ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಹಳೆಯಂಗಡಿ ಸಮೀಪದ ಚೇಳಾಯರು ಗುತ್ತಿನಮನೆ ‘ಅಯೋಧ್ಯೆ’ಯಲ್ಲಿ ದಿನಾಂಕ 15 ಏಪ್ರಿಲ್ 2026ರಂದು ಆಯೋಜಿಸಿದ್ದ ಯುಗಾದಿ ಪ್ರಯುಕ್ತ ‘ಭಾವ ಗಾನ ಯಾನ’ ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಳು ಜಾನಪದ ಚಿಂತಕ ವೈ.ಎನ್. ಶೆಟ್ಟಿಯವರು ತುಳುವರ ಕಾಲ ಜ್ಞಾನ ಮತ್ತು ತುಳು ಸಂಸ್ಕೃತಿಯಲ್ಲಿ ಬಿಸುವಿನ ಮಹತ್ವವನ್ನು ವಿವರಿಸಿದರು. “ನಾವು ತುಳುವರು ಪ್ರಕೃತಿಯ ಜೊತೆಗೆ ಬದುಕಿದವರು. ಪ್ರಕೃತಿಯನ್ನೇ ನಮ್ಮ ದೈನಂದಿನ ಜೀವನದ ಭಾಗವಾಗಿರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿದವರು, ನಮಗೆ ಪ್ರಕೃತಿಯೇ ದೇವರು” ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಳ್ಳಾಲ ತಾಲೂಕಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯುವ ಪ್ರಕಾರ ಪ್ರಮುಖ್ ಮತ್ತು ಜಾನಪದ ಸಂಶೋಧನಾರ್ಥಿಯಾದ ವಿಜೇತ್ ಮಂಜನಾಡಿ “ಬಿಸು ಎಂಬುದು ತುಳುವರ ಹೊಸ ವರ್ಷ ಮಾತ್ರವಾಗಿರದೆ ಪ್ರಕೃತಿಯು ಮೈತುಂಬಿ ನಲಿಯುವ ಹಬ್ಬವೂ ಆಗಿದೆ, ತುಳು ಭಾಷೆಯ ಜೊತೆಗೆ ರಾಷ್ಟ್ರೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಹಿತ್ಯವಲಯದಿಂದ ಮಾತ್ರ ಸಾಧ್ಯ ಅದನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಾಡುತ್ತಿದ್ದು ನಾವೆಲ್ಲರೂ ಅದರ ಕಾರ್ಯದಲ್ಲಿ ಜೊತೆಯಾಗಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ವೀಣಾ ಟಿ. ಶೆಟ್ಟಿಯವರು ಮಾತನಾಡಿ “ಸಾಹಿತ್ಯದ ಮೂಲಕ ನಮ್ಮ ದೇಶದ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವ ಕೆಲಸವನ್ನು ಯಾವುದೇ ಭಾಷೆಯ ಚೌಕಟ್ಟು ಇಲ್ಲದೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಬಿಸು ನಮ್ಮ ಸಂಸ್ಕೃತಿಯ ಭಾಗ ನಾವೆಲ್ಲರೂ ನಮ್ಮ ಸಂಸ್ಕೃತಿಯ ಉಳಿವಿಗಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶೈಲೇಶ್, ಜಿಲ್ಲಾ ಸಂಯೋಜಕ ಸುಂದರ ಇಳಂತಿಲ ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಕಾರ್ಯಕ್ರಮದಲ್ಲಿ ಪ್ರಸ್ತಾವನೆಯ ಜೊತೆಗೆ ಅತಿಥಿಗಳನ್ನು ಸ್ವಾಗತಿಸಿದರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಹ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ವಂದಿಸಿದರು, ವಿದ್ಯಾರ್ಥಿ ಸಂದೀಪ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಕೋಶಾಧಿಕಾರಿ ರತ್ನಾವತಿ ಜೆ. ಬೈಕಾಡಿ ಇವರ ‘ಇಂಚರ ತಂಡ’ ಮತ್ತು ಸ್ಥಳೀಯ ಪ್ರತಿಭೆಗಳಿಂದ ಯುಗಾದಿ ಭಾವ ಗಾನ ಕಾರ್ಯಕ್ರಮ ನಡೆಯಿತು, ಬಿಸು ಮತ್ತು ಯುಗಾದಿಗೆ ಸಂಬಂಧಪಟ್ಟ ತುಳು ಮತ್ತು ಕನ್ನಡ ಭಾವಗೀತೆ ಪ್ರಸ್ತುತಿ ನಡೆಯಿತು.

ಬಿಸು ಹಬ್ಬದ ಅಂಗವಾಗಿ ‘ಅಯೋಧ್ಯೆ’ಯ ಮನೆಯಂಗಳದ ತುಳಸಿಕಟ್ಟೆಯ ಮುಂದೆ ಸಾಂಪ್ರದಾಯಿಕ ಬಿಸು ಕಣಿಯನ್ನು ಜೋಡಿಸಲಾಗಿತ್ತು. ಮನೆಯಲ್ಲೇ ಬೆಳೆದ ಮೂವತ್ತಕ್ಕೂ ಹೆಚ್ಚು ಫಲವಸ್ತುಗಳನ್ನು ಮತ್ತು ತರಕಾರಿಗಳನ್ನು ಗಣಪತಿ ಸುತ್ತೆ, ಕಾಲುದೀಪ, ಕನ್ನಡಿ, ಕಾಡಿಗೆ, ಕೃಷ್ಣನ ವಿಗ್ರಹ, ಅಡಿಕೆ, ವೀಳ್ಯದೆಲೆ, ಫಲವಂತಿಕೆಯ ಸಂಕೇತವಾದ ಹಿಂಗಾರ, ಸಮೃದ್ಧಿಯ ಸಂಕೇತವಾದ ಅಕ್ಕಿ ಮುಡಿ, ಚಿನ್ನದ ಸರ, ನಾಣ್ಯಗಳೊಂದಿಗೆ ವಿನ್ಯಾಸಗೊಳಿಸಿ ತಯಾರಿಸಿದ ಬಿಸು ಕಣಿ ಎಲ್ಲರ ಕಣ್ಮನಗಳನ್ನು ಸೆಳೆಯಿತು. ಕಣ್ಮರೆಯಾಗುತ್ತಿರುವ ಕೃಷಿ ಸಂಸ್ಕೃತಿಯನ್ನು ಕೈಲಾದ ಮಟ್ಟಿಗೆ ಉಳಿಸುವ ಪ್ರಯತ್ನವಿದು ಎಂದು ಅಯೋಧ್ಯೆಯ ಯಜಮಾನ ಶ್ರೀ ದಿವಾಕರ ಸಾಮಾನಿಯವರು ತಿಳಿಸಿದರು.
