‘ಗೋಕಾಕರ ಸಂಗೀತಮಯ ಕಾವ್ಯಲೋಕ’ ಇದು ಅಂಜನಾ ಹೆಗಡೆ ಅವರ ಶೋಧ ಕೃತಿ. ಗೋಕಾಕರ ಸಂಗೀತಮಯ ಕಾವ್ಯಲೋಕವನ್ನು ಅಂಜನಾ ಅವರು ಆರೈದು ಅಲ್ಲಿನ ವಾಗರ್ಥಗಳ ಸಂಬಂಧವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿ ಕೊಟ್ಟಿದ್ದಾರೆ. ಈವರೆಗೆ ಯಾರೂ ಗುರುತಿಸದ, ಉಪೇಕ್ಷೆಗೆ ಒಳಗಾದ ವಿನಾಯಕರ ಕಾವ್ಯಲೋಕದಲ್ಲಿನ ಸಂಗೀತಮಯವಾದ ಲೋಕವೊಂದನ್ನು ಇಲ್ಲಿ ಬೆಳಕಿಗೆ ಹಿಡಿಯುವ, ಅವರ ಹಲವು ಕವಿತೆಗಳಲ್ಲಿ ಆಧ್ಯಾತ್ಮವು ಸಂಗೀತದೊಂದಿಗೆ ಒಂದಾಗಿ ಬೆರೆತಿರುವುದನ್ನು ಲೋಕಮುಖಕ್ಕೆ ಪರಿಚಯಿಸುವ ಪ್ರಯತ್ನ ಯಶಸ್ವಿಯಾಗಿ ನಡೆದಿದೆ. ನವೋದಯದಿಂದ ನವ್ಯದೆಡೆಗೆ ಸಾಗುವ ಪ್ರತಿಜ್ಞೆ ಮಾಡಿದ ಅನಂತರವೂ ಸಂಗೀತಪ್ರಜ್ಞೆ ವಿನಾಯಕರ ಕವಿತೆಗಳಲ್ಲಿ ಹಾಸು ಹೊಕ್ಕಾಗಿರುವುದನ್ನು, ಸ್ವರೂಪದಲ್ಲಿ ಭಿನ್ನವಾಗಿದ್ದೂ ತಮ್ಮೊಳಗೊಂದು ಸಂಗೀತದ ಸಂವೇದನೆಯನ್ನು ಹುದುಗಿಸಿಟ್ಟುಕೊಂಡ ಅವರ ಕವಿತೆಗಳ ಭಿನ್ನ ನಮೂನೆಯ ಮಟ್ಟನ್ನು ಸ್ಪಷ್ಟವಾಗಿ ಸ್ವಾರಸ್ಯ ಪೂರ್ಣವಾಗಿ ಗುರುತಿಸಿರುವುದು ಈ ಕೃತಿಯ ಬಲ್ಮೆ.
ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಶ್ರೇಯಸ್ಸು ವಿನಾಯಕ ಕೃಷ್ಣ ಗೋಕಾಕ ಅವರಿಗೆ ಸಲ್ಲುತ್ತದೆ. ವಿನಾಯಕ ಅವರು ಕನ್ನಡದ ಕೀರ್ತಿ ಶಿಖರದ ಪ್ರತೀಕವೂ ಆಗಿದ್ದಾರೆ. ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಸೇವೆಯ ಜತೆ ಜತೆಗೆ ಸಾಹಿತ್ಯದ ಮಹೋನ್ನತಿಯನ್ನು ಸಾಧಿಸಿದ ಧೀಮಂತ ಚೇತನ. ‘ವಿನಾಯಕ’ ಎಂಬ ಸಂಕ್ಷಿಪ್ತ ನಾಮದಿಂದ ಖ್ಯಾತರಾಗಿರುವ ಡಾ. ವಿನಾಯಕ ಕೃಷ್ಣ ಗೋಕಾಕರು ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿವಂತ ಅಸಾಧಾರಣ ಸಾಧಕರಲ್ಲಿ ಒಬ್ಬರು. ಆಧುನಿಕ ಕನ್ನಡ ಸಾಹಿತ್ಯದ ಮುಂಚೂಣಿಯಲ್ಲಿದ್ದ ಗೋಕಾಕರ ಕುರಿತು ಪರ್ಯಾಪ್ತ ಅಧ್ಯಯನ, ವಿಮರ್ಶೆ ಬಂದಿಲ್ಲ. ಅವರ ಕಾವ್ಯದ ನೆಲೆಬೆಲೆ ಇನ್ನೂ ಖಚಿತಗೊಂಡಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಈ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವ ದೃಷ್ಟಿಯಿಂದ ಸಾಂಪ್ರತ ಕೃತಿ ನಮಗೆ ಮುಖ್ಯವಾಗುತ್ತದೆ.
ಗೋಕಾಕರು ಬೇಂದ್ರೆ ಅವರ ಪ್ರೇರಣೆಯಿಂದ ಕನ್ನಡದಲ್ಲಿ ಬರೆಯಲು ತೊಡಗಿಕೊಂಡರು. ಸಂಕೀರ್ಣತೆಯ ಆರಾಧಕರಾದ ಅವರೊಬ್ಬ ಸಮರ್ಥ, ಪ್ರಯೋಗಶೀಲ, ಪ್ರವಾಸಪ್ರಿಯ, ಚಿಂತನಶೀಲ ಕವಿ. ತಮ್ಮ ಕಾಲದ ಕವಿಗಳಿಗಿಂತ ಬಹಳ ಭಿನ್ನವಾದ ಕಾವ್ಯಮಾರ್ಗದಲ್ಲಿ ಅವರು ಕ್ರಮಿಸಿದ್ದು ಈಗ ಇತಿಹಾಸ. ಹೊಸ ಮಾರ್ಗದ ಅನ್ವೇಷಕರಲ್ಲಿ ಅವರು ಒಬ್ಬರಾಗಿದ್ದರು. ಅವರ ಸಂತತ ಕಾವ್ಯ ಶ್ರದ್ಧೆ ದೊಡ್ಡದು. ನವ್ಯದಲ್ಲಿಯೂ ಅವರು ಮಾನವ್ಯವನ್ನು ಸಮನ್ವಯ ಸಮತೆ ಮಮತೆಯನ್ನು ಎತ್ತಿ ಹಿಡಿದವರು. ವಿನಾಯಕರ ಕಾವ್ಯದಲ್ಲಿ ನೀರು ನೆಲ ಗಾಳಿ ಈ ಮೂರು ತತ್ವಗಳು ಪ್ರಧಾನವಾದ ಸ್ಥಾನವನ್ನು ಪಡೆದುಕೊಂಡಿವೆ. ಇವು ಪ್ರಕೃತಿ ತತ್ವಗಳೂ ಹೌದು. ಸಂಗೀತ ಸಹ ಅದರ ಅವಿಭಾಜ್ಯ ಅಂಗವೇ ಆಗಿದೆ. ಗೋಕಾಕರ ಸಂಗೀತಮಯ ಕಾವ್ಯಲೋಕ, ಅವರ ಗೀತಗಳ ಒಳಜಗತ್ತು, ಅವರ ಗಾನಗಳ ರಾಜಮಾರ್ಗ, ಹಾಡುಗಳ ಹಾವಭಾವ, ವಾದ್ಯಗಳ ಪದಲಾಲಿತ್ಯ ಪಡಿಮೂಡಿದ ಬಗೆ, ಅಲ್ಲಿನ ಸಂಗೀತದ ರಿಂಗಣ, ಸಮಕಾಲೀನ ಸಂಗೀತ ಜಗತ್ತು, ಸಮನ್ವಯತೆಯ ಸ್ವರಾಲಾಪ ಹೀಗೆ ಎಂಟು ಅಧ್ಯಾಯ ಹಾಗೂ ಕೆಲವು ಉಪ ಅಧ್ಯಾಯಗಳಲ್ಲಿ ಗೋಕಾಕರ ಸಂಗೀತಮಯ ಕಾವ್ಯಲೋಕವನ್ನು ಇಲ್ಲಿ ಸೊಗಸಾಗಿ ಅನಾವರಣಗೊಳಿಸಲಾಗಿದೆ. ಗೋಕಾಕರು ನವ್ಯ ಮಾರ್ಗವನ್ನು ಆಯ್ದುಕೊಂಡಾಗಲೂ ನಾದಮಯವಾಗು ಒಳಗೂ ಹೊರಗೂ ಎನ್ನುವುದೇ ಅವರ ಬೀಜ ಮಂತ್ರವಾಗಿತ್ತು. ಅಂತಯೇ ಅವರ ಕಾವ್ಯ ಲೋಕ ನಾದಮಯವಾಗಿಯೇ ಇದೆ. ಅವರ ಪ್ರಗತಿಶೀಲ ಕವಿತೆಗಳಲ್ಲೂ ಸಂಗೀತವಿದೆ ಹೀಗೆ ಗೋಕಾಕರ ಸಂಗೀತ ಸಂವೇದನೆಯನ್ನು ಎತ್ತಿ ಹಿಡಿದಿರುವುದು ಈ ಕೃತಿಯ ಅನನ್ಯತೆ.
ವಿನಾಯಕ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ ಕಾವ್ಯ. ಅವರ ಈ ಮನೋಧರ್ಮವು ಯಾವ ತೆರದಲ್ಲಿ ಸಂಗೀತದ ಪರಿಕಲ್ಪನೆಗಳನ್ನು ತನ್ನದಾಗಿಸಿಕೊಂಡಿದೆ ಎಂಬುದನ್ನು ಹೊಸ ಒಳ ನೋಟಗಳೊಂದಿಗೆ ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಿರುವುದು ಈ ಕೃತಿಯ ಧನಾತ್ಮಕ ಅಂಶ. “ಕಾವ್ಯಸಂವೇದನೆಯು ಸಂಗೀತಪ್ರಜ್ಞೆಯೊಂದಿಗೆ ಸಮನ್ವಯಗೊಳ್ಳುವ ಪರಂಪರೆ ಅವರ ಕೃತಿಗಳಲ್ಲಿಯೂ ಮುಂದುವರಿದಿದೆ. ಅವರ ಅನೇಕ ಕವಿತೆಗಳಲ್ಲಿ ದಾಸಸಾಹಿತ್ಯದ ಹೊಳಹುಗಳಿವೆ, ಜಾನಪದ ಸಾಹಿತ್ಯದ ಪ್ರಭಾವವಿದೆ, ಸಂಗೀತದ ಪರಿಭಾಷೆಗಳು ಯಾವ ಪ್ರಭಾವಕ್ಕೂ ಒಳಗಾಗದ ರೀತಿಯಲ್ಲಿ ಹಾಸುಹೊಕ್ಕಾಗಿವೆ. ವಿಭಿನ್ನ ಅಭಿವ್ಯಕ್ತಿಗಳನ್ನು ಒಂದೇ ಕವಿತೆಯಲ್ಲಿ ವ್ಯಕ್ತಪಡಿಸುವ ಗೋಕಾಕರ ಕಾವ್ಯಪ್ರವೃತ್ತಿಯನ್ನು ವಿರೋಧಾಭಾಸವೆನ್ನಿಸದ ರೀತಿಯಲ್ಲಿ ನಿರ್ವಹಿಸಲು ಕೂಡ ಸಂಗೀತ ಸಂವೇದನೆ ಸಹಾಯಕ್ಕೆ ಬಂದಿರುವ ಉದಾಹರಣೆಗಳೂ ಅವರ ಕೃತಿಗಳಲ್ಲಿ ಸಿಗುತ್ತವೆ. ಪ್ರಾಸಬದ್ಧವಾದ ರಚನೆಗೆಂದೇ ಆಯ್ದುಕೊಂಡಿದ್ದಿರಬಹುದೆಂದು ಮೇಲ್ನೋಟಕ್ಕೆ ಭಾಸವಾಗುವ ಎಷ್ಟೋ ಪದಗಳು ಆಭಾಸವೆನ್ನಿಸದೇ, ಒಂದು ಸುಮಧುರವಾದ ಅನುಭವವನ್ನು ಸೃಷ್ಟಿಸಲು ಸಾಧ್ಯವಾಗಿದ್ದು ಕೂಡ ಸಂಗೀತಪ್ರಜ್ಞೆಯಿಂದಲೇ ಎಂದರೂ ತಪ್ಪಾಗಲಿಕ್ಕಿಲ್ಲ. ಗೋಕಾಕರ ಕಾವ್ಯದಂತೆ ಅವರ ಕಾವ್ಯದಲ್ಲಿರುವ ಸಂಗೀತಪ್ರಜ್ಞೆಯೂ ಅತ್ಯಂತ ಸೂಕ್ಷ್ಮವಾದದ್ದು; ಮತ್ತು ಗಮನಾರ್ಹವೂ! ಎಂಬ ವಿನೂತನ ಅಂಶಗಳನ್ನು ಇದೇ ಮೊದಲ ಬಾರಿಗೆ ತೆರೆದು ತೋರಿರುವುದು ಈ ಕೃತಿಯ ಹೆಚ್ಚುಗಾರಿಕೆ. ಸರಳ ಸುಂದರ ನಿರೂಪಣೆಯಿಂದ ಈ ಕೃತಿ ಅಷ್ಟೇ ವಾಚನೀಯವೂ ಆಗಿದೆ.
ಗೋಕಾಕರದು ದೈತ್ಯ ಪ್ರತಿಭೆ. ಅವರ ಕಾವ್ಯಕ್ಕೆ ಹಲವು ಆಯಾಮಗಳಿವೆ. ನಾದದ ಸುಧೆ ಗೋಕಾಕರ ಕಾವ್ಯದಲ್ಲಿ ಅಲ್ಲಲ್ಲಿ ಸುಲಲಿತವಾಗಿ ಹರಿದಿರುವುದನ್ನು ಇಲ್ಲಿ ಲೇಖಕರು ಯಶಸ್ವಿಯಾಗಿ ಗುರುತಿಸಿದ್ದಾರೆ. “ನೀರು ನೀರಾಗಿ ಬೆಳಗು/ನಾದಮಯವಾಗು ಒಳಗು ಹೊರಗು” ಸಮುದ್ರ ತನ್ನ ಅಲೆಗಳಿಗೆ ಮುಕ್ತವಾಗಿ ಚಲಿಸಲು ಅವಕಾಶ ಕಲ್ಪಿಸುವಂತೆ ಕಾವ್ಯಕ್ಕೂ ಸ್ವಾತಂತ್ರ್ಯ ಬೇಕೆನ್ನುವ ಅಭಿವ್ಯಕ್ತಿ ಇಲ್ಲಿದೆ. ನಾದವೆನ್ನುವುದು ಕೇವಲ ಶಬ್ದಗಳನ್ನು ಲಯಬದ್ಧವಾಗಿ ಜೋಡಿಸುವ ಸಂವೇದನೆಯಲ್ಲ, ಕವಿತೆಯ ಅಂತರಂಗವೂ ನಾದಮಯವಾಗಬೇಕೆನ್ನುವ ಪರಿಕಲ್ಪನೆಯನ್ನು ಇಲ್ಲಿ ಗಮನಿಸಬಹುದು. ಸಂಗೀತಗಾರನ ಮನೋಧರ್ಮವೇ ನಾದವಾಗಿ, ಗೀತೆಯಾಗಿ ಅಭಿವ್ಯಕ್ತಿಗೊಳ್ಳುವ ಹಾಗೆ ಕವಿಯ ಅಂತರಂಗದ ನೈಜ ಅಭಿವ್ಯಕ್ತಿ ಮಾತ್ರ ಭಾವಶುದ್ಧಿಯನ್ನೂ, ಸ್ವರಶುದ್ಧಿಯನ್ನೂ ಏಕಕಾಲಕ್ಕೆ ತನ್ನದಾಗಿಸಿಕೊಳ್ಳಬಹುದೆಂಬ ಅಭಿಪ್ರಾಯವೂ ಇಲ್ಲಿದೆ. ಸಂಗೀತದಂತೆ ಬದಲಾವಣೆಯ ಹಂಬಲವೂ ಗೋಕಾಕರ ರಚನೆಯ ಸ್ಥಾಯೀಭಾವಗಳಲ್ಲೊಂದು. ಈ ಕವಿತೆಯಲ್ಲಿ ಅವೆರಡೂ ಭಾವಗಳನ್ನು ಸಮನ್ವಯಗೊಳಿಸಿರುವ ಸಂರಚನೆಯಿದೆ ಎಂಬಲ್ಲಿ ಗೋಕಾಕರ ಕಾವ್ಯಕ್ಕೆ ಹೊಸ ಮೆರಗು ಬಂದಿದೆ. ಸಾಹಿತ್ಯ ಸಂಗೀತಗಳ ನಡುವಿನ ಸಂಬಂಧ ಅನುಬಂಧ ಕೈ ಕೈ ಹಿಡಿದು ಸಾಗುವುದು ವಿಶೇಷ.
‘ತಂಬೂರಿ’ ವಿನಾಯಕರ ಉತ್ತಮ ಕವಿತೆಗಳಲ್ಲಿ ಒಂದು. ಅದರ ಕೆಲವು ಸಾಲುಗಳು ಸರಳವಾಗಿ ಸುಂದರವಾಗಿ ಅಷ್ಟೇ ಧ್ವನಿಪೂರ್ಣವಾಗಿವೆ. “ಆನಿ ಅಂಬಾರ್ಯಾಕ ಕೂಲಿ ಕುಂಬಾರಗ/ ರತ್ನಗಂಬಳಿಯಾಕ, ಮಣಿಯಾಕ?/ ಶಂಭೋಶಂಕರ ಉಂಬಳಿ ಹಾಕಿಟ್ಟ /ತಂಬೂರಿ ಸಾಕೊಂದು ಕುಣಿಯಾಕ ! ಕಂಬ ಕಂಬವನೊಡೆದು ನರಸಿಂಹ ಬಂದಾ/ಜಂಬದ ಮಾತ್ಯಾಕ? ಭೂಮ್ಯಾಗ /ತಂಬೂರಿಯೊಳಗಿಂದ ಶಂಭೋಶಂಕರ ಬಂದಾ/ಓಂಕಾರ ಊದಿದ ಕಿವಿಯಾಗ !”. ಗೋಕಾಕರ ‘ತಂಬೂರಿ’ ಕವಿತೆ ತನ್ನೊಳಗೆ ಹಲವು ಅರ್ಥಗಳನ್ನು ತುಂಬಿಕೊಂಡು ಭಾವತರಂಗಗಳನ್ನು ಹುಟ್ಟಿಸುತ್ತದೆ. ಜಾನಪದ ಶೈಲಿಯಲ್ಲಿರುವ ಈ ಕವಿತೆಯಲ್ಲಿ ತಂಬೂರಿ ಕೇವಲ ಸಂಗೀತವಾದ್ಯವಾಗದೆ, ಬದುಕಿನ ಸೂಕ್ಷ್ಮ ತಂತಿಗಳನ್ನು ಮೀಟುವ ಕೆಲಸ ಮಾಡುತ್ತದೆ. ತಂಬೂರಿ ಇಲ್ಲಿ ಬದುಕಿನ ರೂಪಕವಾಗಿ, ಅದರ ತಂತಿಗಳು ಬದುಕಿನ ಸಂತಸದ ಕ್ಷಣಗಳನ್ನು ಚಿಮ್ಮಿಸುವ ಪ್ರತಿಮೆಗಳಾಗಿ ಸತ್ಯದರ್ಶನ ಮಾಡಿಸುತ್ತವೆ. ರೂಪಕಗಳ ಮೂಲಕ ಇಹ-ಪರಗಳನ್ನು ಜೋಡಿಸುವ ಕೆಲಸವನ್ನು ಗೋಕಾಕರು ತಮ್ಮ ಬಹಳಷ್ಟು ಕವಿತೆಗಳಲ್ಲಿ ಮಾಡುತ್ತಾರೆ. ಹಾಗೆಯೇ ಸರಳವಾದ ಶೈಲಿಯಲ್ಲಿ, ಸರಳವಾದ ಸಂಗೀತವಾದ್ಯದ ಮೂಲಕ ಘನವಾದ ವಿಷಯ ವಸ್ತುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕವಿತೆ ‘ತಂಬೂರಿ’.”ಆತ್ಮದೊಳಗಿಂದ ಪರಮಾತ್ಮ ಬಂದಂತೆ ! ಮನುಷ್ಯನ ಹೃದಯವನ್ನು ತುಂಬಿರುವ ಅಹಂಕಾರಕ್ಕೆ ಅಂತ್ಯ ಹಾಡುವ ತೆರದಲ್ಲಿ ಇಲ್ಲಿ ಕಂಬವನ್ನೊಡೆದುಕೊಂಡು ನರಸಿಂಹ ಬರುತ್ತಾನೆ; ಹಾಗೆ ಖಾಲಿಯಾದ ಜಾಗವನ್ನು ಶಂಭೋಶಂಕರ ಬಂದು ಓಂಕಾರದ ನಾದದಿಂದ ತುಂಬುತ್ತಾನೆ. ತಂಬೂರಿಯನ್ನು ಕವಿ ಇಲ್ಲಿ ದೈವಿಕ ಶಕ್ತಿಯಾಗಿ, ಪೂರ್ಣತೆಯ ಪ್ರತೀಕವಾಗಿ, ಸಕಾರಾತ್ಮಕತೆಯ ಸಂಕೇತವಾಗಿ ಬಳಸಿಕೊಂಡಿದ್ದಾನೆ. ತಂಬೂರಿಯೆನ್ನುವುದು ಹೇಗಿರ ಬಹುದೆನ್ನುವ ಕಲ್ಪನೆಯೇ ಇಲ್ಲದವನಿಗೂ ಈ ಸಾಲುಗಳನ್ನು ಓದಿದಾಗ, ಅದೊಂದು ಶಕ್ತಿಯನ್ನು ಸೃಷ್ಟಿಸುವ ಸಾಧನದಂತೆ ಭಾಸವಾಗುತ್ತದೆ. ಇನ್ನು ಸಂಗೀತದ ಜ್ಞಾನ ಉಳ್ಳವನು ತಂಬೂರಿಯ ತಂತಿಗಳು ಹೊಮ್ಮಿಸುವ ದೈವಿಕತೆಯ ಭಾವವನ್ನು ಅಲ್ಲಗಳೆಯಲಾರ. ಕವಿಯಾದವನ ನಿಜವಾದ ಶಕ್ತಿಯೇ ಅದು, ತಾನು ಆಯ್ದುಕೊಂಡಿರುವ ವಿಷಯವಸ್ತು ತನ್ನೆಲ್ಲ ಭಾವತರಂಗಗಳೊಂದಿಗೆ ಓದುಗನ ಹೃದಯವನ್ನು ತಲುಪುವಂತೆ ಮಾಡುವುದು ! ‘ತಂಬೂರಿ’ ಕವಿತೆಯಲ್ಲಿ ಕವಿ ತಂತಿ ಮೀಟಿದರೆ, ಓದುಗರ ಎದೆಯಲ್ಲಿ ಓಂಕಾರ ಮೊಳಗುವುದರಲ್ಲಿ ಸಂದೇಹವಿಲ್ಲ. ಇಲ್ಲೆಲ್ಲ ಲೇಖಕರ ಪ್ರತಿಭೆ, ವಿಮರ್ಶನ ಪ್ರಜ್ಞೆ ಮಿಂಚಿದೆ.
ಅಂಜನಾ ಹೆಗಡೆ ಅವರದು ಸೃಜನಶೀಲ ಪ್ರತಿಭೆ. ಅವರು ಬಹುಮುಖ ಆಸಕ್ತಿಯುಳ್ಳವರು. ಅವರ ಈ ಬರವಣಿಗೆಯಲ್ಲಿ ಗುಣಗ್ರಾಹಿತ್ವ ಒಡೆದುಕಾಣುವ ಸಂಗತಿ. ಅವರು ಸಂಗೀತ ಹಾಗೂ ಸಾಹಿತ್ಯದಲ್ಲಿ ಒಳ್ಳೆಯ ಪ್ರಭುತ್ವವನ್ನು ಸಾಧಿಸಿದವರು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. “ಇಲ್ಲಿ ಅವರು ಗೋಕಾಕರ ಕಾವ್ಯವನ್ನು ಹೊಸ ನೆಲೆಯಲ್ಲಿ ಅಧ್ಯಯನ ಮಾಡುವ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯಕ್ಕೂ, ಸಂಗೀತಕ್ಕೂ ಇರುವ ಸಂಬಂಧ ಹಳೆಯದು. ಆದರೆ ಅಂಜನಾ ಹೆಗಡೆ ಗೋಕಾಕರ ಕಾವ್ಯ ಜಗತ್ತಿನಲ್ಲಿ ಸಂಗೀತದ ಪರಿಕಲ್ಪನೆಯ ಭಿನ್ನ ಭಿನ್ನ ನೆಲೆಗಳು ಪ್ರಕಟಗೊಂಡಿರುವ ರೀತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಸಂಗೀತದ ಸಂಗತಿಗಳು ವಿವರವಾಗಿ ಮಾತ್ರ ಬರದೇ, ರೂಪಕಗಳಾಗಿ ಚಿತ್ರಕ ಶಕ್ತಿಯಾಗಿ ಕಾವ್ಯ ಸತ್ಯಕ್ಕೆ ಕಾರಣವಾಗಿರುವುದನ್ನು ನಿದರ್ಶನಗಳೊಂದಿಗೆ ವಿಶ್ಲೇಷಿಸಿದ್ದಾರೆ. ಕನ್ನಡ ಸಾಹಿತ್ಯಾಧ್ಯಯನದಲ್ಲಿ ಇದೊಂದು ಹೊಸ ಬಗೆಯ ಪ್ರಯತ್ನವಾಗಿದೆ” ಎಂಬುದಾಗಿ ಈ ಕೃತಿಯ ಅತಿಶಯತೆಯನ್ನು ಖ್ಯಾತ ವಿಮರ್ಶಕ ಹಾಗೂ ವಿನಾಯಕ ಕೃಷ್ಣ ಗೋಕಾಕ್ ಟ್ರಸ್ಟ್ ಅಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸರಿಯಾಗಿಯೇ ಗುರುತಿಸಿದ್ದಾರೆ. ವಿನಾಯಕರ ಕಾವ್ಯ ಸಾಧನೆ ಅನುಪಮವಾದುದು ಎಂಬುದನ್ನು ಈ ಕೃತಿ ಮತ್ತೊಮ್ಮೆ ರುಜುವಾತು ಪಡಿಸಿದೆ. ಕವಿಯ ಮನೋಧರ್ಮವು ಕವಿತೆಯ ಅಂತರಾತ್ಮದೊಂದಿಗೆ ಸಂಧಿಸುವ ಗಳಿಗೆಗೆ ಈ ಕೃತಿ ಉತ್ತಮ ನಿದರ್ಶನ. ವಿನಾಯಕರ ಕಾವ್ಯಲೋಕಕ್ಕೆ ಇದೊಂದು ಬೆಳಕಿಂಡಿಯೂ ಹೌದು. ಇದೊಂದು ವಿಶಿಷ್ಟ ಬಗೆಯ ಸೃಜನಾತ್ಮಕ ಕಾವ್ಯಾನುಸಂಧಾನ ಹಾಗೂ ಸೂಕ್ಷ್ಮ ಪ್ರತಿಕ್ರಿಯೆಯೂ ಆಗಿದೆ. ಗೋಕಾಕ್ ಕವಿಯೇ ಅಲ್ಲ ಎಂಬ ವ್ಯರ್ಥ ಕೂಕಲು ಎಬ್ಬಿಸಿದವರಿಗೆ ಇದೊಂದು ಉತ್ತರದ ಚಾಟಿಯೂ ಹೌದು. ಪ್ರಸಕ್ತ ಕೃತಿ ಕನ್ನಡ ಸಾರಸ್ವತ ಪ್ರಪಂಚಕ್ಕೆ ಒಳ್ಳೆಯ ಸೇರ್ಪಡೆ.
ಗೋಕಾಕರ ಸಂಗೀತಮಯ ಕಾವ್ಯಲೋಕ
ಅಂಜನಾ ಹೆಗಡೆ
ಅಭಿನವ, ಬೆಂಗಳೂರು.
2025, ಬೆಲೆ ರೂ.150/-

ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ, ಮುಂಬೈ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
