Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಭಾವ ತರಂಗಗಳನ್ನು ಸೃಷ್ಟಿಸುವ ‘ಭಾವಾಂತರಂಗ’
    Article

    ಪುಸ್ತಕ ವಿಮರ್ಶೆ | ಭಾವ ತರಂಗಗಳನ್ನು ಸೃಷ್ಟಿಸುವ ‘ಭಾವಾಂತರಂಗ’

    July 6, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಭಾವಾಂತರಂಗ’ ನೂರಾರು ಕವಿತೆಗಳನ್ನು ಬರೆದು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟಿಸಿದವರೂ ಆದ ಸುಜಾತಾ ಆರ್. ರಾವ್ ಸಿದ್ಧಾಪುರ ಇವರು ತಮ್ಮ ಇಳಿವಯಸ್ಸಿನಲ್ಲಿ ಪುಸ್ತಕ ರೂಪದಲ್ಲಿ ಹೊರತರುತ್ತಿರುವ ಅವರ ಚೊಚ್ಚಲ ಕವನ ಸಂಕಲನ. ಇದರಲ್ಲಿ ಅವರು ತಮ್ಮ ಜೀವನದಲ್ಲಿ ಕಂಡುಂಡ ಪಕ್ವ ಅನುಭವಗಳು, ಚಿಂತನೆಗೊಳಪಡಿಸಿದ ಪ್ರಬುದ್ಧ ವಿಚಾರಗಳು, ಮನುಷ್ಯನ ಜೀವನದ ವಿವಿಧ ಘಟ್ಟಗಳಲ್ಲಿ ಅರಿವಿಗೆ ಬರುವ ಕಟು ಸತ್ಯಗಳು, ನಿರ್ದಿಷ್ಟ ಸನ್ನಿವೇಶಗಳಲ್ಲಿ ಅವರ ಮನದೊಳಗೆ ಪುಟಿದೇಳುವ ಭಾವ ತರಂಗಗಳನ್ನು ಹಾಡಾಗಿ ಹರಿಯಿಸಿದ್ದಾರೆ. ಹೆಚ್ಚಿನೆಲ್ಲ ಕವಿತೆಗಳು ಛಂದೋಬದ್ಧವೂ ಲಯಬದ್ಧವೂ ಧ್ವನಿಪೂರ್ಣವೂ ಆಗಿದ್ದು, ಭಾವಗೀತೆಗಳಾಗಿ ಹಾಡಲು ಅನುಕೂಲವಾಗಿವೆ.

    ಈ ಸಂಕಲನದಲ್ಲಿ ಕವಯಿತ್ರಿಯ ಸಂವೇದನಾಶೀಲ ಚಿಂತನೆಗೆ ಸಾಕ್ಷಿಯಾಗಿ ವೈವಿಧ್ಯಮಯ ವಸ್ತುಗಳ ಮೇಲೆ ಬರೆದ 53 ಕವಿತೆಗಳಿವೆ. ಇಲ್ಲಿ ಕವಿತೆ ಹೇಗೆ ಬೇರೆಬೇರೆ ಸನ್ನಿವೇಶಗಳಲ್ಲಿ ತಾನೇ ತಾನಾಗಿ ಕಟ್ಟಿಕೊಳ್ಳುತ್ತದೆ ಮತ್ತು ಬರೆಯುವ ಕ್ರಿಯೆಯು ಹೇಗೆ ಮನಸ್ಸನ್ನು ಹಗುರಾಗಿಸುತ್ತದೆ ಅನ್ನುವುದರ ಮೇಲೆ ಕವಿತೆಗಳಿವೆ, ನಿತ್ಯ ನೂತನಳಾದ ಪ್ರಕೃತಿಯ ಬದಲಾಗುವ ಬಣ್ಣ ಮತ್ತು ಭಾವಗಳ ಮೇಲೆ ಕವಿತೆಗಳಿವೆ, ಮನುಷ್ಯ ಸಂಬಂಧಗಳ ಮತ್ತು ಮನುಷ್ಯ ಸ್ವಭಾವಗಳ ವಿವಿಧ ಮುಖಗಳ ಕುರಿತು, ವಿವಿಧ ಸಂದರ್ಭಗಳಲ್ಲಿ ಮನಸ್ಸಿನಲ್ಲಿ ಉದಿಸುವ ಭಾವನೆಗಳ ಕುರಿತು, ದೇಶ-ಭಾಷೆಗಳ ಮೇಲಿನ ಪ್ರೀತಿಯ ಕುರಿತು, ಬದುಕಿನಲ್ಲಿ ಸ್ವಾತಂತ್ರ್ಯ-ಸ್ವಚ್ಛಂದತೆಗಳ ಅಗತ್ಯದ ಕುರಿತು, ಮಕ್ಕಳ ಮೇಲೆ ತಾಯಿಯ ನಿಸ್ವಾರ್ಥ ಪ್ರೀತಿ-ಕಾಳಜಿ-ಉಪದೇಶಗಳ ಕುರಿತು ಮತ್ತು ವಿವಿಧ ಸಂದರ್ಭಗಳಲ್ಲಿ ಮನದಾಳದಿಂದ ಹೊರಹೊಮ್ಮಿದ ಕವಿತೆಗಳಿವೆ. ಈ ಎಲ್ಲ ಕವಿತೆಗಳಲ್ಲಿ ಕಾಣುವ ವಸ್ತುವೈವಿಧ್ಯ, ಸುತ್ತಮುತ್ತಲ ಚಲನಶೀಲ ಜಗತ್ತಿನ ಅವಲೋಕನ, ಪದವಿನ್ಯಾಸಗಳು, ಅಕ್ಷರಪ್ರಾಸಗಳು ಮತ್ತು ಅಲಂಕಾರಗಳು ಸುಜಾತಾ ಅವರ ಕಾವ್ಯರಚನಾ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇವರು ಯಾಕೆ ಕಾವ್ಯಲೋಕವನ್ನು ಇಷ್ಟು ತಡವಾಗಿ ಪ್ರವೇಶಿಸಿದರು ಅನ್ನಿಸುವಂತೆ ಮಾಡುತ್ತವೆ.

    ಮೊದಲ ಕವಿತೆಯಲ್ಲಿ ಕವಿತೆ ಹೇಗೆ ಮತ್ತು ಯಾವ ಯಾವ ಸಂದರ್ಭಗಳಲ್ಲಿ ಹುಟ್ಟುತ್ತದೆ ಅನ್ನುವುದನ್ನು ನಿರೂಪಿಸುತ್ತ ಕವಿತೆಯು ದಿನದ ಬೇರೆ ಬೇರೆ ಹೊತ್ತುಗಳಲ್ಲಿ ಪ್ರಕೃತಿಯಲ್ಲಿ ಕಾಣುವ ಬಣ್ಣ, ಪರಿಮಳ, ನಾದಗಳನ್ನು ನೋಡಿ ಸಂತಸವನ್ನು ಅನುಭವಿಸುವಾಗ ಹುಟ್ಟಬಹುದು ಅಥವಾ ಹಳೆಯ ನೋವಿನ ನೆನಪುಗಳು ಉಂಟುಮಾಡುವ ತಲ್ಲಣಗಳಿಂದಲೂ ಹುಟ್ಟಬಹುದು ಅನ್ನುತ್ತಾರೆ :
    ಸವಿನೆನಪು ತಲ್ಲಣವು ಸಕಲ ಭಾವದ ಬಸಿರು/
    ಹೊರಬರಲು ದಾರಿಯನು ಹುಡುಕುತಿರಲು/
    ಒಡಲೆಲ್ಲ ಮಡುಗಟ್ಟಿ ಕಟ್ಟೆಯನು ಧಿಕ್ಕರಿಸೆ/
    ಲೇಖನಿಯನಪ್ಪುತಿರೆ ಕವಿತೆ ಕಂಡಿತು ಹುಟ್ಟು (ಪು.13)

    ಇಂಗ್ಲೀಷ್ ಕವಿ ಪಿ.ಬಿ. ಷೆಲ್ಲಿ ಹೇಳಿದ ಹಾಗೆ : My sweetest songs are those that tell of saddest thoughts’ ಅತ್ಯಂತ ನೋವಿನ ಕ್ಷಣಗಳಲ್ಲಿ ಒಳ್ಳೆಯ ಕವಿತೆ ಹುಟ್ಟುತ್ತದೆ.

    ‘ನವಿಲಗರಿ’ ಕವಿತೆ ನವಿಲಿನ ಸೌಂದರ್ಯವನ್ನು ಚಿತ್ರಿಸುವುದರೊಂದಿಗೆ ಬಾಲ್ಯದ ದಿನಗಳನ್ನೂ ನೆನಪಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಕೃಷ್ಣನ ಮುಕುಟಕ್ಕೆ ಸಿಕ್ಕಿಸಿಕೊಂಡ ನವಿಲಗರಿಗಳನ್ನೂ ಕಣ್ಣಮುಂದೆ ನಿಲ್ಲಿಸುತ್ತದೆ. ನಮ್ಮ ಬದುಕಿನಲ್ಲಿ ಸಿಗುವ ಸಂಗಾತಿ ಹೇಗಿರಬೇಕು ಅನ್ನುವ ಕವಿತೆ ತುಂಬಾ ಹೃದ್ಯವಾಗಿದೆ:
    ‘ಗೆಲುವಿನಲಿ ನಗು ಬೆರೆಸಿ ಸೋಲಿನಲಿ ಕಣ್ಣೊರೆಸಿ/
    ಸಿರಿತನವೊ ಬಡತನವೊ ವಿಧಿಬರಹಕರ್ಪಿಸುತ/
    ಇಲ್ಲಗಳ ಮರೆಸುತ್ತ ಇದ್ದುದನು ಹಂಚುತ್ತ… (ಪು.20)

    ‘ಪಯಣ’ ಕವಿತೆಯಲ್ಲಿ ಜೀವನದ ಪ್ರತಿ ಹೆಜ್ಜೆಗಳೂ ಗುರುತಿಸಲ್ಪಟ್ಟು ಇಡೀ ಕವಿತೆಯೇ ಒಂದು ಸುಂದರ ರೂಪಕವಾಗಿದೆ. ನಾವೆಲ್ಲರೂ ಜೊತೆಯಾಗಿ ಸಾಗುವ ಪಯಣಿಗರು, ದಾರಿಯಲ್ಲಿ ನೂರಾರು ಏರುತಗ್ಗುಗಳಿರುತ್ತವೆ, ಸುಖದೊಂದಿಗೆ ದುಃಖಗಳೂ ಎದುರಾಗಬಹುದು, ಆದರೆ ಪರಸ್ಪರ ಸಹಕಾರ-ಸೌಹಾರ್ದ ಭಾವನೆಗಳನ್ನು ಬೆಳೆಸಿಕೊಂಡು ನಡೆದರೆ ಭಾರಗಳೆಲ್ಲವೂ ಹಗುರವಾಗುತ್ತವೆ ಅನ್ನುವುದು ವಿಶ್ವಮಾನವತೆಯ ಒಂದು ಅದ್ಭುತ ಸಂದೇಶವೂ ಹೌದು:
    ಬಾಂಧವ್ಯ ಬೆಳೆಸುತಲಿ ಸಹಪಯಣಿಗರ ಮನದಿ/
    ಭರವಸೆಯನಿರಿಸೋಣ ಅವರ ಮನಸಿನಲಿ/
    ಹಿತವಾದ ನುಡಿಯಿಂದ ಮನ ಮನವ ಬೆಸೆಯುತಲಿ/
    ಕಟ್ಟೋಣ ಬದುಕನ್ನು ಜೊತೆ ಜೊತೆಯಲಿ (ಪು. 33)

    ಎಷ್ಟೇ ಸುಖಸೌಕರ್ಯಗಳಿದ್ದರೂ ಸ್ವಚ್ಛಂದವಾಗಿ ಹಾರುವ ಸ್ವಾತಂತ್ರ್ಯವಿಲ್ಲದಿದ್ದರೆ ಅದು ಬಂಧನದ ಬದುಕು ಅನ್ನುವುದನ್ನು ಸೂಚಿಸುವ ‘ಪಂಜರ’ದ ರೂಪಕ, ನಿಸ್ವಾರ್ಥವಾಗಿ ಪ್ರೀತಿಸುವವರೆಲ್ಲರಲ್ಲೂ ಇರುವುದು ತಾಯಿಯೇ ಎಂದು ಹೇಳುವ ಕವಿತೆ ‘ಅಮ್ಮ’, ವಸಂತ ಋತುವಿನಲ್ಲಿ ಬುವಿಯಲ್ಲಿ ಸಿಹಿ-ಕಹಿಗಳೆರಡನ್ನೂ ತುಂಬುವ ಪ್ರಕೃತಿಯ ಗುಣವನ್ನು ನೋಡಿ ನಾವು ಪಾಠವನ್ನು ಕಲಿಯಬೇಕಿದೆ ಎನ್ನುವ ‘ವಸಂತ’, ಪುಟ್ಟ ಮೊಳಕೆಯು ಬೆಳೆದು ಗಿಡವಾಗಿ ಮರವಾಗಿ ಹೂಹಣ್ಣುಗಳನ್ನೂ ತಂಗಾಳಿಯನ್ನೂ ಕೊಡುವ ಪ್ರಕೃತಿಯ ವಿಸ್ಮಯವನ್ನು ತೋರಿಸುವ ‘ಅಂಕುರ’, ಕಂದನ ಏಳಿಗೆಯನ್ನೇ ಸದಾ ಬಯಸುವ ‘ಕರುಳ ಕರೆ ಎಂಬ’ ಕವಿತೆ-ಎಲ್ಲವೂ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವ ಕವಿತೆಗಳು.

    ವಾರಾಹಿ ಯೋಜನೆಯಲ್ಲಿ ಮುಳುಗಡೆಯಾದ ತಮ್ಮ ಮನೆಯ ಅವಶೇಷಗಳನ್ನು ಕವಯಿತ್ರಿ ನೋಡಲು ಹೋದಾಗ ಒತ್ತರಿಸಿ ಬಂದ ಬಾಲ್ಯದ ನೆನಪುಗಳು ‘ಮುಳುಗದ ನೆನಪು’ ಕವಿತೆಯ ಕೊನೆಯ ಚರಣದಲ್ಲಿ ನೀರೊಳಗೆ ಮುಳುಗಿಯೂ ಕರಗದ ಇಟ್ಟಿಗೆಯ ಉಪಮೆಯ ಮೂಲಕ ಸುಂದರವಾಗಿ ಅಭಿವ್ಯಕ್ತಿಗೊಂಡಿವೆ:
    ನುಚ್ಚು ನುರಿದಿರಲಿಲ್ಲ ನೂರು ಸಾವಿರ ನೆನಪು/
    ಬೆಚ್ಚನೊಡಲೊಳಗಲ್ಲಿ ಅಡಗಿ ಕುಳಿತಿತ್ತು/
    ನೀರೊಳಗೆ ಮುಳುಗಿದ್ದು ಅಳಿಯದಿಟ್ಟಿಗೆಯಂತೆ
    ಗಟ್ಟಿಯಾಗುಳಿದಿತ್ತು ಬಾಲ್ಯ ತಾನು. (ಪು.69)

    ‘ವಸಂತನ ಒಸಗೆ’ ಒಂದು ಮೌಲ್ಯ ಸಂದೇಶವಿರುವ ಕವಿತೆ. ಈ ಜಗತ್ತಿನಲ್ಲಿ ಎಲ್ಲರೂ ಕಷ್ಟಗಳಿಗೆ ಅಂಜಿ ಸುಖದ ಹಿಂದೆ ಓಡುತ್ತಾರೆ. ಅಂಥವರಿಗೊಂದು ಕಿವಿಮಾತು :
    ನೋವ ನಲಿವ ಈಸಬಲ್ಲ ಚಿತ್ತವಿದ್ದರೆ/
    ಎಂದೆಂದಿಗು ಬಾಳ ಪಯಣ ಸವಿಯ ಸಕ್ಕರೆ/
    ಸಿಹಿಯು ನೂರ್ಮಡಿಸೆ ಕಹಿಯ ಲೇಪ ಬೇಕಿದೆ/
    ಇದನು ತಿಳಿದರಿಲ್ಲ ನೋವು ಅರಿಯಬೇಕಿದೆ.

    ಇತರೆಲ್ಲ ಕವಿತೆಗಳು ಒಂದಿಲ್ಲೊಂದು ತಾತ್ವಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಒಂದು ಆದರ್ಶ ಸ್ನೇಹ ಸಂಬಂಧವನ್ನು ಚಿತ್ರಿಸುವ ‘ಸ್ನೇಹ’, ವೃದ್ಧಾಪ್ಯದಲ್ಲಿ ಅಸಹಾಯಕರಾಗಿ ಬಳಲುವ ವೃದ್ಧರಿಗೆ ಪ್ರೀತಿ ತೋರಿಸಲು ಕರೆ ನೀಡುವ ‘ಹಣ್ಣೆಲೆ’, ಬದುಕಿನ ತತ್ವವನ್ನು ಬಾನಾಡಿಯ ಹಾರಾಟದ ರೂಪಕದ ಮೂಲಕ ಸಾರುವ ‘ಬಾನಾಡಿ’, ಹರಿಯುವ ಮಳೆನೀರನ್ನು ನಾರಿಗೆ ಹೋಲಿಸುವ ‘ನದಿ-ನಾರಿ, ಹೆಣ್ಣಿನ ಬದುಕಿನ ಹಲವು ಹಂತಗಳನ್ನು ಗುರುತಿಸಿ ಸೋಲು-ಗೆಲುವುಗಳ ಬಗ್ಗೆ ಜಿಜ್ಞಾಸೆ ಪಡುವ ‘ಅವಳು’, ಒಳಿತು-ಕೆಡುಕುಗಳ ನಡುವಣ ನಿರಂತರ ಸಂಘರ್ಷವನ್ನು ಚಿತ್ರಿಸುವ ‘ಕಂಸ ಯೋಜನೆ’, ಹೆಣ್ಣು ತನ್ನ ಅಸ್ಮಿತೆಯನ್ನು ತನ್ನ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ಹೇಗೆ ಸ್ಥಾಪಿಸಿಕೊಳ್ಳಬೇಕು ಅನ್ನುವುದನ್ನು ಸೂಚಿಸುವ ‘ಅಸ್ಮಿತೆ’, ಪ್ರಕೃತಿಯ ಶಿಶುವಾದ ಮನುಷ್ಯ ಪ್ರಕೃತಿಗೆ ಹಾನಿ ಮಾಡದೆ ಪರಿಸರವನ್ನು ಕಾಯ್ದುಕೊಳ್ಳಲು ಕರೆಕೊಡುವ ‘ಪ್ರಕೃತಿಯ ಶಿಶು’, ಹೆಣ್ಣು ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನೂ ಗೆದ್ದು ದಿಟ್ಟಳಾಗಬೇಕೆಂಬುದನ್ನು ಸಮುದ್ರ ಮಂಥನದ ರೂಪಕದ ಮೂಲಕ ಸಾರುವ ‘ಸಮುದ್ರ ಮಂಥನ’ – ಈ ಎಲ್ಲವೂ ಕವಯಿತ್ರಿಯ ಸೂಕ್ಷ್ಮ ಸಂವೇದನೆಗಳಿಗೆ ರೂಪು ಕೊಟ್ಟ ಮತ್ತು ಓದುಗನಲ್ಲಿ ಸಂಚಲನ ಮೂಡಿಸುವ ಅತ್ಯಂತ ಸತ್ವಪೂರ್ಣ ರಚನೆಗಳು.

    ಇಲ್ಲಿ ಕಾಣುವ ಎಲ್ಲ ಕವಿತೆಗಳಲ್ಲೂ ಕವಯಿತ್ರಿಯ ಒಳಲೋಕದಿಂದ ಹೊರಬಂದ ಧನಾತ್ಮಕ ಚಿಂತನೆಯಿದೆ. ಸಮಾಜದಲ್ಲಿ ಎಲ್ಲೆಡೆ ಕಾಣುವ ಅನ್ಯಾಯ, ಮೋಸ, ವಂಚನೆ, ದಗಾಕೋರತನ, ಬಡತನ, ದೌರ್ಜನ್ಯ, ಹೆಣ್ಣಿನ ಶೋಷಣೆ, ಲೈಂಗಿಕ ಅತ್ಯಾಚಾರದಂಥ ಜ್ವಲಂತ ಸಮಸ್ಯೆಗಳ ಕುರಿತು ಅಕ್ರೋಶವನ್ನು ನೇರವಾಗಿಯಾಗಲಿ ಪರೋಕ್ಷವಾಗಿಯಾಗಲಿ ವ್ಯಕ್ತಪಡಿಸುವ ಕವಿತೆಗಳಿಲ್ಲ. ಜೀವನದ ಸೌಂದರ್ಯವನ್ನು ಆಸ್ವಾದಿಸುವ ಜೀವಂತಿಕೆಯನ್ನು ರೂಢಿಸಿಕೊಳ್ಳಬೇಕು ಎಂಬುದಷ್ಟೇ ಅವರ ಕಾಳಜಿ. ಅತ್ಯಂತ ಪರಿಣಾಮಕಾರಿಯಾಗಿ ಕವಿತೆ ಬರೆಯುವ ಸುಂದರ ಭಾಷಾ ಸಾಮರ್ಥ್ಯ ಅವರಲ್ಲಿರುವುದರಿಂದ ಇನ್ನು ಮುಂದಿನ ಸಂಕಲನದಲ್ಲಿ ಅವರಿಂದ ಇನ್ನಷ್ಟು ಗಂಭೀರವಾದ ಸಾಮಾಜಿಕ ಚಿಂತನೆಯನ್ನೂ ನಾವು ನಿರೀಕ್ಷಿಸಬಹುದು.

    ವಿಮರ್ಶಕರು : ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕಿ : ಸುಜಾತಾ ಆರ್. ರಾವ್

    ಕುಂದಾಪುರ ತಾಲೂಕಿನ ಸಿದ್ಧಾಪುರದ ಪ್ರಸಿದ್ಧ ವೈದ್ಯ ಡಾ. ರಮೇಶ ರಾವ್ ಅವರ ಪತ್ನಿ ಸುಜಾತಾ ಆರ್. ರಾವ್ ಈಗಾಗಲೇ ಪತ್ರಿಕೆಗಳಲ್ಲಿ ತಮ್ಮ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಪರಿಚಿತರು. ಒಳ್ಳೆಯ ಹಾಡುಗಾರ್ತಿಯೂ, ಮಾತುಗಾರ್ತಿಯೂ ಹೌದು.

    article baikady Literature poem review roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಕೇಂದ್ರದಿಂದ ‘ವೀರ ವೃಷಸೇನ’ ಯಕ್ಷಗಾನ ದಾಖಲೀಕರಣ
    Next Article ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ -16’ ಕೊಂಕಣಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.