ಇತ್ತೀಚೆಗೆ ಕನ್ನಡದಲ್ಲಿ ಬರೆಯುತ್ತಿರುವ ಭರವಸೆಯ ಕವಿಗಳಲ್ಲೊಬ್ಬರಾದ ರೇವಣ ಸಿದ್ಧಪ್ಪ ಜಿ.ಆರ್. ಬದುಕಿನ ಬಗ್ಗೆ ಗಾಢವಾಗಿ ಚಿಂತಿಸುವ ಕವಿ. ಬದುಕಿನ ಅರ್ಥವೇನು? ಜೀವನದ ಸಾರ್ಥಕ್ಯವೇನು? ಎಂಬ ಪ್ರಶ್ನೆಗಳಿಗೆ ಕವಿತೆಗಳ ಮೂಲಕ ಉತ್ತರವನ್ನು ಹುಡುಕುವ ಪ್ರಯತ್ನದ ಅಂಗವಾಗಿ ಅವರ ಎರಡನೇ ಸಂಕಲನ ‘ಭವದಕಣ್ಣು’ ರೂಪು ತಾಳಿದೆ.
ಮೊದಲ ಕವಿತೆಯಾದ ‘ಹಾಗೆ ಸುಮ್ಮನೆ’ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ಯಾವ ರೀತಿಯಲ್ಲಿ ನೋಡಬೇಕೆಂಬುದನ್ನು ಸರಳ ಪದಗಳಲ್ಲಿ ಕಟ್ಟಿಕೊಡುತ್ತದೆ. ಬಣ್ಣ, ಜಾತಿ, ಧರ್ಮ, ಭಾಷೆ, ದೇಶ ಇವುಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ಮನುಷ್ಯರ ನಡುವೆ ಪ್ರೀತಿ ಇರಬೇಕು. ‘ನೀನು ನನ್ನಂತೆ ಅಥವಾ ನಾನು ನಿನ್ನಂತೆ’ ಎಂಬ ಭಾವ ಜಾಗೃತವಾದಾಗ ದ್ವೇಷ ಕಡಿಮೆಯಾಗುತ್ತದೆ ಎಂಬ ಭಾವ ಇಲ್ಲಿದೆ.
ನೋವಿನಲ್ಲೂ ನಲಿವಿನಲ್ಲೂ
ಕಣ್ಣಾಲಿಗಳಲ್ಲಿ ನೀರೇಜಿನುಗುತ್ತದೆ
ನರನಾಡಿಗಳಲ್ಲಿ ರಕ್ತವೇ ಹರಿಯುತ್ತದೆ
ಯಾವುದೋ ಒಂದು ಮಾತು ಅವನನ್ನೂ ಆಡಿಸುತ್ತದೆ.
‘ಶೋಧ’ ಮನುಷ್ಯನ ಮನದಾಳದಲ್ಲಿ ಅಡಗಿರುವ ಕ್ರೌರ್ಯ ಮತ್ತು ಅದರಿಂದ ಉಂಟಾಗುವ ಭಯವನ್ನು ಕುರಿತ ಕವಿತೆ. ‘ಥತ್ತೇರಿಕೆ’ ಮನುಷ್ಯನ ದುರಾಸೆ, ಸ್ವಾರ್ಥ, ಮೋಸಗಾರಿಕೆಗಳನ್ನು ಟೀಕಿಸುತ್ತಾ, ತಾನು, ತನ್ನದು, ತನ್ನಿಂದ ಎಂದು ಬೀಗುವ ಮನುಷ್ಯನ ದುರಹಂಕಾರದ ಕ್ಷಣಿಕತೆಯನ್ನು ವ್ಯಂಗ್ಯವಾಡುತ್ತದೆ. ‘ಗೊಮ್ಮಟನ ಧ್ಯಾನ’ದಲ್ಲಿ ಬದುಕು ಮತ್ತು ಅಧ್ಯಾತ್ಮದ ಚಿಂತನೆಯಿದ್ದು ನಶ್ವರ ಬದುಕಿನ ಬಗೆಗಿನ ಮೋಹ, ಅದರಿಂದ ಉಂಟಾಗುವ ಭ್ರಮನಿರಸನವನ್ನು ಕಾಣುತ್ತೇವೆ.
‘ಅಕ್ಷರಗಳ ಲೋಕದಲ್ಲಿ’ ಕವಿತೆಯು ಸಾಹಿತ್ಯ ಹುಟ್ಟುವ ಪರಿ, ಅದು ಉಂಟು ಮಾಡುವ ರೋಮಾಂಚನ, ಕೊಡುವ ಸಂತಸ ಮತ್ತು ಆ ಅಹಂಕಾರದಿಂದ ಉಂಟಾದ ಭ್ರಮೆಯನ್ನು ವಾಸ್ತವ ದೃಷ್ಟಿಯಿಂದ ನೋಡುತ್ತಾ ಪ್ರಸ್ತುತ ಕಾವ್ಯಲೋಕದ ಪರಿಸ್ಥಿತಿಗೆ ಕನ್ನಡಿಯನ್ನು ಹಿಡಿಯುತ್ತದೆ.
ಕಟ್ಟಿದರೆ ಪದ
ಹೆಣೆದರೆ ಕತೆ
ಹೊಸೆದರೆ ಕಾದಂಬರಿ ಆಡಲಿಕ್ಕೊಂದು ನಾಟಕ
ಎಷ್ಟೊಂದು ಚಪ್ಪರ ತಣಿಯಲಿಕ್ಕೆ
ಇರುಳಳಿದು ಬೆಳಗಾಗುವಷ್ಟರಲ್ಲಿ
ಕಿರೀಟಾಲಂಕೃತ ಮೆರವಣಿಗೆ
ವಂಧಿಮಾಗಧರ ಉಘೇಉಘೇಯಲ್ಲಿ ಮೈಮರೆವು
‘ಕಾಯುವುದಿಲ್ಲ ಯಾರನ್ನೂ’ ಏಕಾಂಗಿಯೊಬ್ಬನ ಬೇಸರ ಮತ್ತು ನೋವನ್ನು ಕುರಿತ ಕವಿತೆ. ‘ಅನುಮಾನ’ ಮಾನವೀಯತೆಯನ್ನು ಕಳೆದುಕೊಂಡ ಮನುಷ್ಯನ ಕ್ರೌರ್ಯ, ಸ್ವಾರ್ಥ, ದುರಾಸೆ, ವಂಚನೆಯ ಕುರಿತು ವಿಷಾದವನ್ನು ವ್ಯಕ್ತಪಡಿಸುತ್ತದೆ. ‘ಗುತ್ತಿಗೆ’ ಜಾತಿಧರ್ಮಗಳ ಕಬಂಧ ಬಾಹುಗಳು ವಿಸ್ತಾರವಾಗಿ, ಆಳವಾಗಿ ಚಾಚಿಕೊಂಡ ಬಗೆಯನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ.
ಕೇಸರಿಯನ್ನು ಒಬ್ಬ
ಬಿಳಿಯನ್ನು ಇನ್ನೊಬ್ಬ
ಹಸಿರನ್ನು ಮತ್ತೊಬ್ಬ
ಗುತ್ತಿಗೆ ಪಡೆದಂತೆ
ಆಡುವುದ ನೋಡಿ
ಬಣ್ಣಗಳು ಬಿಕ್ಕಿಬಿಕ್ಕಿ ಅಳುತ್ತವೆ
‘ಬಿಸಿರಕ್ತದ ತರುಣ’ ಕವಿತೆ ಕ್ಷುಲಕ ಕಾರಣಗಳಿಗಾಗಿ ಬದುಕನ್ನು ನೀಗಿಕೊಳ್ಳುವ ಎಳೆಯ ಜೀವಗಳ ಕುರಿತು ಚಿಂತಿಸುತ್ತದೆ. ‘ಅವಸ್ಥೆ’, ‘ಆಕೃತಿ’ ಕವಿತೆಗಳು ಜಡ ಬದುಕಿಗೆ ಉದಾಹರಣೆಗಳಾಗಿವೆ. ‘ಬಣ್ಣ’ ಕವಿತೆ ಆಗಾಗ ಬದಲಾಗುವ ಬಣ್ಣಗಳಂತಿರುವ ಮನುಷ್ಯ ಸ್ವಭಾವವನ್ನು ಚಿತ್ರಿಸುತ್ತದೆ. ‘ಆಖ್ಯಾನ’ ಕವಿತೆ ಬುದ್ಧಿಜೀವಿಗಳ ಅತಿರೇಕದ ಚಿಂತನೆಯನ್ನು ಲಘುವಾಗಿ ಲೇವಡಿ ಮಾಡುತ್ತದೆ. ಗಂಡು ಹೆಣ್ಣಿನ ಸಹಜ ಲೈಂಗಿಕ ಕ್ರಿಯೆಯನ್ನು ಶೃಂಗಾರದ ದೃಷ್ಟಿಯಿಂದ, ಅಶ್ಲೀಲತೆಯ ಸೋಂಕಿಲ್ಲದೆ ಸಂಕೇತಿಸುವಲ್ಲಿ ‘ಮಿಲನ’ ಯಶಸ್ವಿಯಾಗಿದೆ.
ವೇಶ್ಯಾ ಸಮಸ್ಯೆಯನ್ನು ವಸ್ತುನಿಷ್ಠವಾಗಿ ನೋಡುವ ‘ಪಾಪಿ ಸಂತಾನ’ದಲ್ಲಿ ಕ್ರೂರ ಸಮಾಜವು ಸ್ತ್ರೀಯರನ್ನು ನಡೆಸಿಕೊಳ್ಳುವ ಬಗ್ಗೆ ನೋವು, ಅನುಕಂಪ ವ್ಯಕ್ತವಾಗಿದೆ. ‘ಗಾಂಧಿಗೆ’ ಕವಿತೆ ಗಾಂಧೀಜಿಯವರ ತತ್ವ ಚಿಂತನೆಗಳಿಗೆ ಒದಗಿರುವ ಸ್ಥಿತಿ, ಅರ್ಥವಾಗಿಯೂ ಅರ್ಥವಾಗದಂಥ ಮಹಾತ್ಮನನ್ನು ಕುರಿತ ಪ್ರಶ್ನೆಗಳ ಬಗ್ಗೆ ಚಿಂತಿಸುತ್ತದೆ.
ಶತಮಾನ ಕಳೆದು ಇಳಿದು
ಧರೆಗೆ ಬಂದರೆ
ಏನಾಗಿ ಬರುವೆ?
ಅದೇ ಮಹಾತ್ಮನೋ?
ಅಥವಾ ಇನ್ನೇನೋ?
ನೀನೂ ನಮ್ಮಂತೊಂದಾತ್ಮ
ಪ್ರಶ್ನೆಗಳಿವೆ ನಿನ್ನ ಕುರಿತೂ
ಉತ್ತರ ಕಂಡುಕೊಳ್ಳಬೇಕಿದೆ ನಾವೇ!
‘ಫೋಟೋದೊಳಗಿನ ಅವನು’ ಮನುಷ್ಯನ ಒಳಹೊರಗುಗಳ ಕುರಿತು ಜಿಜ್ಞಾಸೆಯನ್ನು ನಡೆಸುತ್ತದೆ. ಮನುಷ್ಯನೊಳಗಿನ ಭಾವನೆಗಳಾದ ನೋವು, ನಲಿವು, ಸುಖ, ದುಃಖ, ಪ್ರೇಮ, ದ್ವೇಷ, ಅಸೂಯೆ, ಸಣ್ಣತನಗಳಿಗೆ ಈ ಕವನ ಸಾಕ್ಷಿಯಾಗಿದ್ದಾನೆ. ಮನುಷ್ಯರ ಆತ್ಮದ ಪ್ರತೀಕವಾಗಿದ್ದಾನೆ.
ಅವನಂತೆ ನಾನೋ
ನನ್ನಂತೆ ಅವನೋ
ಹೇಳಲಾಗದ ಮಾಯಕಾರ
ಕಟ್ಟು ಕಳಚಿ ಗಾಜು ಒಡೆದು
ಒದ್ದೆಯಾಗಿ ಮುದ್ದೆಯಾಗಿ
ಹುಡಿಯಲ್ಲಿ ಹುಡಿಯಾದರೂ
ಫರಕಿಲ್ಲ ಏನೂ
ಏನಿದ್ದರೂ ಅದು
ಭವದ ಕಣ್ಣು
ಮಣ್ಣು ಸೇರುವ ತನಕ
ರೇವಣ ಸಿದ್ಧಪ್ಪನವರು ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿ ಬರೆಯುತ್ತಿರುವ ಉದಯೋನ್ಮಖ ಕವಿಗಳಲ್ಲೊಬ್ಬರು. ಮನುಷ್ಯ ಮತ್ತು ಮನುಷ್ಯತ್ವ ಅವರ ಕಾವ್ಯದ ಕೇಂದ್ರ ವಸ್ತು. ಮೆಲುದನಿಯಿಂದ ಕೂಡಿದ ಅವರ ಕವಿತೆಗಳಲ್ಲಿ ಕಾವ್ಯದ ಲಯಕ್ಕಿಂತ ಗದ್ಯದ ಅರ್ಥವಂತಿಕೆ ಹೆಚ್ಚಾಗಿ ಕಂಡುಬರುತ್ತದೆ. ಕವಿತೆಗಳ ಮೂಲಕ ಮನುಷ್ಯ ಸ್ವಭಾವದ ವಿವಿಧ ಮುಖಗಳನ್ನು ಶೋಧಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಸದಾ ಒಳತಿಗಾಗಿ ಹಂಬಲಿಸುವ ಕವಿ ಮನ ಅವರ ಕವಿತೆಗಳ ಹಿಂದಿದೆ. ಮನುಷ್ಯನ ಘನತೆಯಲ್ಲಿ ನಂಬಿಕೆಯನ್ನಿರಿಸಿಕೊಂಡು ಕಾವ್ಯರಚನೆಯನ್ನು ಮಾಡುತ್ತಿರುವ ರೇವಣ ಸಿದ್ಧಪ್ಪನವರು ‘ಭವದ ಕಣ್ಣು’ ಸಂಕಲನದ ಮೂಲಕ ಕನ್ನಡದ ಉತ್ತಮ ಕವಿಗಳಲ್ಲೊಬ್ಬರಾಗಿ ಗುರುತಿಸಿಕೊಳ್ಳುವ ಭರವಸೆಯನ್ನು ಮೂಡಿಸಿದ್ದಾರೆ. ಧಾರವಾಡದ ‘ಸಾಹಿತ್ಯ ಗಂಗಾ’ ಸಂಸ್ಥೆಯ ಮೂಲಕ ಈ ಸಂಕಲನಕ್ಕೆ ಸಂದ ‘ಬಿ.ಸಿ. ರಾಮಚಂದರ ಶರ್ಮಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ’ ಅದನ್ನು ಖಚಿತಪಡಿಸುತ್ತದೆ. ವಾಚ್ಯ ಹೇಳಿಕೆಗಳ ಬದಲು ಸೂಚ್ಯ ಧ್ವನಿಗಳನ್ನು ಹೊಮ್ಮಿಸಿದರೆ, ಚಿಕ್ಕಚಿಕ್ಕ ರಚನೆಗಳಲ್ಲೇ ತೃಪ್ತರಾಗುವ, ತಣಿಯುವ ಅಲ್ಪಕಾವ್ಯ ಸಾಧ್ಯತೆಗಳೆಡೆಗೆ ಮುಖ ಮಾಡದೆ, ಸ್ವಲ್ಪ ನೀಳವಾದ ಮಹತ್ವಾಕಾಂಕ್ಷಿ ಕವಿತೆಗಳು ಮತ್ತು ದೊಡ್ಡ ಚೌಕಟ್ಟಿನ ರಚನೆಗಳತ್ತ ಗಮನವನ್ನು ಕೇಂದ್ರೀಕರಿಸಿಕೊಂಡರೆ ಅವರು ಇನ್ನಷ್ಟು ಎತ್ತರಕ್ಕೆ ಏರಬಲ್ಲರು.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

