ವಿಟ್ಲ : ವಿಟ್ಲ ಸಮೀಪದ ಮಂಗಲಪದವು ‘ರವಿಪ್ರಭಾ’ ಇಲ್ಲಿ ಕವಯಿತ್ರಿ ವೆಂಕಟೇಶ್ವರಿ ಕೃಷ್ಣಭಟ್ ಪುದುಕೋಳಿ ಇವರು ರಚಿಸಿದ ಭಕ್ತಿಗೀತೆಗಳ ಸಂಕಲನ ‘ಭಕ್ತಿ ಕುಸುಮಾಂಜಲಿ’ ಕೃತಿಯು ದಿನಾಂಕ 23 ಏಪ್ರಿಲ್ 2026ರಂದು ಲೋಕಾರ್ಪಣೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಪುತ್ತೂರಿನ ಅಂಕಣಕಾರ ಮತ್ತು ನಿವೃತ್ತ ಪ್ರೊಫೆಸರ್ ಪ್ರೊ. ವಿ.ಬಿ. ಅರ್ತಿಕಜೆ ಇವರು ಮಾತನಾಡಿ “ಸಾಹಿತ್ಯವು ಓದುಗರ ವಿಚಾರಗಳನ್ನು ಪ್ರಚೋದಿಸಿ ಮನಸ್ಸನ್ನು ಅರಳಿಸುತ್ತದೆ, ವ್ಯಕ್ತಿತ್ವವನ್ನು ಸುಸಂಸ್ಕೃತಗೊಳಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ಜಿ.ಪಿ. ವೆಂಕಟರಾವ್ ವಾದ್ಯಕೋಡಿ, ಕೃಷ್ಣಭಟ್ ಪುದುಕೋಳಿ ಮತ್ತು ರಾಮಚಂದ್ರ ಭಟ್ ಮಂಗಲಪದವು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮತ್ತು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಇವರು “ಇತ್ತೀಚಿನ ದಿನಗಳಲ್ಲಿ ಭಕ್ತಿ ಸಾಹಿತ್ಯ ಎಂಬುದು ಕಣ್ಮರೆಯಾಗುತ್ತಿದೆ. ಭಾರತದಲ್ಲಿ, ಅದರಲ್ಲೂ ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಬಹು ದೊಡ್ಡ ಪರಂಪರೆ ಇದೆ. ಭಜನಾ ತಂಡಗಳಿಗೆ ಮತ್ತು ನೃತ್ಯಭಜನೆ ಮಾಡುವವರಿಗೆ ಇಂತಹ ಭಕ್ತಿಗೀತೆಗಳ ಅಗತ್ಯ ತುಂಬ ಇದೆ. ಆರುನೂರಕ್ಕಿಂತ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿರುವ ಶ್ರೀಮತಿ ವೆಂಕಟೇಶ್ವರಿ ಕೃಷ್ಣಭಟ್ ಇವರ ಸಾಧನೆ ದೊಡ್ಡದು. ಎಲೆಮರೆಯ ಕಾಯಿಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಲೇಖಕರನ್ನು ಮತ್ತು ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ. ಇಂದಿನ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡು ಕಡಿಮೆಯಾಗುತ್ತಿದ್ದು ಅದಕ್ಕೆ ಉತ್ತೇಜನ ನೀಡಬೇಕಾಗಿದೆ” ಎಂದು ಹೇಳಿದರು.

ಕವಯಿತ್ರಿ ವೆಂಕಟೇಶ್ವರಿ ಕೃಷ್ಣಭಟ್ ತನ್ನ ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತಾಡಿದರು. ಶ್ರೀಮತಿ ಅಶ್ವಿನಿ ಭರತ್ ಕೋಡ್ಲ ಪುಸ್ತಕದಿಂದ ಆಯ್ದ ಗೀತೆಗಳನ್ನು ಹಾಡಿದರು. ಶ್ರೀಮತಿ ಸೀಮಾ ಗಣೇಶಚಂದ್ರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿಯರಾದ ಸಮೃದ್ಧಿ ಎಸ್. ಭಟ್ ಮತ್ತು ಶ್ರೀಸ್ಮೃತಿ ಎಲ್.ಪಿ. ಪ್ರಾರ್ಥನೆ ಹಾಡಿದರು. ಅಧ್ಯಾಪಕರಾದ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀಶ ಪುದುಕೋಳಿ ವಂದಿಸಿದರು.


ಕೃತಿಗಳಿಗೆ ಲೇಖಕಿ ವೆಂಕಟೇಶ್ವರಿ ಕೃಷ್ಣಭಟ್ ಪುದುಕೋಳಿ ಇವರ ಮೊಬೈಲ್ ಸಂಖ್ಯೆ 9972959671 ಸಂಪರ್ಕಿಸಿರಿ.
