ಸುಳ್ಯ : ಸುಳ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 31 ಜನವರಿ 2026ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಲೇಖಕ, ಸಂಶೋಧಕ ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಅಂಕಣ ಬರಹಗಳ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ. ಸಮಾಜದಲ್ಲಿ ಕಂಡ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಅದನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಮತ್ತು ಕಲೆಗಳು ಪ್ರದರ್ಶಿಸಬೇಕು. ವಾಸ್ತವವನ್ನು ಬಿಂಬಿಸದಿದ್ದರೆ ಅಂತಹಾ ಸಾಹಿತ್ಯ ಮತ್ತು ಕಲೆ ಅಪ್ರಸ್ತುತವಾಗುತ್ತದೆ. ಒಬ್ಬ ಸಾಹಿತಿ ಒಂದು ಪದ ಸೃಷ್ಟಿಸಿದರೆ ಅದು ಹೊಸ ಆಲೋಚನಾ ಕ್ರಮವನ್ನೂ, ಹೊಸ ಜನಾಂಗವನ್ನು ಸೃಷ್ಟಿಸಿದಂತೆ. ಡಾ. ಸುಂದರ ಕೇನಾಜೆಯವರು ತಮ್ಮ ಕೃತಿಯ ಹಾಗೂ ಸೃಜನಶೀಲ ಬರಹದ ಮೂಲಕ ವಸ್ತುವಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದ್ದಾರೆ. ತಮ್ಮ ಸಂವೇದನಾಶೀಲ ಅಧ್ಯಯನ ಮತ್ತು ಕ್ರಿಯಾಶೀಲ ಕ್ಷೇತ್ರ ಕಾರ್ಯದ ಮೂಲಕ ತಮ್ಮ ಅನುಭವವನ್ನು ಧಾರೆಯೆರೆದು ಉತ್ತಮ ಬರಹಗಳನ್ನು ಸೃಜಿಸಿದ್ದಾರೆ” ಎಂದು ಹೇಳಿದರು.

ಕೃತಿಯ ಕುರಿತು ಮಾತನಾಡಿದ ಖ್ಯಾತ ವ್ಯಂಗ್ಯಚಿತ್ರಕಾರ, ವಿಮರ್ಶಕ ದಿನೇಶ್ ಕುಕ್ಕುಜಡ್ಕ “ಅಳವಾದ ಅಧ್ಯಯನದ ಮೂಲಕ ತಮ್ಮ ಅಂಕಣ ಬರಹಗಳನ್ನು ಬರೆದಿದ್ದಾರೆ. ಪ್ರತಿಯೊಂದು ಬರವಣಿಗೆಯ ಹಿಂದೆಯೂ ಅವರ ತುಡಿತ ಮತ್ತು ನಿಷ್ಠಾವಂತಿಕೆ ಎದ್ದು ಕಾಣುತ್ತದೆ. ಒಂದೊಂದು ಅಂಕಣಗಳೂ ಒಂದೊಂದು ಅನುಭವದ ಸಂಗ್ರಹ” ಎಂದು ಹೇಳಿದರು.
ಲೇಖಕ ಡಾ. ಸುಂದರ ಕೇನಾಜೆ ಮಾತನಾಡಿ ತಮ್ಮ ಅಂಕಣ ಬರಹದ ಕುರಿತ ಅನುಭವಗಳನ್ನು ಬಿಚ್ಚಿಟ್ಟರು. ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮನೆ ಮಾತನಾಡಿದರು. ಪತ್ರಕರ್ತ ಗಂಗಾಧರ ಕಲ್ಲಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತಕೃಷ್ಣ ಚಾಕೋಟೆ ವಂದಿಸಿದರು. ಕೆ.ಆರ್. ಗೋಪಾಲಕೃಷ್ಣ ಆರಂಭ ಗೀತೆ ಹಾಡಿದರು. ಉಪನ್ಯಾಸಕಿ ಪಿ.ಬಿ. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಡಾ. ಸುಂದರ ಕೇನಾಜೆ ಅವರು ಈ ಹಿಂದೆ ಪ್ರಕಟಿಸಿದ 22 ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ‘ಮಾತಿಲ್ಲದ ಮಾತು’ 23ನೇ ಕೃತಿಯಾಗಿ ಬಿಡುಗಡೆಗೊಂಡಿತು. ಮೂರು ಕಥಾ ಸಂಕಲನ, ಎಂಟು ಸಂಶೋಧನಾ ಕೃತಿ, ಒಂದು ಪ್ರಬಂಧ ಸಂಕಲನ, ಎರಡು ವ್ಯಕ್ತಿಚಿತ್ರ, ಏಳು ಸಂಪಾದಿತ ಕೃತಿಗಳನ್ನು ಡಾ. ಕೇನಾಜೆ ಪ್ರಕಟಿಸಿದ್ದಾರೆ. ನೂರ ಎಂಬತ್ತು ಪುಟಗಳ ‘ಮಾತಿಲ್ಲದ ಮಾತು’ ಕೃತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಪ್ರಾದೇಶಿಕ ಚರಿತ್ರೆ, ಜಾನಪದ, ಕಲಾವಿಮರ್ಶೆ, ಮನೋವಿಜ್ಞಾನ, ಶಿಕ್ಷಣ, ವ್ಯಕ್ತಿ ಮತ್ತು ಕೃತಿ ಪರಿಚಯ ಎನ್ನುವ ವೈವಿದ್ಯ ವಸ್ತು ಬರಹಗಳಿವೆ. ಅಧ್ಯಯನ, ಅನುಭವ ಮತ್ತು ಕ್ಷೇತ್ರ ಕಾರ್ಯದ ಮಾಹಿತಿಯನ್ನು ಒಳಗೊಂಡ ಬರಹಗಳು ಅಡಗಿದೆ. ಮೈಸೂರಿನ ಮಡಿಲು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಪತ್ರಕರ್ತ ಮುಳ್ಳೂರು ರಾಜು ಮುನ್ನುಡಿಯ ಮಾತುಗಳನ್ನೂ ಕನ್ನಡದ ಖ್ಯಾತ ಸಾಹಿತಿ ಹಾಗೂ ಬರಹಗಾರರ ಅಭಿಪ್ರಾಯಗಳ ಬೆನ್ನುಡಿಯ ಕೆಲವು ವಾಕ್ಯಗಳನ್ನೂ ನೀಡಲಾಗಿದೆ.
