ಮಂಗಳೂರು : ಸುರತ್ಕಲ್ ನ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಾಂಕ 08 ಜೂನ್ 2026ರಂದು ಆಯೋಜಿಸಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ ನೂರಹನ್ನೊಂದರ ಹುಟ್ಟು ಹಬ್ಬದ ನೆನಪು ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ಹಿರಿಯ ಸಂಘಟಕ ಭುವನ ಪ್ರಸಾದ್ ಹೆಗ್ಡೆ ಇವರು “ಮನಸ್ಸು, ಮಾತು ಮತ್ತು ಕೃತಿಗಳಲ್ಲಿ ಸಮನ್ವಯ ಸಾಧಿಸಿ ಆದರ್ಶ ಪ್ರಾಯರಾಗಿ ಶತಮಾನದ ಬಾಳನ್ನು ಬಾಳಿದ ಕಯ್ಯಾರರ ಸಾಧನೆಗಳು ಅನನ್ಯ” ಎಂದು ನುಡಿದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಕಯ್ಯಾರರ ಪುತ್ರ ಡಾ. ಪ್ರಸನ್ನ ರೈ ಮಾತನಾಡಿ “ಶಿಕ್ಷಕರಾಗಿ, ಕೃಷಿಕರಾಗಿ, ಆಡಳಿತಗಾರರಾಗಿ, ಸ್ವಾತಂತ್ಯ ಹೋರಾಟಗಾರರಾಗಿ, ಸಾಹಿತಿಯಾಗಿ ಕಯ್ಯಾರರು ಆದರ್ಶ ಪಥದಲ್ಲಿ ಮುನ್ನಡೆದವರು. ಕರ್ನಾಟಕ ಸರಕಾರದ ಅನುದಾನದ ಸಹಾಯದೊಂದಿಗೆ ಕಯ್ಯಾರರ ನೆನಪಿನ ಕಲಾ ಭವನ ಪೆರಾಡಾಲದಲ್ಲಿ ನಿರ್ಮಾಣಗೊಳ್ಳುತ್ತಿದೆ” ಎಂದರು.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಮಾತನಾಡಿ “ಕಯ್ಯಾರರ ಲೇಖನಗಳ ಸಮಗ್ರ ಸಂಪುಟ ಪ್ರಕಟವಾಗಬೇಕಾಗಿದ್ದು, ನಿರಂತರ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಕಯ್ಯಾರರು ಆದರ್ಶ ಮಾದರಿಯಾಗಿದ್ದಾರೆ” ಎಂದರು.

ಪ್ರಾಧ್ಯಾಪಕಿ ಜ್ಯೋತಿ ರೈ ಮಾತನಾಡಿ “ಮಾವನಾಗಿ ಕಯ್ಯಾರರು ಸ್ತೀ ಸಮಾನತೆಯ ಆದರ್ಶವನ್ನು ಪಾಲಿಸಿ ಅಕ್ಕರೆಯಿಂದ ಕಂಡವರು” ಎಂದರು. ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್, ಲೇಖಕಿ ದೇವಿಕಾ ನಾಗೇಶ್, ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕಯ್ಯಾರರ ಕವನಗಳನ್ನು ವಾಚಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ. ಗುಣಕರ, ತುಳುವ ಮಹಾ ಸಭಾ ಮೂಲ್ಕಿ ವಲಯ ಅಧ್ಯಕ್ಷೆ ಕಕ್ವಗುತ್ತು ಬಾನುಮತಿ, ಗೋವಿಂದ ದಾಸ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಡಾ. ಸುಧಾ ಶೆಟ್ಟಿ ಕಯ್ಯಾರರ ಕುರಿತು ಅನುಭವಗಳನ್ನು ಹಂಚಿಕೊಂಡರು. ಕವಿ ಸುಬ್ರಾಯ ಭಟ್ ಸ್ವರಚಿತ ಕವನ ವಾಚಿಸಿದರು.

ವಿಮರ್ಶಕ ಡಾ. ವಾಸುದೇವ ಬೆಳ್ಳೆ ಮತ್ತು ಕವಿ ರಘು ಇಡ್ಕಿದು ಕಯ್ಯಾರರ ಕವಿತೆಗಳ ಅರ್ಥವಂತಿಕೆಯನ್ನು ನಿರೂಪಿಸಿದರು. ಕಯ್ಯಾರರ ಪುತ್ರಿ ದೇವಕಿ ದೇವಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹಾಗೂ ಹಿರಿಯ ಸಂಶೋದಕಿ ಡಾ. ಇಂದಿರಾ ಹೆಗ್ಗಡೆಯವರು ಕಯ್ಯಾರರು ಕಿರಿಯ ಸಾಹಿತಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ತಿಳಿಸಿದರು. ಡಾ. ಜ್ಯೋತಿ ಚೇಳ್ಯಾರು ಸ್ವಾಗತಿಸಿ, ಬೆನ್ನೆಟ್ ಅಮ್ಮನ್ನ ವಂದಿಸಿ, ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಶಕೀಲಾ, ಸಚಿತ, ಸತೀಶ್, ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

