ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ ಇವರ ವತಿಯಿಂದ ಮಾಲತಿ ಮುದಕವಿ ಇವರು ಬರೆದ ಮೂರು ಕೃತಿಗಳಾದ ‘ರಾಮರಾಜ್ಯ’ (ಇದು ಮರಾಠಿಯಿಂದ ಕನ್ನಡಕ್ಕೆ ಅನುವಾದಿತ ಕಾದಂಬರಿ), ‘ಸಂಸಾರದಲ್ಲಿ ಸರಿಗಮ’ (ಸ್ವರಚಿತ ಕಥಾಸಂಕಲನ), ‘ಜಗವೇ ನಾಟಕ ರಂಗಾ’ (ನಾಟಕ ಸಂಗ್ರಹ) ಹಾಗೂ ಶ್ರೀಮತಿ ಸರಸ್ವತಿ ಭೋಸಲೆ ಇವರ ಎರಡು ಕೃತಿಗಳಾದ ‘ಕೇಡಿಲ್ಲದ ನುಡಿ’ (ಲಲಿತ ಪ್ರಬಂಧಗಳು) ಹಾಗೂ ‘ದೇವರ ದುಡ್ಡು’ (ಮಕ್ಕಳ ಕಥೆಗಳು) ಇವು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ದಿನಾಂಕ 15 ಎಪ್ರಿಲ್ 2026ರಂದು ಲೋಕಾರ್ಪಣೆಗೊಂಡವು.
ಮಾಲತಿ ಮುದಕವಿ ಇವರ ‘ರಾಮರಾಜ್ಯ’ ಹಾಗೂ ‘ಸಂಸಾರದಲ್ಲಿ ಸರಿಗಮ’ ಕೃತಿಗಳನ್ನು ಹಿರಿಯ ಲೇಖಕಿ ಶ್ರೀಮತಿ ವಿನುತಾ ಹಂಚಿನಮನಿ ಹಾಗೂ ‘ಜಗವೇ ನಾಟಕ ರಂಗಾ’ ಕೃತಿಯನ್ನು ಪ್ರಸಿದ್ಧ ಲೇಖಕಿ ಹಾಗೂ ರಂಗಭೂಮಿ ನಿರ್ದೇಶಕಿ ರೂಪಾ ಜೋಶಿ ಪರಿಚಯಿಸಿದರು. ಸರಸ್ವತಿ ಭೋಸಲೆ ಇವರ ‘ಕೇಡಿಲ್ಲದ ನುಡಿ’ ಹಾಗೂ ‘ದೇವರ ದುಡ್ಡು’ ಕೃತಿಗಳನ್ನು ಶ್ರೀ ಶ್ರೀಧರ ಗಸ್ತಿಯವರು ಪರಿಚಯಿಸಿದರು. ಕಾರ್ಯಕ್ರಮಕ್ಕೆ ಬಹಳಷ್ಟು ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.


ಧಾರವಾಡದ ಮಾಲತಿ ಮುದಕವಿ ಇವರು ವಿಜಯಪುರದ ಸಿಕ್ಯಾಬ್ ಪಿ.ಯು. ಕಾಲೇಜಿನ ನಿವೃತ್ತ ಉಪನ್ಯಾಸಕಿ. ಇವರು ರಚಿಸಿದ ಕಥಾಸಂಕಲನಗಳು : 1. ಚಿತ್ತ ಚಿತ್ತಾರ, 2. ಗಂಧವತೀ ಪೃಥ್ವಿ, 3. ಜೀವನ ಸಂಧ್ಯಾ ರಾಗ, 4. ಪ್ರೇಮ ಸಾಫಲ್ಯ ಹಾಗೂ ಇತರ ಕಥೆಗಳು, 5. ಮಾನಿನಿಯ ಮನದಳಲು, 6. ಕಾರ್ಪೊರೇಟ್ ಜಗತ್ತಿನ ನೋವು ನಲಿವುಗಳು, 7. ಸಂಸಾರದಲ್ಲಿ ಸರಿಗಮ, 8. ಹಾಸ್ಯ ರಂಗೋಲಿ (ಹಾಸ್ಯ ಲೇಖನ ಸಂಗ್ರಹ), 9. ನಿತ್ಯ ಜೀವನದಲ್ಲಿ ಭಗವದ್ಗೀತೆ, 10 ಇದುವೆ ಜೀವನ (ಪ್ರಬಂಧಗಳು), 11. ಸವಿ ಸವಿ ನೆನಪೂ ಸವಿನೆನಪೂ (ನೆನಪಿನ ಬುತ್ತಿ), 12. ಜಗವೇ ನಾಟಕ ರಂಗಾ (ಕಿರು ನಾಟಕಗಳು), 13. ಅವಲೋಕನ, 14. ಭಾವಯಾನ (ಕವನ ಸಂಕಲನ) ಅಲ್ಲದೆ, 15. ಮೇನಕಾ- ಇಂದ್ರಾಯಣಿ ಸಾವಕಾರ, 16. ಸಾಮ್ರಾಟ ಅಶೋಕ- ಮಂಜೂಷಾ ಮುಳೆ, 17. ಏಕ್ ಥಾ ಸಿಕಂದರ್-ಇಂದ್ರಾಯಣಿ ಸಾವಕಾರ, 18. ಜೆ. ಕೃಷ್ಣಮೂರ್ತಿ – ಮಂಜೂಷಾ ಅಮಡೇಕರ, 19. ಶ್ಯಾಮನ ಅವ್ವ – ಸಾನೆ ಗುರೂಜಿ, 20.ಫಾಶಿಗೆ ಸಾಕ್ಷಿ- ಜ್ಯೋತಿ ಪೂಜಾರಿ (ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅನುವಾದ ಪ್ರಶಸ್ತಿ 2023), 21. ಮರಾಠಿಯ ಆಯ್ದ ಹತ್ತು ಕಥೆಗಳು, 22. ಮತ್ತೆ ಮತ್ತೆ ಹೊಸತು ಜನ್ಮ ವಿಜಯಾ ಬ್ರಾಹ್ಮಣಕರ, 23. ಆದಿಗುರು ಶ್ರೀ ಶಂಕರಾಚಾರ್ಯರು -ಶುಭಾಂಗಿ ಭಡಭಡೆ, 24. ರಾಮರಾಜ್ಯ- ಡಾ. ಶರಣಕುಮಾರ ಲಿಂಬಾಳೆ, 25. ಓ – ಡಾ. ಶರಣಕುಮಾರ ಲಿಂಬಾಳೆ, 26. ವಂದೇಮಾತರಂ – ಡಾ. ಶರಣಕುಮಾರ ಲಿಂಬಾಳೆ, 27. ಮೃಗತೃಷ್ಣಾ (ಸ್ವತಂತ್ರ ಕಾದಂಬರಿ) ಹಿಂದಿಯಿಂದ ಅನುವಾದ, 28. ಸಾವರಕರರ ಆತ್ಮಕಥೆ ಭಾಗ 2 (ಅಚ್ಚಿನಲ್ಲಿ), 29. ಅಪೂರ್ವಾ (ಕೆಲಸ ನಡೆದಿದೆ) ಅಲ್ಲದೆ ತರಂಗ, ಮಯೂರ, ಸುಧಾ, ಕರ್ಮವೀರ, ಪ್ರಿಯಾಂಕಾ ಮುಂತಾದ ಅನೇಕ ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ, ಕಥೆ, ಹಾಸ್ಯ ಲೇಖನಗಳು ಪ್ರಕಟಗೊಂಡಿವೆ. ಮರಾಠಿಯಿಂದ ಅನೇಕ ಕಥೆಗಳನ್ನು ಕೂಡ ಅನುವಾದ ಕೂಡ ಮಾಡಿದ್ದು ಅನೇಕ ರಾಜ್ಯ ಮಟ್ಟದ ಬಹುಮಾನಗಳಿಗೆ ಪಾತ್ರವಾಗಿವೆ. ಕರ್ನಾಟಕ ರಾಜ್ಯ ಮಟ್ಟದ ನಗೆಮುಗುಳು ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ. ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ ‘ಸಾಹಿತ್ಯಶ್ರೀ’ ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ಲೇಖಿಕಾಶ್ರೀ 2020 ಸಾಹಿತ್ಯ ಪ್ರಶಸ್ತಿಯು ಇವರ ಜೀವನಸಂಧ್ಯಾರಾಗ ಕಥಾಸಂಕಲನಕ್ಕೆ ಹಾಗೂ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಹಾಸ್ಯ ರಂಗೋಲಿಗೆ ಬೆಂಗಳೂರು ಕರ್ನಾಟಕ ರಾಜ್ಯ ಲೇಖಕಿಯರ ಸಂಘದಿಂದ ‘ನುಗ್ಗೆಹಳ್ಳಿ ಪಂಕಜಾ ಹಾಸ್ಯ ಲೇಖನ ಪ್ರಶಸ್ತಿ, ಮರಾಠಿಯಿಂದ ಅನುವಾದಿತ ಕಾದಂಬರಿ ಫಾಶಿಗೆ ಸಾಕ್ಷಿಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಲೇಖಕಿಯರ ಸಂಘ, 2022ರ ಅನುವಾದ ಸಾಹಿತ್ಯ ಪ್ರಶಸ್ತಿ,’ಇದುವೆ ಜೀವನ’ ಕೃತಿಗೆ ಬೆಳಗಾವಿಯ ಹೊಂಬೆಳಕು ಸಾಹಿತ್ಯ ವೇದಿಕೆಯ ರಾಷ್ಟ್ರಕೂಟ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಮಹಿಳಾ ಸಾಹಿತ್ಯ-2024ರ ಚೆನ್ನಮ್ಮ ಪ್ರಶಸ್ತಿ, ಬೇಂದ್ರೆ ನುಡಿಸಿರಿ ಜೀವಮಾನ ಪ್ರಶಸ್ತಿ ಕೂಡ 2024ರಲ್ಲಿ ಹಾಗೂ 2025ರ ಉಮಾಶಂಕರ ಪ್ರತಿಷ್ಠಾನದ ಸ್ವರ್ಣಸಿರಿ ಪ್ರಶಸ್ತಿ ದೊರೆತಿದೆ.

ಲೇಖಕಿ ಶ್ರೀಮತಿ ಸರಸ್ವತಿ ಭೋಸಲೆ ಇವರು ಈವರೆಗೆ ರಚಿತ ಪುಸ್ತಕಗಳ ವಿವರ: ಮೂರು ಪ್ರವಾಸ ಕಥನಗಳು, ಮೂರು ಕಥಾ ಸಂಕಲನಗಳು, ಎರಡು ಮಕ್ಕಳ ಕಥಾ ಸಂಕಲನ, ಎರಡು ಲೇಖನಗಳ ಸಂಗ್ರಹ ಪುಸ್ತಕಗಳು, ಒಂದು ಕವನ ಸಂಕಲನ, ಒಂದು ಕಾದಂಬರಿ, ಒಂದು ವ್ಯಕ್ತಿಚಿತ್ರಗಳು, ಒಂದು ಮಕ್ಕಳ ನಾಟಕ, ಮೂರು ಲಲಿತ ಪ್ರಬಂಧಗಳ ಸಂಕಲನ ಹೀಗೆ ಒಟ್ಟು 8 ಸಾಹಿತ್ಯ ಪ್ರಕಾರಗಳಲ್ಲಿ 12 ಪುಸ್ತಕಗಳು ರಚಿತವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಸಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಆಜೂರು ಪ್ರತಿಷ್ಠಾನದ ಪ್ರಶಸ್ತಿ, ಡಾ. ಪುಟ್ಟರಾಜ ಸೇವಾ ಸಮಿತಿ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಉಮಾಶಂಕರ ಪ್ರತಿಷ್ಠಾನದ ಪ್ರಸಸ್ತಿ ಇನ್ನಿತರ ಹಲವು ಬಹುಮಾನಗಳು ಲಭಿಸಿವೆ.
