ಮೈಸೂರು : ಮೈಸೂರು ರಂಗಾಯಣದ ಆವರಣದಲ್ಲಿರುವ ವನರಂಗದಲ್ಲಿ ನಿರಂತರ ಫೌಂಡೇಶನ್ ಮತ್ತು ಅಭಿರುಚಿ ಪ್ರಕಾಶನ ಸಹಯೋಗದೊಂದಿಗೆ ದಿನಾಂಕ 28 ಮಾರ್ಚ್ 2026ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಟಕಕಾರ ಮಹೇಶ್ ಎಲಕುಂಚವಾರ್ ಮರಾಠಿಯ ರಚಿಸಿ ಹಿರಿಯ ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿರುವ ‘ಪಾರ್ಟಿ’ ನಾಟಕ ಕೃತಿ ಬಿಡುಗಡೆಗೊಂಡಿತು.

ಕೃತಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಇವರು ಮಾತನಾಡಿ “ನಗರ ಪ್ರದೇಶಗಳಲ್ಲಿ ಬದಲಾದ ಜೀವನ ಶೈಲಿಯಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಪಟ್ಟಣದಲ್ಲಿ ನೆಲೆಸಿರುವ ಈಗಿನ ಯುವಕರು ಮನೆಯಲ್ಲೇ ಐರನ್ ಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಜೊತೆಗೆ ಚಪ್ಪಲಿ ಧರಿಸುತ್ತಾರೆ. ಹಳ್ಳಿಯಿಂದ ನಗರಕ್ಕೆ ಬಂದ ತಂದೆ-ತಾಯಿಯರೇ ದೃಶ್ಯವನ್ನು ನೋಡಿ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಹೇಶ್ ಎಲಕುಂಚವಾರ್ ತಮ್ಮ ನಾಟಕಗಳಲ್ಲಿ ಅನಗತ್ಯ ಪದಗಳನ್ನು ಸೇರಿಸಲು ಇಷ್ಟಪಡುತ್ತಿರಲಿಲ್ಲ. ಆ ಸಂಭಾಷಣೆಗೆ ಎಷ್ಟು ಪದಗಳು ಅವಶ್ಯವೂ ಅಷ್ಟನ್ನು ಮಾತ್ರ ಸೇರಿಸುತ್ತಿದ್ದರು ಮನುಷ್ಯನ ನಿತ್ಯ ಜೀವನದಲ್ಲಿ ನಾಟಕವೂ ಬಂದಾಗಿದೆ. ಇದೀಗ ಅಕ್ಷರ ರೂಪದಲ್ಲಿ ಬಂದಿರುವ ನಾಟಕ ಸಮಾಜದ ಪ್ರತಿಬಿಂಬ ಆಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಸಮುದಾಯ ಜಾತ್ರೆ, ಒಕ್ಕಣೆ ಸಮಯದಲ್ಲಿ ನಾನಾ ವೇಷ ಧರಿಸಿ, ಬೀದಿ ಬೀದಿಗಳಲ್ಲಿ ನೃತ್ಯ ಮಾಡುತ್ತಾರೆ. ಅವರು ಸಭ್ಯ ಸಮಾಜದ ಮೇಲಿರುವ ಕೋಪವನ್ನು ನಾಟಕದ ಪಾತ್ರಗಳ ಅಭಿನಯಿಸಿ ತಮ್ಮ ಆಕ್ರೋಶಗಳನ್ನು ಹೊರ ಹಾಕುತ್ತಾರೆ. ಏಕೆಂದರೆ, ಸಭ್ಯ ಸಮಾಜ ಅವರನ್ನು ಸಮಾಜದ ಮುಖವಾಹಿನಿಯಿಂದ ದೂರವಿಟ್ಟಿರುವ ಕೋಪದಿಂದ ಈ ರೀತಿ ಮಾಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದಿರುವ ತಳ ಸಮುದಾಯ ಯುವಕರು, ಸಭ್ಯ ಸಮಾಜದ ನಗರ ಪ್ರದೇಶದಲ್ಲಿ ಬದುಕುತ್ತಿರುವ ಜೀವನ ಶೈಲಿಯನ್ನು ನೋಡಿ, ತಮ್ಮನ್ನು ಶಿಕ್ಷಣದಿಂದ ವಂಚಿಸಿ ಇವರು ಮಾತ್ರ ಸುಖ ಜೀವನ ನಡೆಸುತ್ತಿದ್ದಾರೆ ಎಂದು ಮನಸ್ಸಿನಲ್ಲೇ ಶಪಿಸುತ್ತಾ, ವ್ಯವಸ್ಥೆ ವಿರುದ್ಧ ಸೆಟೆದು ನಿಲ್ಲಲು ಪ್ರಯತ್ನಿಸುತ್ತಾರೆ. ಇಂತಹ ಪ್ರಸಂಗಗಳನ್ನು ‘ಪಾರ್ಟಿ’ ನಾಟಕದಲ್ಲಿ ಬೆಳಕು ಚೆಲ್ಲಿದೆ” ಎಂದು ಹೇಳಿದರು.


ಹಿರಿಯ ವಿಮರ್ಶಕರಾದ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಮಾತನಾಡಿ “ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಸಭ್ಯ ಸಮಾಜ ಒಂಟಿತನದಿಂದ ಬಳಲುತ್ತಿದೆ. ಸಭ್ಯ ಸಮಾಜದ ಹಾವಭಾವಗಳನ್ನು ಗಮನಿಸುವ ತಳ ಸಮುದಾಯ ನಮ್ಮ ಈ ವ್ಯವಸ್ಥೆಯಿಂದ ದೂರವಿಟ್ಟ ಸಮುದಾಯವನ್ನು ಸದಾ ಶಪಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ನಾಟಕಕಾರ ಮಹೇಶ್ ಎಲಕುಂಚವಾರ್ ರಚಿತ ನಾಟಕವನ್ನು ಯಥಾವತ್ ಕನ್ನಡಕ್ಕೆ ಅನುವಾದಿಸಿರುವ ಪ್ರಸಾದ್ ಕುಂದೂರು, ಕನ್ನಡದ ನೆಲಕ್ಕೆ ಹೊಂದುವಂತೆ ಅನುವಾದಿಸಿರುವುದು ಈ ನಾಟಕದ ವಿಶೇಷವಾಗಿದೆ.” ಎಂದು ಹೇಳಿದರು.

ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ, ನಾಟಕಕಾರ ಡಿ.ಎಸ್. ಚೌಗಲೆ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಅಭಿರುಚಿ ಗಣೇಶ್, ಅನುವಾದಕ ಪ್ರಸಾದ್ ಕುಂದೂರು ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವನ್ಯಜೀವಿ ಛಾಯಾಗ್ರಹಾಕರಾದ ಕೃಪಾಕರ- ಸೇನಾನಿ, ಶ್ರೀ ತುಕಾರಾಮ್ ರವರು, ನಿರಂತರ ನಿರ್ದೇಶಕರಾದ ಶ್ರೀಯುತ ಹರಿಪ್ರಸಾದ್, ಶ್ರೀನಿವಾಸ್ ಪಾಲಹಳ್ಳಿ, ಸುಗುಣ ಎಂ.ಎಂ., ಗಾಂಧಿವಾದಿಗಳಾದ ಶ್ರೀರಂಗಪಟ್ಟಣದ ಸುಜಯ್ ಕುಮಾರ್, ಕಲಾವಿದರಾದ ಸಚ್ಚು, ರಾಜಪ್ಪ ದಳವಾಯಿ, ಪ್ರೊಫೆಸರ್ ಶಿವಸ್ವಾಮಿ, ಪ್ರಕಾಶ್ ರಾವಂದೂರ್, ಮೇರಿನ ಪ್ರಸಾದ್, ನಿವೃತ್ತ ಐ.ಎ.ಎಸ್. ಅಧಿಕಾರಿಯದ ಕೆ.ಎಸ್. ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಸ್. ಸುದರ್ಶನ್, ಸ್ನೇಹ ರಾಮದಾಸ್, ಡಾ. ಮಿತಾ ದೇವನೂರು, ಪತ್ರಕರ್ತ ಓಂಕಾರ್ ನೂರಾರು ಜನ ಸಾಹಿತ್ಯ ಆಸಕ್ತರು ಭಾಗವಹಿಸಿದ್ದರು.

