Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ
    Article

    ಪುಸ್ತಕ ವಿಮರ್ಶೆ | ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ

    May 23, 2026No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಹರಿದಾಸ ಸಾಹಿತ್ಯ’ ಇದು ಖ್ಯಾತ ಸಂಶೋಧಕ, ಹಿರಿಯ ಲೇಖಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರ ಬಹಳ ಮಹತ್ವದ ಅಧ್ಯಯನಪೂರ್ಣ ಕೃತಿ. ಹರಿದಾಸ ಸಾಹಿತ್ಯದ ಚಾರಿತ್ರಿಕ ಅವಲೋಕನ, ವಿಶ್ಲೇಷಣೆ ಈ ಕೃತಿಯ ಹೂರಣ. ಕನ್ನಡ ಅನುಭಾವ ಸಾಹಿತ್ಯ ಹಾಗೂ ದಾಸಸಾಹಿತ್ಯದ ಬಹು ನೆಲೆಗಳ ಜಿಜ್ಞಾಸೆ ಈ ಕೃತಿಯಲ್ಲಿ ಒಡೆದು ತೋರುತ್ತದೆ. ಕನ್ನಡ ದಾಸ ಸಾಹಿತ್ಯದ ಮುಖ್ಯ ಸಂಶೋಧಕರಲ್ಲಿ ಮೊದಲ ಸಾಲಿನಲ್ಲಿ ಬರುವ ಹೆಸರು ಡಾ. ಕೃಷ್ಣ ಕೊಲ್ದಾರ ಕುಲಕರ್ಣಿ ಅವರದು. ಹರಿದಾಸರು ಕೇವಲ ಕನ್ನಡಕಷ್ಟೇ ಸೀಮಿತರಾದವರಲ್ಲ. ಅವರು ನಾನಾ ಭಾಷೆಗಳಲ್ಲಿ ವ್ಯವಹರಿಸಿದ್ದರು. ಡಾ. ಕುಲಕರ್ಣಿ ಅವರದು ಬಹುಭಾಷಿಕ ಸಂವೇದನೆ. ಹೀಗಾಗಿ ದಾಸ ಸಾಹಿತ್ಯವನ್ನು ಅದರ ಪ್ರಸ್ತುತತೆಯನ್ನು ಹೊಸ ಹೊಸ ಆಯಾಮಗಳಿಂದ, ವಿಭಿನ್ನ ನೆಲೆಗಳಲ್ಲಿ ನೋಡಿ ವಿಶ್ಲೇಷಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.

    ಜನಸಾಮಾನ್ಯರ ಮನೋವಿಕಾಸಕ್ಕೆ ದಾಸ ಸಾಹಿತ್ಯ ಶ್ರಮಿಸಿದೆ. ಅದು ಜನರನ್ನು ಸುಸಂಸ್ಕೃತರನ್ನಾಗಿ ಮಾಡುವ ಶಿಕ್ಷಣವಾಗಿದೆ. ದಾಸರದು ಜನತಾ ಶಿಕ್ಷಣ ಪ್ರಕಾರ. “ದೇವರ ಸಾನ್ನಿಧ್ಯವನ್ನು ಪಡೆಯಲು ಜನಸಾಮಾನ್ಯರಿಗಿದ್ದ ಎಲ್ಲ ತೊಡಕುಗಳನ್ನು ನಿವಾರಣೆ ಮಾಡಿದ್ದು ದಾಸ ಸಾಹಿತ್ಯದ ಬಹು ಮುಖ್ಯ ಲಕ್ಷಣವಾಗಿದೆ. ಕಳೆದ ಐದು ಶತಮಾನಗಳಿಂದ ಇಂದಿನವರೆಗೂ ನಮ್ಮ ನಾಡಿನ ಜನಜೀವನವನ್ನು ಉತ್ತಮಗೊಳಿಸಲು ದಾಸ ಸಾಹಿತ್ಯವು ಒಂದು ಮಹತ್ವಪೂರ್ಣವಾದ ಸೇವೆಯನ್ನು ಸಲ್ಲಿಸುತ್ತಿದೆ. ಯಾವುದೇ ಸಾಹಿತ್ಯದ ಉದ್ದೇಶವೂ ಅದುವೆ ಆಗಿರಬೇಕಷ್ಟೆ. ದಾಸ ಸಾಹಿತ್ಯವು ಜನರ ಮಧ್ಯ, ಜನರಿಂದ, ಜನರ ಮುಂದೆಯೇ ಹುಟ್ಟಿದ ಸಾಹಿತ್ಯ. ಯಾವುದೇ ಒಂದು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹುಟ್ಟಿದ್ದಲ್ಲ. ಮನೆ ಮನೆ, ಓಣಿ ಓಣಿಗಳಲ್ಲಿ ತಿರುಗಾಡುತ್ತ, ಹಾಡುತ್ತ, ಕುಣಿಯುತ್ತ ಸಾಗುವಾಗ ಕಂಡ ಲೋಕಾನುಭವಗಳು. ಭಾವ ತನ್ಮಯತೆಯಲ್ಲಿ ಮೂಡಿ ಬಂದ ಈ ಕೃತಿಗಳು ಕವಿತೆಯ ಎಲ್ಲ ಕಾವ್ಯಾಂಶಗಳಿಂದ ತುಂಬಿ ನಿಂತುವು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯ ಪ್ರತೀಕವಾದ ಈ ರಚನೆಗಳು ಶುದ್ಧ ಭಾವಗೀತೆಗಳಾದುವು” ಜೀವನದ ರಸ ಪುಷ್ಟಿಗೆ ಈ ಕೀರ್ತನೆಗಳು ಬಹಳ ಸಹಾಯವನ್ನು ಮಾಡಿವೆ ಎಂಬುದನ್ನು ಇಲ್ಲಿ ಸಶಕ್ತವಾಗಿ ಸಮಚಿತ್ತದಿಂದ ವಿವರಿಸಿದ್ದಾರೆ.

    ಭಕ್ತಿ ಹಾಗೂ ಭಕ್ತಿಮಾರ್ಗದ ಬಗ್ಗೆ ನಡೆದ ಚರ್ಚೆ ಈ ದೇಶದಲ್ಲಿ ತುಂಬ ಹಳೆಯದು. ವೇದ ಉಪನಿಷತ್ತುಗಳ ಕಾಲದಿಂದಲೂ ಭಕ್ತಿಯ ಮೇಲ್ಮೆಯನ್ನು ಪ್ರತಿಪಾದಿಸಲಾಗಿದೆ. ಆದರೆ ಭಕ್ತಿ ಪಂಥಗಳನ್ನು ಸ್ಥಾಪಿಸಿದ ಕೀರ್ತಿ ದಕ್ಷಿಣ ಭಾರತೀಯರಿಗೆಯೇ ಸಲ್ಲುತ್ತದೆ. ಪದ್ಮ ಪುರಾಣದಲ್ಲಿ ಬರುವ ಈ ಮಾತು ಕೂಡ ಅದನ್ನೇ ಪುಷ್ಟಿಕರಿಸುತ್ತದೆ. ‘ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ | ಕ್ವಚಿತ್ ಕ್ವಚಿನ್ಮಹಾರಾಷ್ಟ್ರ ಗೂರ್ಜರೇ ಜೀರ್ಣತಾಂ ಗತಾ’. ಕ್ರಿ. ಶ. ಹತ್ತನೆಯ ಶತಮಾನದ ವೇಳೆಗಾಗಲೇ ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಭಕ್ತರು ತಮಿಳಿನಲ್ಲಿ ಭಕ್ತಿಗೆ ಪ್ರಾಧಾನ್ಯವನ್ನು ಕೊಟ್ಟಿದ್ದರು. ಜಾತಿ, ಮತ, ಕುಲ, ಗೋತ್ರ ಲಿಂಗಭೇದಗಳಾವವೂ ಇಲ್ಲದೆ ಕೇವಲ ದೈವಭಕ್ತಿಯ ಶ್ರೇಷ್ಠತೆಯನ್ನು ಸಾರಿ ಹೇಳಿದ ಶೈವ ನಾಯನ್ಮಾರರು, ವೈಷ್ಣವ ಆಳ್ವಾರರು ಈ ದಿಕ್ಕಿನಲ್ಲಿ ಒಂದು ಖಚಿತ ದಾರಿಯನ್ನು ತೋರಿಸಿದ್ದರು. ಆಳ್ವಾರರ ಪಾಶುರಗಳನ್ನು ದ್ರಾವಿಡ ವೇದವೆಂದು ಕರೆಯಲು ತಮಿಳರು ಹಿಂಜರಿಯಲಿಲ್ಲ. ಕ್ರಿ. ಶ. ಹನ್ನೆರಡನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ಹುಟ್ಟಿದ ವೀರಶೈವರು ತಮಿಳುನಾಡಿನ ಶೈವ ಪಂಥದ ನಾಯನ್ಮಾರರಂತೆ ಮಾತೃಭಾಷೆ ಕನ್ನಡದ ಮೂಲಕ ತಮ್ಮ ವಿಚಾರಧಾರೆಯನ್ನು ಪ್ರಚಾರ ಮಾಡಿದರು. ವಿಶೇಷವೆಂದರೆ ತಮ್ಮ ವಿಚಾರಗಳನ್ನು ಪ್ರಕಟಿಸಲು ಅವರು ಕನ್ನಡ ಭಾಷೆಯನ್ನು ಉಪಯೋಗಿಸಿದ್ದರಿಂದ ಕನ್ನಡ ಭಾಷೆಗೆ ಒಂದು ವಿನೂತನವಾದ ವಚನ ಪ್ರಕಾರ ದೊರೆಯಿತು.

    ಭಾರತೀಯ ಆಧ್ಯಾತ್ಮ ಪರಂಪರೆಯ ಮೂಲಸ್ರೋತ ಭಕ್ತಿ ಎಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ಇಲ್ಲಿ ಖಚಿತವಾಗಿ ಹೇಳಿದ್ದಾರೆ. ದಾಸರು, ‘ಮಾಧ್ವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ’, ಎಂದು ಹೇಳಲಿಲ್ಲ. ಅವರು ಹೇಳಿದ್ದು ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಬೇಡಿ’ ಎಂದರು. ದಾಸರ ಕೀರ್ತನೆಗಳಲ್ಲಿ ಬಾರದೇ ಇರುವ ವಿಚಾರಗಳೇ ಇಲ್ಲ. ಧರ್ಮ, ನೀತಿ, ವೇದಾಂತ, ರಾಜಕಾರಣ, ಅರ್ಥನೀತಿ, ಸಾಮಾನ್ಯನೀತಿ, ವಿನೋದ ಎಲ್ಲವೂ ಇದೆ. ಮುಖ್ಯವಾಗಿ ಜೀವನಗಂಗೆಯ ಬೃಹದ್ದರ್ಶನವನ್ನು ಅವರು ತಮ್ಮ ಸಾಹಿತ್ಯದಲ್ಲಿ ಮಾಡಿಸಿದ್ದಾರೆ.

    ಹರಿದಾಸ ಸಾಹಿತ್ಯ ಚಾರಿತ್ರಿಕ ಅವಲೋಕನ, ಮಹಾರಾಷ್ಟ್ರದಲ್ಲಿ ಭಕ್ತಿ ಪರಂಪರೆ, ಕನ್ನಡ ದಾಸರ ಕನ್ನಡೇತರ ಕೃತಿಗಳು, ಹರಿದಾಸ ಸಾಹಿತ್ಯ ಸಂಶೋಧನೆಯ ಅನುಭವ, ದಾಸಸಾಹಿತ್ಯದಲ್ಲಿ ಭಾವೈಕ್ಯತೆ, ಕಾಖಂಡಕಿ ಮಹಿಪತಿರಾಯರ ಸಾಹಿತ್ಯದ ಆಧ್ಯಾತ್ಮಿಕ ವಿಶ್ಲೇಷಣೆ, ಪ್ರಸನ್ನ ವೆಂಕಟದಾಸರ ಆತ್ಮನಿವೇದನೆಯ ಕೆಲವು ಕೀರ್ತನೆಗಳು, ಹರಿದಾಸ ಸಾಹಿತ್ಯ: ದ್ವಿತೀಯ ಘಟ್ಟ, ಪ್ರೇರಣೆ, ಪ್ರಭಾವ, ಶ್ರೀ ಜಯತಿರ್ಥರು ಅರವತ್ತೊಕ್ಕಲಿನವರಲ್ಲ. ಶಾಹ ಮಿರಾಂಜಿ ಉಷಾಕ್, ಮಾನವನ ಉನ್ನತ ಸಾಧನೆಯ ಪ್ರತೀಕ ಕನಕದಾಸರು, ಸೂಫಿ ಭಕ್ತಿ ಪರಂಪರೆ ಮೊದಲಾದ ಮೂವತ್ತು ಲೇಖನಗಳಲ್ಲಿ ಭಾರತದ ಭಕ್ತಿ ಪರಂಪರೆ, ಕನ್ನಡ ದಾಸ ಸಾಹಿತ್ಯ, ಕನ್ನಡ ನಾಡಿನ ಅನುಭಾವ ಪರಂಪರೆಗಳ ತುಲನಾತ್ಮಕ ಚಿಂತನ ಮಂಥನ, ಅಲ್ಲಿನ ನಿಜದ ನೆಲೆಗಳ ಹುಡುಕಾಟ ಇಲ್ಲಿ ಸೊಗಸಾಗಿ ಅನಾವರಣಗೊಂಡಿದೆ.

    “ದಾಸ ಸಾಹಿತ್ಯವನ್ನು ಒಂದು ಮತಕ್ಕೆ ಅಂಟಿಸಿ, ಅದನ್ನು ಬ್ರಾಹ್ಮಣ ಸಾಹಿತ್ಯ, ಮಾಧ್ವ ಸಾಹಿತ್ಯ, ಮತೀಯ ಸಾಹಿತ್ಯ ಎಂದು ಹೇಳಲಾಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಕಾರರಾದ ರಂ.ಶ್ರೀ. ಮುಗಳಿ ಅವರು ಹೇಳುವಂತೆ, ಸಾಹಿತ್ಯಗ್ರಂಥವನ್ನು ಮತಗ್ರಂಥವಾಗಿ ಮಾಡಿಕೊಳ್ಳುವ, ಮತಸಾಹಿತ್ಯವುಳ್ಳ ಗ್ರಂಥವನ್ನು ಕೇವಲ ಮತೀಯ ಗ್ರಂಥವಾಗಿ ಭಾವಿಸುವ ಪ್ರವೃತ್ತಿ ಈ ನಾಡಿನಲ್ಲಿ ಕಂಡುಬಂದಿದೆ. ಆದರೂ ದಾಸಸಾಹಿತ್ಯದ ವಿಷಯದಲ್ಲಿ ಈ ಮಾತು ಸಂಪೂರ್ಣವಾಗಿ ಅನ್ವಯಿಸುವುದಿಲ್ಲ. ಮತವಿರಲಿ ಬಿಡಲಿ, ಅದನ್ನು ಮೀರಿದ ತತ್ವ ಮತ್ತು ಸಾಹಿತ್ಯವುಳ್ಳ ಭಾಗ ಎಲ್ಲ ಕನ್ನಡ ಜನರ ಅಂತಃಕರಣವನ್ನು ಹೊಕ್ಕುನಿಂತಿದೆ. ದಾಸಕೂಟದ ನೋಟ ವಿಶಾಲವಾದುದು. ಪ್ರಾರಂಭಕಾಲದ ಶ್ರೀ ವ್ಯಾಸರಾಯರು ಕುರುಬ ಕನಕದಾಸರ ಮೇಲೆ ಪ್ರೀತಿ ಮಾಡಿದುದನ್ನು ಎಲ್ಲರೂ ಬಲ್ಲರು. ಹಂಪಿಯಲ್ಲಿದ್ದ ರಾಮಾವಧೂತರಿಂದ ಮುಸ್ಲಿಮ ಧರ್ಮದ, ಪಿಂಜಾರ ಶೇಖ ಬಡೇಸಾಬ [೧೮೮೨-೧೯೪೦]ರು ರಾಮದಾಸರಾದರು; ಶ್ರೀರಾಮ ಎಂಬ ಅಂಕಿತದಿಂದ 770 ಕೀರ್ತನೆಗಳನ್ನು ರಚಿಸಿದ್ದಾರೆ. ಅವುಗಳೆಲ್ಲವೂ ಪ್ರಕಟವಾಗಿವೆ. ಅವರು ತಮ್ಮದೊಂದು ಕೀರ್ತನೆಯಲ್ಲಿ, ‘ಕುಲವಂತನೇ ನೀನು ಎಲೋ ಪರಮಾನಂದ, ಕುಲಹೀನನೇ ನಾನು ಪೇಳೆಲವೋ ಸ್ವಾಮಿ’ ಎಂದು ಭಗವಂತನನ್ನೇ ಕೇಳಿದ್ದಾರೆ. ಮುಂದುವರಿದು, ‘ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿ ಬಾಹಿರರಾಗಿ ಆಚರಿಸುವವರು, ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ನರಕೊಂಡು ದಾಳಿಯ ಹೊಡೆದು ಹೇಳಿದ ತೆರ ಕುಣಿದು ಬೀಳುಗಲಿವವರು’ ಎಂದಿದ್ದಾರೆ. ರಾಯಚೂರು ಹತ್ತಿರದ ಚಂದರಕಿಯ ಬೇಡದೊರೆಗಳು ಗೋಪಾಲದಾಸರ ಪ್ರಭಾವದಿಂದ ಭಾಗವತರಾದರು. ಕೋಸಗಿಯ ಗುರುಜಗನ್ನಾಥದಾಸರ ಪ್ರಭಾವದಿಂದ ಹಲವಾರು ನೇಕಾರರು ಹರಿದಾಸರಾದರು. ಅಸ್ಕಿಹಾಳ ಗೋವಿಂದದಾಸರಿಂದ ಅನೇಕ ಕ್ಷೌರಿಕರು ಹರಿದಾಸರಾದರು. ಮಾನವಿಯ ಶಾಮಸುಂದರವಿಠಲದಾಸರು ಹರಿಜನನಾದ ಮೂರ್ತೆಪ್ಪನನ್ನು ತಮ್ಮ ಆಪ್ತ ವರ್ಗಕ್ಕೆ ಸೇರಿಸಿಕೊಂಡರು; ಹರಿದಾಸನನ್ನಾಗಿ ಮಾಡಿದರು. ಚಂಡರಕಿ ರಾಘವೇಂದ್ರದಾಸರ ಪ್ರಭಾವದಿಂದ ಹೂಗಾರನೊಬ್ಬ ಭೀಮದಾಸರೆನಿಸಿ ಅಥಣಿಯಲ್ಲಿ ಅಭಿನವ ಮಂತ್ರಾಲಯವನ್ನೇ ನಿರ್ಮಿಸಿದರು. ಹಲವಾರು ಕೃತಿಗಳನ್ನು ರಚನೆ ಮಾಡಿದರು. ಇವು ಕೆಲವು ಉದಾಹರಣೆಗಳು ಅಷ್ಟೇ.
    ಹೀಗೆ ದಾಸ ಸಾಹಿತ್ಯದ ಸಾಧನೆಯನ್ನು ಡಾ. ಕುಲಕರ್ಣಿ ಅವರು ಯಾವುದೇ ಉತ್ಪೇಕ್ಷೆ ವೈಭವೀಕರಣವಿಲ್ಲದೆ ವಿಸ್ತಾರವಾಗಿ ಚಿತ್ರಿಸಿದ್ದಾರೆ.

    “ಮಹೀಪತಿದಾಸರ [ಕ್ರಿ.ಶ. 1640-1710] ಹೊತ್ತಿಗೆ ದಕ್ಷಿಣ ಭಾರತದಲ್ಲಿ ಸಂಪೂರ್ಣ ಮುಸ್ಲಿಮರ ಆಡಳಿತವಿತ್ತು. ಹಿಂದುಗಳಿಗೆ ತಮ್ಮ ಧರ್ಮ, ಸಂಸ್ಕೃತಿಗಳನ್ನು ಬಹಿರಂಗವಾಗಿ ಆಚರಿಸಲು ಸಾಧ್ಯವಿರಲಿಲ್ಲ. ತಮ್ಮ ಮನೆಗಳಲ್ಲೆ ಆಚರಿಸಬೇಕೆಂದು ಮಹಮ್ಮದ ಆದಿಲಶಾಹನು [ಕ್ರಿ.ಶ.೧೬೨೬-೧೬೫೬] ಕಾನೂನನ್ನು ಮಾಡಿದ್ದ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಮಹಿಪತಿರಾಯರಂಥವರು ಧರ್ಮ ಸಮನ್ವಯದ ದಾರಿ ಹಿಡಿದು ಹಿಂದು ಧರ್ಮ ಸಂಸ್ಕೃತಿಗಳ ರಕ್ಷಣಕ್ಕೆ ಕಾರಣರಾದರು. ಅಂತೆಯೇ, ಮಿಶ್ರ ಭಾಷೆಯ ಒಂದು ಕೃತಿಯಲ್ಲಿ, ಅವರು ‘ಸಮಜೋ ಭಾಯೀ ಸಕುನಾ ಚಾರೋ ಖುದಾಕಾ, ತೆಲುಗು, ಕನ್ನಡ, ತುರುಕಾರೆ ಒಂದೇ ಸುಖ’ ಎಂದರು. ಯಾವ ಧರ್ಮ, ಯಾವ ಭಾಷೆ ಆದರೇನು ದೇವರು ಕೊಡುವ ಸುಖ ಒಂದೇ ಆಗಿದೆ. ಎಲ್ಲಾ ಒಂದೇ ಮಾತಿನ ಸೊಗಸು ಸಿವನಾಟಾ ಸಿವನಾಟಾ । ಆಪಸಮೆ ಆಪ ಲಢನಾ ಸಬ ಝೂಟಾ ಸಬ ಝೂಟಾ । ಚೆಪ್ಪವಯ್ಯಾ ಎಂದರೆ ಹೇಳುವ ಗುರು ನೀಠಾ ಗುರುನೀಠಾ | ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ || ಎಂದು ಹೇಳಿದರು. ಮತ್ತೊಂದು ಕೀರ್ತನೆಯಲ್ಲಿ ಜಾತಿಯ ಕುಲಗಳ ಭೇದವ ತಿಳಿದು | ಯಾತನೆ ದೇಹದ ಸಂಗವನಳಿದು | ಮಾತಿನ ಮೂಲವ ತಿಳಿದಾತನೆ ಶರಣನು ॥ ಎಂಬುದಾಗಿ ಶರಣರ ಬಗ್ಗೆ ಹೇಳಿದರು. ಸತ್ಸಂಗ ಇರಬೇಕು. ಸತ್ಯದ ನುಡಿ ಹಿಡೀಬೇಕು. ಒಂದು ಪಥ ಹೊಂದಲರಿಯರು ಈ ಮನುಜರು ಎಂದು ಕನಿಕರ ಪಟ್ಟಿದ್ದಾರೆ. ದೈತ ಅದೈತ ಎಂದು ಹೊಡದಾಡದಿರೊ ಪ್ರಾಣೀ ಎಂದು ಕಿವಿ ಮಾತೂ ಹೇಳಿದ್ದಾರೆ. ದೈತ ಎಂದು ಹೇಳಿಕೊಳ್ಳುವವನು ತಾನು ಪರಮ ವೈಷ್ಣವನಲ್ಲ, ಅತನೆಂಬವನು ಸ್ಮಾರ್ತನೂ ಅಲ್ಲ. ಅದು ಸಿದ್ಧಾಂತದ ವಿಷಯ. ಚೇತಿಸಿ ಬ್ಯಾರಿಹ ವಸ್ತು ಕಾಣಿ ಎಂದರು”ಹೀಗೆ ದಾಸ ಸಾಹಿತ್ಯದಲ್ಲಿನ ಉದಾರ ಮಾನವತಾವಾದದ ಕಡೆಗೂ ಬೊಟ್ಟು ಮಾಡಿರುವುದು ವಿಶೇಷ.

    ದಾಸ ಸಾಹಿತ್ಯದ ವೈಶಿಷ್ಟ್ಯ ಹಾಗೂ ಗಟ್ಟಿತನವನ್ನು ಡಾ. ಕುಲಕರ್ಣಿ ಅವರು ಹೀಗೆ ಕಂಡರಿಸಿದ್ದಾರೆ. “ಹಿಂದುಳಿದವರು, ದಲಿತರಿಂದ ಹಿಡಿದು ಸಮಾಜದ ಅತ್ಯಂತ ಮುಂದುವರಿದ ಜನರ ಸಮುದಾಯಗಳಲ್ಲಿ, ಮಠ-ಮಾನ್ಯಗಳಲ್ಲಿ, ಗುಡಿ-ಗುಂಡಾರಗಳಲ್ಲಿ ದಾಸ ಸಾಹಿತ್ಯ ಸ್ವೀಕಾರವಾಗಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ದ್ಯಾಮವ್ವ, ದುರ್ಗವ್ವ, ಬೀರಪ್ಪನ ಗುಡಿಗಳ ಭಜನೆಗಳಲ್ಲಿ ಶೈವ ವೀರಶೈವರ ಭಜನೆಗಳಲ್ಲಿ ಅತ್ಯಂತ ಮಡಿ ಮಾಡುವ ವೈಷ್ಣವರ ಮಠಗಳಲ್ಲಿ ದಾಸರ ಪದಗಳು ಪ್ರವೇಶ ಪಡೆದಿವೆ. ಅಲ್ಲಿ ದಾಸರ ಜಾತಿ ಮತ ಪಂಥ ಮುಖ್ಯವಾಗಿಲ್ಲ. ಹಿಂದುಳಿದ ಜಾತಿಯ ಕನಕದಾಸ, ತೀರ ಇತ್ತೀಚಿನ ಮುಸ್ಲಿಮ, ಗೋನವಾರದ ರಾಮದಾಸರ ಕೀರ್ತನೆಗಳು ಎಲ್ಲೆಡೆ ಸ್ವೀಕೃತವಾಗಿವೆ. ಸಾಹಿತ್ಯದ ಬಹು ಮುಖ್ಯ ಉದ್ದೇಶ ಅದು ಜನರ ಮನಸ್ಸನ್ನು ಮುಟ್ಟಬೇಕು, ತಟ್ಟಬೇಕು. “ದಾಸ ಸಾಹಿತ್ಯ ಪ್ರತಿಯೊಬ್ಬರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂಬ ಸತ್ಯ ಈ ಕೃತಿಯಲ್ಲಿ ಅಡಗಿದೆ. ಕನ್ನಡ ದಾಸ ಸಾಹಿತ್ಯವನ್ನು ಹೊಸದಾಗಿ ನೋಡುವ ಪ್ರಯತ್ನ ಈ ಕೃತಿ.

    “ದಾಸಸಾಹಿತ್ಯವನ್ನು ಇತಿಹಾಸದ ದಿನಗಳ ಹಿನ್ನೆಲೆಯಲ್ಲಿ ಹಾಗೂ ಸಮಾಜಮುಖಿ ದೃಷ್ಟಿಕೋನದಿಂದ ಪರಿವೀಕ್ಷಿಸುವ ಗ್ರಂಥಗಳು ಹೆಚ್ಚು ಮೌಲಿಕವಾಗುತ್ತವೆ. ಪರಿಚಯಾತ್ಮಕ ಗ್ರಂಥಗಳಿಗಿಂತಲೂ ವಿಭಿನ್ನವಾಗಿ ಓದುಗರನ್ನು ಚಿಂತನೆಗೆ ಹಚ್ಚುವ, ಹೊಸ ಹೊಸ ಸಾಧ್ಯತೆಗಳನ್ನು ಆವಿಷ್ಕಾರಗೊಳಿಸುವ ರೀತಿಯ ಅಧ್ಯಯನ ಹೆಚ್ಚು ಸ್ವಾಗತಾರ್ಹವಾಗುತ್ತವೆ. ಈ ದೃಷ್ಟಿಯಿಂದ ಪ್ರಸ್ತುತ ಕೃತಿ ಒಂದು ಉತ್ತಮ ಕೊಡುಗೆಯಾಗಿದೆ. ಇದು ದಾಸಸಾಹಿತ್ಯ ಭಂಡಾರಕ್ಕೆ ಬಹುಮುಖ್ಯವಾದ ಮೌಲಿಕ ಸೇರ್ಪಡೆಯಾಗಿದೆ” ಎಂಬುದಾಗಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಹೇಳಿರುವ ಮಾತು ನಿಜವೇ ಆಗಿದೆ.

    ಹರಿದಾಸ ಸಾಹಿತ್ಯ
    ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
    ವಿಜಯ ಪ್ರಕಾಶನ,
    ಸಂಪರ್ಕ : 9036163026
    ವಿಜಯಪುರ. ಬೆಲೆ ರೂ.200/-

    ಪ್ರೊ. ಜಿ.ಎನ್. ಉಪಾಧ್ಯ ಮುಂಬೈ

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

    ಲೇಖಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಕ್ಷೇತ್ರ ಕದ್ರಿಯಲ್ಲಿ ‘ಸರಯೂ ಸಪ್ತಾಹ – 2026’ | ಮೇ 25ರಿಂದ ಜೂನ್ 01
    Next Article ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ‘ದಾಸ ಸುಧಾ ಲಹರಿ’ | ಮೇ 24  
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.