Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ವಿಕ್ರಂ ಕಾಂತಿಕೆರೆಯವರ ‘ದೇರಪ್ಪ’ ಅನುವಾದಿತ ಕಾದಂಬರಿ
    Article

    ಪುಸ್ತಕ ವಿಮರ್ಶೆ | ವಿಕ್ರಂ ಕಾಂತಿಕೆರೆಯವರ ‘ದೇರಪ್ಪ’ ಅನುವಾದಿತ ಕಾದಂಬರಿ

    May 21, 2026No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಕ್ರಂ ಕಾಂತಿಕೆರೆ ಓರ್ವ ಪತ್ರಕರ್ತರಾಗಿ, ಒಳ್ಳೆಯ ಕ್ರೀಡಾ ವರದಿಗಾರರಾಗಿ, ಸಾಂಸ್ಕೃತಿಕ ವಿಮರ್ಶಕರಾಗಿ ಮತ್ತು ಅನುವಾದಕರಾಗಿ ಪ್ರಸಿದ್ಧರು. ಅವರು ಅನುವಾದಿಸಿದ ‘ಕಾವೇರಿ ತೀರದ ಪಯಣ’, ‘ಉಮಾಕೇರಳ’, ‘ಭಗವಂತನ ಸಾವು’ ಮೊದಲಾದವು ಸಾಂಸ್ಕೃತಿಕ ಲೋಕದ ಗಮನ ಸೆಳೆದ ಕೃತಿಗಳು. ಈಗಷ್ಟೇ ಬಿಡುಗಡೆಗೊಂಡಿರುವ ‘ದೇರಪ್ಪ’ ಎಂಬ ಅನುವಾದಿತ ಕಾದಂಬರಿ ಮೂಲ ಮಲೆಯಾಳದಲ್ಲಿ ಪ್ರಶಾಂತ ಕೈದಪ್ರಂ ಇವರ ಮೊದಲ ಕಾದಂಬರಿ. ವಸ್ತುವಿನ ಆಳ ವಿಸ್ತಾರಗಳನ್ನೂ ವಸ್ತುವನ್ನು ನಿರ್ವಹಿಸಿದ ಕೌಶಲವನ್ನೂ ನೋಡಿದರೆ ಇದು ಅವರ ಮೊದಲ ಪ್ರಯತ್ನ ಎಂದೆನ್ನಿಸುವುದಿಲ್ಲ. ಒಂದು ನಿರ್ದಿಷ್ಟ ಕಾಲಘಟ್ಟದ ಜನಜೀವನ ಮತ್ತು ಘಟನೆಗಳ ನೈಜ ಬಿಂಬ ಇಲ್ಲಿದೆ. ಬಹಳಷ್ಟು ಸೃಜನಶೀಲ ಚಿಂತನೆಗೆ ಅವಕಾಶ ಮಾಡಿಕೊಂಡು ವಿಕ್ರಂ ಕಾಂತಿಕೆರೆಯವರು ಇದನ್ನು ಅನುವಾದ ಮಾಡಿದ್ದರಿಂದ ಕನ್ನಡದ ಓದುಗರಿಗೂ ಅನುಕೂಲವೇ ಆಗಿದೆ. ತಮ್ಮ ಲಕ್ಷ್ಯ ಭಾಷೆಯ ಓದುಗರ ಓದುವ ಖುಷಿಗೆ ತೀರಾ ಅಪರಿಚಿತ ಪದಗಳ ಬಳಕೆಯಿಂದ ಅಡ್ಡಿಯಾಗಬಾರದು ಎಂಬ ಕಾಳಜಿಯಿಂದ ಭಾಷೆಯ ಮಾತ್ರವಲ್ಲದೆ ಸಾಂಸ್ಕೃತಿಕ ಪರ್ಯಾಯಗಳನ್ನೂ ಪರಿಶ್ರಮ ವಹಿಸಿ ವಿಕ್ರಂ ಅವರು ನೀಡಿದ್ದಾರೆ. ಇದರಿಂದ ‘ದೇರಪ್ಪ’ ಕನ್ನಡದ್ದೇ ಕಾದಂಬರಿ ಎಂಬಂತೆ ಓದಿಸಿಕೊಂಡು ಹೋಗುತ್ತದೆ.

    ಕಾದಂಬರಿಯ ಘಟನೆಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಿಂದ ಆರಂಭವಾಗಿ ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳ ತನಕ ಮುಂದುವರಿಯುತ್ತವೆ. ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹದ ಉಲ್ಲೇಖ ಆಗಾಗ ಬರುತ್ತದೆ. ಕೇರಳದ ಪಯ್ಯನ್ನೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಘಟನೆಗಳು ನಡೆಯುತ್ತವೆ. ಅಲ್ಲಿನ ಅಂದಿನ ಸಾಮಾಜಿಕ, ಐತಿಹಾಸಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಜೀವನದ ವಿವಿಧ ಆಯಾಮಗಳನ್ನು ಕಾದಂಬರಿಕಾರರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.‌ ನಿರೂಪಣೆಯು ಉತ್ತಮ ಪುರುಷದಲ್ಲಿ ಇಲ್ಲದಿದ್ದರೂ ಕಾದಂಬರಿಯ ಎಲ್ಲ ಘಟನೆಗಳು ದೇರಪ್ಪನ ಪ್ರಜ್ಞಾಪಾತಳಿಯ ಮೂಲಕ ಹಾದುಹೋಗುತ್ತವೆ. ಆರಂಭದಲ್ಲಿ ತೀರಾ ಎಳೆಯ ಪ್ರಾಯದ ಮುಗ್ದ ಹುಡುಗನಾಗಿದ್ದ ದೇರಪ್ಪನ ಬದುಕಿನ ವೃದ್ಧಾಪ್ಯ ಮತ್ತು ಸಾವಿನ ತನಕ ಕಾದಂಬರಿ ಮುಂದುವರೆಯುತ್ತದೆ.

    ರಾಜಕೀಯವಾಗಿ ಬ್ರಿಟಿಷರ ಗುಲಾಮಗಿರಿಯಲ್ಲಿ ನರಳುತ್ತಿದ್ದ ಸಮಾಜದ ಒಳಗೆ ಜಾತಿ ಭೇದ-ವರ್ಗಭೇದಗಳೂ ತಮ್ಮ ಕಬಂಧ ಬಾಹುಗಳನ್ನು ಚಾಚಿಕೊಂಡು ಬಡವರು ಮತ್ತು ಕೆಳವರ್ಗದವರು ಕ್ರೂರವಾಗಿ ತುಳಿತಕ್ಕೊಳಗಾಗಿರುವುದನ್ನು ಲೇಖಕರು ಚಿತ್ರಿಸುತ್ತಾರೆ. ಆದರೆ ಭೇದಗಳನ್ನು ಮೀರಿ ಗಂಡು-ಹೆಣ್ಣುಗಳು ಅಂತರ್ ಜಾತೀಯ ವಿವಾಹವಾಗುವ ಉದಾಹರಣೆಗಳೂ ಇವೆ. ನಿಮ್ನ ಜಾತಿಯ ಕೋಮ ಕರಿಯಪ್ಪ ಗೌಡನ ಮಗಳು ಮಾದುವನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವುದು ಹಾಗೆ. ದೇರಪ್ಪ ಅವರ ಮಗ. ಅವನ ಮೈಬಣ್ಣ ತೀರಾ ಕಪ್ಪು. ಆದರೆ ಅಕ್ಷರ ಕಲಿಯಬೇಕೆಂಬ ಮಹದಾಸೆ ಅವನನ್ನು ಅಕ್ಷರಸ್ಥನನ್ನಾಗಿ ಮಾಡಿ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿ ಬಹಳಷ್ಟು ಜ್ಞಾನ ಸಂಪಾದನೆ ಮಾಡುವಂತೆ ಪ್ರೋತ್ಸಾಹಿಸುತ್ತದೆ.

    ಆರಂಭದಲ್ಲಿ ಶ್ರಮವಹಿಸಿ ದುಡಿಮೆ ಮಾಡುತ್ತಿದ್ದ ಕೋಮ ಕ್ರಮೇಣ ಕುಡುಕನಾಗುತ್ತಾನೆ. ಕೌಟುಂಬಿಕ ಜವಾಬ್ದಾರಿಗಳಿಂದ ವಿಮುಖನಾಗುತ್ತಾನೆ. ದೈನಂದಿನ ಗಂಜಿಗೇ ಗತಿಯಿಲ್ಲದಾಗಲು ಮಾದು ಅಡ್ಡದಾರಿಯಿಂದ ಸಂಪಾದನೆ ಮಾಡಿ ದೇರಪ್ಪನ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಾಳೆ. ಆದರೆ ದೇರಪ್ಪ ತನ್ನ ಅಪ್ಪನನ್ನು ದ್ವೇಷಿಸುವುದಿಲ್ಲ. ಅಪ್ಪ ಒಮ್ಮೆ ಹೊಟ್ಟೆನೋವಿನಿಂದ ನರಳಿದಾಗ ಔಷಧಿ ತಂದುಕೊಡುತ್ತಾನೆ. ಉಪಚರಿಸುತ್ತಾನೆ. ಇದನ್ನು ನೋಡಿ ಕೋಮ ಬದಲಾಗುತ್ತಾನೆ. ಕುಲದ ವೃತ್ತಿಯಾಗಿದ್ದ ದೋಣಿ ನಡೆಸುವ ಕೆಲಸವನ್ನು ಮಗನಿಗೆ ಹೇಳಿಕೊಡುತ್ತಾನೆ. ಪತ್ನಿಯ ಜತೆಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ. ಅವರಿಗೆ ಇನ್ನೊಂದು ಹೆಣ್ಣುಮಗುವಾಗುತ್ತದೆ. ದೇರಪ್ಪ ತಂಗಿಯನ್ನು ಪ್ರೀತಿಯಿಂದ ಬೆಳೆಸುತ್ತಾನೆ. ಆದರೆ ಅಪ್ಪನ ಕಾಯಿಲೆ ಮತ್ತೆ ಉಲ್ಬಣಗೊಂಡು ಅವನು ಹಾಸಿಗೆ ಹಿಡಿಯುತ್ತಾನೆ.

    ಈ ಮಧ್ಯೆ ದೋಣಿಗೆ ಬರುವ ಗಿರಾಕಿಗಳು ಆಡುವ ಮಾತುಗಳ ಮೂಲಕ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಕೇಳಿ ದೇರಪ್ಪನಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದು ತನ್ನ ಆದ್ಯ ಕರ್ತವ್ಯವೆಂಬ ಭಾವನೆ ಬರುತ್ತದೆ. ಹಾಗೆ ಊರಿನ ಸ್ವಾತಂತ್ರ್ಯ ಹೋರಾಟಗಾರರ ಜತೆಗೆ ಕೆಲಸ ಮಾಡಲು ಸಮಯವಿದ್ದಾಗಲೆಲ್ಲ ಹೋಗುತ್ತಾನೆ. ಪಯ್ಯನ್ನೂರಿಗೆ ಗಾಂಧೀಜಿಯವರು ಬರುತ್ತಾರೆಂದು ಕೇಳಿ ಅವರನ್ನು ನೋಡಲು ಅವನ ಮನಸ್ಸು ಹಾತೊರೆಯುತ್ತದೆ. ಆದರೆ ಮನೆಯಲ್ಲಿ ಬಡತನ ಮತ್ತೆ ತಾಂಡವವಾಡುತ್ತದೆ. ಹಸಿವು ಅಸಹನೀಯವಾದಾಗ ದೇರಪ್ಪ ನದಿಬದಿಯ ಹಲಸಿನ ಹಣ್ಣನ್ನಾದರೂ ತರುತ್ತೇನೆಂದು ಹೋಗಿ ಮರವನ್ನು ಹತ್ತಿದ್ದ ಹೊತ್ತಿನಲ್ಲಿ ಜಡಿಮಳೆ ಸುರಿದು ನೆರೆಯುಂಟಾಗಿ ಆ ನೆರೆಯಲ್ಲಿ ಅಲ್ಲಿಗೆ ಅವನನ್ನು ಹುಡುಕುತ್ತ ಬಂದ ಅಮ್ಮ ಮತ್ತು ತಂಗಿ ಅವನ ಮುಂದೆಯೇ ಕೊಚ್ಚಿಕೊಂಡು ಹೋಗುತ್ತಾರೆ. ಕೆಲವು ದಿನಗಳ ನಂತರ ಕೋಮನೂ ಸತ್ತುಹೋಗುತ್ತಾನೆ. ದೇರಪ್ಪನನ್ನು ಅನಾಥ ಪ್ರಜ್ಞೆ ಹಿಂಡುತ್ತದೆ.

    ಶ್ರೀಮಂತ ಕುಬೇರನ್ ನಾಯರ್ ಮನೆಗೆ ಸಾಲ ಕೇಳಲೆಂದು ಹೋದಾಗ ಅಲ್ಲಿ ಕಂಡ ನಂದನ ಎಂಬ ಹುಡುಗಿಯಲ್ಲಿ ದೇರಪ್ಪನಿಗೆ ಪ್ರೇಮಾಂಕುರವಾಗಿ ಅವರಿಬ್ಬರೂ ಓಡಿಹೋಗಿ ಮದುವೆಯಾಗುತ್ತಾರೆ. ಪಕ್ಕದ ಹಳ್ಳಿಯಲ್ಲಿದ್ದ ಮಾವನ ಮನೆಯಲ್ಲಿ ಅವರು ನೆಲೆಸುತ್ತಾರೆ. ಅಲ್ಲಿ ಮಗಳು ಶ್ರೀದೇವಿ ಹುಟ್ಟುತ್ತಾಳೆ.‌ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿರುತ್ತದೆ. ಭೂದಾನ ಚಳುವಳಿ ನಡೆಯುತ್ತಿರುತ್ತದೆ. ದೇರಪ್ಪ ಹಗಲಿರುಳೆನ್ನದೆ ಅದರಲ್ಲಿ ತೊಡಗಿಕೊಳ್ಳುತ್ತಾನೆ. ನಂದನ ಹೆರಿಗೆಯಲ್ಲಿ ಸಾಯುತ್ತಾಳೆ. ಶ್ರೀದೇವಿ ಬಾಲು ಎಂಬ ಹುಡುಗನನ್ನು ಮದುವೆಯಾಗಿ ಮುಂದೆ ಅವರು ದೇರಪ್ಪನನ್ನು ವೃದ್ಧಾಪ್ಯದಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಳ್ಳಿಯ ಮನೆಯನ್ನು ದುರಸ್ತಿ ಮಾಡಿ ವಾಸಯೋಗ್ಯವನ್ನಾಗಿ ಮಾಡಿಕೊಡುತ್ತಾರೆ. ದೇರಪ್ಪ ತೃಪ್ತಿಯಿಂದ ಅದೇ ಮನೆಯಲ್ಲಿ ಒಂಟಿಯಾಗಿ ಕಳೆಯುತ್ತಾನೆ. ಕಾದಂಬರಿಯ ಕೊನೆಯಲ್ಲಿ ಹಳೆಯ ನೆನಪುಗಳ ಭ್ರಮೆಯಲ್ಲಿ ಅವನು ಇಹಲೋಕವನ್ನು ತ್ಯಜಿಸುವುದನ್ನು ಸೂಚ್ಯವಾಗಿ ಹೇಳುವ ದೃಶ್ಯವಿದೆ.

    ದೇರಪ್ಪನ ಕಥೆಯೊಂದಿಗೆ ಲೇಖಕರು ಕೇರಳದ ಹಳ್ಳಿಯ ಬದುಕನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಹಳ್ಳಿಯಲ್ಲಿ ಜನರ ನಡುವಣ ಸೌಹಾರ್ದ ಸಂಬಂಧಗಳು, ಪರಸ್ಪರ ಸಹಾಯ ಮಾಡುವ ಔದಾರ್ಯ, ದೋಣಿಯ ಮೂಲಕ ಜನರು ಹೊಳೆ ದಾಟುವ ದೃಶ್ಯಗಳು, ಹೊಳೆಯಲ್ಲಿ ಬಟ್ಟೆ ಒಗೆಯುವುದು, ಕೃಷಿ ಕೆಲಸಗಳು, ಇಡೀ ಊರಿಗೇ ಇರುವ ಒಂದೇ ಒಂದು ಎತ್ತಿನ ಗಾಡಿ, ಒಬ್ಬರೇ ವೈದ್ಯರು – ಇನ್ನೂ ಹಲವಾರು ವಿವರಗಳು ಕೃತಿಯುದ್ದಕ್ಕೂ ಕಾಣಸಿಗುತ್ತವೆ. ನೆರೆಯ ದೃಶ್ಯವಂತೂ ಎದೆ ನಡುಗಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಜನರ ಉತ್ಸಾಹ, ಬಾವುಟಗಳನ್ನು ಹಿಡಿದು ಘೋಷಣೆ ಕೂಗುವುದು, ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುವುದು, ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಲಾಠಿಯೇಟು ತಿನ್ನುವುದು, ಜೈಲಿನಲ್ಲಿ ಅವರ ದುರವಸ್ಥೆ- ಎಲ್ಲವನ್ನೂ ಲೇಖಕರು ತಮ್ಮ ಚಿತ್ರಕಶಕ್ತಿಯಿಂದ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶದಲ್ಲೂ ಜನರ ಜೀವನಕ್ರಮದಲ್ಲೂ ಆದ ಪರಿವರ್ತನೆಗಳ ಚಿತ್ರಣವೂ ಇದೆ. ಗುಲಾಮಿ ಮನೋಭಾವ ಇದ್ದವರು ಸ್ವಾತಂತ್ರ್ಯಾನಂತರವೂ ಬದಲಾಗಲಿಲ್ಲ ಅನ್ನುವುದನ್ನು ಜನರ ವರ್ತನೆಯ ಮೂಲಕ ಲೇಖಕರು ತೋರಿಸುತ್ತಾರೆ. ಸ್ವಾತಂತ್ರ್ಯಕ್ಕೆ ಮೊದಲು ಬಡವರು ಕ್ರೂರಿಗಳಾದ ಭೂಮಾಲೀಕರನ್ನು ಕಂಡರೆ ಭಯಭಕ್ತಿಯಿಂದ ವರ್ತಿಸುತ್ತಿದ್ದವರು ಸ್ವಾತಂತ್ರ್ಯಾನಂತರ ರಾಜಕಾರಣಿಗಳ ಮುಂದೆ ಕೈಜೋಡಿಸಿ ಗುಲಾಮರಂತೆ ನಿಲ್ಲುತ್ತಿದ್ದ ವ್ಯಂಗ್ಯವನ್ನು ತೋರಿಸುತ್ತಾರೆ.

    ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ ಸಾಂಸ್ಕೃತಿಕ ಅಂಶಗಳ ಚಿತ್ರಣವೂ ಇಲ್ಲಿ ಬಹಳ ಚೆನ್ನಾಗಿ ಬಂದಿವೆ. ಇಲ್ಲಿ ಅನುವಾದಕರು ಕೇರಳದ ಕೂತ್ತ್- ಕೂಡಿಯಾಟಂ ಮೊದಲಾದ ಅನೇಕ ಕಲೆಗಳಿಗೆ ಪರ್ಯಾಯವಾಗಿ ಅವುಗಳಿಗೆ ಸಾಮ್ಯವಿರುವ ತುಳುನಾಡಿನ ಯಕ್ಷಗಾನ, ಭೂತಾರಾಧನೆ, ಆಟಿ ಕಳಂಜ, ಸೋಣೆಜೋಗಿ ಮೊದಲಾದ ಪದ್ಧತಿಗಳನ್ನು ಓದುಗರ ಹಿತದೃಷ್ಟಿಯಿಂದ ಬಳಸಿದ್ದಾರೆ. ‌ಆ ಕಲಾವಿದರ ಕುಣಿತ ಮತ್ತು ಸಂಭಾಷಣೆಗಳನ್ನು ನಿಖರವಾಗಿ ಬರೆಯಲು ಅನುವಾದಕರು ಬಹಳಷ್ಟು ಅಧ್ಯಯನ ಮಾಡಿರುತ್ತಾರೆ.‌ ಒಂದು ಒಳ್ಳೆಯ ಅನುವಾದಿತ ಕೃತಿಗೆ ‘ದೇರಪ್ಪ’ ಸಾಕ್ಷಿಯಾಗಿ ನಿಲ್ಲುವುದಂತೂ ಖಂಡಿತ.

    ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಪ್ರಶಾಂತ್ ಬಾಬು ಕೈದಪ್ರಂ : ಕಣ್ಣೂರು ಜಿಲ್ಲೆಯ ಕೈದಪ್ರಂ ಗ್ರಾಮದಲ್ಲಿ ಜನಿಸಿದ ಪ್ರಶಾಂತ್ ಬಾಬು ಈಗ ಕಣ್ಣೂರಿನ ಮಾದಾಮಂಗಲಂ ನಿವಾಸಿ. ಚೆರುಕುನ್ನ್ ಸರ್ಕಾರಿ ಶಾಲೆಯಲ್ಲಿ ಭೌತವಿಜ್ಞಾನ ಶಿಕ್ಷಕರಾಗಿರುವ ಇವರ ಕಥೆಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ‘ವಧಶಿಕ್ಷ’ ಎಂಬ ಕಥೆಗೆ 2014ರ ಕೊಲ್ಲಂ ಜಿಲ್ಲೆ ಪುನಲೂರ್ ಕುದಿರಚ್ಚಿರ ಸಾಂಸ್ಕೃತಿಕ ಸಂಘಟನೆಯ ಹರಿಶ್ರೀ ರಾಧಾಕೃಷ್ಣನ್ ಪ್ರಶಸ್ತಿ ಲಭಿಸಿದೆ. ‘ದೇರಪ್ಪನ್’ ಇವರ ಮೊದಲ ಕಾದಂಬರಿ.

    ಲೇಖಕ : ವಿಕ್ರಂ ಕಾಂತಿಕೆರೆ, ಪತ್ರಕರ್ತ : ಕಾಸರಗೋಡು ಜಿಲ್ಲೆ ಕೂಡ್ಲು ರಾಮದಾಸನಗರದ ಕಾಂತಿಕೆರೆ ಗ್ರಾಮದಲ್ಲಿ ಜನಿಸಿದ ವಿಕ್ರಂ ಮೈಸೂರು, ಹುಬ್ಬಳ್ಳಿ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ಕ್ರೀಡಾ ಪತ್ರಕರ್ತ; ಸಾಹಿತ್ಯ ಮತ್ತು ಕಲಾಸಕ್ತ. ಕರ್ನಾಟಕ ಮಾಧ್ಯಮ ಅಕಾಡೆಮಿ, ಚರಕ, ರಾಜ್ಯ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರಿನ ರೋಟರಿ ಮಿಡ್‌ಟೌನ್ ಪ್ರಶಸ್ತಿಗೆ ಭಾಜನರಾಗಿರುವ ಅವರ ಕಾವೇರಿ ತೀರದ ಪಯಣ (ಒ.ಕೆ. ಜೋಣಿ ಅವರ ಕಾವೇರಿಯೋಡೊಪ್ಪಂ ಎಂಡೆ ಯಾತ್ರಗಳ್) ಪ್ರವಾಸ ಕಥನವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಉಮಾಕೇರಳಂ (ಉಳ್ಳೂರು ಪರಮೇಶ್ವರ ಅಯ್ಯರ್ ಅವರ ಉಮಾಕೇರಳಂ) ಮಹಾಕಾವ್ಯವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದ್ದು, ಭಗವಂತನ ಸಾವು (ಕೆ.ಆರ್. ಮೀರಾ ಅವರ ಭಗವಾಂಡೆ ಮರಣಂ) ಕಥಾಸಂಕಲನವನ್ನು ಬಹುರೂಪಿ ಹೊರತಂದಿದೆ. ದೇರಪ್ಪ (ದೇರಪ್ಪನ್-ಮಲಯಾಳಂ; ಪ್ರಶಾಂತ್ ಬಾಬು ಕೈದಪ್ರಂ) ಕಾದಂಬರಿಯನ್ನು ಬೆಂಗಳೂರಿನ ಶುಭ ಮುದ್ರಣ ಪ್ರಕಾಶನ ಹೊರತಂದಿದೆ. ಕನ್ನಡದಿಂದ ಮಲಯಾಳಂಗೂ ಕವಿತೆ, ಪ್ರವಾಸಕಥನ ಅನುವಾದ ಮಾಡಿದ್ದಾರೆ. ಅನುವಾದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿ ಸಂದಿದೆ.
    ಸಂಪರ್ಕ : 9480631755/9738031974

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleನೆನಪಿನಂಗಳದಲ್ಲಿ ನಾವುಡರು ಮತ್ತು ಧಾರೇಶ್ವರರು ಸಂಸ್ಮರಣಾ ಮತ್ತು ಅಭಿನಂದನಾ ಕಾರ್ಯಕ್ರಮ | ಮೇ 31
    Next Article ಬೆಂಗಳೂರಿನ ಕನ್ನಡ ಭವನದಲ್ಲಿ ‘ಕರ್ನಾಟಕ ಸಂಘಟಕರ ಸಮಾವೇಶ’ | ಮೇ 25
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.