೊಯ್ಯಲು ಮುಂಬೈ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು. ಸಥಾಯೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಪುಟದ ಮುಖ್ಯ ಸಂಪಾದಕರಾದ ಪ್ರೊ. ಎಂ.ಆರ್. ರಾಜವಾಡೆ, ಮೈಸೂರು ಅಸೋಸಿಯೇಷನ್ ಕಾರ್ಯದರ್ಶಿ ಪ್ರೊ. ಗಣಪತಿ ಶಂಕರ್ಲಿಂಗ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಗ್ಲೀಷ್ ಮತ್ತು ಮರಾಠಿ ಸಂಪುಟಗಳು ವಿವಿಧ ಪ್ರಾಧ್ಯಾಪಕರು ಬರೆದ ಭಾರತೀಯ ಜ್ಞಾನ ಪರಂಪರೆ ಕುರಿತಾದ ವಿದ್ವತ್ಪೂರ್ಣ ಲೇಖನಗಳ ಸಂಗ್ರಹವಾಗಿದೆ. ಕನ್ನಡ ಆವೃತ್ತಿಯನ್ನು ಪ್ರೊ. ಜಿ.ಎನ್. ಉಪಾಧ್ಯ ಇವರು ನಾಲ್ವರು ಸಂಶೋಧನ ಸಹವರ್ತಿಗಳೊಂದಿಗೆ ಅನುವಾದಿಸಿ ಸಂಪಾದಿಸಿದ್ದಾರೆ. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ, ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಉಮಾ ರಾಮರಾವ್, ಕಲಾ ಭಾಗ್ವತ್ ಮತ್ತು ಹಲವಾರು ಸಾಂಸ್ಕೃತಿಕ ಮತ್ತು ಸಮುದಾಯ ಮುಖಂಡರು, ಐತಿಹಾಸಕ್ತರು, ಕನ್ನಡ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾ ಭಾಗ್ವತ್ ಮತ್ತು ನಳಿನಾ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

