ಪ್ರೊ. ಉಪೇಂದ್ರ ಸೋಮಯಾಜಿಯವರ ಬೃಹತ್ ಗ್ರಂಥ, 672 ಪುಟಗಳ ‘ಕತೆಗಳ ಸಂಕಲನ’ವು ಹಲವು ಕಾರಣಗಳಿಂದಾಗಿ ಒಂದು ವಿಶಿಷ್ಟ ಕೃತಿ. ಇಲ್ಲಿ ಒಟ್ಟು ಐದು ವಿಭಾಗಗಳಲ್ಲಿ ಹಲವಾರು ವೈವಿಧ್ಯಮಯ ಬರೆಹಗಳಿವೆ. ಮಕ್ಕಳ ವ್ಯಕ್ತಿತ್ವ ವಿಕಸನವಾಗಬೇಕು ಎಂಬ ಉದ್ದೇಶದಿಂದ ಹೇಳುವ ಕತೆಗಳನ್ನು ‘ಇಂತವರೂ ಇದ್ದಾರೆ’ ಎಂಬ ಮೊದಲ ವಿಭಾಗದಲ್ಲಿ ಹಾಕಲಾಗಿದೆ. ಮಕ್ಕಳಲ್ಲಿ ಅರಿವಿನ ಬೆಳಕು ಮೂಡಿಸಬೇಕು ಎಂದು ಬರೆದ ‘ಬೆಳಕು ನೀಡುವ ಮಕ್ಕಳ ಕಥೆಗಳು’ ಎರಡನೇ ವಿಭಾಗದಲ್ಲಿವೆ. ಸಂಸ್ಕೃತದಲ್ಲಿದ್ದ ಪಂಚತಂತ್ರದ ಕತೆಗಳ ಹೊಸಗನ್ನಡ ಕಥಾಸ್ವರೂಪ ಮತ್ತು ಭರ್ತೃಹರಿಯ ನೀತಿ ಶತಕದ ಸರಳ ವ್ಯಾಖ್ಯಾನಗಳು ಕೊನೆಯಲ್ಲಿ ಇವೆ. ಇವುಗಳ ಜತೆಗೆ ದೊಡ್ಡವರು ಓದಿ ಖುಷಿಪಡಬಹುದಾದ ಮಹಾಭಾರತದ ಐವರು ಸ್ತ್ರೀಯರ ಅಂತರಂಗದ ಮನಶ್ಶಾಸ್ತ್ರೀಯ ಅಧ್ಯಯನವೂ ಇಲ್ಲಿದೆ.
‘ಇಂಥವರೂ ಇದ್ದಾರೆ’ ವಿಭಾಗದಲ್ಲಿರುವ 20 ಕತೆಗಳು ಮಕ್ಕಳಿಗೆ ಮೌಲ್ಯ ಬೋಧನೆ ಮಾಡುವಂಥವು. ‘ದೇಶಾಭಿಮಾನ’ದಲ್ಲಿ ಎಳೆಯ ಹುಡುಗ ರಾಮ್ ಕಿಶನ್ ತೋರಿಸುವ ಅಗಾಧವಾದ ದೇಶಭಕ್ತಿ, ‘ಬಿತ್ತಿದ್ದನ್ನೇ ಬೆಳೆಯಬೇಕು’ ಕತೆಯಲ್ಲಿ ಅಸೂಯೆ ಪಡುವುದರ ದುಷ್ಪರಿಣಾಮ, ‘ಸ್ವಾತಂತ್ರ್ಯದ ಸೌಧಕ್ಕೆ ಹುತಾತ್ಮರೇ ಅಡಿಗಲ್ಲು’ ಕತೆಯಲ್ಲಿ ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನ ಮತ್ತು ಕೆಚ್ಚು, ‘ಆದರ್ಶ ಸಹಪಾಠಿಗಳು’ ಎಂಬ ಕತೆಯಲ್ಲಿ ಕೃಷ್ಣ-ಸುದಾಮರ ನಡುವಣ ಮುಗ್ಧ ಗೆಳೆತನ, ‘ಪ್ರಾಮಾಣಿಕತೆ’ಯಲ್ಲಿ ಏಕಲವ್ಯನ ಗಾಢವಾದ ಗುರುಭಕ್ತಿ, ‘ನಮ್ಮದು ಈ ಅಭಿಮಾನ’ದಲ್ಲಿ ಶಿವಾಜಿಯ ಕಥೆ ಹೇಳುತ್ತ ಅದರೊಳಗೆ ಮಹಾಭಾರತದ ಧರ್ಮಜನು ಕೌರವನ ವಿಚಾರದಲ್ಲಿ ತೋರಿಸಿದ ಔದಾರ್ಯದ ಉದಾಹರಣೆ, ‘ಸುಳ್ಳಿನಿಂದ ಸತ್ಯದೆಡೆಗೆ’ ಕತೆಯಲ್ಲಿ ಹರಿಶ್ಚಂದ್ರ ಮತ್ತು ಶುನಶ್ಶೇಪನ ಕತೆ-ಹೀಗೆ ಎಲ್ಲವೂ ಮೌಲ್ಯಸಂದೇಶವನ್ನು ನೀಡುವ ಕತೆಗಳೇ ಆಗಿವೆ.
‘ಬೆಳಕು ನೀಡುವ ಮಕ್ಕಳ ಕಥೆಗಳು’ ವಿಭಾಗದಲ್ಲಿ ಮಕ್ಕಳನ್ನು ರಂಜಿಸುವ ಮೂಲಕ ಅವರಲ್ಲಿ ಅರಿವು ಮೂಡಿಸುವ ಕಥೆಗಳಿವೆ. ‘ಕುಂಜುಚಾತ್ತನ್’, ‘ಪಿಶಾಚಿಯ ಪವಾಡ’, ‘ನಂಬಿ ಕೆಟ್ಟವರು’, ‘ಮೋಹಿನಿ ಕಾಟ’ ಮೊದಲಾದ ಅತಿಮಾನುಷ ಫ್ಯಾಂಟಸಿ ಕತೆಗಳು ಮಕ್ಕಳಲ್ಲಿ ಕುತೂಹಲ ಕೆರಳಿಸುತ್ತ ಆಸಕ್ತಿ ಮೂಡಿಸುತ್ತವೆ. ‘ಕೋತಿ ಕತೆ’ಯು ಟೋಪಿ ವ್ಯಾಪಾರಿಯ ಹಳೆಯ ಕತೆಯ ಇನ್ನೊಂದು ರೂಪ. ‘ಜಂಬ ಸಲ್ಲದು’ ಮತ್ತು ‘ಅರಣ್ಯಧರ್ಮ’ ಕತೆಗಳಲ್ಲಿ ಪ್ರಾಣಿ-ಪಕ್ಷಿಗಳು ಮಾತನಾಡುತ್ತವೆ. ಇವು ಪರೋಕ್ಷವಾಗಿ ಮನುಷ್ಯ ಸ್ವಭಾವವನ್ನೇ ಧ್ವನಿಸುತ್ತವೆ. ‘ಸತ್ಯವನ್ನು ಪ್ರಿಯವಾಗುಂತೆ ಹೇಳು’, ‘ಬೀಗುವಿಯೋ ಬಾಗುವಿಯೋ’ ನಮ್ಮ ವರ್ತನೆ ಹೇಗಿರಬೇಕೆಂದು ಹೇಳುತ್ತವೆ. ಅನೇಕ ಕಥೆಗಳು ಮನುಷ್ಯರು ಮಾಡುವ ಅನ್ಯಾಯದ ಕುರಿತು ಚರ್ಚಿಸುತ್ತವೆ. ಶಿಬಿ ಚಕ್ರವರ್ತಿಯ ಮಹಾತ್ಯಾಗದ ಕಥೆ ಇಲ್ಲಿ ಒಂದು ಸುಂದರವಾದ ನಾಟಕವಾಗಿ ಮೂಡಿಬಂದಿದೆ.
ಮೂರನೆಯ ಭಾಗದಲ್ಲಿ ಹೆಣ್ಣಿನ ಅಂತರಂಗವನ್ನು ತೆರೆದಿಡುವ ಮಹಾಭಾರತದ ಐದು ಮಂದಿ ಸ್ತ್ರೀಯರು ತಮ್ಮ ಬದುಕಿನುದ್ದಕ್ಕೂ ಕುಟುಂಬದಲ್ಲೂ ಪುರುಷಪ್ರಧಾನ ಸಮಾಜದಲ್ಲೂ ಯಾವ ಸ್ವಾತಂತ್ರ್ಯವೂ ಇಲ್ಲದೆ ಅನುಭವಿಸಿದ ನೋವು, ದುಃಖ ದುಮ್ಮಾನಗಳ ಹೊಳೆಯೇ ಹರಿದಿದೆ. ಇಲ್ಲಿ ಎಲ್ಲ ಸ್ತ್ರೀಯರ ಸ್ವಗತಗಳ ಮೂಲಕ ಕಥೆ ಹೇಳುವ ತಂತ್ರವನ್ನು ಲೇಖಕರು ಅಳವಡಿಸಿಕೊಂಡಿದ್ದಾರೆ. ಗಂಗೆ ಶಂತನು ಚಕ್ರವರ್ತಿಯನ್ನು ಮದುವೆಯಾದ ನಂತರ ಅಷ್ಟವಸುಗಳಿಗೆ ಮಾತುಕೊಟ್ಟಂತೆ ತನ್ನ ಗರ್ಭದಲ್ಲಿ ಒಬ್ಬರಾದ ನಂತರ ಒಬ್ಬರಿಗೆ ಜನ್ಮವಿತ್ತು ಹುಟ್ಟಿದ ಕೂಡಲೇ ಆ ಮಕ್ಕಳನ್ನು ತನ್ನ ಇಷ್ಟದ ವಿರುದ್ಧ ಕೊಲ್ಲುತ್ತ ಬರುತ್ತಾಳೆ. ಆದರೆ ಅವಳು ಏನು ಮಾಡಿದರೂ ಪ್ರಶ್ನಿಸುವುದಿಲ್ಲವೆಂದು ಮಾತು ಕೊಟ್ಟ ಶಂತನು ಎಂಟನೇ ಬಾರಿ ಮಾತ್ರ ಸ್ಫೋಟಗೊಳ್ಳುತ್ತಾನೆ. ಅಷ್ಟವಸುಗಳಿಗೆ ಕೊಟ್ಟ ಮಾತನ್ನುಳಿಸಿಕೊಳ್ಳುವ ತನ್ನ ಕರ್ತವ್ಯ ಮತ್ತು ಪತಿಯ ನಡುವೆ ಸಿಲುಕಿದ ಗಂಗೆಯ ನೋವನ್ನು ಇಲ್ಲಿ ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಸತ್ಯವತಿಯೂ ತನ್ನ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸೋಲುತ್ತಲೇ ದುಃಖಕ್ಕೆ ಒಳಗಾಗುತ್ತಾಳೆ. ಶಂತನುವನ್ನು ಮದುವೆಯಾಗುವ ಇಚ್ಛೆ ಅವಳದ್ದಾಗಿರಲಿಲ್ಲ. ತಂದೆ ದಾಸರಾಜ ದೇವವ್ರತನಿಗೆ ಹಾಕಿದ ಷರತ್ತು ಅವಳಲ್ಲಿ ಮಹತ್ವಾಕಾಂಕ್ಷೆಯನ್ನು ಹುಟ್ಟಿಸುತ್ತದೆ. ತನ್ನದಲ್ಲದ ತಪ್ಪಿಗೆ ಅವಳು ನಿರಾಶೆಯನ್ನು ಅನುಭವಿಸುತ್ತಾಳೆ. ಬಸುರಿಯಾದಾಗ ಪ್ರೀತಿಯ ಆರೈಕೆಯನ್ನು ಬಯಸಿ ತವರು ಮನೆಗೆ ಬಂದರೆ ತಾಯಿಯಿಲ್ಲದ ತವರುಮನೆಯಲ್ಲಿ ಅವಳ ಆಸೆಯನ್ನು ಯಾರೂ ಅರ್ತ ಮಾಡಿಕೊಳ್ಳುವುದಿಲ್ಲ. ತಾಯ್ತನದ ಸಂತೋಷ ಅನುಭವಿಸುವುದೂ ಅವಳಿಂದ ಸಾಧ್ಯವಾಗುವುದಿಲ್ಲ. ಹುಟ್ಟಿದ ಗಂಡು ಮಕ್ಕಳಿಬ್ಬರೂ ಯಾರ ಶಾಪದಿಂದಲೋ ಎಂಬಂತೆ ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಇನ್ನು ಅಂಬೆ ಎದುರಿಸಿದ ಸೋಲು ಅಪಮಾನಗಳಿಗಂತೂ ಲೆಕ್ಕವಿಲ್ಲ. ರಾಜಕುಮಾರಿಯಾಗಿ ಸುಖದ ಸುಪ್ಪತ್ತಿಗೆಯಲ್ಕಿ ಬೆಳೆದ ಅವಳು ತನ್ನ ಕಾಲದ ಇತರ ಹೆಣ್ಣು ಮಕ್ಕಳಿಗಿಂತ ಪೂರ್ತಿ ಭಿನ್ನ. ಧೈರ್ಯ, ಸಾಹಸ, ಬುದ್ದಿವಂತಿಕೆಗಳ ಪ್ರತೀಕ ಅವಳು. ಆದರೆ ಇಬ್ಬರು ಪುರುಷರ ಹಠದ ಮುಂದೆ ಅವಳಿಗೆ ನ್ಯಾಯ ಸಿಗುವುದಿಲ್ಲ. ಅವಳ ಮನಸ್ಥಿತಿಯನ್ನು ಲೇಖಕರು ಇಲ್ಲಿ ಚಿತ್ರಿಸುವ ಪರಿ ಅವರ ಸ್ತ್ರೀ ಪರ ಚಿಂತನೆಗೆ ಸಾಕ್ಷಿ. ಅಂಬೆಯ ಚಿತ್ರಣವು ಅವಳ ಹಿಂದಿನ ನೆನಪುಗಳು ಮತ್ತು ಸ್ವಯಂವರದ ನಂತರದ ಸನ್ನಿವೇಶಗಳು, ಅದುಮಿಕೊಳ್ಳಲಾರದ ಸೇಡಿನ ಉರಿ, ಸ್ವಾಭಿಮಾನ, ಛಲ-ಎಲ್ಲವನ್ನೂ ಲೇಖಕರು ಶಬ್ದಗಳಲ್ಲಿ ಸೆರೆಹಿಡಿದಿದ್ದಾರೆ. ಅಂಬೆಯ ವ್ಯಕ್ತಿತ್ವವನ್ನು ಲೇಖಕರು ಬಹಳ ವಿಸ್ತಾರವಾಗಿ ಚಿತ್ರಿಸಿದ್ದಾರೆ. ಮುಗ್ದ ಹೆಣ್ಣು ಹಿಡಿಂಬೆಯೂ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ಮಾನಸಿಕ ಹಿಂಸೆಯ ಚಿತ್ರಣ ಮನಕಲಕುತ್ತದೆ. ಪುರುಷಾಧಿಕಾರ ಮತ್ತು ಯುದ್ದದಲ್ಲಿ ಗೆಲುವು ಸಾಧಿಸಲು ಏನು ಮಾಡಲೂ ಸಿದ್ಧರಿರುವ ಅವರ ಸ್ವಾರ್ಥಕ್ಕೆ ಬಲಿಯಾದವಳು ಹಿಡಿಂಬೆ. ಕೊನೆಯ ಹೆಣ್ಣು ದ್ರೌಪದಿ. ಇಲ್ಲಿ ಲೇಖಕರು ತೆಗೆದುಕೊಳ್ಳುವ ಸನ್ನಿವೇಶ ಮಹಾಪ್ರಸ್ಥಾನದಲ್ಲಿ ದ್ರೌಪದಿ ಅನುಭವಿಸುವ ಅಸಹಾಯಕತೆ ಮತ್ತು ಒಂಟಿತನ. ಐವರು ಪಾಂಡವರ ಮಡದಿಯಾಗಿ ಎಲ್ಲವನ್ನೂ ಸಮದೂಗಿಸಿಕೊಂಡು ಹೋಗಲು ಅವಳು ಪಟ್ಟ ಪಾಡು ಅವಳ ಹಿನ್ನೋಟದ ಮೂಲಕ ಚಿತ್ರಿತವಾಗಿದೆ. ಒಟ್ಟಿನಲ್ಲಿ ಪುರುಷಾಧಿಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವ ಮತ್ತು ಹೆಣ್ಣನ್ನು ಬದಿಗೆ ತಳ್ಳುವ ಸಮಾಜದಲ್ಲಿ ಕೊರಗಿ ನಲುಗುವ ಹೆಣ್ಣಿನ ಚಿತ್ರಣವನ್ನು ಲೇಖಕರು ಅತ್ಯಂತ ಸಹಾನುಭೂತಿಯಿಂದ ನೀಡುತ್ತಾರೆ.
ಕೃತಿಯ ಮುಂದಿನ ಬಹುಭಾಗವು (ಸುಮಾರು 320 ಪುಟಗಳು) ಪಂಚತಂತ್ರದ ಕಥೆಗಳ ಕನ್ನಡ ರೂಪಕ್ಕೆ ಮೀಸಲಾಗಿದೆ. ಬೇರೆ ಬೇರೆ ರೀತಿಯ ನೀತಿ ಸಂದೇಶಗಳುಳ್ಳ ಸುಮಾರು 80 ಕಥೆಗಳು ಇಲ್ಲಿ ಸರಳಗನ್ನಡದಲ್ಲಿ ಹರಳುಗೊಂಡಿವೆ. ಕೊನೆಯಲ್ಲಿರುವ ‘ಭರ್ತೃಹರಿಯ ನೀತಿ ಶತಕಗಳು’ ಮೂಲ ಸಂಸ್ಕೃತದಲ್ಲಿರುವ ಶ್ಲೋಕಗಳಿಗೆ ನೀಡಿದ ವ್ಯಾಖ್ಯಾನ. ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ಪ್ರಾಚೀನ ಸಾಹಿತ್ಯವು ಎಲ್ಲೋ ಮೂಲೆ ಸೇರುತ್ತಿರುವ ಇಂದಿನ ದಿನಗಳಲ್ಲಿ ಇವನ್ನೆಲ್ಲ ಮತ್ತೆ ಬೆಳಕಿಗೆ ತರುವ ಅಗತ್ಯವಿದೆ. ಆ ಪ್ರಾಮಾಣಿಕ ಪ್ರಯತ್ನವನ್ನು ಸೋಮಯಾಜಿಯವರು ಮಾಡಿದ್ದಾರೆ. ಉಡುಪಿ ಕ.ಸಾ.ಪ. ಅಧ್ಯಕ್ಷರಾದ ಲೇಖಕ ನೀಲಾವರ ಸುರೇಂದ್ರ ಅಡಿಗರು ಈ ಕೃತಿಗೆ ಒಂದು ಚಂದದ ಮುನ್ನುಡಿ ಬರೆದಿದ್ದಾರೆ.
ಸೋಮಯಾಜಿಯವರು ಕಥೆಗಳನ್ನು ಬರೆಯುವ ಶೈಲಿಯ ಬಗ್ಗೆ ಒಂದು ಮಾತು ಹೇಳಲೇ ಬೇಕು. ಅವರು ಒಂದು ತರಗತಿಯಲ್ಲಿ ಪಾಠ ಮಾಡುವಂತೆ ತಾವು ಎತ್ತಿಕೊಳ್ಳುವ ವಸ್ತು-ವಿಷಯಗಳಿಗೆ ಸೂಕ್ತವಾದ ಪೀಠಿಕೆ ಹಾಕುತ್ತಾರೆ. ಸಮಾಂತರವಾದ ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಾರೆ. ಮಕ್ಕಳಿಗೆ ಕಥೆಯ ತಿರುಳನ್ನೂ ಉದ್ದೇಶವನ್ನೂ ಸರಿಯಾಗಿ ಮನದಟ್ಟು ಮೂಡಿಸುವಲ್ಲಿ ಇದು ತುಂಬಾ ಸಹಾಯಕವಾಗುತ್ತದೆ. ಇದಕ್ಕೆ ಬೇಕಾದ ಪೂರ್ವತಯಾರಿಯನ್ನು ತಪ್ಪದೇ ಮಾಡುವ ಅವರ ಪರಿಶ್ರಮ ಸ್ತುತ್ಯರ್ಹ.

ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
