ಕವಯತ್ರಿ ಕು. ವಿ. ಕು. (ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ) ಇವರು ತುಳು ಭಾಷಾ ಪದ ಸಂಪದ ಹಾಗೂ ಸಹಜ ಕಾವ್ಯಪ್ರತಿಭೆಯೆಂದು ಈಗಾಗಲೇ ಹೆಸರಾಗಿರುವವರು. ಸಮೃದ್ಧ ಅನುಭವೀ ಮಹಿಳೆಯರು ಸಾಹಿತ್ಯ ರಚನೆಗಿಳಿದರೆ ಅವು ಪರಿಪುಷ್ಟವೂ ಉಪಯುಕ್ತವೂ ಆದ ಕಾಣಿಕೆಗಳಾಗುತ್ತವೆ ಎಂಬುದಕ್ಕೆ ಈ ಸಹೋದರಿಯ ಕೃತಿಗಳು ಒಂದು ಉದಾಹರಣೆ.
ಕಾಸರಗೋಡು ಗ್ರಾಮಾಂತರದ ನದಿ -ನದ, ಹೊಲಗದ್ದೆಗಳ, ಹಸಿರುಡುಗೆಯ ಕಣ್ವತೀರ್ಥದಲ್ಲಿ ಹುಟ್ಟಿ ಬೆಳೆದ ಕುಶಾಲಾಕ್ಷಿ ಚಿಕ್ಕ ವಯಸ್ಸಿನಿಂದಲೇ ಕವಿತೆ ಬರೆಯುವ ಅಭಿರುಚಿಗೆ ಹಾತೊರೆದವರಾದರೂ, ಅದನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವವರಿಲ್ಲದೆ, ಅದು ವನಸುಮದಂತೆ ಅಗೋಚರ ಕ್ಷೀಣವಾಗಿತ್ತು. ಪ್ರೌಢಶಾಲೆಯ ಕೆಲಿಕೆ ಮುಗಿಯುತ್ತಿದ್ದಂತೆ ಮದುವೆಯಾಗಿ ಗಂಡನ ಮನೆಸೇರಿಕೊಂಡರು. ಇಲ್ಲಿ ಪತಿ ವಾಸು ಕುಲಾಲರು ತನ್ನ ಕೈ ಹಿಡಿದಾಕೆ ಕವಿತೆ ಬರೆಯುವ ಪ್ರತಿಭೆ ಎಂಬುದನ್ನು ಒಮ್ಮೆ ಅರಿತು ಕೊಂಡರೋ ಕುಶಿಯಾಗಿ,,, “ಒಳ್ಳೇದು ನೀನು ಬರಿ” ಎಂದು ಹುರಿದುಂಬಿಸಿದರು.,, ಹೀಗೆ ಪತಿಯೇ ಮೊದಲ ಬೆಂಬಲಿಗರಾಗಿ ಕು.ವಿ.ಕು. ತುಳು ಸಾಹಿತ್ಯ ದೇವಿಗೆ ದೀವಿಗೆ ಹಚ್ಚಿದರು, ಬರೆದರು. ಹಾಗೆ ಹನಿ ಹನಿಯಾಗಿ ಚಿಗುರಿದ್ದು 2007ರಲ್ಲಿ ‘ಸುರುತ್ತ ಪನಿ’ಯಾಗಿ ಸಾಹಿತ್ಯ ಶಾರದೆಗೆ ಸಮರ್ಪಿತವಾಯಿತು. ಮುಂದೆ ಅದು ಹೊರಪ್ರಪಂಚಕ್ಕೆ ಬಂದುದು ಹೆತ್ತ ಮಕ್ಕಳು ಸ್ವಲ್ಪ ದೊಡ್ಡವರದಾಗ, 2017ರಿಂದ ಕವಿತೆಯ ಲೋಕಕ್ಕೆ ದೃಢವಾದ ಹೆಜ್ಜೆಯೂರಿದಾಕೆ ಮತ್ತೆ ಹಿಂತಿರುಗಿ ನೋಡಲಿಲ್ಲ. ಆ ಕಾಲಕ್ಕೆ ಕೈಗೊದಗಿದ ಮೊಬೈಲ್, ವಾಟ್ಸಾಪ್ ಸಾಹಿತ್ಯ ರಚನೆಗೆ ಸೂಕ್ತ ಅಂಗಣವಾಯಿತು. ಮೊಡೆದ, “ಪನಿಮುತ್ತುಗಳು” ಮಾಲೆಯಾಗಿ ಸಂಕಲನವಾಗಿ ಪ್ರಕಟವಾಯಿತು. ಅದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವರ್ಷದ ಬಹುಮಾನ ಗಳಿಸಿತು.
ಮುಂದೆ ಕಾದಂಬರಿ ಕ್ಷೇತ್ರ ಹೊಕ್ಕರು. ಅದು ‘ಕಡಲ ಮುತ್ತು’ವಾಗಿ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿಗೆ ಭಾಜನವಾಯಿತು. ಕು.ವಿ.ಕು. ತುಳು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಈಡಾಡಿದರು. ಯೂ ಟ್ಯೂಬ್, ಸಿನಿಮಾ ಹಾಡು, ಪತ್ರಿಕಾ ಬರವಣಿಗೆ, ರೇಡಿಯೋ ಸಾರಂಗ್ – ಇಲ್ಲೆಲ್ಲ ತನ್ನ ತುಳು ಸಾಹಿತ್ಯ ಸಿಂಚನ ಗೈದು ತುಳು ಓದುಗರ, ಕೇಳುಗರ ಅಚ್ಚುಮೆಚ್ಚಿನವರಾದರು. ಇಂದು ತುಳು ಪದ, ನುಡಿಗಳ ಪ್ರೌಢಮೆಯೊಂದಿಗೆ ಓರ್ವ ಮಾರ್ಗದರ್ಶಿ ಎನಿಸಿರುವ ಕು.ವಿ.ಕು. ಅವರು ಊರು ಹೊರಊರಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಕು.ವಿ.ಕು. ಇದೀಗ ತನ್ನ 10ನೆಯ ತುಳು ಕೃತಿ ‘ಪತ್ತ್’ ಎನ್ನುವ ಶೀರ್ಷಿಕೆಯ ಕವನ ಸಂಕಲನ ಹೊರ ತಂದಿದ್ದಾರೆ.
ಎಂಭತ್ತರಷ್ಟು ಪುಟಗಳ ಈ ಕೃತಿಯ ಕವನಗಳ ಭಾಷೆಯ ಸೊಗಸು, ಸರಳತೆ, ವಿಷಯ ವೈವಿಧ್ಯ ಎಲ್ಲವೂ ಈ ನೆಲದ ಭತ್ತದ ಗದ್ದೆಗಳ ಕೃಷಿ ಸಾಗುವಳಿ ಹಿನ್ನೆಲೆಯ ಜನರ ಬದುಕಿನ ಪಡಿನುಡಿ. ‘ನಕ್ಕುರು’ ಎನ್ನುವ ಮೊದಲ ಕವನವೇ ಅದಕ್ಕೆ ಮೊದಲ ಉದಾಹರಣೆ. ಬಡ ಕೃಷಿ ಕೆಲಸಗಾರರು, ಹೊಲದ ಜೀವ, ಜಂತುಗಳ ನೋಟ ಅದರ ರೂಪಕವಾಗಿದೆ.
“ಮಣ್ಣ ಗಾಂತ್ರದ ಜೋಕುಲೆಂಕುಲು ಪುದರ್ ಪನ್ ಪೆರ್ ನಕ್ಕುರು, ( ಡೊಂಕುಂಡ) ತರೆನ್ ದೆರ್ಪರೆ ಜಿಡೆ ನೆ ದಾಂತಿನಕುಲು…
ಪುರಿಕುಲುಂಡ್ ಪಣಡೆ
ಎಂಕುಲತ್ತ್ ಬೆರ್ಪುರಿ!…
ಬಡವು ಆಂಡಲಾ ಬಾಜೆ ಲಾಂಡಲ, ಬೇರ್ ಕಂಡೆನ್ ಮುಟ್ಟಯ…
… ಮಣ್ಣ ರುಣೋನು ಸಂದಾವ….”
ನಿರುಪದ್ರವಿ ಕಾಯಕ ಜೀವಿ ‘ನಕ್ಕುರು’ ಮಣ್ಣ ಫಲವತ್ತತೆ ವೃದ್ಧಿಸುವುದರಲ್ಲೇ ಸಾರ್ಥಕ್ಯ ಕಾಣುವುದು… ಶ್ರೇಷ್ಠ ಗುಣಕ್ಕೆ ಮಾದರಿಯಾಗಿ ಸ್ಮರಣೀಯವೆನಿಸುತ್ತದೆ.
ಹೊಸ ಕಾಲದ ಮನುಷ್ಯನ ಸ್ವಾರ್ಥ ಲಾಲಸೆಯಿಂದ ಪ್ರಕೃತಿ ಪರಿಸರವನ್ನು ಯಾವೆಲ್ಲ ಬಗೆಯಲ್ಲಿ ನಾಶ ಪಡಿಸುತ್ತಿದ್ದಾನೆ ಎಂಬುದನ್ನು ಆರುಹುವ ಕವನ – ಗೋಣಿ ತುಂಬುದು ಈಟ್ ಪಾಡ್ಯರ್, ಮಿಷಿನ್ ಕಣ ತ್ ದ್ ಪುಡೆಮಿ ಗರ್ತರ್!… ಮಣ್ಣ್ ಇಸನೇ ಅತುಂಡ್…
ಮಣ್ಣ್ ತಿನಿಪಿನ ಕಾಲ ಬರು ನಿಕ್ಲೆಗ್ ಪನ್ಪಿ ಸತ್ಯೋನು ಮರ ತರಾ.. ” ಎಂದು ತಟ್ಟಿ ಎಚ್ಚರಿಸುತ್ತದೆ.
ಇಷ್ಟಲ್ಲದೆ ಡೇನನ ಡೆನ್ನಾನ, ಕೆಡ್ಡಸ, ಬೊಲಿಕೆದ ಪೆರ್ಗ ಮುಂತಾದ ನಿಸರ್ಗ ಸೊಬಗಿನ ವರ್ಣನೆಗಳು, ಗಂಜಿ ಉನ್ಕ, ಬೋಡ್ಚಿ ಪನಿಯೆರೆ ಈ ಏರ್… ಮುಂತಾದ ಎಲ್ಲ ಕವಿತೆಗಳು, ಜತೆಗೆ ಮಕ್ಕಳ ಗೀತೆಗಳು – ಸರಳ ಸುಲಲಿತ ಪದ ಪ್ರಯೋಗ, ರೈತಾಪಿ ಜನಬದುಕಿನ ಅಂತರಂಗಿಕ ಹಂಬಲ, ಬಹಿರಂಗದ ವಾಸ್ತವಿಕತೆಯ ಬೆಸುಗೆಯಾಗಿ, ತುಳುವ ಹೊಲಗದ್ದೆಗಳ ಶ್ರಮಿಕ ಬದುಕಿನ ಪ್ರತೀಕವೆನಿಸಿ ಗಮನ ಸೆಳೆಯುತ್ತವೆ. ‘ಪತ್ತ್’ ಕವನ ಸಂಕಲನ ಈಚೆಗೆ 2025ರಲ್ಲಿ ಬಿಡುಗಡೆಗೊಂಡಿದೆ.

– ಮುದ್ದು ಮೂಡುಬೆಳ್ಳೆ
ಲೇಖಕಿ : ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ
