ನಮ್ಮಲ್ಲಿ ಅನೇಕರು ಬಹಳಷ್ಟು ಓದಿಕೊಂಡು ಸಾಹಿತ್ಯ ಸಂವೇದನೆಯನ್ನು ಬೆಳೆಸಿಕೊಂಡಿರುತ್ತಾರಾದರೂ ಉದ್ಯೋಗದಲ್ಲಿದ್ದಾಗ ಸಮಯದ ಅಭಾವದಿಂದಾಗಿ ಬರೆಯಲು ಹೊರಡುವುದಿಲ್ಲ. ಸೇವಾ ನಿವೃತ್ತಿಯ ನಂತರ ಮಾಗಿದ ಜೀವನಾನುಭವಗಳೊಂದಿಗೆ ಬರೆಯಬೇಕೆಂಬ ತುಡಿತ ಅವರಲ್ಲುಂಟಾಗುತ್ತದೆ. ಕೋಟದ ಕೆ.ಜಿ. ಸೂರ್ಯನಾರಾಯಣ ಅಂಥವರಲ್ಲೊಬ್ಬರು. ಬಿ.ಎಸ್.ಎನ್.ಎಲ್.ನಲ್ಲಿ ಕೆಲಸ ಮಾಡುತ್ತಿದ್ದ ಅವರು ಭಾರತದಾದ್ಯಂತ ಊರೂರು ತಿರುಗಿ ಅನುಭವ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಂಡವರು. ಮೂರು-ನಾಲ್ಕು ವರ್ಷಗಳಿಂದ ಫೇಸ್ ಬುಕ್ ನ ಪ್ರತಿಲಿಪಿ ಎಂಬ ವೇದಿಕೆ ಸಿಕ್ಕಿದಾಗ ಅವರ ಬರವಣಿಗೆ ನಿಧಾನವಾಗಿ ರೆಕ್ಕೆ ಬೊಚ್ಚ ತೊಡಗಿತು. ಕಥೆ-ಕವಿತೆ-ಲೇಖನಗಳು ಸರಾಗವಾಗಿ ಹೊರಬಂದವು. ಈಗ ‘ಜೀವನಯಾನದ ಹೊಂಬೆಳಕು’ ಎಂಬ ಅವರ ಅನುಭವ ಕಥನಗಳ ಸಂಕಲನ ಪ್ರಕಟವಾಗಿದೆ.
ಸಂಕಲನದ ಶೀರ್ಷಿಕೆಯಲ್ಲಿಯೇ ಎರಡು ರೂಪಕಗಳಿದ್ದು ಅದು ಕಾವ್ಯಾತ್ಮಕವಾಗಿದೆ. ಲೇಖನಗಳ ಗುಣಮಟ್ಟವನ್ನು ಇದರಿಂದಲೇ ಅಳೆಯಬಹುದಾಗಿದೆ. 25 ಪುಟ್ಟ ಪುಟ್ಟ ಸುಂದರ ಬರೆಹಗಳ ಗುಚ್ಛವಿದು. ಬಾಲ್ಯದಿಂದ ಹಿಡಿದು ಇಲ್ಲಿಯ ತನಕ ತಮ್ಮ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ನೆನಪಿನ ಬುತ್ತಿಯಿಂದ ಲೇಖಕರು ಆಯ್ದುಕೊಂಡಿದ್ದಾರೆ. ಅಜ್ಜನ ನೆನಪು, ಅಪ್ಪನ ಜತೆಗೆ ಕೈಹಿಡಿದು ಮಲೆನಾಡಿನ ಹಳ್ಳಿಯುದ್ದಕ್ಕೂ ಓಡಾಡಿದ್ದು, ಅಮ್ಮ ಜೀವನದುದ್ದಕ್ಕೂ ಕಷ್ಟಪಟ್ಟದ್ದು, ಅಮ್ಮನ ಔದಾರ್ಯ, ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಮನೆಯಿಂದ ದೂರ ಹಾಸ್ಟೆಲಿನಲ್ಲಿದ್ದಾಗ ಆಹಾರದಲ್ಲಿ ಏರುಪೇರಾಗಿ ಹುಷಾರು ತಪ್ಪಿ ಆಸ್ಪತ್ರೆ ಸೇರಿದಾಗ ಆಸ್ಪತ್ರೆಯಲ್ಲಿ ಸಿಕ್ಕಿದ ಸಹಕಾರ ಮತ್ತು ಹತ್ತಿರದ ಬೆಡ್ಡುಗಳಲ್ಲಿದ್ದವರು ಪ್ರೀತಿಯಿಂದ ನೋಡಿಕೊಂಡದ್ದು, ಮನೆಯಲ್ಲಿ ಮಕ್ಕಳ ತುಂಟಾಟ, ಮೊಮ್ಮಕ್ಕಳು ಕೊಟ್ಟ ಸುಖ -ಹೀಗೆ ಅವರ ನೆನಪುಗಳು ಸಾಗುತ್ತವೆ. ‘ರೈಲುಯಾತ್ರೆ’ಯ ಕುರಿತಾದ ಲೇಖನದಲ್ಲಿ ಅವರು ಇದುವರೆಗೆ ಭಾರತದಾದ್ಯಂತ ಮಾಡಿದ ಎಲ್ಲ ರೈಲು ಯಾನಗಳು ಮತ್ತು ಭಾರತೀಯ ರೈಲ್ವೆಯೊಳಗಿನ ವ್ಯವಸ್ಥೆ, ಸಹಯಾತ್ರಿಕರ ಜತೆಗಿನ ಒಡನಾಟ ಮೊದಲಾದ ವಿಚಾರಗಳನ್ನು ದೀರ್ಘವಾಗಿ ಹೇಳುತ್ತಾರೆ. ‘ರಾಯರು ಬಂದರು ಮಾವನ ಮನೆಗೆ’ ಕೆ.ಎಸ್. ನರಸಿಂಹ ಸ್ವಾಮಿಯವರ ಹಾಡಿನ ಸಾಲನ್ನು ನೆನಪಿಸಿದರೂ ಇಲ್ಲಿನ ಅನುಭವದ ಮೆಲುಕು ಭಿನ್ನವೂ ತಿಳಿಹಾಸ್ಯ ಭರಿತವೂ ಆಗಿದೆ. ಇಲ್ಲಿ ಲೇಖಕರು ಮದುವೆಗೆ ಮುನ್ನವೇ ಹುಡುಗಿಯ ಪ್ರಸ್ತಾಪ ಬಂದ ಕೂಡಲೇ ಹಿರಿಯರಿಗೆ ತಿಳಿಸದೆ ತಮ್ಮನ ಜತೆಗೂಡಿ ಮಲೆನಾಡಿನಿಂದ ದೂರದ ಸಾಲಿಗ್ರಾಮದ ಒಳಪ್ರದೇಶವಾದ ಒಂದು ಹಳ್ಳಿಗೆ ಹೇಗೋ ಕಷ್ಟಪಟ್ಟು ಒದ್ದಾಡಿ ಜಾಡು ಹಿಡಿದು ವಿಚಾರಿಸಿ ಹೋದಾಗ ಹುಡುಗಿ ಆಗಷ್ಟೇ ಪರೀಕ್ಷೆ ಮುಗಿಸಿ ದೂರದ ನೆಂಟರ ಮನೆಗೆ ಹೋಗಿದ್ದಾಳೆಂದು ಗೊತ್ತಾದಾಗ ಬೇಸ್ತು ಬೀಳುವುದೇ ಇಲ್ಲಿನ ಕಥೆ. ರಸ್ತೆ ಮತ್ತು ವಾಹನ ಸೌಕರ್ಯಗಳು ಸರಿಯಾಗಿಲ್ಲದ, ಮೊಬೈಲ್ ಬಿಟ್ಟು ಲ್ಯಾಂಡ್ ಫೋನ್ ಕೂಡಾ ಇಲ್ಲದ ಅಂದಿನ ದಿನಗಳ ಒದ್ದಾಟದ ಚಿತ್ರಣ ಇಲ್ಲಿ ಬಹಳ ಚೆನ್ನಾಗಿ ಬಂದಿದೆ. ಅಲ್ಲದೆ ಮದುವೆಯಾಗುವ ಹುಡುಗಿಯ ಬಗ್ಗೆ ಕನಸು ಕಾಣುವ ಒಬ್ಬ ಯುವಕನ ಚಿತ್ರಣವೂ ಇಲ್ಲಿದೆ.
ಈ ಸಂಕಲನದಲ್ಲಿರುವ ಪ್ರತಿಯೊಂದು ಲೇಖನವೂ ಓದಿನ ಖುಷಿಯನ್ನು ನೀಡುವುದರೊಂದಿಗೆ ನೇರವಾಗಿಯೋ ಪರೋಕ್ಷವಾಗಿಯೋ ಒಂದಿಲ್ಲೊಂದು ಮೌಲ್ಯ ಸಂದೇಶವನ್ನು ಧ್ವನಿಸುತ್ತದೆ. ಒಂದು ಲೇಖನವನ್ನು ಓದುಗರಿಗೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಹೇಗೆ ಆರಂಭಿಸಬೇಕು, ಅದರ ಮಧ್ಯಭಾಗದಲ್ಲಿ ಆಯ್ದುಕೊಂಡ ವಸ್ತುವಿನ ಆರೈಕೆ ಹೇಗಿರಬೇಕು ಮತ್ತು ನ್ಯಾಯವಾದ ರೀತಿಯಲ್ಲಿ ಹೇಗೆ ಕೊನೆಗಳಿಬೇಕು ಅನ್ನುವುದು ತಿಳಿದಿದ್ದರೆ ಒಬ್ಬ ಒಳ್ಳೆಯ ಲೇಖಕನಾಗಲು ಸಾಧ್ಯ. ಸೂರ್ಯನಾರಾಯಣ ಅವರಲ್ಲಿ ಒಳ್ಳೆಯ ಲೇಖಕರಾಗುವ ಸಾಮರ್ಥ್ಯ ಇದೆ ಅನ್ನುವುದನ್ನು ಅವರು ಈ ಸಂಕಲನದ ಮೂಲಕ ತೋರಿಸಿಕೊಟ್ಟಿದ್ದಾರೆ.
ವಿವಿಧ ಆಡುಭಾಷೆಗಳ ವೈವಿಧ್ಯವುಳ್ಳ ಭಾಷೆ ಕನ್ನಡ. ತಾಯಿಬೇರು ಶಿಷ್ಟ ಕನ್ನಡವೇ ಆದರೂ ಬೇರೆ ಬೇರೆ ಪ್ರದೇಶಗಳಲ್ಲಿ ಅದರ ಗ್ರಾಮ್ಯ ರೂಪಗಳು ಹುಟ್ಟಿಕೊಂಡವು. ಅವರವರ ಭಾಷೆಗಳ ಮೇಲೆ ಅವರವರಿಗೆ ಪ್ರೀತಿ, ಸೆಳೆತ ಮತ್ತು ಅಭಿಮಾನ. ಕುಂದಾಪುರ ಕನ್ನಡವೆಂಬುದು ಅಂಥ ಒಂದು ಆಡು ಭಾಷೆ. ಬ್ರಹ್ಮಾವರ-ಮಾಬುಕಳದಿಂದ ಹಿಡಿದು ಬೈಂದೂರು-ಶಿರೂರಿನ ತನಕವೂ ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಒಂದೇ ಭಾಷೆಯನ್ನಾಡುವುದು ಒಂದು ವಿಶೇಷ. ಕುಂದಾಪುರ ಭಾಷೆಯ ಬನಿ ಬಹಳ ಸೊಗಸು. ಕೇಳಲು ಬಲು ಹಿತ. ಶಬ್ದಗಳ ಕೊನೆಯನ್ನೂ ಕೆಲವೊಮ್ಮೆ ಮಧ್ಯಭಾಗವನ್ನೂ ತುಂಡಿಸಿ ಕೆಲವು ಅಕ್ಷರಗಳನ್ನು ನುಂಗಿ ಚುಟುಕುಗೊಳಿಸಿ ಮಾತನಾಡುವ ಈ ಭಾಷೆಯನ್ನು ಕೇಳಿದರೆ ಭಾಷೆಯ ಪರಿಚಯವೇ ಇಲ್ಲದವರಿಗೆ ‘ಇದು ಕನ್ನಡವೇ?’ ಅನ್ನುವ ಅನುಮಾನ ಬಾರದಿರದು. ಇದು ಗ್ರಾಮ್ಯ ಸ್ಪರ್ಶವಿರುವ ಭಾಷೆಯೆಂಬ ಕಾರಣಕ್ಕೋ ಏನೋ ಕುಂದಾಪುರ ಬಿಟ್ಟು ಬೇರೆಡೆ ಹೋಗಿ ನೆಲೆಸುವ ಯುವಜನತೆ ನವನಾಗರಿಕತೆಯ ಹೆಸರಿನಲ್ಲಿ ತಮ್ಮ ಬಾಲ್ಯವನ್ನು ರೂಪಿಸಿದ ಭಾಷೆಯನ್ನು ಮರೆತು ಬೆಂಗಳೂರಿನ ಬೆಡಗಿನ ಭಾಷೆಯನ್ನು ಅಪ್ಪಿಕೊಂಡಿದ್ದಾರೆ. ಅಂಥವರು ಊರಿಗೆ ಬಂದಾಗಲೂ ಅದೇ ಭಾಷೆಯ ಮೆರವಣಿಗೆ.
ಇದೇ ಕಾರಣಕ್ಕೆ ಕುಂದಾಪುರದ ಪ್ರಜ್ಞಾವಂತರಿಂದ ಅಲ್ಲಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಗಿಳಿಯಾರು ಶ್ರೀನಿವಾಸ ಅಡಿಗರೂ ತಮ್ಮ ಇತ್ತೀಚಿನ ಪುಸ್ತಕ ‘ಜೋಡೊನ್ಕಿ ಮ್ಯಾಲೆ ಗಿಣಿರಾಮ’ದಲ್ಲಿ ಮಾಡಿರುವುದು ಇದನ್ನೇ. ಈ ಪುಸ್ತಕವು ಪೂರ್ತಿಯಾಗಿ ಕುಂದಾಪುರ ಭಾಷೆಗೆ ಅರ್ಪಿತವಾಗಿದೆ. ಭಾಷೆಯನ್ನು ಉಳಿಸುವುದು ಮತ್ತು ಯುವಜನತೆ ಅದನ್ನು ಮರೆಯದಂತೆ ಮಾಡುವುದು ಅದರ ಉದ್ದೇಶ. ಇದು ಯಾವುದೇ ಒಂದು ಸಾಹಿತ್ಯ ಪ್ರಕಾರಕ್ಕೆ ಸೇರಿದ ಕೃತಿಯಲ್ಲ. ಇದರಲ್ಲಿ ಗದ್ಯ-ಪದ್ಯ- ನಾಟಕ-ಪ್ರಬಂಧ, ಪ್ರವಾಸ ಕಥನ, ಕತೆ-ಕವಿತೆಗಳೆಲ್ಲವೂ ಸಂಕಲನಗೊಂಡಿವೆ. ಒಟ್ಟು ಒಂದು ಜಾತ್ರೆ ಇದ್ದ ಹಾಗೆ. ಭಾಷೆಯ ಸೌಂದರ್ಯ-ಬಾಗು-ಬಳುಕುಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಅಕ್ಷರಗಳನ್ನು ಲೋಪ ಮಾಡಿ ಚುಟುಕಾಗಿಸುವುದಕ್ಕೆ ಉದಾಹರಣೆಯಾಗಿ ‘ಹ್ವಾಯ್ಕ್-ಬರ್ಕ್, ಬರ್ಕ ಬರ್ಕಾ?, ಕೂಕಣಿ, ಕರ್ಕ ಹೋಯ್ನಿ, ಕಂಡ್ರ್, ಕೇಂಡ್ರ್, ಹ್ವಾರ್, ಮೋನ ಹೋನಾ?’ ಇತ್ಯಾದಿ ಅಭಿವ್ಯಕ್ತಿಗಳನ್ನು ಉಲ್ಲೇಖಿಸುತ್ತಾರೆ.
ಪ್ರತಿಯೊಂದು ಭಾಷೆಯ ಒಳಗೆ ಒಂದು ಸಂಸ್ಕೃತಿ ಹಾಸುಹೊಕ್ಕಾಗಿ ಸೇರಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಭಾಷೆ ಮತ್ತು ಸಂಸ್ಕೃತಿ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಅಂತೆಯೇ ಶ್ರೀನಿವಾಸ ಅಡಿಗರ ‘ಜೋಡೊನ್ಕಿ ಮ್ಯಾಲೆ ಗಿಣಿರಾಮ’ದಲ್ಲಿ ಕುಂದಾಪುರದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ವರ್ಣಿಸುವ ಲೇಖನಗಳೂ ಜಾನಪದ ಕವಿತೆಗಳೂ ತುಂಬಾ ಇವೆ. ಮೊದಲ ಲೇಖನ ‘ನಮ್ಮೂರ್ ನಮ್ಗೆ ಚಂದೋ ಚಂದ್ ಗ್ವಾಂಪಿ ನಮ್ ಬಾಸಿ’ಯಲ್ಲಿ ಕುಂದಾಪುರದ ಪ್ರಸಿದ್ಧ ಸ್ಥಳಗಳಾದ ಬಸ್ರೂರು ಮತ್ತು ಬಾರ್ಕೂರುಗಳ ಇತಿಹಾಸವಿದೆ. ವಿಜಯ ನಗರದ ಅರಸರ ಕಾಲದಲ್ಲಿ ಅವು ಹೇಗೆ ಬಂದರು ಪಟ್ಟಣಗಳಾಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಎಂಬುದರ ಕುರಿತು ವಿವರಗಳಿವೆ. ಎರಡನೆಯ ದೀರ್ಘ ಲೇಖನ. ‘ನಮ್ಬದ್ಕ್ ನಮ್ ಆಚರ್ಣಿ ನಮ್ ಹಬ್ಬೋ’ ಕುಂದಾಪುರದಲ್ಲಿ ಹಿಂದಿನಿಂದಲೂ ಅಚರಿಸುತ್ತ ಬಂದ ಹಬ್ಬಗಳ ಕುರಿತಾಗಿದೆ. ಹಬ್ಬಗಳ ಹಿನ್ನೆಲೆ, ಅವುಗಳ ಹಿಂದಿನ ಪೌರಾಣಿಕ ಹಾಗೂ ಜಾನಪದ ಕಥೆಗಳು, ಹಬ್ಬಗಳನ್ನು ಆಚರಿಸುವ ಬಗೆ -ಎಲ್ಲವನ್ನೂ ಸರಳವಾಗಿ ನಿರೂಪಿಸಿದ್ದಾರೆ. ಇವುಗಳಲ್ಲಿ ಎಷ್ಟೋ ಹಬ್ಬಗಳು ಇವತ್ತು ತೆರೆಯ ಮರೆಗೆ ಸರಿದು ಅನೇಕರಿಗೆ ಅವುಗಳ ಹೆಸರು ಕೂಡಾ ಗೊತ್ತಿಲ್ಲ.
ಕೃತಿಯಲ್ಲಿ ಸೇರಿಸಿಕೊಂಡಿರುವ ಸುದೀರ್ಘವಾದ ಬತ್ತೊಳು ಹಾಡು, ಕೋಲು ಹೊಯ್ಯುವ ಹಾಡು, ಅತ್ಮೊಗಿ-ಮೈದಿನಿ, ನಾ ಹೋತಿ ನನ್ದ ತವ್ಲಾರೀಗಿ, ಒಂದಷ್ದಷು ‘ಎದ್ರ್ ಕತಿ’ (ಒಗಡು), ಒಂದಷ್ಟು ಆದ್ಗತಿ (ಗಾದೆ ಮಾತು) ಜಾನಪದ ಹಾಡುಗಳು ಜನಪದರ ಜೀವನಾನುಭವಗಳು, ಆಲೋಚನೆಗಳು, ದಾಂಪತ್ಯ ಮತ್ತು ಕೌಟುಂಬಿಕ ಬದುಕು, ಚಿಂತನಾ ವಿಧಾನಗಳು- ಹೀಗೆ ನೂರಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇವುಗಳನ್ನೆಲ್ಲ ಅಡಿಗರು ತಮ್ಮ ಬರೆಯುವ ಕೋಣೆಯೊಳಗೆ ತಣ್ಣಗೆ ಕುಳಿತು ಬರೆದಿಲ್ಲ. ಬದಲಾಗಿ, ಕಷ್ಟ ಪಟ್ಟು ತಿರುಗಾಟ ಮಾಡಿ, ತಿಳಿದವರ ಬಳಿಗೆ ಹೋಗಿ ಕ್ಷೇತ್ರಕಾರ್ಯ ಮಾಡಿ ಕಲೆ ಹಾಕಿದ್ದಾರೆ. ಎಲ್ಲವನ್ನೂ ದಾಖಲೀಕರಿಸಿ ಮುಂದಿನ ತಲೆಮಾರಿನವರಿಗೆ ದಾಟಿಸುವ ಸದುದ್ಧೇಶದಿಂದ ಅವರು ಈ ಕೆಲಸ ಮಾಡಿದ್ದಾರೆ.
ಹಿಂದೆ ಶಾಲೆಗಳಲ್ಲಿ ಕನ್ನಡ ಮಾಸ್ತರರು ಸ್ಕೂಲ್ ಡೇ ಸಮಯದಲ್ಲಿ ಮಕ್ಕಳಿಂದ ಆಡಿಸಲೆಂದು ನಾಟಕಗಳನ್ನು ಸ್ವತಃ ಬರೆಯುತ್ತಿದ್ದರು. ಸ್ವತಃ ನಿರ್ದೇಶನ ಮಾಡಿ ನಾಟಕಗಳನ್ನು ರಂಗದ ಮೇಲೆ ತರುವುದರಲ್ಲಿ ಅವರು ಖುಷಿ ಕಾಣುತ್ತಿದ್ದರು. ಅಂದಿನ ಕಾಲದಲ್ಲಿ ಅವರು ಆ ನಾಟಕಗಳ ಮುದ್ರಣ ಅಥವಾ ಪ್ರಕಟಣೆಯ ಕಲ್ಪನೆಯೂ ಅವರಿಗಿರಲಿಲ್ಲ. ಅಂದು ಅದು ಸುಲಭವೂ ಆಗಿರಲಿಲ್ಲ. ಆದ್ದರಿಂದ ನಾಟಕ ಆಡಿಸಿ ಮುಗಿದ ಕೂಡಲೇ ಅವರು ಅದನ್ನೂ ಮೂಲೆಗೆಸೆದು ಬಿಡುತ್ತಿದ್ದರು. ಆದರೆ ಇಂದು ಮುದ್ರಣ-ಪ್ರಕಟಣೆಗಳು ಸುಲಭವಾಗಿ ಕೈಗೆಟಕುವಂತಿವೆ. ಅಂತೆಯೇ ಅಡಿಗರು ಅಂದು ಬರೆದ ನಾಟಕಗಳ ತುಣುಕುಗಳು ಈಗ ಈ ಪುಸ್ತಕದಲ್ಲಿ ಬೆಳಕು ಕಂಡಿವೆ. ಮಕ್ಕಳಿಗೆ ಹೇಳಿ ಮಾಡಿಸಿದ ಶೈಲಿಯಲ್ಲಿವೆ. ಕೃತಿಯಲ್ಲಿ ಅಡಿಗರು ತಮ್ಮ ಕುಟುಂಬದೊಂದಿಗೆ ಮಾಡಿದ ಸಿಂಗಾಪೂರ್ ಪ್ರವಾಸದ ಕಥನವೂ ಹೃದ್ಯವಾಗಿದೆ. ಕೃತಿಗೆ ಕುಂದಾಪುರ ಕನ್ನಡವನ್ನು ಬೆಂಬಲಿಸಿ ಸದಾ ಮಾತನಾಡುವ, ಕುಂದಾಪುರ ಕನ್ನಡದಲ್ಲಿ ಕಥೆ-ಕವಿತೆಗಳನ್ನು ಬರೆದಿರುವ ಖ್ಯಾತ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಒಂದು ಚೆಂದದ ಮುನ್ನುಡಿ ಬರೆದಿದ್ದಾರೆ. ಒಟ್ಟಿನಲ್ಲಿ ಕೃತಿಯ ಓದು ಒಂದು ಹಿತವಾದ ಅನುಭವವನ್ನು ನೀಡುತ್ತದೆ.

ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

