ಸಿರಿಮೂರ್ತಿ ಕಾಸರವಳ್ಳಿ ಅನ್ನುವುದು ಕೆ. ಶ್ರೀಲಕ್ಷ್ಮಿ ಅನ್ನುವವರ ಕಾವ್ಯನಾಮ. ಎಪ್ಪತ್ತರ ಇಳಿವಯಸ್ಸಿನಲ್ಲಿ ಸಾಹಿತ್ಯ ರಚನೆಯ ಸಾಹಸಕ್ಕಿಳಿದ ಸಿರಿಮೂರ್ತಿಯವರ ಮೂರನೆಯ ಕಾದಂಬರಿ ‘ಭಾವ ನೆಲೆ’. ಹೆಸರೇ ಹೇಳುವಂತೆ ಇದು ಭಾವನೆಗಳ ತಾಕಲಾಟಗಳ ಮಧ್ಯೆ ಸೆಣಸಾಡಿ ಕೊನೆಗೆ ಸಂತೃಪ್ತಿಯಲ್ಲಿ ನೆಲೆ ಕಂಡುಕೊಳ್ಳುವ ಒಂದು ಕಥೆಗೆ ಸಂಬಂಧ ಪಟ್ಟ ಸಂಕಥನ. ಜೀವನದಲ್ಲಿ ನಮಗೆ ದೊರೆಯುವ ಸಂತೋಷ-ನೆಮ್ಮದಿಗಳಾಗಲಿ, ನಾವು ಪಡೆಯುವ ಯಶಸ್ಸಾಗಲಿ, ನಾವು ಇಟ್ಟುಕೊಳ್ಳುವ ಸಂಬಂಧಗಳಾಗಲಿ ಜಾತಿ, ಮತ, ಜನಾಂಗ, ದೇಶ, ಭಾಷೆಗಳನ್ನು ಮೀರಿದ ಮಾನವೀಯ ನೆಲೆಯದ್ದಾಗಿರುತ್ತದೆ ಎಂಬ ಒಂದು ಆದರ್ಶ ಜಗತ್ತನ್ನು ಕಾದಂಬರಿ ಸೊಗಸಾಗಿ ಚಿತ್ರಿಸುತ್ತದೆ.
ಕಥೆಯು ಮೂರು ತಲೆಮಾರುಗಳ ಪಾತ್ರಗಳನ್ನು ಹೊಂದಿದೆ. ಮೂರನೆಯ ತಲೆಮಾರಿನ ಅಶ್ವಿನ್ ಅಮೇರಿಕಾಕ್ಕೆ ಹೋಗಿದ್ದು, ಅವನ ಗೆಳೆಯರು ಅವನ ಹೆಸರನ್ನು ಕತ್ತರಿಸಿ ಅಶ್ ಎಂದು ಮಾಡಿದ್ದಾರೆ. ಅವನಿಗೆ ಅಮ್ಮ-ಅಪ್ಪರ ಬಗ್ಗೆ ಏನೇನೂ ಪ್ರೀತಿಯಿಲ್ಲದೆ ಅಜ್ಜ-ಅಜ್ಜಿಯರನ್ನೇ ಪೂರ್ತಿಯಾಗಿ ಹಚ್ಚಿಕೊಂಡಿದ್ದಾನೆಂದು ಹೇಳುವುದರ ಮೂಲಕ ಲೇಖಕಿ ಕುತೂಹಲ ಹುಟ್ಟಿಸುತ್ತಾರೆ. ಮುಂದೆ ಅಶ್ ನ ತಂದೆ ಭರತ್ ಮತ್ತು ತಾಯಿ ಶಾಂತಳಾರ ಕಥೆಯಿದೆ. ಭರತ್ ತನ್ನ ತಂದೆ ನಂದಕುಮಾರನ ಶಿಸ್ತು ಬದ್ದ ಬದುಕು ಮತ್ತು ಅಪ್ಪಟ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳು ಕಟ್ಟಿಕೊಟ್ಟ ಜೀವನ ಶೈಲಿಯನ್ನು ಇಷ್ಟ ಪಡುವುದಿಲ್ಲ. ಅಲ್ಲದೆ ಅವರು ತಮ್ಮ ಧೋರಣೆಗಳನ್ನು ಮಗನ ಮೇಲೆ ಹೇರುತ್ತಿದ್ದ ರೀತಿಯನ್ನೂ ಇಷ್ಟಪಡುವುದಿಲ್ಲ. ಇದರಿಂದ ಅವನು ತಂದೆಯನ್ನು ದ್ವೇಷಿಸುತ್ತ ಹೋಗುತ್ತಾನೆ. ತಾಯಿ ಶ್ರೀಗೌರಿಯು ಗಂಡನಿಗೆ ಏನೂ ಎದುರು ಹೇಳದೆ ಸದಾ ಅವರಿಗೆ ವಿಧೇಯಳಾಗಿ ನಡೆದುಕೊಳ್ಳುವುದೂ ಅವನಿಗೆ ಇಷ್ಟವಾಗುವುದಿಲ್ಲ. ತಂದೆಯದ್ದು ತಾನು ಹೇಳಿದಂತೆಯೇ ಮನೆಯವರೆಲ್ಲರೂ ಕೇಳಬೇಕೆಂಬ ಸರ್ವಾಧಿಕಾರಿ ಮನೋಭಾವವೆಂದು ಅವನು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ತಂದೆಯನ್ನು ವಿರೋಧಿಸಿಯೇ ತೀರಬೇಕೆಂಬ ಉದ್ದೇಶದಿಂದ ಶಾಂತಳಾ ಎಂಬ ಶ್ರಿಮಂತ ಕುಟುಂಬದ ಹಠಮಾರಿ ಹೆಣ್ಣನ್ನು ಅವಳ ಸ್ವಾತಂತ್ರ್ಯಕ್ಕೆ ತಾನೆಂದೂ ಅಡ್ಡ ಬರುವುದಿಲ್ಲವೆಂದು ಹೇಳುತ್ತ ಅವಳ ಸ್ವೇಚ್ಛಾಪ್ರವೃತ್ತಿಯು ಇಷ್ಟವಾಗದಿದ್ದರೂ ಮದುವೆಯಾಗುತ್ತಾನೆ. ಅನಂತರ ಅನೇಕ ವಿಚಾರಗಳಲ್ಲಿ ತುಂಬಾ ಸಂಕಟ ಅನುಭವಿಸುತ್ತಾನೆ. ತಾನು ಮಕ್ಕಳನ್ನು ಹೆರುವುದು ಸಾಧ್ಯವೇ ಇಲ್ಲವೆಂದು ಅವಳು ಹಠ ಹಿಡಿದಾಗ ಬಾಡಿಗೆ ತಾಯಿಯ ಮೂಲಕ ಒಂದು ಗಂಡು ಮಗುವಾಗುತ್ತದೆ. ಆ ಮಗುವನ್ನು ಅಜ್ಜ, ಅಜ್ಜಿ ತುಂಬಾ ಅಕರಾಸ್ಥೆಯಿಂದ ಬೆಳೆಸುತ್ತಾರೆ. ಮುಂದೆ ಅಶ್ವಿನ್ ಅಮೆರಿಕಾಕ್ಕೆ ಹೋಗಿ ಮೆರೀನಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಇಬ್ಬರೂ ಊರಿಗೆ ಬಂದು ನೆಲೆಸುತ್ತಾರೆ. ಮೆರೀನಾ ಅಶ್ ನ ಬೆಂಬಲದೊಂದಿಗೆ ಕ್ರೈಸ್ತಳಾಗಿ ಉಳಿದುಕೊಂಡೇ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಹೆಣ್ಣಾಗಿ ಎಲ್ಲರಿಗೂ ಸಂತೋಷ ಕೊಡುವಲ್ಲಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ಪೂರ್ವ-ಪಶ್ಚಿಮ ಸಂಸ್ಕೃತಿಗಳ ಸಂಗಮದ ಒಂದು ಆದರ್ಶ ಚಿತ್ರಣ ಕಾದಂಬರಿಯಲ್ಲಿದೆ. ಎಲ್ಲಾ ಧರ್ಮ-ಸಂಸ್ಕೃತಿಗಳನ್ನು ಉದಾರವಾಗಿ ಕಂಡು ಗೌರವಿಸುವ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನೂ ಎತ್ತಿ ಹಿಡಿಯಲಾಗಿದೆ. ಭಾರತೀಯ ಸಂಸ್ಕೃತಿಯ ಉದಾತ್ತ ಗುಣಗಳನ್ನು ಅರ್ಥ ಮಾಡಿಕೊಳ್ಳದೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳ ಹೊರಟ ಭರತ್ ಮತ್ತು ಶಾಂತಳಾ ತಮ್ಮಿಂದಾದ ತಪ್ಪುಗಳನ್ನು ತಿದ್ದಿಕೊಳ್ಳುವಲ್ಲೂ ಭಾರತೀಯ ಸಂಸ್ಕೃತಿಯ ಮೇಲ್ಮೆ ಎದ್ದು ಕಾಣುತ್ತದೆ.
ಕಥಾವಸ್ತುವಿನ ಪ್ರಸ್ತುತತೆ, ಕಥನ ಶೈಲಿ, ಪಾತ್ರ ಚಿತ್ರಣ, ಸಾಂಸ್ಕೃತಿಕ ವಿವರಗಳು ಮತ್ತು ರಚನಾ ಬಂಧಗಳ ದೃಷ್ಟಿಯಿಂದ ಕಾದಂಬರಿ ಅಚ್ಚುಕಟ್ಟಾಗಿದೆ. ಭಾಷಾ ಪ್ರಯೋಗದ ಬಗ್ಗೆ ಕೆಲವೆಡೆ ಇನ್ನಷ್ಟು ಎಚ್ಚರ ವಹಿಸಬಹುದಿತ್ತು. ಆದರೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತಾ ಹೋಗುವ ಕಾದಂಬರಿಯು ಓದಿನ ಖುಷಿಯನ್ನು ಕೊಡುತ್ತದೆ ಅನ್ನುವುದರಲ್ಲಿ ಸಂದೇಹವಿಲ್ಲ.
ಕೃತಿಯ ಹೆಸರು : ಭಾವನೆಲೆ (ಕಾದಂಬರಿ)
ಲೇಖಕಿ : ಸಿರಿಮೂರ್ತಿ ಕಾಸರವಳ್ಳಿ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಶನ್ಸ್ ಬೆಂಗಳೂರು
ಪುಟಗಳು : 192
ಬೆಲೆ : ರೂ.150/-

– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ
