Subscribe to Updates

    Get the latest creative news from FooBar about art, design and business.

    What's Hot

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ವರನಟನ ನೂರೊಂದು ನೆನಪು
    Article

    ಪುಸ್ತಕ ವಿಮರ್ಶೆ | ವರನಟನ ನೂರೊಂದು ನೆನಪು

    April 29, 2026No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಡಾ. ರಾಜಕುಮಾರ್ ಬಹುತ್ವದ ಪ್ರಜ್ಞೆ’ ಇದು ಜಿ. ಪ್ರಶಾಂತ ನಾಯಕ್ ಇವರ ಇತ್ತೀಚಿನ ಕೃತಿ. ರಾಜಕುಮಾರ್ ಕರ್ನಾಟಕದ ಪ್ರಾಥ:ಸ್ಮರಣೀಯ ಅಪೂರ್ವ ಸಾಧಕರಲ್ಲಿ ಒಬ್ಬರು. ಅವರ ಸಿನಿಮಾಗಳು ನಾಡಿನ ಜನಮಾನಸವನ್ನು ಇನ್ನಿಲ್ಲದಂತೆ ತಟ್ಟಿ ಮುಟ್ಟಿ ಪ್ರಭಾವಿಸಿವೆ. ರಾಜಕುಮಾರ್ ಬದುಕಿದ್ದಾಗಲೇ ದಂತಕಥೆಯಾದಂತಹ ವಿರಾಟ ಪುರುಷ. ಒಬ್ಬ ಸಿನಿಮಾ ನಟ ಒಂದು ನಾಡಿನ ಜನ ಸಮುದಾಯವನ್ನು ಹೇಗೆಲ್ಲ ಪ್ರಭಾವಿಸಿದರು ಎಂಬುದರ ಚಿತ್ರಣದ ಜೊತೆಗೆ ರಾಜಕುಮಾರ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆಯ ಭಾವವೆಂದು ಇಲ್ಲಿ ಪರಿಭಾವಿಸಲಾಗಿರುವುದು ವಿಶೇಷ. ರಾಜಕುಮಾರ್ ಎನ್ನುವ ಹೆಸರು ಕನ್ನಡ ಕರ್ನಾಟಕದ ಸಂದರ್ಭಕ್ಕೆ ಒಂದು ವಿಶಿಷ್ಟವಾದ ರೂಪಕದಂತೆ ಎಂಬುದನ್ನು ಮನೋಜ್ಞವಾಗಿ ಇಲ್ಲಿ ಅನಾವರಣಗೊಳಿಸಲಾಗಿದೆ.

    ವರನಟ ರಾಜಕುಮಾರ್ ಅವರು ಕನ್ನಡ ಚಿತ್ರರಂಗವನ್ನು ರೂಪಿಸಿದ ಮಹಾನ್ ಚೇತನ. ಅವರು ‘ಬೇಡರ ಕಣ್ಣಪ್ಪ’ದ ಮೂಲಕ ಬೆಳ್ಳಿತೆರೆ ಪ್ರವೇಶಿಸಿ, ಚಿತ್ರರಂಗಕ್ಕೆ ಸುವರ್ಣ ಯುಗ ತಂದುಕೊಟ್ಟ ಮೇರುಪ್ರತಿಭೆ. 200ಕ್ಕೂ ಹೆಚ್ಚು ಯಶಸ್ವಿ ಚಿತ್ರಗಳನ್ನು ನೀಡಿದ ಅವರು ರಿಮೇಕ್‌ಗಿಂತ ಕಾದಂಬರಿ ಆಧಾರಿತ ಚಿತ್ರಗಳಿಗೆ ಒತ್ತು ನೀಡಿ, ಕನ್ನಡ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿದರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯ ಪಾತ್ರಗಳಲ್ಲಿ ಮಿಂಚಿದ ಡಾ. ರಾಜ್‌ ಯಶಸ್ಸಿನ ಉತ್ತುಂಗದಲ್ಲೂ ತಮ್ಮ ಸರಳತೆಯನ್ನು ಕಾಯ್ದುಕೊಂಡು ನಾಡಿಗೆ ಅಭಿಮಾನಿಗಳಿಗೆ ಮಾದರಿಯಾದವರು. ಹೀಗೆ ಸಮಷ್ಟಿ ನೆಲೆಯಿಂದ ನಾಯಕರಾಗಿ ರೂಪುಗೊಂಡ ವ್ಯಕ್ತಿತ್ವ ರಾಜ್ ಅವರದು ಎಂಬುದನ್ನು ಈ ಕೃತಿಯಲ್ಲಿ ಸರಳವಾಗಿ ಸುಂದರವಾಗಿ ಲೋಕ ಸಮ್ಮುಖಗೊಳಿಸಲಾಗಿದೆ.

    ರಾಜಕುಮಾರ್ ಅವರು ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿ ಬಾಳಿದವರು. ಕನ್ನಡತನ ಕನ್ನಡ ಚಲನಚಿತ್ರ ಮತ್ತು ಕನ್ನಡ ಸಮಾಜದ ಜೊತೆ ಜೊತೆಗೆ ಪರಸ್ಪರ ಎಂಬರ್ಥದಲ್ಲಿ ರಾಜಕುಮಾ‌ರ್ ಬೆಳೆದು ಬದುಕಿದ್ದು ಒಂದು ವಿಶಿಷ್ಟ ಸಾಂಸ್ಕೃತಿಕ ಕಥನ. ತನ್ಮೂಲಕ ಕನ್ನಡದ ಸಂದರ್ಭಕ್ಕೆ ರಾಜಕುಮಾರ್ ಕಲಾವಿದನಾಗಿ, ಸಿನಿಮಾ ಎಂಬ ಮಾಯಲೋಕವನ್ನು ಮೀರಿ ಹತ್ತಾರು ಭಾವಗಳಿಗೆ, ಅರ್ಥಗಳಿಗೆ, ರೂಪಗಳಿಗೆ ಪರ್ಯಾಯವಾಗಿ ದಂತಕತೆಯಾಗಿ ಐತಿಹ್ಯವಾಗಿ ಸಾಂಸ್ಕೃತಿಕ ನಾಯಕನ ಸ್ಥಾನ ಪಡೆದವರು ಎಂಬ ಕುತೂಹಲಕರ ಚಿಂತನ ಮಂಥನ ಹಾಗೂ ಅವರ ಸಾರ್ಥಕ ಬದುಕಿನ ವೃತ್ತಾಂತ ಈ ಕೃತಿಯಲ್ಲಿ ಆಪ್ತ ನೆಲೆಯಲ್ಲಿ ಚಿತ್ರಣಗೊಂಡಿದೆ.

    ಹದಿಮೂರು ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ರಾಜ್ ಬದುಕಿನ ಹಾದಿ, ಮುತ್ತುರಾಜ ರಾಜಕುಮಾರ್ ಆದದ್ದು, ಚಿತ್ರರಂಗದಲ್ಲಿ ತಮ್ಮ ನಟನೆ, ಗಾಯನಗಳ ಮೂಲಕ ಅವರು ಹೊಸ ಸಂಚಲನವನ್ನು ಉಂಟು ಮಾಡಿದ್ದು, ಅವರ ಸಿನಿಮಾಗಳ ಗುಣಾತಿಶಯ, ಕನ್ನಡದ ಕರ್ನಾಟಕದ ಕನ್ನಡ ಸಿನಿಮಾರಂಗದ ಅತ್ಯಮೂಲ್ಯ ಆಸ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಅವರು ಹೆಸರು ಮಾಡಿದ್ದು, ರಾಜಕುಮಾರ ಅವರು ತಮ್ಮ ಪಾತ್ರಗಳ ಮೂಲಕ ತಾವು ಬೆಳೆಯುತ್ತಲೇ ಕನ್ನಡ ಕರ್ನಾಟಕದ ಸಮಾಜವನ್ನು ನಿರಂತರ ಅನುಸಂಧಾನ ಮಾಡಿದ ಬಗೆ ಇಲ್ಲಿ ಸೊಗಸಾಗಿ ದಾಖಲಾಗಿದೆ. ರಾಜಕುಮಾರ್ ಹೀಗೊಂದು ರಮ್ಯ ನೆನಪಾಗಿ, ಅದ್ಭುತಗಾನವಾಗಿ, ಅನನ್ಯ ಭಾವವಾಗಿ, ಸಾಮುದಾಯಿಕ ಶಕ್ತಿಯಾಗಿ ರೂಪುಗೊಳ್ಳುತ್ತಲೇ ಇದ್ದಾರೆ. ಈ ನೆಲದ ಪಿಡುಗುಗಳಾದ ಜಾತಿ, ಮತ, ಪಂಗಡಗಳೇ ಮೊದಲಾದ ವಿಪರ್ಯಾಸಗಳಿಂದಾಚೆಗೆ ಎಲ್ಲರಿಂದಲೂ ಪ್ರೀತಿಸಲ್ಪಟ್ಟ ಒಬ್ಬನೇ ‘ರಾಜಕುಮಾರ್’ ಕನ್ನಡಕ್ಕೆ ಒದಗಿ ಬಂದದ್ದು ಕನ್ನಡಿಗರ ಪುಣ್ಯ. ಜನ್ಮಭೂಮಿ ಎಂದರೆ ಅನ್ನದ, ಋಣದ, ಅಸ್ತಿತ್ವದ ಅರ್ಥ ಎನ್ನುವುದನ್ನು ಅರಿವು ಮಾಡಿಕೊಂಡು ಅದರಂತೆಯೇ ಸಾರ್ಥಕವಾಗಿ ಬದುಕಿದ ರಾಜಕುಮಾರ್ ನಿಜದ ಅರ್ಥದಲ್ಲಿ ಈ ನಾಡಿನ ಅಣ್ಣನೇ ಆಗಿದ್ದರು. ತನ್ಮೂಲಕ ಈ ನೆಲದ ಬಹುತ್ವದ ಪ್ರಜ್ಞೆಯೂ ಹೌದು ಎಂಬ ಸಂಗತಿಯನ್ನು ಈ ಕೃತಿ ರುಜುವಾತುಪಡಿಸಿದೆ.

    ರಾಜಕುಮಾರ್ ಕನ್ನಡಿಗರ ಭಾವಕೋಶದಲ್ಲಿ ಸೇರಿಹೋದ ಮಹಾನ್ ನಟ ಸಾಮ್ರಾಟ. ತಮ್ಮ ಅಭಿನಯ, ಮಾತು ಕೃತಿಗಳ ಮೂಲಕ ಕರ್ನಾಟಕ ಸಂಸ್ಕೃತಿಯ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ. ಗೋಕಾಕ್ ಚಳುವಳಿ, ಡಬ್ಬಿಂಗ್ ವಿರೋಧಿ ಹೋರಾಟ, ಕಾವೇರಿ ನದಿ ನೀರಿನ ಚಳುವಳಿಗಳಲ್ಲಿ ರಾಜಕುಮಾರ್ ನಿರ್ಬಿಡೆಯಿಂದ ಮುಂಚೂಣಿಯಲ್ಲಿ ನಿಂತು ಕನ್ನಡಿಗರ ಹಿತ ಕಾಯುವ ಕೆಲಸವನ್ನು ಮಾಡಿದ ಪುಣ್ಯಪುರುಷ. ಇನ್ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಲೇ ಕನ್ನಡ, ಕರ್ನಾಟಕ, ಕನ್ನಡಿಗ ಎನ್ನುವುದಕ್ಕೆ ರಾಜಕುಮಾರ್ ತಣ್ಣಗೆ ಎನ್ನುವಂತೆ, ತನ್ನನ್ನೇ ಮೀರಿದಂತೆ ಅಸ್ಮಿತೆಯನ್ನು ಒದಗಿಸಿದ್ದು ವಿಶಿಷ್ಟ ಸಂಗತಿ ಮತ್ತು ಚಾರಿತ್ರಿಕವಾದದ್ದು. ಸಿನಿಮಾಗಳ ಪಾತ್ರವಾಗುತ್ತಲೇ ಬಹುಜನರ ಬದುಕಿಗೆ ಮಾದರಿಯಾದದ್ದು, ಎಲ್ಲರ ಮನೆಯ ಸದಸ್ಯನಂತಾದದ್ದು ಅಸಾಮಾನ್ಯ ಸಂಗತಿಯೇ ಹೌದು. ಇದು ಸುಮ್ಮನೇ ಘಟಿಸಿದ್ದಂತಲ್ಲ; ಕಾಕತಾಳೀಯವೂ ಅಲ್ಲ. ರಾಜಕುಮಾರ್ ದೇವತಾ ಮನುಷ್ಯನಾಗಿ ಆದರ್ಶ ಪುರುಷನಾಗಿ ಅಪಾರ ಅಭಿಮಾನಿಗಳ ಪ್ರೀತ್ಯಾದರಗಳಿಗೆ ಪಾತ್ರರಾಗಲು ಕಾರಣವೇನು ಎಂಬುದರ ಹುಡುಕಾಟವೂ ಇಲ್ಲಿದೆ.

    ಈ ಕೃತಿಯಲ್ಲಿ ರಾಜಕುಮಾರ್ ಅವರ ಒಟ್ಟು ಸಿನಿಮಾಗಳಲ್ಲಿನ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಮುಖ್ಯವಾದ ಸಂಗತಿಗಳನ್ನು ಅರಿಯುವ ಪ್ರಯತ್ನವಿದೆ. ತಾವು ನಿರ್ವಹಿಸಿದ ಪಾತ್ರಗಳ ಜೊತೆಗೆ ರಾಜ್ ಅವರ ವ್ಯಕ್ತಿತ್ವ ಹೇಗೆ ಅನುಸಂಧಾನ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ರಾಜಕುಮಾರ್ ಅವರು ಈ ನೆರೆದ ತಿಳುವಳಿಕೆಯ ಮತ್ತು ಬಹುತ್ವದ ಪ್ರತಿಕವೇ ಆಗಿದ್ದುದನ್ನು ರಾಜಕುಮಾರ್ ಅವರ ಪಾತ್ರಗಳ ವೈವಿಧ್ಯತೆಗಳನ್ನು ಇಲ್ಲಿ ಹೃದ್ಯವಾಗಿ ಕಟ್ಟಿಕೊಡಲಾಗಿದೆ.

    ರಾಜಕುಮಾರ್ ಅವರು ಐದು ದಶಕಗಳ ಕಾಲ ಒಂದಲ್ಲ ಒಂದು ಕಾರಣಕ್ಕೆ ಕನ್ನಡ ಸಿನಿಮಾ ರಂಗವನ್ನು ಪ್ರಭಾವಿಸಿದ್ದು ಚಾರಿತ್ರಿಕ ಸಂಗತಿಯೇ ಆಗಿದೆ. ನಟರಾಗಿ, ನಾಯಕರಾಗಿ ನಾಡಿನ ಭಾಷೆಯ ಅಭಿಮಾನಿಯಾಗಿ, ಹೋರಾಟಗಾರರಾಗಿ, ಕಲಾವಿದನಾಗಿ, ಯೋಗಪಟುವಾಗಿ ಎಲ್ಲಕ್ಕೂ ಕಳಸವಿಟ್ಟಂತೆ, ಕನ್ನಡದ ಬಹುಜನರ ‘ಅಣ್ಣಾವ್ರು ‘ಹಾಗೆ ಬೆಳೆದದ್ದು ಉಳಿದಿದ್ದು ಖಂಡಿತವಾಗಿ ಆಕಸ್ಮಿಕವಲ್ಲ. ಅದೊಂದು ಸಾಧನೆಯ ಮಹಾಮಾರ್ಗವೇ ಹೌದು ಎಂಬುದನ್ನು ಇಲ್ಲಿ ಸವಿವರವಾಗಿ ನಿರೂಪಿಸಲಾಗಿದೆ.

    ರಾಜಕುಮಾರ್ ಅವರು ಒಬ್ಬ ವ್ಯಕ್ತಿ ‘ಹೀಗೆ’ ಬದುಕಬೇಕು ಎಂಬ ಮಾದರಿಯೊಂದನ್ನು ಸೃಷ್ಟಿಸಿದರು. ಈ ಕಾರಣಕ್ಕಾಗಿ ರಾಜಕುಮಾರ್ ಅವರದು ನಿರ್ದಿಷ್ಟ ಚೌಕಟ್ಟಿಗೆ ಮಾತ್ರ ಸೀಮಿತವಾಗುವ ವ್ಯಕ್ತಿತ್ವವಲ್ಲ. ಡಾ. ರಾಜಕುಮಾರ್ ಅವರು ಶ್ರೇಣೀಕೃತ ಸಮಾಜದ ಅಂಚಿನಲ್ಲಿರುವ ತಳ ಸಮುದಾಯವೊಂದರಲ್ಲಿ ಜನಿಸಿದವರು. ಯಾವ ಪ್ರಭಾವಿ ಹಿನ್ನೆಲೆಗಳಿಲ್ಲದಿದ್ದರೂ ಕೇವಲ ತಮ್ಮ ಸ್ವಪ್ರತಿಭೆಯೊಂದರಿಂದಲೇ ಅಗಾಧವಾಗಿ ಬೆಳೆದು ನಿಂತವರು. ಅಭಿನಯವನ್ನು ಧ್ಯಾನಿಸಿ ಕಲಾಜಗತ್ತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿ ಕನ್ನಡ ಜನ ಮಾನಸದಲ್ಲಿ ಚಿರಸ್ಥಾಯಿಯಾದವರು. ಅವರ ಜೀವನ ಯಾನದ ಏಳುಬೀಳುಗಳನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

    ಮುತ್ತುರಾಜ್ ರಾಜಕುಮಾರ್‌ನಾಗಿ ರಂಗಪ್ರವೇಶ ಮಾಡಿದ, ಪೂರ್ಣ ಪ್ರಮಾಣದ ನಾಯಕನಾದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ತೆರೆಕಂಡದ್ದು 1954ರಲ್ಲಿ. ಕನ್ನಡ ಸಿನಿಮಾಗಳು ಬೆಳ್ಳಿತೆರೆಗೆ ಬಂದ ಕಳೆದ 14 ವರ್ಷಗಳಲ್ಲಿ ಅಂದರೆ ಬೇಡರ ಕಣ್ಣಪ್ಪ ಸಿನಿಮಾ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಹೊತ್ತಿಗೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳು ಕೇವಲ ನಲ್ವತ್ತು ಮಾತ್ರ ಎನ್ನುವುದು ಆರಂಭ ಕಾಲದ ಕನ್ನಡ ಚಲನಚಿತ್ರಗಳ ಪರಿಸ್ಥಿತಿಯನ್ನು ಸ್ಪಷ್ಟಪಡಿಸುವಂತದ್ದೇ ಹೌದು. 1954ರಲ್ಲಿ ಒಟ್ಟು ಎಂಟು ಕನ್ನಡ ಸಿನಿಮಾಗಳು ತಯಾರಾಗಿ ಬಿಡುಗಡೆಯ ಭಾಗ್ಯ ಕಂಡವು. ಈ ವರ್ಷ ಬೆಳ್ಳಿತೆರೆಗೆ ನಾಯಕ ನಟನಾಗಿ ಪ್ರವೇಶ ಪಡೆದ ಮುತ್ತುರಾಜ್ ಎಂಬ ರಂಗಭೂಮಿಯ ಕಲಾವಿದ ಮುಂದೆ 2000ದ ಇಸವಿಯವರೆಗೆ ಸರಿಸುಮಾರು ಐದು ದಶಕಗಳ ಕಾಲ ನಾಯಕ ನಟನಾಗಿ ಇನ್ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನರಿಗೆ ಆಪ್ತವಾದದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಅಂತೆಯೇ ರಾಜಕುಮಾರ್ ಕ್ರಮಿಸಿದ ಹಾದಿ ಹೂವಿನದ್ದಾಗಿರಲಿಲ್ಲ. ಐದು ದಶಕಗಳ ಕಾಲ ಎರಡು ಶತಕಗಳನ್ನು ದಾಟಿದ ಸಿನಿಮಾಗಳನ್ನು ನೀಡಿದ ನಟನೊಬ್ಬ ಕನ್ನಡದ ಜನಮಾನಸದಲ್ಲಿ ಉಳಿದದ್ದು ಖಂಡಿತವಾಗಿ ಸಂವೇದನೆ ಮತ್ತು ಸಹೃದಯತೆಯ ಜನತೆಯ ಪ್ರಜ್ಞಾಭಾವದ ಯಶಸ್ವಿಯಾದ ಕಥನವೇ ಹೌದು. ಇಂತಹ ಒಂದು ಸತತವಾದ ನಿರಂತರತೆಯ ಯಶಸ್ಸನ್ನು ಕಾಯ್ದುಕೊಂಡ ಸಂಗತಿ ಕೇವಲ ಪವಾಡವೆಂಬಂತೆ ಘಟಿಸಿದ್ದಾಗಿರಲಿಲ್ಲ. ಇದು ಕನ್ನಡ ಸಿನಿಮಾ, ಕನ್ನಡ ಜನತೆ, ಕನ್ನಡತನ, ಕರ್ನಾಟಕ ಮತ್ತು ರಾಜಕುಮಾ‌ರ್ ಎನ್ನುವುದು ಪರಸ್ಪರ ಎಂಬಂತೆ ಅನುಸಂಧಾನ ನಡೆಸಿಕೊಂಡು ಬೆಳೆದಂತಹ ಒಂದು ಸಾಂಸ್ಕೃತಿಕ ಸಂಗತಿಯಾಗಿತ್ತು ಮತ್ತು ಬಹುತ್ವದ ಪ್ರಜ್ಞೆಯ ರೂಪಕವಾಗಿತ್ತು ಎಂಬುದನ್ನು ಇಲ್ಲಿ ಮುನ್ನೆಲೆಗೆ ತಂದು ಚರ್ಚಿಸಿರುವುದು ಔಚಿತ್ಯಪೂರ್ಣ ಅಂಶ. ಇಂತಹ ಹಲವು ಕಾರಣಗಳಿಂದಾಗಿಯೇ ರಾಜಕುಮಾರ್ ಎಂದರೆ ಕನ್ನಡ ಸಿನಿಮಾಗಳು ಎಂದು ಬಹುಜನರು ಭಾವಿಸುವುದು ಸಹಜವೆಂಬಂತೆಯೇ ಕರ್ನಾಟಕದಲ್ಲಿ ನಡೆದುಹೋಯಿತು.

    ಮತ್ತೆ ಮತ್ತೆ ಮನೆಯಲ್ಲಿ ಆದರ್ಶದ ಸಂಬಂಧದ ಭಾವನೆಗಳೇ ಮೊದಲಾದ ಮಾತುಗಳೆಲ್ಲಾ ಬಂದಾಗ ರಾಜಕುಮಾರ್‌ ಸಿನಿಮಾ ಮತ್ತು ಅವರ ಪಾತ್ರಗಳೇ ಮಾದರಿಗಳಾಗಿದ್ದವು, ಆಕರಗಳಾಗಿದ್ದವು, ಉಲ್ಲೇಖಗಳಾಗಿದ್ದವು. ರಾಜಕುಮಾರ್‌ರನ್ನು ನೋಡಿಯೇ ಬದುಕನ್ನು ಕಲಿಯಬೇಕು ಎನ್ನುವುದು ಸರ್ವೇಸಾಧಾರಣವಾದ ಮಾತುಗಳಾಗಿದ್ದವು, ಉಪದೇಶಗಳಾಗಿದ್ದವು, ಪಾಠಗಳಂತಿದ್ದವು ‘ರಾಜಕುಮಾರ್’ ಎನ್ನುವ ಹೆಸರು ಕನ್ನಡದ ಬದುಕುಗಳಲ್ಲಿ ಹೀಗೆ ಉಂಟುಮಾಡಿದ ಪ್ರಭಾವ ನಾಡಿನ ಉದ್ದಗಲಕ್ಕೂ ಮನೆಮನೆಗಳಲ್ಲಿಯೂ ಕಂಡುಬರುವ ಸಾಮಾನ್ಯವಾದ ಅರಿವಷ್ಟೇ ಆಗಿರದೆ, ನಮ್ಮಲ್ಲಿ ಮೈಗೂಡಿ ಹೋದ ಸಂಸ್ಕಾರವೇ ಆಗಿತ್ತು. ನಮ್ಮ ಬಾಲ್ಯದಿಂದಲೂ ರಾಜಕುಮಾರ್ ಎನ್ನುವ ಪ್ರಭಾ ವಲಯವೊಂದು ನಮ್ಮನ್ನು ಆವರಿಸಿಕೊಳ್ಳುತ್ತಲೇ ಹೋಯಿತು. ರಾಜಕುಮಾರ್ ಅವರ ಸಿನಿಮಾ ಮತ್ತು ಹಾಡುಗಳು ನಮ್ಮ ಬಾಲ್ಯದ ಪಠ್ಯಗಳಿಗಿಂತಲೂ ಬಹುಮುಖ್ಯವಾದ ಆಕರಗಳಾಗಿದ್ದವು ಎಂಬುದನ್ನು ಯಾವುದೇ ಉತ್ಪೇಕ್ಷೆ ಇಲ್ಲದೆ ರಾಜಕುಮಾರ್ ಅವರ ವ್ಯಕ್ತಿತ್ವ ಜನಸಾಮಾನ್ಯರ ಮೇಲೆ ಮಾಡಿದ ಮೋಡಿಯನ್ನು ಬಹು ಪರಿಣಾಮಕಾರಿಯಾಗಿ ಇಲ್ಲಿ ಲೋಕಮುಖಗೊಳಿಸಲಾಗಿದೆ.

    ಭಾವಕ್ಕೆ ತಕ್ಕ ಧ್ವನಿಯನ್ನು ಹೊಂದಿಸಿ ಹಾಡುವ ಕಲೆಗಾರಿಕೆ ರಾಜ್ ಅವರ ಗಾಯನದ ವೈಶಿಷ್ಟತೆ ಎನ್ನುವುದು ಅವರ ನೂರಾರು ಮಧುರ ಗೀತೆಗಳನ್ನು ಆಲಿಸುವಾಗ ಮತ್ತೆ ಮತ್ತೆ ಕೇಳಬಹುದಾದ ಆಸಕ್ತಿಯನ್ನು ಉಂಟುಮಾಡುವಾಗ ಸ್ಪಷ್ಟವಾಗುವ ಸಂಗತಿ. ಭಾರತದಲ್ಲಿ ಹೀಗೆ ಏಕಕಾಲಕ್ಕೆ ನಟನೆ ಗಾಯನದಿಂದ ಉನ್ನತಿಯನ್ನು ಕಂಡ ಮತ್ತೊಬ್ಬ ನಟನಿಲ್ಲ ಎನ್ನುವುದು ಕನ್ನಡತನದ ಹೆಮ್ಮೆಯ ಹೌದು. ಈ ದೇಶದ ಮಹಾನ್ ನಟರೆಲ್ಲರೂ ಮುಕ್ತವಾಗಿ ರಾಜ್ ಅವರ ವಿಶಿಷ್ಟ ಪ್ರತಿಭೆಯನ್ನು ಮನದುಂಬಿ ಪ್ರಶಂಸಿರುವುದು ರಾಜ್ ಅವರ ಸಾಧನೆಗೆ ಸಂದಿರುವ ಗೌರವ. ರಾಜ್ ಅವರ ಗಾಯನದ ಯಶಸ್ಸಿನಲ್ಲಿ ಗಮನಿಸಲೇಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ ರಾಜ್ ಅವರಿಗೆ ಭಾಷೆಯ ಮೇಲಿದ್ದ ಹಿಡಿತ ಅವರಿಗೆ ಹಾಡಿನಲ್ಲಿ ಬಳಸಲಾಗುವ ಪದಗಳು ಸಂಸ್ಕೃತ, ಕನ್ನಡ, ಇಂಗ್ಲೀಷ್ ಎನ್ನುವ ಯಾವುದೇ ಪರಿಭಾಷೆಯದಾದರೂ ಅವರ ಧ್ವನಿಗೆ ಅದು ಸುಲಲಿತವಾಗಿ ಸಾಧ್ಯವಾಗುತ್ತಿತ್ತು.

    ಹಾಗಾಗಿ ಅಭಿಮಾನಿ ದೇವರುಗಳಿಗೆ ರಾಜ್ ಅವರ ಗೀತೆಯನ್ನು ನಿರಂತರವಾಗಿ ಹಾಡಿಕೊಳ್ಳುತ್ತಲೇ ಭಾಷೆಯ ಸೌಂದರ್ಯದೊಂದಿಗೆ ಅನುಸಂಧಾನ ಮಾಡೋದು ಸರಳವಾಗಿ ಸಾಧ್ಯವಾಗಿತೆನ್ನಬಹುದು. ಪ್ರೀತಿಯಿಂದ ಹಾಡಿಕೊಳ್ಳುತ್ತಲೇ ತಮ್ಮಷ್ಟಕ್ಕೆ ತಮ್ಮಂತೆ ಕಂಠಪಾಠವಾಗುವ ಯಶಸ್ಸು ಈ ಗೀತೆಗಳಿಂದ ದೊರಕುವುದಾಗಿತ್ತು.

    ರಾಜ್ ಅವರು ತಮ್ಮ ಗಾಯನದ ಮೂಲಕ ಅತ್ಯಂತ ಜನಪ್ರಿಯವಾದದ್ದು ಸಾಧ್ಯವಾಗುತ್ತಿದ್ದಂತೆ ಅವರ ಗಾಯನದ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿಕೊಂಡಿತು. ಅದರಲ್ಲಿ ಭಕ್ತಿ ಗೀತೆಗಳು, ಭಾವಗೀತೆಗಳು, ಜನಪದ ಗೀತೆಗಳು ಸೇರಿಕೊಂಡು ಕರ್ನಾಟಕದಲ್ಲಿ ಕ್ಯಾಸೆಟ್ (ಧ್ವನಿಸುರುಳಿ) ಪ್ರಪಂಚದ್ದೇ ಒಂದು ವಿಶಿಷ್ಟ ಪರಂಪರೆ. ಹಾಗಾಗಿ ಸಿನಿಮಾಗಳಿಗಿಂತ ಹಾಡುಗಳು ಧ್ವನಿ ಮುದ್ರಣಗೊಂಡು ಅವುಗಳೇ ಮೊದಲಿಗೆ ಬಿಡುಗಡೆಯಾಗಿ ಅವುಗಳ ಜನಪ್ರಿಯತೆ ಸಿನಿಮಾಕ್ಕೊಂದು ಪ್ರಚಾರದ ಸ್ವರೂಪವಾಗಿತ್ತು. ಅಪ್ರತಿಮ ಕಲಾವಿದ ರಾಜಕುಮಾರ್ ಅವರ ಅನನ್ಯತೆಯನ್ನು ಇಲ್ಲಿ ಆಕರ್ಷಕವಾಗಿ ಕಂಡರಿಸಲಾಗಿದೆ.

    ಡಾ. ರಾಜಕುಮಾರ್ ಬಹುತ್ವದ ಪ್ರಜ್ಞೆ
    ಡಾ. ಜಿ. ಪ್ರಶಾಂತ್ ನಾಯಕ್,
    ಕನ್ನಡ ವಿಶ್ವವಿದ್ಯಾಲಯ ಹಂಪಿ, ಬೆಲೆ ರೂ.320/-

    ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ, ಮುಂಬೈ
    ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

     

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕುಮಾರಿ ಮೇಧಾ ರಾವ್ ಭರತನಾಟ್ಯ ವಿಷಯದಲ್ಲಿ ಅಧ್ಯಯನಕ್ಕಾಗಿ ಆಯ್ಕೆ
    Next Article ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ನಾಗಸಂಪಿಗೆ’ ನಾಟಕ ಪ್ರದರ್ಶನ | ಏಪ್ರಿಲ್ 30
    roovari

    Add Comment Cancel Reply


    Related Posts

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    ವಿಶೇಷ ಲೇಖನ | ಮುಂಬೈ ಕನ್ನಡಿಗ, ಪತ್ರಕರ್ತನ ಸಾಧನೆ

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.