ಬಂಟ್ವಾಳ : ಡಾ. ಗೀತಾ ಎನ್. ಇವರ ಕವನಸಂಕಲನ ‘ಪಟ್ಪದಿ ಮಂಜರಿ’ ಕೃತಿಯ ಅನಾವರಣ ನರಿಕೊಂಬು ಗ್ರಾಮದ ಪ್ರಸಾದ ನಿಲಯದ ಸೀತಮ್ಮ ನಾರಾಯಣ ರಾವ್ ವೇದಿಕೆಯಲ್ಲಿ ದಿನಾಂಕ 22 ಏಪ್ರಿಲ್ 2026ರಂದು ಜರುಗಿತು. ಕೃತಿ ಅನಾವರಣಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ “ಕಾವ್ಯದ ಲಕ್ಷಣಗಳನ್ನು ಮೈಗೂಡಿಸಿಗೊಂಡ ಈ ಪಟ್ಪದಿ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗುವಷ್ಟು ಮೌಲ್ಯ ಉಳ್ಳದ್ದಾಗಿದೆ” ಎಂದು ಶ್ಲಾಘಿಸಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಅತಿಥಿಯಾಗಿದ್ದರು. ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಅಧ್ಯಕ್ಷ ಕೋರ್ಯ ರಮೇಶ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ನಾಗವೇಣಿ ಮಂಚಿ ಕೃತಿ ಪರಿಚಯಿಸಿದರು. ಲೇಖಕಿ ಗೀತಾ ಎನ್. ಮಾತನಾಡಿ ವಿವಿಧ ವಾಟ್ಸಪ್ ಗುಂಪುಗಳ ಪ್ರೇರಣೆ, ವೀರೇಂದ್ರ ಶೆಣೈ ಹಾಗೂ ಗೆಳೆಯರ ಬೆಂಬಲ, ಮೂಡುಬಿದಿರೆ ಎಸ್.ಎನ್. ಪಾಲಿಟೆಕ್ನಿಕ್ ಕಾಲೇಜಿನ ಶ್ರೀ ವಿಶ್ವನಾಥರ ಮಾರ್ಗದರ್ಶನ, ಮನೆ ಮಂದಿಯ ಪ್ರೋತ್ಸಾಹ ಜೊತೆಗೆ ಆಯುಷ್ಯ ಭಾಗ್ಯ ದೊರೆತು ತಾಯಿ ಭುವನೇಶ್ವರಿಯ ಖಂಡ ಕಾವ್ಯದ ಸೇವಾ ಭಾಗ್ಯ ತನಗೆ ದೊರೆಯಲೆಂದು ಆಶಿಸಿದರು.
ಪುತ್ತೂರಿನ ಪಾರ್ವತಿ ಶಾಸ್ತ್ರಿ ಅವರು ಕುಸುಮ ಪಟ್ಪದಿಯಲ್ಲಿ ಗೀತಾರ ಬಗ್ಗೆ ಕವನವನ್ನು ವಾಚಿಸಿದರೆ, ಯಕ್ಷಗುರು ಮುಡಿಪು ಜಯಂತ ಕಾರಂತರು ಕೃತಿಯೊಳಗಿನ ಪಟ್ಪದಿಗಳನ್ನು ಭಾಗವತಿಕೆಗೆ ರೂಪದಲ್ಲಿ ಪ್ರಸ್ತುತ ಪಡಿಸಿದರು. ಕುಮಾರಿಯರಾದ ಮಾನಸ, ಚಿನ್ಮಯಿ, ತನ್ಮಯಿ ಇವರುಗಳ ಸಹಯೋಗದಲ್ಲಿ ಪ್ರಾರ್ಥನಾ ನೃತ್ಯ ನಡೆದು, ಪ್ರೊ. ಮಾಧವ ರಾವ್ ಕಾರ್ಯಕ್ರಮ ನಿರೂಪಿಸಿ, ಕ್ಷಮಾ ಎನ್. ಸ್ವಾಗತಿಸಿ, ವಿಶ್ವಾಸ ರಾವ್ ವಂದಿಸಿದರು. ನರಿಕೊಂಬು ನಾರಿಕುಂಭೇಶ್ವರ ಯಕ್ಷಗಾನ ಸಂಘದಿಂದ ‘ನಚಿಕೇತ’ ಪ್ರಸಂಗದ ತಾಳಮದ್ದಳೆ ಅರ್ಥಪೂರ್ಣವಾಗಿ ಮೂಡಿ ಬಂದು ಜನಮನ ಗೆದ್ದಿತು.
