ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ವತಿಯಿಂದ ನೀಡಲಾಗುವ ಭ್ರಾಮರೀ ಯಕ್ಷಮಣಿ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 01 ಆಗಸ್ಟ್ 2026 ಶನಿವಾರದಂದು ಸಂಜೆ 7-00 ಗಂಟೆಗೆ ಭ್ರಾಮರೀ ಯಕ್ಷವೈಭವ 2026 ಕಾರ್ಯಕ್ರಮ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಬೆಳ್ಳಿಯ ಪದಕವನ್ನು ಒಳಗೊಂಡಿರುತ್ತದೆ.
ತನ್ನ ಹದಿನೈದನೆಯ ವಯಸ್ಸಿನಲ್ಲಿ ಯಕ್ಷಗಾನ ರಂಗವನ್ನು ಪ್ರವೇಶ ಮಾಡಿದ ಕೆ.ಎಚ್. ದಾಸಪ್ಪ ರೈಯವರು ಆರು ದಶಕಗಳಿಂದಲೂ ಅಧಿಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯ ಕಲಾವಿದರು, ಕರ್ನಾಟಕ ಮೇಳ, ಕದ್ರಿ ಮೇಳ, ಕುಂಬಳೆ ಕಣಿಪುರ ಮೇಳ, ಮಂಗಳಾದೇವಿ ಮೇಳ ಸಹಿತ ದೇಶ ವಿದೇಶದಲ್ಲಿ ಪ್ರದರ್ಶನ ನೀಡಿದ ಹಿರಿಯ ಕಲಾವಿದರು. ಕೋಟಿ ಚೆನ್ನಯ ಯಕ್ಷಗಾನದ ಕೋಟಿ, ಕಾಡಮಲ್ಲಿಗೆ ಯಕ್ಷಗಾನದ ಮೈಂದ ಗುರಿಕಾರೆ ಪಾತ್ರದ ಮೂಲಕ ಯಕ್ಷಭಿಮಾನಿಗಳನ್ನು ಸೆಳೆದವರು. ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಸ್ವತಃ ಮೇಳ ನಡೆಸಿ ಮೇಳದ ಯಜಮಾನರಾಗಿಯೂ ಗುರುತಿಸಿಕೊಂಡವರು.
ಕಳೆದ ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ಮೋನಪ್ಪ ಗೌಡ ಹಾಗೂ ಕಳೆದ 90 ವರ್ಷಕ್ಕೂ ಅಧಿಕ ಕಾಲದಿಂದ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು, ಯಕ್ಷಗಾನ ತರಭೇತಿಯನ್ನು ನಡೆಸುತ್ತಿರುವ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ತೇಯ ಯಕ್ಷಗಾನ ಮತ್ತು ಭಜನಾ ಮಂಡಳಿ ಸಂಸ್ಥೆಗೆ ಈ ಬಾರಿಯ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭ್ರಾಮರೀ ಯಕ್ಷಸೇವಾ ಪುರಸ್ಕಾರವು ತಲಾ ಆರು ಸಾವಿರ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಯಕ್ಷಗಾನ ಅರ್ಥಧಾರಿ ಜಿ.ಕೆ ಭಟ್ ಸೇರಾಜೆ, ಶಾಸಕ ವೇದವ್ಯಾಸ ಕಾಮತ್, ಎಸ್.ಸಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಟಿ.ಜಿ. ರಾಜಾರಾಮ್ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಶ್ರೀ ರಾಜಶೇಖರ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪುಳಿಂಚ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಇಡೀ ರಾತ್ರಿ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ‘ಅಂಭಾಶಪಥ’, ‘ಲಕ್ಷ್ಮೀ ಸ್ವಯಂವರ’, ‘ತಾಮ್ರದ್ವಜ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
