Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಓದುಗ ಕೇಂದ್ರಿತ ನೆಲೆಯಲ್ಲಿ ಕುವೆಂಪು
    Article

    ಪುಸ್ತಕ ವಿಮರ್ಶೆ | ಓದುಗ ಕೇಂದ್ರಿತ ನೆಲೆಯಲ್ಲಿ ಕುವೆಂಪು

    March 25, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಹಿತ್ಯ ಕ್ಷೇತ್ರದಲ್ಲಿ ಕವಿ, ಕೃತಿ ಹಾಗೂ ಸಹೃದಯರ ನಡುವಿನ ಸಂಬಂಧ ಅವಿನಾಭಾವವಾದುದು. ಹೀಗಿದ್ದೂ ಓದುಗ ಕೇಂದ್ರಿತ ವಿಮರ್ಶೆಯ ಕುರಿತು ನಮ್ಮಲ್ಲಿ ಚಿಂತನೆ ನಡೆದದ್ದು ಬಹಳ ಕಡಿಮೆ. ಕುವೆಂಪು ಅವರನ್ನು ಹೇಗೆ ಹೊಸ ತಲೆಮಾರು ಓದಿಕೊಳ್ಳಬಹುದು ಎಂಬ ಮಾರ್ಗದರ್ಶಕ ಕೃತಿಯೊಂದು ಈಗ ಕನ್ನಡಿಗರ ಕೈ ಸೇರಿದೆ.

    ಹೊಸ ಓದುಗರಿಗೆ ಕುವೆಂಪು
    ಕೆ.ವಿ. ನಾರಾಯಣ
    ಆಕೃತಿ ಪುಸ್ತಕ, ಬೆಂಗಳೂರು
    ಬೆಲೆ ರೂ.195/-

    ‘ಹೊಸ ಓದುಗರಿಗೆ ಕುವೆಂಪು’ ಇದು ವಿಮರ್ಶಕ ಕೆ.ವಿ. ನಾರಾಯಣ ಅವರ ಇತ್ತೀಚಿನ ಕೃತಿ. ಹನ್ನೆರಡು ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಕನ್ನಡದ ಮೇರು ಪ್ರತಿಭೆ ಕುವೆಂಪು ಅವರ ಸಾಹಿತ್ಯದ ವಿಭಿನ್ನ ನೆಲೆಗಳ ಗಂಭೀರವಾದ ಜಿಜ್ಞಾಸೆ ಇಲ್ಲಿ ದಾಖಲಾಗಿದೆ. ಈ ಶತಮಾನದ ಓದುಗರಿಗೆ ಕುವೆಂಪು ಅವರ ಬರಹಗಳನ್ನು ಪ್ರಸ್ತುತಗೊಳಿಸುವ, ಕುವೆಂಪು ಅವರ ವೈಚಾರಿಕ ನೆಲೆಯ ಬರಹಗಳನ್ನು ಇಂದಿನ ಚೌಕಟ್ಟಿನಲ್ಲಿಟ್ಟು ನೋಡುವ ಹಾಗೂ ಕುವೆಂಪು ಅವರನ್ನು ಅರ್ಥ ಮಾಡಿಕೊಳ್ಳಲು ಆ ಬರಹಗಳು ಹುಟ್ಟಿದ ಸಂದರ್ಭದ ತಿಳುವಳಿಕೆ ಇಲ್ಲದೆಯೂ ಆಯಾ ಬರಹಗಳನ್ನು ನಮ್ಮ ಕಾಲದ ಚೌಕಟ್ಟಿಗೆ ತಕ್ಕಂತೆ ಓದಬಹುದು ಎಂದೂ ಹೇಳಲು ಸಾಧ್ಯವಿದೆ ಎಂಬ ಆಶಯದ ಹಿನ್ನೆಲೆಯಲ್ಲಿ ಈ ಕೃತಿ ಮೈದಾಳಿದೆ. ಕುವೆಂಪು ಅವರ ಬರಹಗಳನ್ನು ಈಗ ಏಕೆ ಓದಬೇಕು, ಹೇಗೆ ಓದಬೇಕು, ಕೃತಿ, ಕೃತಿಕಾರ, ಓದುಗ ಜಗತ್ತು, ಹೊಸ ತಂತ್ರಜ್ಞಾನದ ಹೊತ್ತಿನಲ್ಲಿ ಕುವೆಂಪು ಅವರ ಕೃತಿಗಳನ್ನು ಈಗ ಯಾರು ಓದುತ್ತಿದ್ದಾರೆ ಎಂಬೆಲ್ಲ ವಿಚಾರ ವಿಮರ್ಶೆ ಹಾಗೂ ಹೊಸ ಓದುಗರಿಗೆ ಒಂದು ತೋರು ದಾರಿ ಈ ಕೃತಿಯಲ್ಲಿ ಕಾಣಸಿಗುತ್ತದೆ. ಇದೊಂದು ಓದುಗ ಕೇಂದ್ರಿತ ವಿಮರ್ಶೆಯ ಕೃತಿಯಾಗಿಯೂ ಅವಲೋಕನೀಯವಾಗಿದೆ.

    ಹೊಸಗನ್ನಡ ಸಾಹಿತ್ಯ ನಿರ್ಮಾಪಕರಲ್ಲಿ ಕುವೆಂಪು ಅವರದು ಎದ್ದು ಕಾಣುವ ಹೆಸರು ಹಾಗೂ ಪ್ರಮುಖ ಪಾತ್ರ. ಅವರು ನಮ್ಮ ಭಾವ ಕೋಶದಲ್ಲಿ ಸೇರಿ ಹೋಗಿ ಬಿಟ್ಟಿದ್ದಾರೆ. ಮಹಾಕವಿ ಕುವೆಂಪು ಅವರ ಹೆಸರನ್ನು ಕೇಳದ ಕನ್ನಡಿಗರಿಲ್ಲ. ಅನ್ಯಾನ್ಯ ನೆಲೆಗಳಲ್ಲಿ ಕನ್ನಡವನ್ನು ಸಮೃದ್ಧಗೊಳಿಸಿ ಅದಕ್ಕೆ ಭೀಮಬಲ ಒದಗಿಸಿದ ಶ್ರೇಯಸ್ಸು ಕುವೆಂಪು ಅವರಿಗೆ ಸಲ್ಲುತ್ತದೆ. ಈ ಕುರಿತು ಕೆ.ವಿ. ನಾರಾಯಣ ಅವರು ಕೊಡುವ ವಿವರ ಇಂತಿದೆ. “ಕುವೆಂಪು ಅವರು ಕನ್ನಡ ಸಂಸ್ಕೃತಿಯಲ್ಲಿ ನೆಲೆಗೊಂಡಿರುವ ಹಲವು ಸ್ತರಗಳನ್ನು ಗುರುತಿಸುವುದು ಅಗತ್ಯ. ಅವರು ಕೇವಲ ಹೆಸರಾಗಿಯೂ ವ್ಯಾಪಕತೆಯನ್ನು ಪಡೆದಿದ್ದಾರೆ. ಅವರ ಹೆಸರುಳ್ಳ ವಿಶ್ವವಿದ್ಯಾಲಯವೊಂದಿದೆ. ಹಲವಾರು ಊರುಗಳಲ್ಲಿ ಅವರ ಹೆಸರಿನ ಬಡಾವಣೆಗಳಿವೆ. ಊರಿನ ಬೀದಿಗಳಿಗೆ ಅವರ ಹೆಸರನ್ನು ಇರಿಸಿದ್ದಾರೆ. ಅವರ ಹಲವು ಮಾದರಿಯ ಪ್ರತಿಮೆಗಳನ್ನು ಹಲವು ಕಡೆ ಸ್ಥಾಪಿಸಲಾಗಿದೆ. ಅವರ ನೆನಪನ್ನು ಹಸಿರಾಗಿಡಲು ವ್ಯವಸ್ಥಿತವಾದ ಸಾಂಸ್ಥಿಕ ಪ್ರಯತ್ನಗಳು ನಡೆದಿವೆ. ಅವರು ಬರೆದ ಕವನವೊಂದು ನಾಡಗೀತೆಯಾಗಿದೆ. ಇನ್ನೊಂದು ಕವಿತೆ ರೈತಗೀತೆಯಾಗಿದೆ. ದಿನದಿನವೂ ಈ ಗೀತೆಗಳನ್ನು ಹಾಡುವುದನ್ನು ಕೇಳುತ್ತಿದ್ದೇವೆ. ಹಲವು ತರಗತಿಗಳ ಪಠ್ಯಪುಸ್ತಗಳಲ್ಲಿ ಅವರ ಕೃತಿಗಳನ್ನು ಸೇರಿಸಿ ಓದಲು ನಿಗದಿ ಮಾಡಲಾಗುತ್ತಿದೆ. ಅವರ ಕೃತಿಗಳು ಬಿಡಿಯಾಗಿ ಮತ್ತು ಸಂಪುಟಗಳಲ್ಲಿ ಮತ್ತೆ ಮತ್ತೆ ಅಚ್ಚಾಗುತ್ತಿವೆ. ಓದು/ಕೇಳು ಕೃತಿಗಳಾಗಿ ಅವರ ರಚನೆಗಳು ಮಾರ್ಪಟ್ಟಿವೆ. ಅವರ ಹೆಸರಿನಲ್ಲಿ ಅಖಿಲ ಭಾರತ ಮಟ್ಟದ ಸಾಹಿತ್ಯ ಪ್ರಶಸ್ತಿಯೊಂದಿದೆ. ಅವರು ರೂಪಿಸಿದ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯು ಸಾಕಷ್ಟು ವ್ಯಾಪಕವಾಗಿ ಎಳೆಯ ತಲೆಮಾರಿನವರಲ್ಲಿ ಆಚರಣೆಯಲ್ಲಿದೆ. ಮನುಜ ಮತ-ವಿಶ್ವ ಪಥ ಸಂದೇಶವು ಶಾಲಾ ಪಠ್ಯ ಪುಸ್ತಕಗಳ ಒಳ ಕವಚಗಳಲ್ಲಿ ಅಚ್ಚಾಗಿ ಓದುವ ಮಕ್ಕಳ ಗಮನಕ್ಕೆ ಬರುವಂತೆ ಮಾಡಲಾಗಿದೆ. ಸಾಂಸ್ಥಿಕ ಪ್ರಯತ್ನಗಳ ಮೂಲಕ ಹೊಸ ತಲೆಮಾರಿನ ಮಕ್ಕಳು ಕುವೆಂಪು ಅವರ ಬರಹಗಳನ್ನು ಓದುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಸಮಾಜದ ಒಂದು ಸಮುದಾಯ ಅವರನ್ನು ತನ್ನ ಗುರುತನ್ನಾಗಿ ಮಾಡಿಕೊಳ್ಳುವ ಯತ್ನವನ್ನೂ ಮಾಡಿದ್ದಿದೆ” ಕುವೆಂಪು ಕನ್ನಡ ಜನಮಾನಸದ ಅವಿಭಾಜ್ಯ ಅಂಗವಾಗಿರುವುದನ್ನು ಸಹ ಲೇಖಕರು ಇಲ್ಲಿ ಗುರುತಿಸಿದ್ದಾರೆ. ಇಂಥ ಒಬ್ಬ ದೊಡ್ಡ ಪ್ರತಿಭಾವಂತ ಕವಿಯ ಸಾಹಿತ್ಯ ಪ್ರಪಂಚವನ್ನು ಮುಕ್ತವಾಗಿ ಪ್ರವೇಶಿಸುವುದು ಹೇಗೆ ಎಂಬ ಬಹು ಸಾಧ್ಯತೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಹೊಸ ಪೀಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕುವೆಂಪು ದರ್ಶನದ ಭಿನ್ನ ನೆಲೆಯ ಹುಡುಕಾಟ ಪ್ರಸಕ್ತ ಕೃತಿಯಲ್ಲಿ ತೆರೆದುಕೊಂಡಿದೆ.

    ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಕುವೆಂಪು ಭಾಷಣಗಳಿಗೆ ಐವತ್ತು ತುಂಬಿದಾಗ, ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ, ಕುವೆಂಪು ಚಿಂತನೆಗಳು: ಅಂದು-ಇಂದು, ಮತ್ತೆ ಮತ್ತೆ ಮಲೆಗಳಲ್ಲಿ ಮದುಮಗಳು, ಮಲೆಗಳಲ್ಲಿ ಮದುಮಗಳು ಕೃತಿಯನ್ನು ಓದುವ ಬಗೆ, ಚರಿತ್ರೆಯ ಕಪ್ಪುಕುಳಿಗೆ ಸಿಲುಕದ ಮಲೆಗಳಲ್ಲಿ ಮದುಮಗಳು, ಕುವೆಂಪು ಅವರ ಭಾಷಾ ಬಳಕೆ: ಸೃಜನಶೀಲ ನೆಲೆಗಳು, ಕುವೆಂಪು ಅವರಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ, ವಿಮರ್ಶಕರಾಗಿ ಕುವೆಂಪು, ಕುವೆಂಪು ಕೃತಿಗಳ ವಿಮರ್ಶೆಯ ನೆಲೆಗಳು, ಕುವೆಂಪು ಅವರ ಬರಹಗಳನ್ನು ಈಗ ಏಕೆ ಓದಬೇಕು ಹೀಗೆ ಹನ್ನೆರಡು ಕಿರು ಅಧ್ಯಾಯಗಳಲ್ಲಿ ಕುವೆಂಪು ಅವರ ವ್ಯಕ್ತಿಮತ್ತೆ ಮತ್ತು ಅವರ ಸಾಹಿತ್ಯದ ಆಳ ಅಗಲ ವೈಭವಗಳನ್ನು ನಾನಾ ನೆಲೆಗಳಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಆಧುನಿಕ ಸಾಹಿತ್ಯ ವಿಮರ್ಶೆಯಲ್ಲಿ ಕರ್ತೃ ಕೇಂದ್ರಿತ, ಕೃತಿ ಕೇಂದ್ರಿತ, ಸಮಾಜ ಕೇಂದ್ರಿತ, ವಾಚಕ ಕೇಂದ್ರೀತ ಎಂಬಾದಿಯಾದ ಪ್ರಕಾರಗಳಿವೆ. ಓದುಗ ಕೇಂದ್ರಿತ ವಿಮರ್ಶೆಯ ವಿಧಾನ ನಮ್ಮಲ್ಲಿ ಅಷ್ಟಾಗಿ ಬಂದಿಲ್ಲ. ಈ ದೃಷ್ಟಿಯಿಂದ ಪ್ರಸ್ತುತ ಕೃತಿ ಮುಖ್ಯವಾಗುತ್ತದೆ. ಓದುಗ ಹಾಗೂ ಓದುವಿಕೆಯ ಕಡೆಗೆ ಇಲ್ಲಿ ವಿಶೇಷವಾಗಿ ಚಿತ್ತಹರಿಸಲಾಗಿದೆ. ಈವರೆಗೆ ಕುವೆಂಪುರವರನ್ನು ಹೆಚ್ಚಾಗಿ ಅವರ ಕೃತಿಗಳ ಮುಖಾಂತರವೇ ನೋಡಲಾಗಿದೆ. ಆದರೆ ಓದುಗರ ನೆಲೆಯಲ್ಲಿ ಕುವೆಂಪುರವರನ್ನು ಅರ್ಥೈಸುವ ವಿಶೇಷ ಪ್ರಯತ್ನ ಅವರ ಮಾತು ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಮಾಡಲಾಗಿದೆ.

    ಎಲ್ಲ ವಿಮರ್ಶೆಯ ಪ್ರಕಾರಗಳಿಗೂ ಒಂದು ಮಿತಿ ಇದೆ. ಇದನ್ನು ಲೇಖಕರು ಒಪ್ಪಿಕೊಂಡಿದ್ದಾರೆ. ಕುವೆಂಪು ದೊಡ್ಡ ಕ್ಯಾನ್ವಾಸ್‌ನಲ್ಲಿ ಬರೆದ ಲೇಖಕರು. ಅವರ ಗೀತೆಗಳು, ಕಾವ್ಯ, ನಾಟಕ ಇವೆಲ್ಲ ದೊಡ್ಡ ಕ್ಯಾನ್ವಾಸ್‌ನ ಭಾಗವಾಗಿದೆ. ಅವುಗಳನ್ನು ಬಿಡಿಬಿಡಿಯಾಗಿ ಓದಿ, ಇದು ಕುವೆಂಪು, ಅವರು ನಮ್ಮ ಕೈಗೆ ಸಿಕ್ಕಿದ್ದಾರೆ ಎಂದು ಹೇಳಲು ಬರುವುದಿಲ್ಲ. ಆ ರೀತಿ ಹೇಳುವುದು ಭಾರೀ ತಪ್ಪು. ಕುವೆಂಪು ಅವರನ್ನು ಒಂದು ಸಮಗ್ರತೆಯಲ್ಲಿ ನೋಡಬೇಕಾಗುತ್ತದೆ. ಸಮಗ್ರತೆಯ ದೃಷ್ಟಿಯಿಂದ ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ ಕಾದಂಬರಿಯಿಂದ ಎರಡು ಪ್ರಸಂಗಗಳನ್ನು ಸೂಕ್ತವಾಗಿ ವಿವರಿಸಿದ್ದಾರೆ.

    ಕುವೆಂಪು ಪ್ರತಿಭಾ ಸಂಪನ್ನ ಸೃಜನಶೀಲ ಲೇಖಕ. ಕುವೆಂಪು ಅವರೊಡನೆ ಹಲವರು ಸಂದರ್ಶನಗಳನ್ನು ನಡೆಸಿದ್ದಾರಷ್ಟೆ. ಅಂತಹ ಕೆಲವು ಸಂದರ್ಶನಗಳಲ್ಲಿ ಈ ಶೂದ್ರ ಸಂವೇದನೆಯ ಮಾತೂ ಬಂದಿದೆ. ‘ಪಾಂಚಾಲಿ’ ವಿಶೇಷಾಂಕಕ್ಕಾಗಿ ಪಿ. ಲಂಕೇಶ್ ಅವರು ಮಾಡಿದ ಸಂದರ್ಶನದಲ್ಲಿ ‘ನನ್ನ ಜೀವನ ದರ್ಶನ.. ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೇ ಅವಲಂಬಿಸುತ್ತದೆ. ಅದನ್ನು “ನಿಮ್ಮಲ್ಲಿ” ಕೆಲವರು “ವೈದಿಕ” ಎಂದು ನಿಂದಿಸಿ ಜರೆಯುವ ರೀತಿಯಲ್ಲಿ “ಅವರಲ್ಲಿ” ಕೆಲವರು “ಅವೈದಿಕ” ಎಂದೂ ತಿರಸ್ಕರಿಸುತ್ತಾರೆ” ಎಂದಿದ್ದಾರೆ. ಅವರ ಈ ಮಾತುಗಳನ್ನು ಮತ್ತು “ನೀವು” “ಅವರು” ಎಂದು ಹೆಸರಿಸಿರುವ ಬಗೆಯನ್ನು ಗಮನಿಸಿ. ಮತ್ತು ತಮ್ಮ ಸಾಹಿತ್ಯವನ್ನು ಶೂದ್ರ ಸಂವೇದನೆಯಿಂದ ಮೈದಳೆದದ್ದು ಎಂದು ವಿವರಿಸುವುದು ಅವರಿಗೆ ಸಮ್ಮತವಾಗಿರಲಿಲ್ಲ ಎಂದು ಅವರು ಹೇಳಿರುವ ಮೇಲಿನ ಮಾತುಗಳಿಂದ ತಿಳಿಯಲು ಸಾಧ್ಯವಿದೆ. ಹಾಗಾಗಿ ವಿಮರ್ಶೆಯ ಈ ನಿಲುವು ಅವರಿಗೆ ಅಷ್ಟು ಸರಿ ಎನಿಸಿದಂತೆ ತೋರುವುದಿಲ್ಲ. ಬರಹಗಾರರು ತಮ್ಮ ಬರಹಗಳನ್ನು ಯಾವ ಬಗೆಯಲ್ಲಿ ನೋಡಬೇಕೆಂದು ಬಯಸುತ್ತಾರೆಂಬುದು ಅಷ್ಟು ಮುಖ್ಯವಲ್ಲ. ಆದರೂ ಶೂದ್ರ ಸಂವೇದನೆಯನ್ನು ಅವಲಂಬಿಸಿ ತಮ್ಮ ಬರಹಗಳನ್ನು ನೋಡಬೇಕೆಂಬ ನಿಲುವನ್ನು ಕುವೆಂಪು ತಮ್ಮದೇ ಆದ ರೀತಿಯಲ್ಲಿ ನಿರಾಕರಿಸಿದಂತೆ ತೋರುತ್ತದೆ. ವಿಶ್ವಮಾನವ ಪ್ರಜ್ಞೆಯನ್ನು ಪ್ರತಿಪಾದಿಸುತ್ತಿದ್ದ ಅವರು ಖಂಡ ದೃಷ್ಟಿಯನ್ನು ಅವಲಂಬಿಸುವುದನ್ನು ಅಷ್ಟಾಗಿ ಒಪ್ಪಿದಂತೆ ಕಾಣುವುದಿಲ್ಲ. ಹೀಗೆ ಕುವೆಂಪು ಅವರ ಸಾಹಿತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಓದುಗ ತನ್ನದೇ ಆದ ಒಂದು ದಾರಿಯಲ್ಲಿ ಕ್ರಮಿಸಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ.

    “ಒಟ್ಟಾರೆ ಹೇಳುವುದಾದರೆ ಕುವೆಂಪು ಅವರ ಬರಹಗಳು ಅವರಿಂದ ಬಿಡುಗಡೆ ಪಡೆದು ಸ್ವತಂತ್ರಗೊಳ್ಳಬೇಕು. ಅವರ ಮೂಲಕ ಅವರ ಬರಹಗಳನ್ನು ಓದುಬೇಕೆಂಬ ಒತ್ತಾಯದಿಂದ ಹೊರಬರಬೇಕು. ಕುವೆಂಪು ಅವರ ಹೆಸರು ಕೇವಲ ನೆಪವಾಗಬೇಕು. ಆಗ ಮಾತ್ರ ಮುಂದಿನ ದಶಕಗಳಲ್ಲಿ ಓದುಗರು ಅವರ ಬರಹಗಳನ್ನು ಅನುಸಂಧಾನ ಮಾಡುವ ಬಗೆಗಳು ವಿಸ್ತಾರಗೊಳ್ಳುತ್ತವೆ. ವಚನ, ಕೀರ್ತನೆ, ತತ್ವಪದಗಳು ಸಾಮುದಾಯಿಕವಾಗಿ ಉಳಿದುಕೊಂಡು ಬಂದಿರುವುದೇ ಹೀಗೇ ಅಲ್ಲವೇ. ಅವೆಲ್ಲವನ್ನು ಯಾರು ಬರೆದವರು ಏಕೆ ಬರೆದರು ಎಂಬುದು ವಿದ್ವಾಂಸರ ಕಾಳಜಿ. ಜನರಿಗೆ ಆ ರಚನೆಗಳಷ್ಟೇ ಸಾಕು. ತಮ್ಮ ಬದುಕಿನೊಡನೆ ಅವುಗಳನ್ನು ಉಳಿಸಿಕೊಂಡಿದ್ದಾರೆ. ಉಳಿಸಿಕೊಳ್ಳುತ್ತಾರೆ. ಕುವೆಂಪು ಅವರ ಬರಹಗಳು ಈ ನೆಲೆಯನ್ನು ಪಡೆದಾಗ ಮಾತ್ರ ಬರುವ ತಲೆಮಾರಿಗೆ ದಾಟಬಲ್ಲವು” ಎಂಬ ಮನೀಷೆ ಈ ಕೃತಿಯಲ್ಲಿ ಢಾಳಾಗಿ ಕಾಣಸಿಗುತ್ತದೆ. ವಿಮರ್ಶೆಯ ಹಂಗಿಲ್ಲದೆ, ಎಲ್ಲ ಬಗೆಯ ಪೂರ್ವಗ್ರಹಗಳನ್ನು ಬಿಟ್ಟು ಕುವೆಂಪು ಅವರನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂಬ ನಿಲುವು ಇಲ್ಲಿ ವ್ಯಕ್ತವಾಗಿದೆ. ಆದರೆ ಹೊಸ ಓದುಗನಿಗೆ ಪರಂಪರೆಯನ್ನು ನಿರಾಕರಿಸಿ ತಮ್ಮದೇ ಹಾದಿಯಲ್ಲಿ ಸಾಗುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ. ಇಲ್ಲಿ ಪ್ರಶ್ನೆಗಳ ಸರಮಾಲೆ ಇದೆ, ಆದರೆ ಅದಕ್ಕೆ ತಕ್ಕ ಉತ್ತರ ಕಡಿಮೆ ಅನಿಸುತಿದೆ. ಅದೇನೇ ಇರಲಿ ಹೊಸ ಓದುಗರ ದೃಷ್ಟಿ ತಿದ್ದುವ ಒಂದು ನೂತನ ಪ್ರಯತ್ನವಿದು ಎಂಬುದರಲ್ಲಿ ಎರಡು ಮಾತಿಲ್ಲ.

    ಪ್ರೊ. ಜಿ.ಎನ್. ಉಪಾಧ್ಯ, ಮುಂಬೈ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಲೋಕಮಾನ್ಯ ರಂಗ ಮಂದಿರದಲ್ಲಿ ‘ಚೈತ್ರ ನಾಟಕೋತ್ಸವ’ | ಮಾರ್ಚ್ 27ರಿಂದ 29
    Next Article ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ರಕ್ತಾಕ್ಷಿ’ ನಾಟಕ ಪ್ರದರ್ಶನ | ಮಾರ್ಚ್ 27
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.