ಕಾಸರಗೋಡು : ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಇವರ ಹದಿಮೂರನೆಯ ಕೃತಿ ‘ನೀಲಾಂಜನ’ ಭಕ್ತಿಗೀತೆಗಳ ಸಂಕಲನ ದಿನಾಂಕ 17 ಮೇ 2026ನೇ ಆದಿತ್ಯವಾರದಂದು ಅವರ ನಿವಾಸ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕೊಳಚಪ್ಪು ನಿವಾಸ ‘ಸತ್ಯಶ್ರೀ’ ಇಲ್ಲಿ ಲೋಕಾರ್ಪಣೆಯಾಯಿತು.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ. ಮಹಾಬಲ ತಿಲಕ ಮಂಗಳೂರು ಇವರು ಕೃತಿ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಮತ್ತು ಸಾಹಿತ್ಯ ಪ್ರವರ್ತಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ದೀಪ ಪ್ರಜ್ವಲನೆಗೈದರು. ವಿಶ್ರಾಂತ ಪ್ರಾಂಶುಪಾಲರು ಮತ್ತು ಹಿರಿಯ ಸಾಹಿತಿ ಪ್ರೊ. ಪಿ.ಎನ್. ಮೂಡಿತ್ತಾಯರು ಕೃತಿ ಪರಿಚಯಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ಸಭಾಧ್ಯಕ್ಷತೆ ವಹಿಸಿದರು.
ಲತೀಶ್ ಎಂ. ಸಂಕೊಳಿಗೆ ಇವರು ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಕೊಳಚಪ್ಪುರವರು ಪ್ರಾರ್ಥನೆಗೈದರು. ಪ್ರಮೀಳಾ ಚುಳ್ಳಿಕಾನ ಧನ್ಯವಾದ ಸಮರ್ಪಿಸಿ, ಹಿರಿಯ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಿವೃತ್ತ ಕನ್ನಡ ಅಧ್ಯಾಪಕರು ಕವಿ, ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಲಕ್ಷ್ಮೀ ವಿ. ಭಟ್ ಮಂಜೇಶ್ವರ, ಪ್ರಮೀಳಾ ಚುಳ್ಳಿಕಾನ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಡಾ. ಅಬ್ರಾಜೆ ಕೇಶವ ಭಟ್ ಮತ್ತು ಸತ್ಯವತಿ ಎಸ್. ಭಟ್ ಕೊಳಚಪ್ಪು ಇವರುಗಳು ಭಕ್ತಿಗೀತೆ ವಾಚನ ಮಾಡಿದರು.

