ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು ಸಾಕಷ್ಟು ಬಂದಿವೆ. ದೇವುಡು ಅವರಿಂದ ‘ಮಹಾಕ್ಷತ್ರಿಯ’ದಿಂದ ತೊಡಗಿ ಎಸ್.ಎಲ್. ಭೈರಪ್ಪನವರ ‘ಪರ್ವ’ದವರೆಗೆ ಅವುಗಳ ವ್ಯಾಪ್ತಿ ಇದೆ. ಪ್ರಸಿದ್ಧ ಲೇಖಕರಲ್ಲದೆ ಹತ್ತು ಹಲವು ಜನಪ್ರಿಯ ಲೇಖಕಿಯರು ಕೂಡ ಪೌರಾಣಿಕ ವಸ್ತುವನ್ನು ಇಟ್ಟುಕೊಂಡು ಕಾದಂಬರಿಯನ್ನು ರಚಿಸುತ್ತಿದ್ದಾರೆ. ಇತ್ತೀಚಿಗಂತೂ ಪೌರಾಣಿಕ ಮತ್ತು ಐತಿಹಾಸಿಕ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ದುರ್ದೈವವಶಾತ್ ಅವುಗಳ ಗುಣಮಟ್ಟ ಒಂದು ಬಾರಿ ಓದಿ ಪಕ್ಕಕ್ಕಿಡುವ ಜನಪ್ರಿಯ ಮಟ್ಟಕ್ಕಿಂತ ಮೇಲೇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಡಾ. ಟಿ. ಗೋವಿಂದರಾಜು ಇವರ ‘ಕೃಷ್ಣಯ್ಯನ ಕೊಳಲು’ ಎಂಬ ಕಾದಂಬರಿಯನ್ನು ಜಾನಪದ ಪರಂಪರೆಯ ಆಧಾರದಲ್ಲಿ ಮೂಡಿ ಬಂದ ಶಿಷ್ಟ ರಚನೆ ಎನ್ನಬಹುದು. ಆದ್ದರಿಂದ ಅವರಿಗೆ ಮಹಾಭಾರತದ ಪಾತ್ರಗಳ ಅತಿಮಾನುಷ ಗುಣಗಳನ್ನು ಬಹುಮಟ್ಟಿಗೆ ಬದಿಗಿರಿಸಿ, ಅವರನ್ನು ಮಾನವ ಸಹಜ ಗುಣದೋಷಗಳಿರುವ ಸಾಮಾನ್ಯ ಮನುಷ್ಯರಂತೆ ಕಂಡು, ಮೂಲಕ್ಕೆ ಹೆಚ್ಚು ನಿಷ್ಠರಾಗಿದ್ದುಕೊಂಡೇ ಪಾತ್ರಗಳನ್ನು ಚಿತ್ರಿಸಲು ಸಾಧ್ಯವಾಗಿದೆ. ಇದರ ಹಿಂದೆ ಲೇಖಕರ ವಿಶೇಷ ಅಧ್ಯಯನ, ಇತಿಹಾಸ ಪ್ರಜ್ಞೆ, ಜನಪದ ಸಂಶೋಧನದೃಷ್ಟಿ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ.
ಕೃಷ್ಣ ಎಂದರೆ ಬಿದಿರು ಇದ್ದಂತೆ. ಬಿದಿರು ಅಸಹಾಯಕರಿಗೆ ಊರುಗೋಲು. ಕಾದಾಡಬೇಕಿದ್ದರೆ ದೊಣ್ಣೆ. ಊದುವವರಿಗೆ ಕೊಳಲು. ನವಜಾತ ಶಿಶುವಿಗೆ ತೊಟ್ಟಿಲು. ತೀರಿಕೊಂಡವರಿಗೆ ಚಟ್ಟ. ಇದು ಬಿದಿರಿನ ಜನೋಪಯೋಗಿ ಗುಣವನ್ನು ತೋರಿಸುತ್ತದೆ. ಅದೇ ಬಿದಿರು ಕಾಳ್ಗಿಚ್ಚಿಗೆ ಒಳಗಾದಾಗ ವಿನಾಶವನ್ನು ಸೃಷ್ಟಿಸುತ್ತದೆ. ಬಿದಿರಿನ ಈ ಅವಸ್ಥಾಂತರಗಳು ಕೃಷ್ಣನ ಬದುಕಿನ ಘಟ್ಟಗಳನ್ನೂ ಸೂಚಿಸುತ್ತವೆ. ಹೀಗೆ ಬಿದಿರು ಒಂದಲ್ಲಾ ಒಂದು ರೀತಿಯಲ್ಲಿ ಜೀವನಾಧಾರವಾಗುತ್ತದೆ. ಕೃಷ್ಣನ ಮರಣಾನಂತರ ಆತನ ಕೊಳಲು ರಾಧೆಯ ಮೊಮ್ಮಗಳ ಕೈಸೇರಿ ಅವರ ಸಂಸ್ಕೃತಿಯಲ್ಲಿ ಲೀನವಾಗುವ ಸನ್ನಿವೇಶವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಆ ನಿಟ್ಟಿನಲ್ಲಿ ‘ಕೃಷ್ಣಯ್ಯನ ಕೊಳಲು’ ಎಂಬ ಶೀರ್ಷಿಕೆ ಧ್ವನಿಪೂರ್ಣವಾಗಿದೆ. ಇಲ್ಲಿ ಕೃಷ್ಣನನ್ನು ‘ಶ್ರೀಕೃಷ್ಣ’, ‘ಗೋಪಿಕೃಷ್ಣ’, ‘ರಾಧಾಕೃಷ್ಣ’, ‘ಪರಮಾತ್ಮ’ ಎನ್ನದೆ ‘ಕೃಷ್ಣಯ್ಯ’ ಎಂದು ಕರೆದಿರುವುದು ಲೇಖಕರ ಜನಪದೀಯ ದೃಷ್ಟಿಗೆ ಸಾಕ್ಷಿಯಾಗಿದೆ.
ಮಹಾಭಾರತ ಯುದ್ಧ ಮುಗಿದ ನಂತರದ ಅತಂತ್ರ ಪರಿಸ್ಥಿತಿಯ ಚಿತ್ರಣದೊಂದಿಗೆ ಕಾದಂಬರಿಯು ಆರಂಭವಾಗುತ್ತದೆ. ದುರ್ಯೋಧನನನ್ನು ಕೊಲ್ಲಿಸಿದ್ದಕ್ಕೆ ಬಲರಾಮನ ವಿರೋಧ, ಕೃಷ್ಣನ ಬಳಿಕ ಯುವರಾಜನಾಗುವ ಕನಸು ಹೊಂದಿದ ಸಾಂಬನ ಆಟಾಟೋಪ, ತನ್ನ ಮಗನಿಗೇ ರಾಜ್ಯ ಸಿಗಬೇಕೆಂಬ ಲಾಲಸೆಯಿಂದಾಗಿ ಕೃಷ್ಣನ ಹೆಂಡತಿಯರ ನಡುವಿನ ಭಿನ್ನಮತ, ಇವುಗಳ ನಡುವೆ ಸಿಲುಕಿ ನಲುಗುವ ಕೃಷ್ಣನ ಸಂಕಷ್ಟ, ಪವಾಡಪುರುಷನೆಂದು ಬಣ್ಣಿಸಿ ಕತೆಗಳನ್ನು ಕಟ್ಟಿದ್ದರಿಂದಾಗಿ ಎಲ್ಲ ಸಮಸ್ಯೆಗಳನ್ನೂ ಕೃಷ್ಣನೇ ಪರಿಹರಿಸಬೇಕೆಂದು ಬಯಸುವ ಜನರು, ಇದರ ನಡುವೆ ವೃದ್ಧಾಪ್ಯದಿಂದಲೂ, ಆಂತರಿಕ ಜಂಜಾಟಗಳಿಗೆ ಸಿಲುಕಿದ್ದರಿಂದಲೂ ಅಂತರ್ಮುಖಿಯಾಗುತ್ತಾ ಹೋಗುವ ಕೃಷ್ಣನ ಪಾತ್ರ ಮನಮುಟ್ಟುವಂತಿದೆ.
“ಯಾವಾಗ ನಾನು ಗೋಕುಲ ಬಿಟ್ಟು ಅಜ್ಜನ ಮಥುರೆಗೆ ಬರಬೇಕಾಯಿತೋ, ಆಗಿನಿಂದ ನನ್ನ ಅಲಂಕಾರವೆಲ್ಲ ದೂರ ಉಳಿಯಿತು. ಕೊಳಲು ನವಿಲುಗರಿಗಳು ಎಲ್ಲೋ ಹೋದವು. ಮುಗುಳು ನಗುವಿಗೂ ಸಂಚಕಾರ ಬಂತು. ಈಗ ನಾನು ತುಟಿಯರಳಿಸಿದರೆ ಏನೋ ಸಂಚಿನದೆಂದೇ ಸುತ್ತಿನವರು ಹಂಗಿಸುವಂತಾಗಿದೆ. ಹಾಗಾಗಿ ಅದರ ಸಹವಾಸವೇ ಬೇಡವೆಂದು ಒಳಗೇ ಅಡಗಿಸಿಕೊಂಡಿದ್ದೇನೆ.” (ಪುಟ 46)
ಕೃಷ್ಣನು ರಾಧೆಯ ಮೊಮ್ಮಗಳಲ್ಲಿ ಹೇಳುವ ಮಾತು ಅವನ ಬದಲಾದ ಮನಸ್ಥಿತಿಯನ್ನು ಸೂಚಿಸುತ್ತದೆ. “ಯುದ್ಧದಲ್ಲಿ ಗೆಲುವು ಮುಖ್ಯವೆಂದರೆ ಪರವಾಗಿಲ್ಲ. ಆದರೆ ಸಾಯಿಸುವುದೇ ಗೆಲುವೆಂದರೆ ಏನರ್ಥ? ಬರೀ ಅನರ್ಥ. ಹಾಗೆ ಗೆದ್ದವರೂ ಎಷ್ಟು ದಿನ ನೆಮ್ಮದಿಯಾಗಿ ದೇಶ ಆಳಿದರು? ಆಳಲಿಕ್ಕಾದರೂ ಈ ಉರಿ ಬೂದಿಯ ಮಸಣದಲ್ಲಿ ಏನು ಉಳಿಯಿತು? ಒಳ್ಳೆಯದನ್ನು ಮಾಡುತ್ತೇವೆಂಬುದೂ ಕೊನೆಗೇನೋ ಕೇಡಿನದಾಗುವುದೇ ನಿಸರ್ಗದ ಗುಣವೇ?” (ಪುಟ 50) ಎಂದು ಚಿಂತಿಸುತ್ತಾನೆ. ಬಹಿರಂಗದ ಯುದ್ಧದಂತೆ ಅಂತರಂಗದ ಯುದ್ಧವೂ ಸರ್ವನಾಶಕ್ಕೆ ಕಾರಣವಾಗುತ್ತದೆ. ಧರ್ಮ ಸಂಸ್ಥಾಪನೆಯು ಅವನ ಕನಸಾಗಿತ್ತು. ಕೊನೆಗೆ ಅವನಿಗೆ ಸಿಕ್ಕಿದ್ದೇನು? ಸ್ವತಂತ್ರನಾಗಿ ಹುಟ್ಟುವ ಮನುಷ್ಯನು ಕಾಣದ ಸಂಕೋಲೆಗಳಿಂದ ಸುತ್ತುವರಿದಿರುತ್ತಾನೆ ಎಂಬ ದಾರ್ಶನಿಕ ವಿಚಾರವನ್ನು ಲೇಖಕರು ಕೃಷ್ಣನ ಚಿತ್ರಣದ ಮೂಲಕ ಗಟ್ಟಿಗೊಳಿಸಿದ್ದಾರೆ. ಕಥನವು ಕೃಷ್ಣನ ದೃಷ್ಟಿಗೆ ಸೀಮಿತವಾಗಿರದೆ ರುಕ್ಮಿಣಿ, ಸಾಂಬ, ಪಾಂಡವರು, ಹಿಡಿಂಬೆ, ಬರ್ಬರಿಕ, ಅಶ್ವತ್ಥಾಮ, ವೇದವ್ಯಾಸ ಮುಂತಾದವರ ಮೂಲಕ ಸಾಗುತ್ತಿರುವುದರಿಂದ ಅವರೆಲ್ಲರ ಸಂಕಟ, ಸಂದಿಗ್ಧತೆ, ಮಾನಸಿಕ ತುಮುಲಗಳನ್ನು ವಿಶ್ಲೇಷಿಸುವ ಸರ್ವಸಾಕ್ಷಿತ್ವದ ನಿರೂಪಣೆಯನ್ನು ದಕ್ಕಿಸಿಕೊಂಡಿದೆ.
“ಹೊಸಾ ಭವನಗಳನ್ನು, ರಾಜಮಾರ್ಗಗಳನ್ನು ನಿರ್ಮಿಸುವ ನೆವದಲ್ಲಿ ಸ್ಥಳೀಯವಾಗಿ ನೂರಾರು ವರ್ಷಗಳಿಂದ ಈ ಮಣ್ಣನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಜನರ ಮನೆ, ಗುಡಿಸಲು ಕಿತ್ತು ಒಕ್ಕಲೆಬ್ಬಿಸಿದ್ದಾರೆ. ಅಂತಹವರಿಗೆ ಪರ್ಯಾಯ ಜೀವನ ಮಾರ್ಗವನ್ನಾದರೂ ಒದಗಿಸದ್ದು ಅಮಾನವೀಯ. ರಸ್ತೆ ಕಟ್ಟಡ ಕಾರ್ಮಿಕರಾಗಿ ಅಪಾರ ಸಂಖ್ಯೆಯಲ್ಲಿ ಹೊರಗಿನ ಮಂದಿ ಬಂದು ಸೇರಿದ್ದರಿಂದ ಸ್ಥಳೀಯರ ಉದ್ಯೋಗ ಕಿತ್ತುಕೊಂಡಂತಾಗಿದೆ. ನಮ್ಮ ಭಾಗ್ಯವಿಧಾತ, ಅವತಾರ ಪರುಷ ಎಂದೆಲ್ಲ ಭಕ್ತರಿಂದ ಪ್ರಚಾರ ಮಾಡಿಸಿಕೊಳ್ಳುತ್ತಿರುವ ದೇವರು ಅವರ ಬಂಧುಗಳಾದ ಗತಿಗೆಟ್ಟ ಪಾಂಡವರ ಉದ್ಧಾರಕ್ಕೆ ಕೊಟ್ಟಿರುವ ಬಿಟ್ಟಿಭಾಗ್ಯಗಳ ನೆರವುಗಳೆಷ್ಟು?” (ಪುಟ 63) ಎಂಬ ಸಾಲುಗಳು ಆಧುನಿಕ ಕರ್ನಾಟಕದ ರಾಜಕೀಯ ಬಿಕ್ಕಟ್ಟನ್ನು ಸೂಚಿಸುತ್ತದೆ.
ವ್ಯಾಪಾರಿ ಮೌಲ್ಯಗಳು ಸಮಾಜವನ್ನು ಮುನ್ನಡೆಸುತ್ತಿರುವ ಈ ಸಂದರ್ಭದಲ್ಲಿ ಸತ್ಯ, ಸೌಂದರ್ಯ, ಪ್ರೀತಿ ವಿಶ್ವಾಸಗಳು ಬೆಲೆ ಕಳೆದುಕೊಳ್ಳುತ್ತಿವೆ. ವೈರತ್ವ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಗುಂಪಿನಲ್ಲಿ ಒಂಟಿಯಾಗುತ್ತಾರೆ ಎಂಬ ಸತ್ಯವನ್ನರಿತುಕೊಂಡ ಲೇಖಕರು ಹೆಜ್ಜೆಹೆಜ್ಜೆಗೂ ನೋವಿನ ಮಡುವಿನೊಳಗೆ ಮುಳುಗೇಳುವ ಕೃಷ್ಣನನ್ನು ತಮ್ಮ ಕಾದಂಬರಿಯ ನಾಯಕನನ್ನಾಗಿಸಿದ್ದಾರೆ. ಅವನ ತಳಮಳ, ತುಡಿತ, ಸಮಾಜಕ್ಕೆ ಕೊಡುವ ಸಂದೇಶಗಳು ಮುಖ್ಯವಾಗುತ್ತವೆ. ಮೋಸ, ವಂಚನೆ, ಅಧಿಕಾರ ಲಾಲಸೆ, ಹಿಂಬಾಗಿಲ ಪ್ರವೇಶ, ಅರ್ಹ ವ್ಯಕ್ತಿಯನ್ನು ಪದಚ್ಯುತಗೊಳಿಸುವ ತಂತ್ರಗಳು ಮೇಲುಗೈ ಪಡೆಯುತ್ತಿರುವ ವಿದ್ಯಮಾನಗಳನ್ನು ನೆನಪಿಸುತ್ತವೆ. ತಮ್ಮ ನೆಲೆಯೇ ಮುಖ್ಯವಾದಾಗ ಸಹಜೀವಿಗಳ ಬದುಕನ್ನು ಹೋಮಮಾಡಲು ಯಾರೂ ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ಕೃಷ್ಣನೂ ಉದಾಹರಣೆಯಾಗುತ್ತಾನೆ. ಹಿಡಿಂಬೆಯ ವಿಲಾಪದಲ್ಲಿ, ಬರ್ಬರಿಕ, ಅಶ್ವತ್ಥಾಮನ ಜೊತೆಗಿನ ಸಂವಾದದಲ್ಲಿ, ಪಾಂಡವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಧೃತರಾಷ್ಟ್ರ ಗಾಂಧಾರಿಯರು ಎತ್ತುವ ಆಕ್ಷೇಪದಲ್ಲಿ ಕೃಷ್ಣನನ್ನು ನಿಷ್ಠುರವಾಗಿ ವಿಮರ್ಶಿಸಲಾಗಿದೆ. ಕಾದಂಬರಿಯ ಗತಿ ಎಲ್ಲಿಯೂ ನಿಯಂತ್ರಿತವಾಗಿರದೆ ತಾನಾಗಿಯೇ ದುರಂತದತ್ತ ಸಾಗುತ್ತದೆ.
ಕಾವ್ಯ-ಇತಿಹಾಸ-ಪುರಾಣಗಳ ಮಿಶ್ರಣವಾದ ಮಹಾಭಾರತವನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯಲ್ಲಿ ಲೇಖಕರು ಪುನರ್ ಸೃಷ್ಟಿಸಿದ್ದಾರೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪ್ರಸ್ತುತ ಕೃತಿಯನ್ನು ಪಾರುಮಾಡಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳನ್ನು ನಮ್ಮ ಕಾಲಕ್ಕೆ ತೀರಾ ಹತ್ತಿರದವರಾಗಿ ಮಾರ್ಪಡಿಸುವ ಉದ್ದೇಶ ಇಲ್ಲಿ ಫಲಿಸಿದೆ. ಸಂಸ್ಕೃತಿಯೊಂದಕ್ಕೆ ನಿರಂತರ ಪ್ರಾಣ ಶಕ್ತಿಯನ್ನು ಒದಗಿಸುವ ಪುರಾಣಗಳು ಕೇವಲ ಕಲ್ಪನೆ ಊಹೆಗಳಿಂದ ಕೂಡಿದ ಕಟ್ಟುಕತೆಗಳಲ್ಲ. ಅವುಗಳಿಗೆ ಇತಿಹಾಸದ ಶಿಷ್ಟಗುಣಗಳಿವೆ. ತರ್ಕ, ಅರ್ಥ ಮತ್ತು ವಾಸ್ತವಗಳ ಬಲವಿದೆ. ಆದರೆ ಸಾರ್ವಕಾಲಿಕ ಮಹತ್ವವನ್ನು ಹೊಂದಿದ ಮಹಾಭಾರತದ ಮೂಲಕ ಸಮಕಾಲೀನ ಮನುಷ್ಯನಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಕಾಣಬೇಕಿದ್ದರೆ ಕೆಲವು ಬದಲಾವಣೆಗಳು ಮತ್ತುಕೂಡಿ ಕಳೆಯುವ ಕ್ರಿಯೆಗಳು ಅನಿವಾರ್ಯವಾಗುತ್ತವೆ. ಆದ್ದರಿಂದ ಲೇಖಕರು ಸಹಜವಾಗಿಯೇ ಹಲವು ಬದಲಾವಣೆಗಳನ್ನು ಮಾಡಿದ್ದಾರೆ.
ವಸುದೇವನು ಕಂಸನ ಸೆರೆಮನೆಯ ಕಾವಲುಗಾರನೊಬ್ಬನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗ ತಾನೇ ಹುಟ್ಟಿದ ಕೃಷ್ಣನನ್ನು ಹೊರಗೆ ಸಾಗಿಸುತ್ತಾನೆ. ಕೃಷ್ಣ ಬಲರಾಮರು ನೇರವಾಗಿ ಯುದ್ಧ ಮಾಡದೆ, ರಾತ್ರಿ ಹೊತ್ತಿನಲ್ಲಿ ಮಥುರೆಗೆ ನುಸುಳಿ, ನಿದ್ದೆ ಹೋಗಿದ್ದ ಕಂಸನನ್ನು ಕೊಲ್ಲುತ್ತಾರೆ. ಶ್ರೀಕೃಷ್ಣನಿಗೆ ಎಂಟೇ ಜನ ಪತ್ನಿಯರು. ರಾಧೆಯ ಮೊಮ್ಮಗಳ ಆಗಮನ, ಆಕೆಯ ಊರಿನಲ್ಲಿ ನಡೆಯುವ ಹಬ್ಬ ಹರಿದಿನಗಳು, ಸಾಂಬನ ಪಾತ್ರವಿಸ್ತಾರ, ಬಲರಾಮನ ಭಾವುಕತೆ, ಚಾರ್ವಾಕನ ಪ್ರವೇಶ ಇವುಗಳು ಅದಕ್ಕೆ ಕೆಲವು ಉದಾಹರಣೆಗಳಾಗಿವೆ. ಭಾರತೀಯರು ಎತ್ತರದ ಸ್ಥಾನದಲ್ಲಿಟ್ಟ ಹಲವು ಪಾತ್ರಗಳು ಆಧುನಿಕ ಸಮಾಜದ ನಿಷ್ಕರುಣೆ ಮತ್ತು ಭಾವುಕತೆಗಳಿಗೆ ಸಾಕ್ಷಿಗಳಾಗಿ ಕಾದಂಬರಿಯಲ್ಲಿ ಮೈವೆತ್ತು ನಿಂತಾಗ ಲೇಖಕರ ಕಲ್ಪನಾಶಕ್ತಿ ಮತ್ತು ವೈಚಾರಿಕತೆಗಳಿಗೆ ತಲೆದೂಗುವಂತಾಗುತ್ತದೆ.
ಕೃಷ್ಣನ ಕುಟುಂಬದೊಳಗಿನ ಸಂಘರ್ಷದ ರೂಪವನ್ನು ತಿಳಿಸುತ್ತಾ ಮನುಷ್ಯರ ಮನಸ್ಸಿನ ಸಂಕೀರ್ಣತೆಗಳನ್ನು ದೂರದಿಂದ ತಿಳಿದುಕೊಳ್ಳುವ ಲೇಖಕರ ಉತ್ಸಾಹ ಇಲ್ಲಿ ಚೆನ್ನಾಗಿ ಪ್ರಕಟಗೊಂಡಿದೆ. ರುಕ್ಮಿಣಿ, ಜಾಂಬವತಿ ಮತ್ತು ರೇವತಿಯ ಕ್ರಿಯೆ-ಪ್ರತಿಕ್ರಿಯೆ, ಕೃಷ್ಣ ಬಲರಾಮನ ಮಾತು-ಸ್ವಗತಗಳ ಮೂಲಕ ಸಾಮ್ರಾಜ್ಯವೊಂದರ ದುರಂತ ಬೆಳಕಿಗೆ ಬರುತ್ತದೆ. ಕೌಟುಂಬಿಕ ಸಂಬಂಧಗಳ ಜಂಜಾಟ ಮತ್ತು ಲೋಕವ್ಯವಹಾರದಲ್ಲಿ ಸಿಲುಕಿಕೊಳ್ಳುವ ಕೃಷ್ಣನಿಗೆ ಕೊನೆಯವರೆಗೂ ಅವುಗಳಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಅಧಿಕಾರದ ದರ್ಪ, ದುರಹಂಕಾರ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವೆನಿಸಿದ ಉಳ್ಳವರ ಮಗನೆನಿಸಿಕೊಂಡ ಸಾಂಬನ ಆಟಾಟೋಪ ಸಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕೃಷ್ಣನ ಪಟ್ಟದರಸಿಯಾದರೂ ತನ್ನ ಒಳದನಿಯ ಸಮಾಧಾನಕ್ಕಾಗಿ ಸಾಮಾನ್ಯಳೆಂಬಂತೆ ಬದುಕುತ್ತಾ ಕಳೆದುಹೋಗುತ್ತಿರುವ ಸಂಬಂಧಗಳನ್ನು, ಹಾಳಾಗುತ್ತಿರುವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಒದ್ದಾಡುವ, ಕೃಷ್ಣನನ್ನು ಒಳಿತಿಗಾಗಿ ಪ್ರೇರೇಪಿಸುವ ಗುಣಾತ್ಮಕ ಪಾತ್ರವಾಗಿ ರುಕ್ಮಿಣಿ ಮೂಡಿ ಬಂದಿದ್ದಾಳೆ. ಕುಟುಂಬದೊಂದಿಗೆ ಬೇಯುತ್ತಾ, ತಣಿಯುತ್ತಾ ಪಾಕವಾಗುವ, ಪಕ್ವಗೊಳ್ಳುವ ಆಕೆಯು ನಿರ್ಲಿಪ್ತ, ಪ್ರಾಮಾಣಿಕ ನಡೆನುಡಿಯ ಪ್ರತಿನಿಧಿ. ಆಕೆಯೊಳಗಿನ ಮಾನವೀಯತೆ ಇತರರ ನೋವುಗಳಿಗೆ ಸ್ಪಂದಿಸುತ್ತದೆ. ಆದರೆ ಲೋಕ ವ್ಯವಹಾರದ ಒಳಸತ್ಯಗಳಿಗೂ ಮುಕ್ತ ಮನಸ್ಸು ಬಯಸುವ ಆದರ್ಶಗಳಿಗೂ ಗಾಢ ಅಂತರವಿರುವುದರಿಂದ ಅದು ಬಲರಾಮ, ಸಾಂಬ, ಜಾಂಬವತಿ ಮತ್ತು ರೇವತಿಯರ ಹೃದಯದೊಳಗೆ ಇಳಿಯುವುದಿಲ್ಲ. ಸಾಂಬನ ಹುಚ್ಚಾಟದಿಂದಾಗಿ ಮುನಿಗಳಿಂದ ಯಾದವ ಕುಲದ ನಾಶದ ಶಾಪವನ್ನು ಸ್ವೀಕರಿಸಿ, ಸಾಮ್ರಾಜ್ಯದ ದುರಂತವನ್ನು ಮೊದಲೇ ಕಂಡಿದ್ದ ಕೃಷ್ಣನ ಮನದೊಳಗೆ ಅಪ್ಪಳಿಸುವ ಪ್ರತಿಕ್ರಿಯೆಯ ಅಲೆಗಳ ಸದ್ದಿನೊಂದಿಗೆ ಅಂತರಂಗದ ಆತ್ಮರೋದನ ಕೇಳಿಸುತ್ತದೆ. ಆತನ ವಿಹ್ವಲತೆಯು ಆಧುನಿಕ ಜಗತ್ತಿನ ರಾಜ್ಯ ಅಥವಾ ರಾಷ್ಟ್ರ ನಾಯಕರು ಅನುಭವಿಸುವ ವೇದನೆಯ ಪ್ರತಿಫಲನವೂ ಆಗುತ್ತದೆ.
ಈ ಕಾದಂಬರಿಯು 2026ನೇ ಸಾಲಿನ ಪ್ರತಿಷ್ಠಿತ ‘ಸುನಂದಾ ಬೆಳಗಾಂವಕರ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ.

ವಿಮರ್ಶಕರು | ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
